ಶುಕ್ರವಾರ, ಸೆಪ್ಟೆಂಬರ್ 24, 2021
23 °C
ದೇವರಹಿಪ್ಪರಗಿ ತಾಲ್ಲೂಕಿನ ವಿವಿಧೆಡೆ ಕುಡಿಯುವ ನೀರಿಗೆ ಹಾಹಾಕಾರ

ಟ್ಯಾಂಕರ್‌ ನೀರಿಗೆ ಹೆಚ್ಚಿದ ಬೇಡಿಕೆ

ಅಮರನಾಥ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ದೇವರಹಿಪ್ಪರಗಿ: ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದಂತೆ, ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಟ್ಯಾಂಕರ್‌ ನೀರಿಗೆ ಬೇಡಿಕೆ ಹೆಚ್ಚುತ್ತಿದೆ.

ತಾಲ್ಲೂಕಿನ ಕೋರವಾರ, ಕೋರವಾರ ತಾಂಡಾ, ಹುಣಶ್ಯಾಳ, ಮುಳಸಾವಳಗಿ ತಾಂಡಾ, ಹಿಟ್ನಳ್ಳಿ ಮತ್ತು ತಾಂಡಾ, ಜಾಲವಾದ ತಾಂಡಾ, ಕುದರಗೊಂಡ ಗ್ರಾಮಗಳಲ್ಲಿ ಜೀವ ಜಲಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಹುಣಶ್ಯಾಳ ಗ್ರಾಮದಲ್ಲಿ ಮೂರು ಟ್ಯಾಂಕರ್‌ಗಳಿಂದ ನಿತ್ಯ 9 ಟ್ರಿಪ್, ಮುಳಸಾವಳಗಿ ತಾಂಡಾಕ್ಕೆ ಒಂದು ಟ್ಯಾಂಕರ್‌ ಮೂಲಕ 3 ಟ್ರಿಪ್, ಕೋರವಾರ ಗ್ರಾಮಕ್ಕೆ ಎಂಟು ಟ್ಯಾಂಕರ್‌ ಮೂಲಕ ನಿತ್ಯ 24 ಟ್ರಿಪ್, ತಾಂಡಾಗೆ ಮೂರು ಟ್ಯಾಂಕರ್‌ ಮೂಲಕ 9 ಟ್ರಿಪ್, ಹಿಟ್ನಳ್ಳಿ ಗ್ರಾಮ ಹಾಗೂ ತಾಂಡಾಗೆ ಏಳು ಟ್ಯಾಂಕರ್‌ ಮೂಲಕ 21 ಟ್ರಿಪ್, ಜಾಲವಾದ ತಾಂಡಾಗೆ ಮೂರು ಟ್ಯಾಂಕರ್‌ನಿಂದ 9 ಟ್ರಿಪ್, ಕುದರಗೊಂಡ ಗ್ರಾಮಕ್ಕೆ ಒಂದು ಟ್ಯಾಂಕರ್‌ನಿಂದ ಮೂರು ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದೆ. ಅದಾಗ್ಯೂ ಈ ಗ್ರಾಮಗಳಲ್ಲಿ ನೀರಿನ ಬೇಡಿಕೆ ಹೆಚ್ಚುತ್ತಲೇ ಇದೆ.

‘ನಮ್ಮ ಕಡೆ 4-5 ದಿನಗಳಿಗೊಮ್ಮೆ ಟ್ಯಾಂಕರ್ ಬರುತ್ತದೆ. ಅದನ್ನು 10-15 ಮನೆಯವರು ತೆಗೆದುಕೊಳ್ಳುತ್ತೇವೆ. ಒಂದು ಟ್ಯಾಂಕರ್ ನೀರು ನಮಗೆಲ್ಲಾ ಸಾಕಾಗದೇ ನಮ್ಮ ನಮ್ಮಲ್ಲೇ ಜಗಳವಾಡುವಂತಾಗುತ್ತಿದೆ. ಬೇರೆ ಕಡೆಯಿಂದ ನೀರು ತರಬೇಕೆಂದರೆ ನೀರಿನ ಮೂಲಗಳಿಲ್ಲ. ಹೀಗಾಗಿ ಯಾವಾಗ ಮಳೆಗಾಲ ಆರಂಭವಾಗುತ್ತದೆ ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ಕೋರವಾರ ಗ್ರಾಮದ ಗಂಗಾಬಾಯಿ ನಾಗರಾಳ, ಶಂಕ್ರೆಮ್ಮ ನಾದ, ಶಿವಮ್ಮ ಪಡಗಾನೂರ.

‘ಸುಮಾರು 15 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ನಿತ್ಯ 24 ಟ್ಯಾಂಕರ್ ನೀರು ಯಾವುದಕ್ಕೆ ಸಾಲುತ್ತೇರಿ? ಮನ್ಯಾಗ ದನ–ಕರ ಇದ್ದವರ ಪರಿಸ್ಥಿತಿಯಂತೂ ಹೇಳಬಾರದು. ಅವರೆಲ್ಲ ನೀರಿಗಾಗಿ ಆ ಓಣಿ, ಈ ಓಣಿ ಎಂದು ಟ್ಯಾಂಕರ್ ಹಿಂದ ಓಡುವಂಗ ಆಗ್ಯಾದ’ ಎಂದು ನೀರಿನ ಬವಣೆ ಬಿಚ್ಚಿಡುತ್ತಾರೆ ಗ್ರಾಮದ ಭೀಮರಾಯ ನಾಗರಾಳ ಹಾಗೂ ನಬೀಸಾಬ್‌ ಉಕ್ಕಲಿ.

‘ಇಲ್ಲಿ ಶಾಶ್ವತ ನೀರು ಪೂರೈಕೆಗಾಗಿ ಕ್ರಮ ಕೈಗೊಳ್ಳದ ಹೊರತು ಏನನ್ನು ಮಾಡಲು ಸಾಧ್ಯವಿಲ್ಲ. ಮೊನ್ನೆ ಶಾಸಕರು ಭರವಸೆ ನೀಡ್ಯಾರ. ಮುಂದಿನ ವರ್ಷ ನೀರಿನ ತಾಪತ್ರಯ ಆಗಲಾರದಾಂಗ್ ಯೋಜನೆ ಮಾಡ್ಯಾರಂತ. ಏನ್ ಆಗ್ತದ ನೋಡೋಣ’ ಎಂದರು ನಾಗರಾಳ.

ಟ್ಯಾಂಕರ್ ನೀರು ಸರಬರಾಜು..!

‘ತಾಲ್ಲೂಕಿನ ಯಾವ ಗ್ರಾಮಗಳಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಬಂದಿದೆಯೋ ಅಲ್ಲೆಲ್ಲಾ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಕೋರವಾರ ಮತ್ತು ಕೊಂಡಗೂಳಿ ಗ್ರಾಮದಲ್ಲಿ ಒಂದೊಂದು ಕೊಳವೆ ಬಾವಿ ಕೊರೆಸಲಾಗಿದೆ. ಕೋರವಾರದಲ್ಲಿ 2 ಇಂಚು, ಕೊಂಡಗೂಳಿಯಲ್ಲಿ 3 ಇಂಚು ನೀರು ದೊರೆತಿದೆ. ಮುಂದಿನ 2-3 ದಿನಗಳಲ್ಲಿ ಮೋಟಾರ್‌ ಅಳವಡಿಸಿ ನೀರು ಪೂರೈಸಲಾಗುವುದು’ ಎಂದು ತಹಶೀಲ್ದಾರ್‌ ರಮೇಶ ಅಳವಂಡಿಕರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.