ಇವರ ಜೀವನಕ್ಕೆ ಡೋಲೇ ಆಧಾರ, 48 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಚೆನ್ನಮಲ್ಲು

7

ಇವರ ಜೀವನಕ್ಕೆ ಡೋಲೇ ಆಧಾರ, 48 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಚೆನ್ನಮಲ್ಲು

Published:
Updated:
Deccan Herald

ಚಾಮರಾಜನಗರ: ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯ ಬೆರಳುಗಳಿಗೆ ಕವಚ (ಬೆರಟ) ಧರಿಸಿಕೊಂಡು ನಾದಸ್ವರದ ನಿನಾದಕ್ಕೆ ತಕ್ಕಂತೆ ಡೋಲಿನಿಂದ ತಾಳ ಹೊಮ್ಮುತ್ತಿದ್ದರೆ ಸಂಗೀತ ಪ್ರಿಯರನ್ನು ತಲ್ಲೀನತೆಯಲ್ಲಿ ತೇಲುವಂತೆ ಮಾಡುತ್ತದೆ. ಅಂತಹ ಶಕ್ತಿ ಡೋಲಿಗೆ ಇದೆ.

ಜನಪದ ಕಲಾ ಪ್ರಕಾರಗಳಲ್ಲಿ ಒಂದಾದ ಡೋಲು ಬಾರಿಸುವ ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ಈ ಕಲೆಯ ಘಮಲನ್ನು ಬಿತ್ತರಿಸಿದ್ದಾರೆ ತಾಲ್ಲೂಕಿನ ಯಾನಗಹಳ್ಳಿಯ ಚೆನ್ನಮಲ್ಲು.

ಚೆನ್ನಮಲ್ಲು ಡೋಲು ಹಿಡಿದ ಕಥೆಯೇ ಕುತೂಹಲಕಾರಿ. ಇವರ ತಂದೆ ಬಸವಯ್ಯ ಅವರು‌ ನಾದಸ್ವರ ನುಡಿಸುವುದರಲ್ಲಿ ನಿಪುಣ. ಈಗ ಆರು ವರ್ಷಗಳಿಂದೀಚೆಗೆ ಅವರು ನುಡಿಸುವುದನ್ನು ಬಿಟ್ಟಿದ್ದಾರೆ. 

1970ರ ದಶಕದಲ್ಲಿ ಚೆನ್ನಮಲ್ಲು ಅವರು ತಂದೆಯೊಂದಿಗೆ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಹೋಗುತ್ತಿದ್ದರು. ವಾದ್ಯ ನುಡಿಸುವವರ ತಂಡದಲ್ಲಿ ಹೆಚ್ಚು ಜನ ಇದ್ದಾರೆ ಎಂಬ ಕಾರಣಕ್ಕೆ ಚೆನ್ನಮಲ್ಲು ಅವರಿಗೆ ಊಟ ಮಾಡಲು ಬಿಡಲಿಲ್ಲ. ಆಗ ಹಿತೈಷಿಯೊಬ್ಬರು, ‘ನಿನ್ನ ಮಗನಿಗೆ ಡೋಲು ಕೊಡು, ಅವನು ಚೆನ್ನಾಗಿ ಬಾರಿಸುತ್ತಾನೆ. ಆಗ ನಿನ್ನೊಂದಿಗೆ ಇವನ ಭವಿಷ್ಯಕ್ಕೂ ದಾರಿಯಾಗುತ್ತದೆ’ ಎಂದು ಸಲಹೆ ನೀಡಿದರಂತೆ.

ಅಂದಿನಿಂದ ಚೆನ್ನಮಲ್ಲು ಅವರು ಡೋಲು ಬಾರಿಸುತ್ತಿದ್ದಾರೆ. ಈಗಲೂ ಮುಂದುವರಿದಿದೆ. ಚೆನ್ನಮಲ್ಲು ಅವರಿಗೆ ಈಗ 60 ವರ್ಷ ವಯಸ್ಸು. ಅವರ ಕಲೆಗೆ 48 ವಸಂತಗಳು ತುಂಬಿವೆ. ಬಾಲ್ಯದಿಂದಲೇ ತಂದೆಯೊಂದಿಗೆ ಶುಭ ಸಮಾರಂಭಗಳು ಹಾಗೂ ವಾದ್ಯಗೋಷ್ಠಿಗಳಿಗೆ ಹೋಗುತ್ತಿದ್ದ ಅವರನ್ನು ಈ ಕಲೆ ಸೆಳೆಯಿತು.

ಜಿಲ್ಲಾ ಕೇಂದ್ರದಲ್ಲಿ ನಡೆಯುವ ರಥೋತ್ಸವಗಳು, ಗಣಪತಿ ವಿಸರ್ಜನಾ ಮಹೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ, ಶುಭ ಸಮಾರಂಭಗಳಲ್ಲಿ ಡೋಲು ಬಾರಿಸಿದ್ದಾರೆ. ಸಾವಿರಾರು ಮದುವೆಗಳಲ್ಲಿ ಗಟ್ಟಿಮೇಳ ಬಾರಿಸಿದ್ದಾರೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಾರೆ. ಹೊರ ರಾಜ್ಯ ತಮಿಳುನಾಡು, ಆಂಧ್ರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.

‘2ನೇ ತರಗತಿವರೆಗೆ ಓದಿದ್ದೇನೆ. ತಾಲ್ಲೂಕಿನ ಹೆಗ್ಗೋಠಾರದ ನಂಜಪ್ಪ ಎಂಬುವರಿಂದ ಡೋಲು ಬಾರಿಸುವುದನ್ನು ಕಲಿತುಕೊಂಡೆ. ನಾನು ನನ್ನ ತಂದೆಯೊಂದಿಗೆ ಡೋಲು ಬಾರಿಸುವ ಕಾಲಘಟ್ಟದಲ್ಲಿ ನನಗೆ 25 ಪೈಸೆ ಸಿಗುತ್ತಿತ್ತು. ಈಗ ತಂಡದೊಂದಿಗೆ ಕಾರ್ಯಕ್ರಮ ₹4,500ರಿಂದ ₹5 ಸಾವಿರ, ಖಾಸಗಿಯಾಗಿ ನೀಡಿದರೆ ಅಥವಾ ಹೊರ ಪ್ರದೇಶಗಳಲ್ಲಿ ನೀಡಿದರೆ ₹2ರಿಂದ ₹3 ಸಾವಿರ ಸಂಭಾವನೆ ಕೊಡುತ್ತಾರೆ’ ಎಂದು ಚೆನ್ನಮಲ್ಲು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಾದಸ್ವರಕ್ಕೆ ತಕ್ಕಂತೆ ಡೋಲು ಬಾರಿಸುತ್ತೇನೆ. ಆದಿ ತಾಳ, ಛಾಪು ತಾಳ, ರೂಪು ತಾಳಗಳಲ್ಲಿ ಪಳಗಿದ್ದೇನೆ’ ಎಂದು ಹೇಳಿದರು.

32 ಶಿಷ್ಯಂದಿರ ಗುರು

‘ಡೋಲು ಬಾರಿಸುವುದನ್ನು ಕಲಿಯಲು ಯುವ ಸಮುದಾಯ ಆಸಕ್ತಿ ತೋರಿಸಿದರೆ ಅವರಿಗೆ ಹೇಳಿಕೊಡುತ್ತೇನೆ. ಜಿಲ್ಲೆಯ ಯಳಂದೂರು, ಗುಂಡ್ಲುಪೇಟೆ, ವಡ್ಗಲ್‌ಪುರ, ಗಟ್ಟವಾಡಿ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಲ್ಲಿ 32 ಶಿಷ್ಯರಿದ್ದಾರೆ’ ಎಂದು ಚೆನ್ನಮಲ್ಲು ಹೇಳಿದರು.

‘ಅವರಲ್ಲಿ ಹಲವು ಯುವಕರು ಡೋಲು ಬಾರಿಸಲು ಹೋಗುತ್ತಾರೆ. ನನ್ನ ಮಗ ಕೂಡ ನಾದಸ್ವರ ಕಲಿತಿದ್ದಾನೆ. ಕಾರ್ಯಕ್ರಗಳಲ್ಲೂ ಭಾಗವಹಿಸುತ್ತಾನೆ. ಈ ಕಲೆಯನ್ನು ಮುಂದುವರಿಸುವ ಚಿಂತನೆಯೂ ಇದೆ’ ಎಂದರು.

ಸರ್ಕಾರ ಗಮನ ಹರಿಸಬೇಕು

ರಾಜ್ಯ ಸರ್ಕಾರ ಕಲಾವಿದರಿಗೆ ಗೌರವಯುತ ಜೀವನ ನಡೆಸಲು ಅನುಕೂಲವಾಗುವ ಹೊಸ ಸೌಲಭ್ಯಗಳನ್ನು ಒದಗಿಸಬೇಕು. ಸಾಂಸ್ಕೃತಿಕ, ಜನಪದ ಕಲೆ ಉಳಿವಿನ ಕಡೆ ಹೆಚ್ಚು ಗಮನ ಕೊಡಬೇಕು ಎಂದು ಚೆನ್ನಮಲ್ಲು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !