ಸೋಮವಾರ, ಡಿಸೆಂಬರ್ 9, 2019
24 °C
ಗುಂಡ್ಲುಪೇಟೆ: 20 ವರ್ಷಗಳಿಂದ ಭಕ್ತಿಗೀತೆ, ಜನಪದ, ಶೋಕಗೀತೆಗಳಿಗೆ ದನಿಯಾಗುತ್ತಿರುವ ಬಸವರಾಜು

ಹಾಡುಗಾರಿಕೆಯೇ ಇವರ ಜೀವನ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Deccan Herald

ಗುಂಡ್ಲುಪೇಟೆ: ಬಾಲ್ಯದಲ್ಲಿ ಹಾಡುವುದನ್ನು ಗೀಳಾಗಿಸಿಕೊಂಡಿದ್ದ ಬಸವರಾಜು ಅವರಿಗೆ ಇಂದು ಅದೇ‌ ಹಾಡುಗಾರಿಕೆ ಅನ್ನ ನೀಡುತ್ತಿದೆ.

ತಾಲ್ಲೂಕಿನ ಕರಕಲಮಾದಹಳ್ಳಿಯ ಬಸವರಾಜು ಅವರು ಎರಡು ದಶಕಗಳಿಂದ ಗಾಯನದ ರಸದೌತಣವನ್ನು ಶ್ರೋತೃಗಳಿಗೆ ಉಣಬಡಿಸುತ್ತಿದ್ದಾರೆ. ಜೊತೆಗೆ ಒಂದು ತಂಡವನ್ನು ಕಟ್ಟಿಕೊಂಡು, ಎಲ್ಲ ಸದಸ್ಯರಿಗೂ ತಮ್ಮ ಕ‌ಲೆಯನ್ನು ಧಾರೆ ಎರೆಯುತ್ತಿದ್ದಾರೆ.

ಇವರ ಕಂಠದಿಂದ ಹೊರ ಹೊಮ್ಮುವ ಭಕ್ತಿ ಗೀತೆಗಳು, ಜನಪದ ಗೀತೆ, ಶೋಕಗೀತೆ (ಸಾವಿನ ಮನೆ ಮತ್ತು ತಿಥಿಯ ಸಂದರ್ಭದಲ್ಲಿ ಹಾಡುವುದು), ಮಲೆ ಮಹದೇಶ್ವರ, ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಕಥಾ ಪ್ರಸಂಗಗಳು ಕೇಳುಗರನ್ನು ಆಕರ್ಷಿಸುತ್ತವೆ. ತಂಡದ ಸದಸ್ಯರಾದ ಬಸವರಾಜು, ಸಿದ್ದರಾಜು, ಕುಮಾರ ಅವರು ಕೂಡ ಇವರ ಹಾಡುಗಳಿಗೆ ದನಿಯಾಗುತ್ತಾರೆ. 

ತಮ್ಮ ತಂಡಕ್ಕೆ ನೇರವಾಗಿ ಕಾರ್ಯಕ್ರಮಗಳು (ಆರ್ಡರ್‌ಗಳು) ಬರದೇ ಇದ್ದಾಗ ಪ್ರಸಿದ್ಧ ಜನಪದ ಹಾಡುಗಾರ ಮಳವಳ್ಳಿ ಮಹದೇವ ಸ್ವಾಮಿ ಅವರ ತಂಡದ ಸದಸ್ಯರಾಗಿ ಕೆಲಸ ಮಾಡುತ್ತಾರೆ.

‘ಬಾಲ್ಯದ ದಿನಗಳಲ್ಲಿ ಸ್ಥಳೀಯ ಕಲಾವಿದರಾದ ಯರಿಯೂರು ಪುಟ್ಟಲಿಂಗಯ್ಯ ಮತ್ತು ಕೆಬ್ಬೆಪುರ ಸಿದ್ದರಾಜು ಅವರ ಬಳಿ ಹಾಡುಗಾರಿಕೆಯನ್ನು ಕಲಿತಿದ್ದೆ. ನಂತರ ಮಳವಳ್ಳಿ ಮಹದೇವಸ್ವಾಮಿ ಅವರ ಬಳಿ ಹಾಡಲು ಆರಂಭಿಸಿದೆ. ಜನಪದ, ಭಕ್ತಿ, ಶೋಕದ ಗೀತೆಗಳನ್ನು ಹೇಗೆ ಹಾಡಬೇಕು ಎಂಬುದನ್ನು ಮತ್ತು  ಶ್ರುತಿಯ ತಾಳ ಜ್ಞಾನವನ್ನು ಅವರು ಕಲಿಸಿದರು. ಒಂದು ಹಾಡನ್ನು ವಿವಿಧ ಶೈಲಿಯಲ್ಲಿ ಹೇಗೆ ಹಾಡಬೇಕು ಎಂಬುದನ್ನೂ ಅವರು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಆಸಕ್ತಿ ಇರುವ ಯುವಕರಿಗೆ ತಮ್ಮ ತಂಡದಲ್ಲಿ ಅವಕಾಶ ನೀಡಿ, ನನಗೆ ತಿಳಿದ ಜ್ಞಾನವನ್ನು ಇತರರಿಗೂ ಹಂಚುತ್ತಿದ್ದೇನೆ’ ಎಂದು ಬಸವರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾವಿನ ಮನೆಯಲ್ಲಿ ಇಷ್ಟೇ ಕೊಡಿ ಎಂದು ಹಣ ಕೇಳುವುದಿಲ್ಲ. ಅವರಿಗೆ ತೃಪ್ತಿ ಆದಷ್ಟು ಕೊಡುತ್ತಾರೆ. ಬೇರೆ ಕಾರ್ಯಕ್ರಮಗಳಿಗೆ ಇಂತಿಷ್ಟು ಹಣ ಎಂದು ನಿಗದಿ ಪಡಿಸಿ ಕಾರ್ಯಕ್ರಮ ನಡೆಸುತ್ತೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಣಿಪುರದ ಇಂಫಾಲದಲ್ಲಿ ನಡೆದ ಜನಪದೋತ್ಸವ ಕಾರ್ಯಕ್ರಮ‌ದಲ್ಲಿ  ಭಾಗವಹಿಸಿದ್ದಾರೆ. ಅಲ್ಲದೇ ರಾಜ್ಯದಾದ್ಯಂತ ಕಾರ್ಯಕ್ರಮ ನೀಡಿದ್ದಾರೆ. ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿರುವ ಕನ್ನಡಿಗರು ಇವರನ್ನು ಕರೆಸಿ ಹಾಡಿಸಿದ್ದಾರೆ.

‘ಕಲಾವಿದರಿಗೆ ಪ್ರೋತ್ಸಾಹ ಬೇ‌ಕು’
‘ಜನಪದ ಕಲೆಗಳು ಓದಿನಿಂದ ಬರುವುದಿಲ್ಲ. ಅದು ಜನರ ಬಾಯಿಂದ ಬಾಯಿಗೆ ಹರಿದಾಡಬೇಕು. ಈ ಕಲೆಯನ್ನು ನನಗೆ ಇನ್ನೊಬ್ಬರು ಕಲಿಸಿದ್ದರು. ಅದೇ ನಮಗೆ ಜೀವನವಾಯಿತು. ಅದರಂತೆ ಆಸಕ್ತಿ ಇರುವವರಿಗೆ ಕಲಿಸುತ್ತಿದ್ದೇನೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಹಾಡಿದರೆ ಮಾತ್ರ ಜನಪದ ಕಲಾವಿದರಿಗೆ ಗೌರವ‌ಧನವನ್ನು ನೀಡಲಾಗುತ್ತದೆ. ಇದರಿಂದ ಜನಪದ ಕಲಾವಿದರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಆಗ ಕಲೆಗೆ ಒಂದು ಗೌರವ ಬರುತ್ತದೆ. ಮತ್ತು ಅದು ಇತರ ಕಡೆಗಳಿಗೂ ಪಸರಿಸುತ್ತದೆ’ ಎಂದು ‌ಬಸವರಾಜು ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು