ರಂದೀಪ್‌ ವರ್ಗಾವಣೆ ರದ್ದುಗೊಳಿಸುವಂತೆ ಒತ್ತಾಯ

7
ಐಎಎಸ್‌ ಅಧಿಕಾರಿಯನ್ನು ಪಾಲಿಕೆಯಲ್ಲಿ ಉಳಿಸಿಕೊಳ್ಳಲು ಆನ್‌ಲೈನ್‌ ಅಭಿಯಾನ

ರಂದೀಪ್‌ ವರ್ಗಾವಣೆ ರದ್ದುಗೊಳಿಸುವಂತೆ ಒತ್ತಾಯ

Published:
Updated:
Deccan Herald

ಬೆಂಗಳೂರು: ನಗರದ ಕಸ ವಿಲೇವಾರಿ ವ್ಯವಸ್ಥೆಯನ್ನು ಹದ್ದುಬಸ್ತಿಗೆ ತರಲು ಮುತುವರ್ಜಿ ವಹಿಸಿದ್ದ ಐಎಎಸ್‌ ಅಧಿಕಾರಿ ರಂದೀಪ್‌ ಅವರನ್ನು ಪಾಲಿಕೆಯಲ್ಲೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಆನ್‌ಲೈನ್‌ನಲ್ಲಿ ಅಭಿಯಾನ ಆರಂಭವಾಗಿದೆ.

ಬಿಬಿಎಂಪಿಯ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗೆ ಅವರನ್ನು ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ವರ್ಗ ಮಾಡಿದೆ. ಅವರನ್ನು ಪಾಲಿಕೆಯಲ್ಲೇ ಉಳಿಸಿಕೊಳ್ಳುವ ಸಲುವಾಗಿ ಮೀನಾಕ್ಷಿ ಪ್ರಭು ಎಂಬುವರು ಆರಂಭಿಸಿರುವ ಈ ಅಭಿಯಾನಕ್ಕೆ ಮಂಗಳವಾರದವರೆಗೆ 1,412 ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿಯು ಅನೇಕ ವರ್ಷಗಳಿಂದ ಕಸ ವಿಲೇವಾರಿ ಗುತ್ತಿಗೆಯನ್ನು ಟೆಂಡರ್‌ ಕರೆಯದೆಯೇ ನೀಡುತ್ತಾ ಬಂದಿದೆ. ಕಸ ವಿಲೇವಾರಿಗೆ ಡಿಸೆಂಬರ್‌ ಅಂತ್ಯದೊಳಗೆ ಟೆಂಡರ್‌ ಕರೆಯುವುದಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಿದೆ. ರಂದೀಪ್‌ ಅವರೇ ಇದರ ಉಸ್ತುವಾರಿ ನೋಡಿಕೊಂಡಿದ್ದರು.

ಕಸದ ರಾಶಿಯನ್ನು ಸ್ವಚ್ಛಗೊಳಿಸಿ, ಆ ಪ್ರದೇಶದಲ್ಲಿ ರಂಗೋಲಿ ಬಿಡಿಸುವ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸುವಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಮಾರ್ಷಲ್‌ಗಳನ್ನು ನೇಮಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 

‘ರಂದೀಪ್‌ ಅವರು ಕಸ ವಿಲೇವಾರಿ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳಲು ಆರಂಭಿಸಿದ ಕೇವಲ ಎರಡು ತಿಂಗಳಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದರು. ಇದರಿಂದ ಸ್ವಚ್ಛ ನಗರವನ್ನು ರೂಪಿಸಲು ಬಯಸುವ ಜನತೆಯಲ್ಲಿ ಇದು ಹೊಸ ಭರವಸೆ ಮೂಡಿತ್ತು. ಪರಿಣಾಮಕಾರಿ ಬದಲಾವಣೆಗಳಾಗುತ್ತಿರುವ ಸಂದರ್ಭದಲ್ಲೇ ಈ ಅಧಿಕಾರಿಯನ್ನು ವರ್ಗಾವಣೆ ಮಾಡುವುದು ಸರಿಯಲ್ಲ. ಅವರ ವರ್ಗಾವಣೆಯನ್ನು ರದ್ದುಪಡಿಸಬೇಕು’ ಎಂದು ಮೀನಾಕ್ಷಿ ಪ್ರಭು ಒತ್ತಾಯಿಸಿದ್ದಾರೆ.

ರಂದೀಪ್‌ ವರ್ಗಾವಣೆ ರದ್ದುಪಡಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ. ಈ ಬಗ್ಗೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಹಾಗೂ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಸಂಘವು ಮನವಿ ಸಲ್ಲಿಸಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !