ಚಿತ್ರಕಲೆಯಲ್ಲಿ ‘ಆನಂದ’ದ ಬದುಕು

ಬುಧವಾರ, ಮಾರ್ಚ್ 20, 2019
31 °C
ಎರಡೂವರೆ ದಶಕಗಳ ಸೇವೆ: ಟ್ಯಾಬ್ಲೊ ನಿರ್ಮಾಣ, ಚಿತ್ರಕಲೆಯೇ ಇವರ ಉಸಿರು

ಚಿತ್ರಕಲೆಯಲ್ಲಿ ‘ಆನಂದ’ದ ಬದುಕು

Published:
Updated:
Prajavani

ಚಾಮರಾಜನಗರ: ಇವರು ಚಿತ್ರಕಲಾ ಜಗತ್ತಿನ ಹಳೆಯ ಬೇರೂ ಹೌದು. ಹೊಸ ಚಿಗುರು ಕೂಡ ಹೌದು. ಜಲ ವರ್ಣಕಲೆ, ತೈಲವರ್ಣ ಚಿತ್ರ, ರೇಖಾಚಿತ್ರದಿಂದ ಹಿಡಿದು ಇತ್ತೀಚಿನ ಗ್ರಾಫಿಕ್‌ ಡಿಸೈನ್‌, 3ಡಿ ಚಿತ್ರಕಲೆ, ಅನಿಮೇಷನ್‌ ಮುಂತಾದ ಆಧುನಿಕ ಕಲೆಯೂ ಇವರಿಗೆ ಸಿದ್ಧಿಸಿದೆ. 

ಅಷ್ಟು ಮಾತ್ರ ಅಲ್ಲ; ಸ್ತಬ್ಧಚಿತ್ರ ನಿರ್ಮಾಣ, ಕಲಾತ್ಮಕ ಸೆಟ್‌ಗಳ ನಿರ್ಮಾಣದಲ್ಲೂ ಪಳಗಿದವರು. ಹೆಸರು ಡಿ.ಆನಂದ ಮೂರ್ತಿ. ಮೂಲತಃ ಗುಂಡ್ಲುಪೇಟೆಯ ಕೋಟೆಕೆರೆ ಗ್ರಾಮದವರು. ಈಗ ಚಾಮರಾಜನಗರದ ಹೌಸಿಂಗ್‌ ಬೋರ್ಡ್‌ ನಿವಾಸಿ. ಎರಡೂ‌ವರೆ ದಶಕಗಳಿಂದ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾ ಚಿತ್ರಕಲೆಯಲ್ಲೇ ಇವರು ಬದುಕು ಕಟ್ಟಿಕೊಂಡಿದ್ದಾರೆ. 

ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಕಲಾ ಚಾತುರ್ಯವನ್ನು ಪ್ರದರ್ಶಿಸುತ್ತಾ ಬಂದಿರುವ ಆನಂದ ಮೂರ್ತಿ ಅವರು ಆಸಕ್ತರಿಗೆ ತಮ್ಮಲ್ಲಿರುವ ಕಲೆಯನ್ನು ಹಂಚುತ್ತಿದ್ದಾರೆ. ಮೈಸೂರಿನ ಒಡನಾಡಿ ಸೇವಾಸಂಸ್ಥೆ ಹಾಗೂ ತಮ್ಮದೇ ಆನಂದ ಕಲಾ ಕೇಂದ್ರದ ಮೂಲಕ ಚಿತ್ರಕಲೆಗೆ ಸಂಬಂಧಪಟ್ಟ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಇತ್ತೀಚೆಗೆ ಆರೋಗ್ಯ ಕೊಂಚ ಹದಗೆಟ್ಟಿದ್ದರೂ, ಚಿತ್ರಕಲೆಯ ನಂಟನ್ನು ಅವರು ಬಿಟ್ಟಿಲ್ಲ.

ಬಾಲ್ಯದಿಂದಲೇ ಆಸಕ್ತಿ: ಆನಂದಮೂರ್ತಿ ಅವರಿಗೆ ಬಾಲ್ಯದಿಂದಲೇ ಚಿತ್ರ ಕಲೆಯ ಮೇಲೆ ವಿಪರೀತ ಆಸಕ್ತಿ. ಸಣ್ಣ ವಯಸ್ಸಿನಲ್ಲೇ ಅಣ್ಣನೊಂದಿಎ ಬ್ಯಾನರ್‌ ಬರೆಯಲು ಕುಂಚ ಹಿಡಿದಿದ್ದರು.

ಎಸ್‌ಎಸ್‌ಎಲ್‌ಸಿ ನಂತರ 1989ರಲ್ಲಿ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ (ಕಾವಾ) ಕಾಲೇಜಿಗೆ ಸೇರಿದರು. 5 ವರ್ಷಗಳ ಕೋರ್ಸ್‌ ಮುಗಿಸಿದ ಬಳಿಕ ಚಿತ್ರಕಲೆಗೆ ಸಂಬಂಧಪಟ್ಟ ಎಲ್ಲ ಬಗೆಯ ಕಾರ್ಯಾಗಾರಗಳಿಗೆ ಹಾಜರಾಗಿ ಪರಿಣತಿ ಪಡೆದರು. ಒಂದೆರಡು ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿಯೂ ದುಡಿದರು.

ಇವರ ಕಲೆ ಗುರುತಿಸಿದ ಅನೇಕ ರಂಗ ಕಲಾವಿದರು, ಜನಪ್ರತಿನಿಧಿಗಳು ತಮ್ಮ ಕಾರ್ಯಕ್ರಮಗಳು, ವಸ್ತು ಪ್ರದರ್ಶನಗಳಿಗೆ ಮಾದರಿಗಳನ್ನು ತಯಾರು ಮಾಡಿಕೊಡುವಂತೆ ಬೇಡಿಕೆ ಇಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಇವರ ಕೈಯಲ್ಲಿ ಚಿತ್ರ, ಬೊಂಬೆಗಳ ರೂಪ ತಡೆಯಲು ಆರಂಭಿಸಿದರು. ಕಲಾತ್ಮಕ ಚಿತ್ರಗಳು, ಸ್ತಬ್ಧಚಿತ್ರಗಳು ಹಾಗೂ ವಸ್ತು ಪ್ರದರ್ಶನಗಳಲ್ಲಿ ಸ್ಥಾಪಿಸುವ ಆಕರ್ಷಕ ಮಳಿಗೆಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣತಿ ಸಾಧಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆಎಸ್ಆರ್‌ಟಿಸಿ, ಪ್ರಾಚ್ಯ ವಸ್ತು ಸಂಗ್ರಹಾಲಯ, ಮೈಸೂರಿನ ಪ್ರಾಣಿ ಸಂಗ್ರಹಾಲಯ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ, ಎಪಿಎಂಸಿ, ವೈದ್ಯಕೀಯ ಇಲಾಖೆ ಹೀಗೆ... ವಿವಿಧ ಕ್ಷೇತ್ರ ಹಾಗೂ ಇಲಾಖೆಯವರು ಇವರ ಕಲೆಯನ್ನು ಬಳಸಿಕೊಂಡಿವೆ.

ಮಲೇಷ್ಯಾದಲ್ಲಿ ಕಾರ್ಯಾಗಾರ: 1993ರಲ್ಲಿ ಮಲೇಷ್ಯಾದ ಮಾರ್ಗೆಟ್‌ ಎಂಬುವವರು ಇವರನ್ನು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಮಕ್ಕಳಿಗೆ ಚಿತ್ರಕಲೆ ಕುರಿತ ಕಾರ್ಯಾಗಾರವನ್ನು ನಡೆಸಿದ್ದರು. ಅಲ್ಲದೆ ದೆಹಲಿ, ರಾಜಸ್ಥಾನಗಳಲ್ಲೂ ಮಕ್ಕಳಿಗಾಗಿ ಚಿತ್ರಕಲೆಗೆ ಸಂಬಂಧಪಟ್ಟ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. 

‘ಪ್ರತಿಯೊಬ್ಬರಲ್ಲೂ ಅಡಕವಾಗಿರುವ ಕಲೆಯನ್ನು ವೃತ್ತಿಯಾಗಿಸಿಕೊಂಡು ಸೃಜನಶೀಲತೆ ಮೂಲಕ ಪ್ರದರ್ಶಿಸಿದರೆ ಜೀವನ ಕಟ್ಟಿಕೊಳ್ಳಬಹುದು. ನಗರದಲ್ಲಿ ರಜಾ ದಿನಗಳಂದು ಬೇಸಿಗೆ ಶಿಬಿರ ಆಯೋಜಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಸರ್ಕಾರಿ ಯೋಜನೆಗೆ (ಪ್ರಾಜೆಕ್ಟ್‌) ನನ್ನೊಂದಿಗೆ 8 ಮಂದಿ ಕೈಜೋಡಿಸುತ್ತಾರೆ. ಒಂದು ಯೋಜನೆ ಅನುಷ್ಠಾನಕ್ಕೆ ₹ 90 ಸಾವಿರದಿಂದ ₹ 1 ಲಕ್ಷದವರೆಗೂ ಸಂಭಾವನೆ ಸಿಗುತ್ತದೆ’ ಎಂದು ಆನಂದ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿತ್ರಕಲೆಯಲ್ಲಿ ಉತ್ಸಾಹ ಹೊಂದಿರುವ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸುತ್ತೇನೆ. ಬಡ ಮಕ್ಕಳಿಂದ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ. ಆರ್ಥಿಕವಾಗಿ ಸದೃಢರಾದವರು ಶುಲ್ಕ ನೀಡುತ್ತಾರೆ’ ಎಂದು ಅವರು ಹೇಳಿದರು.  

ಸರ್ಕಾರಿ ಚಿತ್ರಕಲಾ ಕಾಲೇಜು ತೆರೆಯಬೇಕು

‘ಇಡೀ ರಾಜ್ಯದಲ್ಲಿ ಮೈಸೂರಿನಲ್ಲಿ ಮಾತ್ರ ಚಿತ್ರಕಲೆಗೆ ಸಂಬಂಧಿಸಿದ ಕಾಲೇಜು (ಕಾವಾ) ಇದೆ. ಇತರ ಕಡೆಗಳಲ್ಲಿ ಖಾಸಗಿ ಕಾಲೇಜುಗಳೇ ಹೆಚ್ಚಾಗಿವೆ. ಸರ್ಕಾರ ಹೆಚ್ಚು ಹೆಚ್ಚು ಚಿತ್ರಕಲಾ ಕಾಲೇಜುಗಳನ್ನು ತೆರೆದು ಅಭಿವೃದ್ಧಿಗೊಳಿಸಲು ಮುಂದಾಗಬೇಕು’ ಎಂದು ಹೇಳುತ್ತಾರೆ ಆನಂದ ಮೂರ್ತಿ.

ಉತ್ತಮ ಭವಿಷ್ಯವಿದೆ: ‘ಇಂದು ಚಿತ್ರಕಲೆ ಎಂದರೆ ರೇಖಾಚಿತ್ರ, ತೈಲವರ್ಣಕಲೆ  ಮಾತ್ರವಲ್ಲ. ಅನಿಮೇಷನ್‌, 3ಡಿ ಕೂಡ ಸೇರುತ್ತದೆ. ಹಾಗಾಗಿ, ಚಿತ್ರಕಲೆಯಲ್ಲಿ ಉತ್ಸಾಹ ಹೊಂದಿರುವ ವಿದ್ಯಾರ್ಥಿಗಳು ಓದಿನೊಂದಿಗೆ ಈ ಕ್ಷೇತ್ರವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅವಕಾಶಗಳನ್ನು ಸದುಪಯೋಗಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !