ಭಾನುವಾರ, ಡಿಸೆಂಬರ್ 8, 2019
21 °C
ಹುಟ್ಟಿ ಬೆಳೆದ ಪ್ರದೇಶದಲ್ಲೇ ಕರ್ತವ್ಯ ನಿರ್ವಹಣೆ, ಮಹೇಶ್‌ ಸೇವೆಯನ್ನು ನೆನೆಯುವ ಹೂಗ್ಯಂ ಜನತೆ

ಗ್ರಾಮೀಣ ಸೇವೆಯಲ್ಲಿ ಸಾರ್ಥಕ್ಯ ಕಾಣುತ್ತಿರುವ ‘ವೈದ್ಯಶ್ರೀ’

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Deccan Herald

ಹನೂರು: ಹಣದ ಹಿಂದೆ ಓಡದ ವೈದ್ಯರೊಬ್ಬರ ಕಥನ ಇದು. ತನ್ನ ಮುಂದೆ ಸಾಕಷ್ಟು ಅವಕಾಶಗಳಿದ್ದರೂ ಎಲ್ಲವನ್ನೂ ದಿಕ್ಕರಿಸಿ, ತಾನು ಹುಟ್ಟಿ ಬೆಳೆದ ಪ್ರದೇಶದಲ್ಲೇ ಸೇವೆ ಸಲ್ಲಿಸಬೇಕು ಎಂದು ಗ್ರಾಮೀಣ ಭಾಗದ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ ‘ವೈದ್ಯಶ್ರೀ‌’ ಡಾ. ಮಹೇಶ್‌. 

ಹನೂರು ತಾಲ್ಲೂಕಿನ ಮಂಗಲ ಗ್ರಾಮದ ಡಾ. ಮಹೇಶ್ ಅವರು ಒಂದೂವರೆ ದಶಕದಿಂದ ವೈದ್ಯ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಮಹೇಶ್‌ ಅವರಿಗೆ ತಾನು ಬೆಳೆದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ತುಡಿತ. ಈ ತುಡಿತವೇ ಅವರನ್ನು ಗ್ರಾಮೀಣ ಪ್ರದೇಶದಲ್ಲೇ ಅವರು ಹೆಚ್ಚು ಸೇವೆ ಸಲ್ಲಿಸುವಂತೆ ಮಾಡಿತು. ಇವರ ಸೇವೆಗೆ ತಕ್ಕ ಪ್ರತಿಫಲವೂ ದೊರೆತಿದೆ. ‘ವೈದ್ಯಶ್ರೀ’ ಎಂಬ ಪುರಸ್ಕಾರ ಇವರ ಮುಕುಟವನ್ನು ಅಲಂಕರಿಸಿದೆ. ಕಳೆದ ತಿಂಗಳ 18ರಂದು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ವೈದ್ಯರ ಸಮ್ಮೇಳನದಲ್ಲಿ ಮಹೇಶ್‌ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಮಹೇಶ್‌ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು (2002) ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲ್ಲೂಕಿನಲ್ಲಿ. ಬಳಿಕ ಜಿಲ್ಲೆಯ ಸಂತೇಮರಹಳ್ಳಿ, ಯಳಂದೂರು, ಕೌದಳ್ಳಿ ಆಸ್ಪತ್ರೆಗಳಲ್ಲಿ 8 ವರ್ಷಗಳ ಕಾಲ ಒಬ್ಬರೇ ಅರಿವಳಿಕೆ ತಜ್ಞರಾಗಿ ಕರ್ತವ್ಯ ನಿಭಾಯಿಸಿದ್ದಾರೆ.

ಸಂಘಟನಾ ಚತುರ: ವೃತ್ತಿಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ವೈದ್ಯಕೀಯ ಸಂಘಟನೆಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ.  ಭಾರತೀಯ ವೈದ್ಯಕೀಯ ಸಂಘದ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ, 2014ರಿಂದ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯಲ್ಲಿ ಚಾಮರಾಜನಗರ ಜಿಲ್ಲೆಯ ಕಾರ್ಯದರ್ಶಿಯಾಗಿದ್ದಾರೆ. ರಾಜ್ಯಪಾಲರು ಇಲ್ಲಿನ ರೆಡ್‌ಕ್ರಾಸ್‌ ಸಂಸ್ಥೆಗೆ ‘ಉತ್ತಮ ರೆಡ್‌ಕ್ರಾಸ್‌ ಶಾಖೆ’ ಎಂದು ಪ್ರಶಂಸನೀಯ ಪತ್ರವನ್ನು ನೀಡಿ ಗೌರವಿಸಿದ್ದಾರೆ.

ವೀರಪ್ಪನ್ ಕಾಲದಲ್ಲಿ ಸೇವೆ: ದಂತಚೋರ ವೀರಪ್ಪನ್‌ ಕಾರ್ಯಾಚರಿಸುತ್ತಿದ್ದ ಹನೂರು ತಾಲ್ಲೂಕಿನ ಹೂಗ್ಯಂ ಮತ್ತು ಕುಡ್ಲೂರುಗಳಲ್ಲಿ ಮಹೇಶ್‌ ಅವರು ನೀಡಿದ ಸೇವೆಯನ್ನು ಅಲ್ಲಿನ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಈ ಭಾಗದಲ್ಲಿ ಅವರು ನಾಲ್ಕು ವರ್ಷ ವೈದ್ಯರಾಗಿ ದುಡಿದಿದ್ದಾರೆ.

2003ರಲ್ಲಿ ವೀರಪ್ಪನ್ ವಿರುದ್ಧದ ಕಾರ್ಯಚರಣೆಯ ನೇತೃತ್ವ ವಹಿಸಿದ್ದ ಎಸ್‌ಟಿಎಫ್‌ ಪಡೆ ಆಯೋಜಿಸುತ್ತಿದ್ದ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ, ತಮ್ಮ ಜೀವದ ಹಂಗು ತೊರೆದು ಮಹೇಶ್‌ ಸೇವೆ ಸಲ್ಲಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿದ್ದುಕೊಂಡೇ ಅರಣ್ಯದಂಚಿನ ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದ್ದ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ 700 ಹೆರಿಗೆ ಹಾಗೂ 600ಕ್ಕೂ ಹೆಚ್ಚು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

‘ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಸಾಕಷ್ಟು ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿ, ಜನರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುವುದರ ಜೊತೆಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುತ್ತಿದ್ದರು. ಅರಣ್ಯದಂಚಿನಲ್ಲಿರುವ ಗೋಪಿನಾಥಂ, ಆಲಂಬಾಡಿ, ಪೊನ್ನಾಚಿ, ಕೊಂಬುಡಕ್ಕಿ, ಜಲ್ಲಿಪಾಳ್ಯ, ದಿನ್ನಳ್ಳಿ ಮುಂತಾದ ಕುಗ್ರಾಮಗಳಲ್ಲೂ ಸಹ ತಮ್ಮ ಸೇವೆ ಸಲ್ಲಿಸಿದ್ದಾರೆ. ಕೂಡ್ಲೂರು ಆಸ್ಪತ್ರೆಯಲ್ಲಿ ಇದ್ದಷ್ಟು ವರ್ಷಗಳು ಜನರೊಂದಿಗೆ ಆತ್ಮೀಯವಾಗಿ ಬೆರೆತು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರ ಸೇವೆ ಜಿಲ್ಲೆಯ ಇನ್ನಷ್ಟು ಜನರಿಗೆ ಸಿಗುವಂತಾಗಬೇಕು’ ಎಂದು ಹೇಳುತ್ತಾರೆ ಹೂಗ್ಯಂ ಗ್ರಾಮದ ವಿಶ್ವ.

‘ಭಯದಲ್ಲೇ ನಿಸ್ವಾರ್ಥ ಸೇವೆ’

‘ವೀರಪ್ಪನ್‌ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿದಿನ ಎಲ್ಲಿ ಏನಾಗುತ್ತದೋ ಭಯ ಇತ್ತು. ಅದರ ನಡುವೆಯೂ ನಮ್ಮ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತಿದ್ದೆವು. ನಾವು ಮಾಡುತ್ತಿದ್ದ ಉತ್ತಮ ಸೇವೆಯೇ ನಮಗೆ ಅಲ್ಲಿ ಶ್ರೀ ರಕ್ಷೆಯಾಗಿತ್ತು. ಸಂಜೆ ಆರು ಗಂಟೆಯಾದರೆ ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗುತ್ತಿತ್ತು. ಈಗಿನಂತೆ ವಸತಿ ಗೃಹ, ದೂರವಾಣಿ ಸಂಪರ್ಕ ಇದ್ಯಾವುದೂ ಇರಲಿಲ್ಲ. ಮೂಲಸೌಕರ್ಯಗಳ ಕೊರತೆಯ ನಡುವೆಯೂ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕೆಂಬ ತುಡಿತ ನನ್ನನ್ನು ಅಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸುವಂತೆ ಮಾಡಿತು. ನಾನು ಕರ್ತವ್ಯ ನಿರ್ವಹಿಸಿದ್ದ ಕೇಂದ್ರಕ್ಕೆ 2008ರಲ್ಲಿ ಉತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಪುರಸ್ಕಾರ ಲಭಿಸಿತ್ತು’ ಎಂದು ತಮ್ಮ ಸೇವಾ ಅನುಭವವನ್ನು ಡಾ. ಮಹೇಶ್ ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಪ್ರತಿಕ್ರಿಯಿಸಿ (+)