ಜೀವನ ರೂಪಿಸಿದ ಜಾನಪದ ರಂಗಕಲೆ

ಬುಧವಾರ, ಜೂನ್ 26, 2019
29 °C
ರಂಗಹೆಜ್ಜೆ ಸಾಂಸ್ಕೃತಿಕ ಟ್ರಸ್ಟ್ ಕಟ್ಟಿಕೊಂಡು ರಂಗ ಕಾಯಕದಲ್ಲಿ ನಿರತ ಸಂಜೀವ ಮೂರ್ತಿ

ಜೀವನ ರೂಪಿಸಿದ ಜಾನಪದ ರಂಗಕಲೆ

Published:
Updated:
Prajavani

ಗುಂಡ್ಲುಪೇಟೆ: ಹದಿಹರೆಯದ ವಯಸ್ಸಿನ ಹುಡುಗ ಕಾಲೇಜು ಹಂತದಲ್ಲಿ ಜಾನಪದ ರಂಗ ಕಲೆಯನ್ನು ಮೈಗೂಡಿಸಿಕೊಂಡು ಇಂದು ಅದರಿಂದಲೇ ಜೀವನ ರೂಪಿಸಿಕೊಂಡಿದ್ದಾರೆ.

ತಾಲ್ಲೂಕಿನ ಪುತ್ತನಪುರ ಗ್ರಾಮದ ಸಂಜೀವ ಮೂರ್ತಿ ಅವರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಕಲಿತ ಕಲೆ ಇಂದು ಅವರ ಜೀವನಕ್ಕೆ ದಾರಿಯಾಗಿದೆ. 

ಸ್ನೇಹಿತರೊಂದಿಗೆ ಸೇರಿ ‘ರಂಗಹೆಜ್ಜೆ ಸಾಂಸ್ಕೃತಿಕ ಟ್ರಸ್ಟ್’ ಎನ್ನುವ ಜಾನಪದ ತಂಡ ಕಟ್ಟಿಕೊಂಡು ರಾಜ್ಯದ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳಾದ ಡೊಳ್ಳುಕುಣಿತ, ಕೋಲಾಟ, ಕಂಸಾಳೆ ನೃತ್ಯ, ಪಟ ಕುಣಿತ, ಪೂಜಾ ಕುಣಿತ ಮತ್ತು ಜಾನಪದ ಹಾಡುಗಳಿಗೆ ನೃತ್ಯ ಸಂಯೋಜಿಸಿ ತರಬೇತಿಯನ್ನು ನೀಡುತ್ತಿದ್ದಾರೆ.

ಪಿಯುನಲ್ಲಿರುವಾಗ ಪಾಶ್ಚಾತ್ಯ ನೃತ್ಯ ಸಂಜೀವಮೂರ್ತಿ ಅವರನ್ನು ಸೆಳೆದಿತ್ತು. ಪದವಿಗಾಗಿ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದ ನಂತರ ಜಾನಪದ ಕಲೆಯ ಬಗ್ಗೆ ಆಸಕ್ತಿ ಹೆಚ್ಚಾಯಿತು. ಕಲಿಯುವ ಇರಾದೆಯೂ ಹೆಚ್ಚಿತು. ಸ್ನೇಹಿತರಾದ ವೆಂಕಟೇಶ ಮತ್ತು ನಂದೀಶ ಅವರೊಂದಿಗೆ ಸೇರಿ ರಂಗಕಲೆ ಕಲಿತರು. ಬಳಿಕ ದೇಸಿರಂಗ ತಂಡದಲ್ಲಿ ವಿವಿಧ ಪ್ರಕಾರದ ಜಾನಪದ ನೃತ್ಯ ಕಲಿಕೆಯಲ್ಲಿ ನಿರತರಾದರು.

ಸ್ಪರ್ಧೆ: ಮಹಾರಾಜ ಕಾಲೇಜಿನ ಸಾಂಸ್ಕೃತಿಕ ತಂಡದಲ್ಲಿದ್ದುಕೊಂಡು, ದಸರಾ ಕಾರ್ಯಕ್ರಮದ ಜಂಬೂಸವಾರಿ ಮೆರವಣಿಗೆ, ಅಂತರಕಾಲೇಜು  ಸ್ಪರ್ಧೆ, ದಕ್ಷಿಣ ವಲಯದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇರಳ, ತಮಿಳುನಾಡಿನ ಸೇಲಂ, ಮದುರೆ, ಆಂಧ್ರಪ್ರದೇಶಗಳಿಗೆ ಹೋಗಿ ಅಂತರರಾಜ್ಯ ವಿಶ್ವವಿದ್ಯಾಲಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಈಗ ಸ್ನೇಹಿತರೊಂದಿಗೆ ತಂಡ ಕಟ್ಟಿಕೊಂಡು ರಾಜ್ಯದ ಧಾರವಾಡ, ವಿಜಯಪುರ, ಬೆಂಗಳೂರು, ಮೈಸೂರು, ಶಿವಮೊಗ್ಗ ವಿಶ್ವವಿದ್ಯಾಲಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಾನಪದದ ವಿವಿಧ ಪ್ರಕಾರಗಳ ಕುರಿತು ತರಬೇತಿ ನೀಡಿದ್ದಾರೆ. ಧಾರವಾಡ ತಂಡದ ಜೊತೆ ದೆಹಲಿಯಲ್ಲಿರುವ ಕನ್ನಡ ಸಂಘದಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಉಚಿತ ಶಿಬಿರ: ‘ವರ್ಷದಲ್ಲಿ ಎರಡು ಬಾರಿ ಮೈಸೂರಿನ ಕಲಾಮಂದಿರದಲ್ಲಿ ಜಾನಪದ ಕಲೆಗೆ ಸಂಬಂಧಿಸಿದಂತೆ ಉಚಿತ ಶಿಬಿರಗಳನ್ನು ಆಯೋಜಿಸಿ ಮಕ್ಕಳಿಗೆ ಜಾನಪದ ರಂಗಾಸಕ್ತಿ ಬೆಳೆಸುತ್ತಿದ್ದೇನೆ. ಏಳು ವರ್ಷಗಳಿಂದ ಜನರ ಕಲೆಗಳೊಂದಿಗೆ ಗುರುತಿಸಿಕೊಂಡಿದ್ದೇನೆ. ಪೂರ್ಣ ಪ್ರಮಾಣದಲ್ಲಿ ಈ ಕಲೆಯಲ್ಲಿ ತೊಡಗಿಕೊಂಡಿರುವುದರಿಂದ ಆದಾಯದ ಮೂಲವಾಗಿ ಜೀವನಕ್ಕೂ ದಾರಿಯಾಗಿದೆ’ ಎನ್ನುತ್ತಾರೆ ಸಂಜೀವ ಮೂರ್ತಿ.

ಕಲೆಯ ನಂಟು: ‘ನನಗೆ ಕುಟುಂಬದಿಂದಲೇ ಜಾನಪದ ಕಲೆಗಳ ನಂಟಿದೆ. ನನ್ನ ಅಜ್ಜ (ತಂದೆಯ ಅಪ್ಪ) ಪೌರಾಣಿಕ ನಾಟಕ ಕಲಾವಿದರು ಮತ್ತು ನನ್ನ ತಾಯಿ ಅವರ ಅಪ್ಪ ಚಿಕ್ಕಹನುಮಯ್ಯ ಕೂಡ ಶನಿದೇವರ ನಾಟಕಗಳ ಪಾತ್ರಧಾರಿ ಮತ್ತು ಹಾರ್ಮೋನಿಯಂ ಮಾಸ್ಟರ್ ಆಗಿದ್ದರು. ಬಾಲ್ಯದಿಂದಲೂ ಇವರಿಬ್ಬರ ಪ್ರೇರಣೆ ನನಗಿತ್ತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಾನಪ‍ದದಲ್ಲಿ ಜೀವನವಿದೆ’ 

‘ಜಾನಪದ ಕಲೆ ಬಗ್ಗೆ ಯುವಜನರಿಗೆ ಆಸಕ್ತಿ ಇದೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಮನಸ್ಸುಗಳು ಕಡಿಮೆ. ಹೆಣ್ಣುಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿರುತ್ತದೆ. ಅವರನ್ನು ಪ್ರೋತ್ಸಾಹಿಸಬೇಕು. ಜಾನಪದ ಕಲೆ ಎಂದಿಗೂ ನಶಿಸಬಾರದು ಎನ್ನುವ ಉದ್ದೇಶದಿಂದ ಉಚಿತ ಶಿಬಿರಗಳನ್ನು ಮಾಡುತ್ತಿದ್ದೇವೆ. ಕಲೆ ಮತ್ತು ಜಾನಪದ ಕಲಾವಿದರನ್ನು ಸರ್ಕಾರ ಗುರುತಿಸಿ, ಪ್ರೋತ್ಸಾಹಿಸಬೇಕು. ಇದರಿಂದಲೂ ಜೀವನ ರೂಪಿಸಿಕೊಳ್ಳಬಹುದು ಎಂಬ ನಂಬಿಕೆಯನ್ನು ಸರ್ಕಾರ, ಸಂಸ್ಥೆಗಳು ಹುಟ್ಟಿಸಬೇಕು’ ಎನ್ನುವುದು ಸಂಜೀವ ಮೂರ್ತಿ ಅವರ ಅಭಿಪ್ರಾಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !