ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆದಿದೆ: ಬಿ.ಎಲ್.ಸಂತೋಷ್

ಶನಿವಾರ, ಏಪ್ರಿಲ್ 20, 2019
29 °C
ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಹೇಳಿಕೆ

ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆದಿದೆ: ಬಿ.ಎಲ್.ಸಂತೋಷ್

Published:
Updated:
Prajavani

ವಿಜಯಪುರ: ‘ದೇಶದ ಎಲ್ಲೆಡೆ ಇದೀಗ ಪ್ರಜಾಪ್ರಭುತ್ವದ ಹಬ್ಬ ನಡೆದಿದೆ. ಸ್ವಯಂ ಪ್ರೇರಣೆಯಿಂದ ಇದರಲ್ಲಿ ಭಾಗಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

‘ಚುನಾವಣೆ ಈ ಹಿಂದೆ ನಡೆಯುತ್ತಿದ್ದಕ್ಕೂ; ಈ ಬಾರಿ ನಡೆಯುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಹಲ ಯುವ ಪಡೆ ಚುನಾವಣಾ ಅಖಾಡಕ್ಕೆ ಇಳಿದಿವೆ. ಪಕ್ಷಗಳಿಗಿಂತಲೂ ವ್ಯವಸ್ಥಿತವಾಗಿ ಸಂಘಟನೆಗೊಂಡಿವೆ’ ಎಂದು ಶನಿವಾರ ರಾತ್ರಿ ನಗರದಲ್ಲಿ ನಡೆದ ‘ಮೋದಿ ಮತ್ತೊಮ್ಮೆ’ ಸಮಾರಂಭದಲ್ಲಿ ತಿಳಿಸಿದರು.

‘ಈ ಯುವ ಪಡೆಗಳು ಪ್ರಧಾನಿ ನರೇಂದ್ರ ಮೋದಿಗಾಗಿ ಕೆಲಸ ಮಾಡುತ್ತಿವೆ. ಬೆಂಗಳೂರಿನಲ್ಲಿ ಯುವ ಪಡೆಯೊಂದು 56,000 ಹೊಸ ಮತದಾರರನ್ನು ನೋಂದಣಿ ಮಾಡಿಸಿದೆ. ವಿವಿಧೆಡೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ವಿಶೇಷ ಪೂಜೆ, ಯಾಗ, ಹೋಮ ನಡೆಯುತ್ತಿರುವುದು ಬದಲಾವಣೆಯ ಪರ್ವಗಳಲ್ಲೊಂದು’ ಎಂದರು.

ತಮ್ಮ ಮಾತಿನುದ್ದಕ್ಕೂ ಮೋದಿಯ ಗುಣಗಾನ ಮಾಡಿದ ಸಂತೋಷ್‌, ‘ಐದು ವರ್ಷದ ಆಡಳಿತದಲ್ಲಿ ಕಾಶ್ಮೀರ ಹೊರತುಪಡಿಸಿ ಬೇರೆ ಎಲ್ಲೂ ಉಗ್ರರ ಅಟ್ಟಹಾಸ ನಡೆದಿಲ್ಲ. ಯಾವೊಂದು ಭ್ರಷ್ಟಾಚಾರದ ಆಪಾದನೆ ಯಾರೊಬ್ಬ ಸಚಿವರ ಮೇಲೂ ಕೇಳಿ ಬಂದಿಲ್ಲ’ ಎಂದು ಬಣ್ಣಿಸಿದರು.

‘ಮೋದಿ ಅವಧಿಯಲ್ಲಿ ದೇಶದಲ್ಲಿ ಕನಿಷ್ಠ ₹ 20 ಲಕ್ಷ ಕೋಟಿ ಮೊತ್ತದ ರೈಲ್ವೆ, ರಸ್ತೆ, ವಿಮಾನ, ನೀರು, ಸ್ವಚ್ಛತೆ, ಮೂಲ ಸೌಕರ್ಯ ವಲಯದಲ್ಲಿ ಕಾಮಗಾರಿ ನಡೆದಿವೆ. ಆದರೆ ಎಲ್ಲಿಯೂ ಭ್ರಷ್ಟಾಚಾರಕ್ಕೆ ಆಸ್ಪದ ಸಿಕ್ಕಿಲ್ಲ. ಇಂಥಹ ವ್ಯವಸ್ಥೆ ತಳಹಂತದ ಗ್ರಾಮ ಪಂಚಾಯ್ತಿಯಲ್ಲೂ ಬರಲಿಕ್ಕಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು’ ಎಂದು ನೆರೆದಿದ್ದ ಜನಸ್ತೋಮದ ಎದುರು ಪ್ರತಿಪಾದಿಸಿದರು.

‘ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಮುಂದಿನ ದಿನಗಳಲ್ಲಿ ಜಾತಿ, ಹಣದ ರಾಜಕಾರಣ ನಡೆಯಲ್ಲ. ಪ್ರಪಂಚದ ಬಹುತೇಕ ಚಿಕ್ಕ ರಾಷ್ಟ್ರಗಳ ಮುಂದೆ ನಮ್ಮ ಸಾಧನೆ ನಗಣ್ಯವಾಗಿದೆ. ವಿಶ್ವದಲ್ಲಿ ಮುಂಚೂಣಿಗೆ ಬರಲು ಮತ್ತೊಂದು ಐದು ವರ್ಷ ಅವಕಾಶ ಕೊಡಿ’ ಎಂದು ಸಂತೋಷ್‌ ಮನವಿ ಮಾಡಿದರು.

‘ಸ್ವಾತಂತ್ರ್ಯ ನಂತರ ದೇಶದ ಚುಕ್ಕಾಣಿ ಹಿಡಿದವರಿಂದ ಆಡಳಿತ ಹಳ್ಳ ಹಿಡಿದಿದೆ. ಇದೀಗ ಹಳಿಗೆ ಬಂದಿದೆ. ಕಾಂಗ್ರೆಸ್‌ ಮುಕ್ತ ಭಾರತ ಎಂದರೇ ಪಕ್ಷವೇ ಇರಬಾರದು ಎಂದಲ್ಲ. ಚುನಾವಣೆಯಲ್ಲಿ ನಮಗೆ ಪ್ರತಿಸ್ಪರ್ಧಿಯಾಗಲು ಕಾಂಗ್ರೆಸ್‌ ಇರಬೇಕು. ಆದರೆ ಆ ಪಕ್ಷದ ಅನೀತಿ, ಭ್ರಷ್ಟಾಚಾರ, ದುರಾಡಳಿತ ಹೇಳ ಹೆಸರಿಲ್ಲದಂತಾಗಬೇಕು ಎಂಬುದೇ ನಮ್ಮ ಕಲ್ಪನೆಯಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !