ಹಾಡುಗಳನ್ನೇ ನೆಚ್ಚಿಕೊಂಡ ಸಾಧಕ

7
ಗುಂಡ್ಲುಪೇಟೆ: ಸೋಮಹಳ್ಳಿ ಗ್ರಾಮದ ನಾಗರಾಜು ಗಾಯನ ಮೆಚ್ಚದವರಿಲ್ಲ

ಹಾಡುಗಳನ್ನೇ ನೆಚ್ಚಿಕೊಂಡ ಸಾಧಕ

Published:
Updated:
Deccan Herald

ಚಾಮರಾಜನಗರ: ಪ್ರೌಢಾವಸ್ಥೆಯಲ್ಲಿ ಜನಪದ ಹಾಡುಗಾರಿಕೆ ಮತ್ತು ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡು ಜಾನಪದದಲ್ಲಿಯೇ ಸ್ನಾತಕೋತ್ತರ ಪದವಿ ಪಡೆದು ಅದರಲ್ಲೇ ಜೀವನ ರೂಪಿಸಿಕೊಂಡವರು ಗುಂಡ್ಲುಪೇಟೆ ತಾಲ್ಲೂಕಿನ ಸೋಮಹಳ್ಳಿ ಗ್ರಾಮದ ಎಸ್.ಬಿ. ನಾಗರಾಜು.

ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಸಂಗೀತದ ಮತ್ತು ಗಾಯನದ ಗೀಳನ್ನು ಹಚ್ಚಿಕೊಂಡವರು ನಾಗರಾಜು. ಗ್ರಾಮದಲ್ಲಿ ಆರ್. ನಾರಾಯಣಸ್ವಾಮಿ ಎಂಬ ಸಂಗೀತ ವಿದ್ವಾನ್‍ರಿಂದ ಸಂಗೀತ ಕಲಿತು, ಶಿಕ್ಷಣದ ಉದ್ದಕ್ಕೂ ಅದನ್ನು ಮೈಗೂಡಿಸಿಕೊಂಡು ಶಾಲಾ ಕಾಲೇಜುಗಳ ಹಂತದಲ್ಲೇ ದೇಶದ ವಿವಿಧ ರಾಜ್ಯಗಳನ್ನು ಸುತ್ತಿದ್ದಾರೆ. ಸುಗಮ ಸಂಗೀತ, ಜನಪದ ಸಂಗೀತ, ಕನ್ನಡ ಚಲನಚಿತ್ರ ಗೀತೆ ಗಾಯನ, ಭಜನೆ ಪದ... ಹೀಗೆ ಎಲ್ಲ ರೀತಿಯ ಗೀತೆಗಳನ್ನು ಹಾಡುತ್ತಾ ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದ್ದಾರೆ.

ಆಕಾಶವಾಣಿಯಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಶಾಲೆಯಲ್ಲಿ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. 19 ವರ್ಷಗಳಿಂದ ಹಾಡುಗಳನ್ನೇ ನಂಬಿ ಬದುಕುತ್ತಿರುವ ನಾಗರಾಜು, 15ಕ್ಕೂ ಹೆಚ್ಚಿನ ಜನರನ್ನು ತಯಾರು ಮಾಡಿ ಅವರ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಗಾಯನವನ್ನು ಮುಂದುವರೆಸಿರುವ ನಾಗರಾಜು ಅವರು 2001ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇವರನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿದೆ. 

ನೆಹರೂ ಯುವಕೇಂದ್ರದ ವತಿಯಿಂದ ಹರಿಯಾಣ, ಅಂಡಮಾನ್ ನಿಕೋಬಾರ್, ಪಂಜಾಬ್, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಜಿಲ್ಲಾ ಸಮಿತಿ ಸದಸ್ಯರಾಗಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮಾಡುತ್ತಿದ್ದಾರೆ.

ನಾಗರಾಜು ಅವರನ್ನು ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳು ಅರಸಿ ಬಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2011ರಲ್ಲಿ ನಡೆದ ಗಡಿನಾಡು ಸಾಂಸ್ಕೃತಿಕ ಉತ್ಸವ, ಕನ್ನಡ ಸಾಹಿತ್ಯ ಅಕಾಡೆಮಿ ವತಿಯಿಂದ ಮಹದೇಶ್ವರ ಬೆಟ್ಟದಲ್ಲಿ ನಡೆದ ಕನ್ನಡ ಮೌಕಿಕ ಮಹಾಕಾವ್ಯಗಳು ಮತ್ತು ಸಾಂಸ್ಕೃತಿಕ ಮೀಮಾಂಸೆ ಅಧ್ಯಯನ ಕಮ್ಮಟ, ರಂಗಾಯಣ, ವಾರ್ತಾ ಇಲಾಖೆಯಿಂದ ನಡೆದ ಸಂಗೀತ ನಾಟಕ ಅಕಾಡೆಮಿ ಕಾರ್ಯಗಾರ ಮತ್ತು ಅನೇಕ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

‘ಜನಪದ ಕಲಾವಿದರನ್ನು ಗುರುತಿಸಬೇಕು’

‘ಜನಪದ ಸುಗಮ ಸಂಗೀತ ಕಾರ್ಯಕ್ರಮಗಳ ಮೂಲಕ ನಮ್ಮ ಪೂರ್ವಜನರು ಹಿಂದಿನಿಂದಲೂ ಜನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಚಾಮರಾಜನಗರ ಜಿಲ್ಲೆ ಜನಪದಗಳ ತವರೂರು. ಸಂಸ್ಕೃತಿಯ ಬಿಂಬವಾಗಿ ಮಲೆ ಮಹದೇಶ್ವರ, ಮಂಟೇಸ್ವಾಮಿ, ಬಿಳಿರಂಗಸ್ವಾಮಿ, ಮತ್ತು ಹಿಮವಾದ್ ಗೋಪಾಲಸ್ವಾಮಿ.. ಇನ್ನೂ ಮುಂತಾದ ಜನಪದ ವಾರಸುದಾರ ದೇವರುಗಳೇ ಇಲ್ಲಿದ್ದಾರೆ. ಇಲ್ಲಿರುವ ಜನಪದಗಳನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅದು ಇನ್ನೂ ಹೆಚ್ಚಾಗಬೇಕು. ಜಿಲ್ಲೆಯಲ್ಲಿ ಅನೇಕ ಮಂದಿ ಜನಪದ ಕಲಾವಿದರು ಇದ್ದಾರೆ. ಅವರನ್ನು ಗುರುತಿಸಿ ಬೆಳೆಸುವ ಮತ್ತು ಪ್ರೋತ್ಸಾಹ ನೀಡುವ ಕೆಲಸಗಳು ಆಗಬೇಕು’ ಎಂದು ಎಸ್.ಬಿ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !