ಬುಧವಾರ, ನವೆಂಬರ್ 20, 2019
24 °C
ಗ್ರಾಮೀಣ ಭಾಗದಲ್ಲಿ ಹಳೆಯ ಪರಂಪರೆ ಉಳಿಸಲು ಪ್ರಯತ್ನಿಸುತ್ತಿರುವ ಕೆಸ್ತೂರು ‘ಸ್ವರಸಂಗಮ’

ಹರಿಕಥಾ ಕ್ಷೇತ್ರದ ಮಿಂಚಿನ ‘ಪ್ರಕಾಶ’

Published:
Updated:
Prajavani

ಯಳಂದೂರು: ವಿದ್ವತ್‌ಪೂರ್ಣ ಕಥೆ, ಉಪಕಥೆ ಮತ್ತು ಮೌಲ್ಯಗಳ ಸಂಗಮವಾದ ಹರಿಕಥಾಲೋಕವನ್ನು ಗ್ರಾಮೀಣ ಭಾಗಗಳಲ್ಲಿ ಉಳಿಸಲು ಕೀರ್ತನಕಾರ ಕೆಸ್ತೂರು ಪ್ರಕಾಶ್ ಶ್ರಮಿಸುತ್ತಿದ್ದಾರೆ.

ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಏಳು ವರ್ಷಗಳಿಂದ ಜನಮನದಲ್ಲಿ ಹರಿಕಥೆ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೀರ್ತಿ, ಪ್ರಕಾಶ್‌ ಅವರು ಕಟ್ಟಿರುವ ಕೆಸ್ತೂರು ಸ್ವರಸಂಗಮ ಜಾನಪದ ಕಲಾ ತಂಡಕ್ಕೆ ಸಲ್ಲುತ್ತದೆ. ಆರು ಜನರ ತಂಡ ಕಟ್ಟಿ ನಾಲ್ಕು ಸಾವಿರ ಹರಿಕಥೆ ಮಾಡಿರುವ ಇವರು ಈ ಭಾಗದ ಆರಾಧ್ಯ ದೈವಗಳನ್ನೇ ಕಥೆಗೆ ನಾಯಕರನ್ನಾಗಿ ಬಳಸಿಕೊಂಡಿದ್ದಾರೆ.

ಈಗಲೂ ‘ಪಾರ್ವತಿ ಪ್ರಿಯಸುತನೇ, ಗಜಮುಖನೆ.., ಎಂಬ ಪ್ರಾಥನಾ ಗೀತೆ ಜನಜನಿತ. ಇವರ ಸತ್ಸಂಗದಲ್ಲಿ ಕಥೆ, ಉಪಕಥೆ ನೂರಾರು. ವಿನೋದ ಮತ್ತು ದುಃಖ ಎರಡನ್ನು ಕೇಳುಗರ ಮನ ಮುಟ್ಟಿಸುವಲ್ಲಿ ಇವರ ನಾದಮಯ ಹಾಡುಗಳೂ ಕಾರಣವಾಗಿವೆ.

‘ಹರಿಕಥೆ ಪರಂಪರೆಯನ್ನು ಶ್ರೀಮಂತಗೊಳಿಸಿದ ಹಲವರು ಈಗ ನಮ್ಮೊಡನಿಲ್ಲ. ಆದರೆ, ಊರು–ಕೇರಿಗಳಲ್ಲಿ ಈಗಲೂ ಜನರು ಕಥಾಕೀರ್ತನೆಯ ಗುಂಗಿನಲ್ಲೇ ಬದುಕುತ್ತಿದ್ದಾರೆ. ಗುರು ರಂಗಭೂಮಿ ಕಲಾವಿದ ಪುಟ್ಟಸ್ವಾಮಿಶೆಟ್ಟರು ತಮ್ಮ ಶಿಶ್ಯರಿಗೆ ಕಥಾ ಪ್ರಪಂಚದ ಸೊಬಗನ್ನು ಪರಿಚಯಿಸುತ್ತಲೇ ಇದ್ದಾರೆ. ಇವರಿಂದ ಕಲಿತ ಪದ ಲಾಲಿತ್ಯ, ಆಲಿಸಿದ ಪದ ಪುಂಜಗಳು ನಮ್ಮ ತಂಡಕ್ಕೆ ಸ್ಫೂರ್ತಿಯಾಗಿದೆ’ ಎಂದು ವಿನಮ್ರವಾಗಿ ಹೇಳುತ್ತಾರೆ 34 ವರ್ಷದ ಪ್ರಕಾಶ್.ಎಳವೆಯಲ್ಲಿ ಪ್ರಭಾವ ಬೀರಿದ ಗುರುರಾಜುಲುನಾಯ್ದು, ಶಿವಕುಮಾರ ಶಾಸ್ತ್ರಿಗಳು ಇವರ

‘ನಿರೂಪಣಾ ಶೈಲಿ ನಮ್ಮ ಕಲಿಕೆಗೆ ಮೆಟ್ಟಿಲಾಗಿವೆ. ಹರಿಕಥೆಯಲ್ಲಿ ಬರುವ ಮಾತು–ಕಥೆಗಳು ಸುಂದರವಾದ ಲೋಕವನ್ನೇ ಸೃಷ್ಟಿಸುತ್ತವೆ. ಅಂತಹ ಗೇಯತೆ ಮತ್ತು ಮನೋರಂಜಕ ವಿಷಯಗಳ ಮೂಲಕವೇ ಮೌಲ್ಯಗಳನ್ನು ಕಟ್ಟಿಕೊಡುವ ಶ್ರೀಮಂತಿಕೆ ಹರಿಕಥೆಗೆ ಇದೆ’ ಎಂದು ಹೇಳುತ್ತಾರೆ ಅವರು. 

ಶನೇಶ್ವರ, ಸಿದ್ದಪ್ಪಾಜಿ, ಮಹದೇಶ್ವರ, ಮಹಾಭಾರತ, ಭೂಕೈಲಾಸ, ರಾಮಾಯಣದ ವಿಷಯ ವಸ್ತುಗಳು ಇವರ ಹರಿಕಥೆಗೆ ಆಕರ. ಹಗಲು ರಾತ್ರಿ ಐದು ಗಂಟೆಗಳ ತನಕ ಕಥಾ ವ್ಯಾಪ್ತಿ ವಿಸ್ತರಿಸುತ್ತದೆ. ಕೀಬೋರ್ಡ್‌ನಲ್ಲಿ ಕೆ.ಪಿ.ರಘು, ತಬಲ ಸೋಮಣ್ಣ, ರಿದಂಪ್ಯಾಡ್‌ ಜಿ.ಸುರೇಶ್, ತಾಳವಾದ್ಯದಲ್ಲಿ ಯರಿಯೂರು ಜವರಶೆಟ್ಟಿ, ಹಾರ್ಮೋನಿಯಂನಲ್ಲಿ ಕೆ.ಎನ್. ಬಾಲು ಪ್ರಸಾದ್ ಅವರು ಪ್ರಕಾಶ್‌ಗೆ ಜೊತೆ ನೀಡುತ್ತಾರೆ.

‘ಸಾಂಪ್ರದಾಯಿಕ ಸಂಗೀತ ತಾಳ, ಲಯಗಳ ಮೇಳದಲ್ಲಿ ಕಥಾ ಲೋಕ ಕೇಳುಗರನ್ನು ಹೊಸತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ’ ಎಂದು ಹೇಳುತ್ತಾರೆ ಪ್ರಕಾಶ್‌ ತಂಡದ ತಂಡದ ಸದಸ್ಯರು.

ಕನ್ನಡದ ಕವಿ–ಕಲಾವಿದರನ್ನು ಪರಿಚಯಿಸುವ ಪ್ರಯತ್ನ

ಕಾಲಕ್ಷೇಪದಲ್ಲಿ ಕಥೆಯನ್ನು ಸಪ್ಪೆಯಾಗಲು ಪ್ರಕಾಶ್‌ ಆಸ್ಪದ ನೀಡುವುದಿಲ್ಲ. ನಡು ನಡುವೆ ಹರಿಸುವ ಹಾಸ್ಯದ ಹೊನಲು ಕೇಳುಗರನ್ನು ಚೇತೋಹಾರಿಗಳನ್ನಾಗಿಸುತ್ತದೆ. ಹಲವು ಉಪಕಥೆಗಳು, ನಗೆ ಚಟಾಕಿಗಳನ್ನು ಸೇರಿಸಿ, ಪ್ರಸ್ತುತ ಬದಲಾಗುತ್ತಿರುವ ಬದುಕನ್ನು ಹೇಳಲಾಗುತ್ತದೆ. ರನ್ನ, ಪಂಪ, ಕುಮಾರವ್ಯಾಸರ ಮಹಾ ಕಾವ್ಯಗಳನ್ನು ಇಂದಿನ ಯುವ ಜನರಿಗೆ ಪರಿಚಯಿಸುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ.

ದಾಸವರೇಣ್ಯರ ಕೀರ್ತನೆಗಳನ್ನು ಭಾವಪೂರ್ಣವಾಗಿ ಬದುಕಿನ ಮೌಲ್ಯಗಳೊಂದಿಗೆ ಶ್ರೋತೃಗಳಿಗೆ ತಲುಪಿಸಲು ಹರಿಕಥೆ ಉತ್ತಮ  ಮಾರ್ಗ. ಅಪಾರ ಸಂಖ್ಯೆಯ ಪ್ರೇಕ್ಷಕರು ಆಕರ್ಷಿತರಾಗಲು ಇದೂ ಕಾರಣ. ಶಾಲಾ–ಕಾಲೇಜು ಇಲ್ಲವೇ ಜಿಲ್ಲಾ ಕಾರ್ಯಕ್ರಮಗಳಲ್ಲೂ ಕನ್ನಡದ ಕವಿ–ಕಲಾವಿದರ ಹಾಡುಗಳನ್ನು ಪರಿಚಯಿಸುವ ಮೂಲಕ ಕಥಾ ಕರ್ತನೆಗೆ ಮತ್ತೊಂದು ಆಯಾಮ ಕಲ್ಪಿಸಿದ್ದಾರೆ ಸ್ವರಸಂಗಮ ತಂಡದ ಸದಸ್ಯರು.

ಪ್ರತಿಕ್ರಿಯಿಸಿ (+)