ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಹಲವು ತಲೆಮಾರುಗಳಿಂದ ಜಾನಪದ ವಾದ್ಯದೊಂದಿಗೆ ನಂಟು: ಕಲೆ ಉಳಿಸಿ ಬೆಳೆಸಲು ಪಣ

ಕಹಳೆ ಮೊಳಗಿಸುವ ನಿಪುಣ ರವಿಚಂದ್ರ ಪ್ರಸಾದ್

Published:
Updated:
Prajavani

ಚಾಮರಾಜನಗರ: ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಗಣ್ಯರನ್ನು ಸ್ವಾಗತಿಸುವಾಗ ಮೊಳಗಿಸುವ ಮಂಗಳವಾದ್ಯಗಳಲ್ಲಿ ಕಹಳೆಗೆ ಮಹತ್ವದ ಸ್ಥಾನವಿದೆ. ದಾಸಯ್ಯಗಳ ತುತ್ತೂರಿ, ಶಂಖ, ಜಾ‌ಗಟೆ, ವಾಲಗ, ನಾದಸ್ವರ ಇತರೆ ಸಂಗೀತ ಪರಿಕರಗಳ ಶಬ್ದಗಳನ್ನೂ ಮೀರಿದ ಠೇಂಕರಿಸುವುದು ಕಹಳೆಯ ಶಬ್ದ. ಇದನ್ನು ಊದುವುದರಲ್ಲಿ ಪಳಗಿರುವ ವ್ಯಕ್ತಿ ನಗರದಲ್ಲಿದ್ದಾರೆ. ಹೆಸರು ರವಿಚಂದ್ರ ಪ್ರಸಾದ್‌ ಕಹಳೆ. 

ನಗರದ ಅಂಬೇಡ್ಕರ್‌ ಬೀದಿ ನಿವಾಸಿಯಾಗಿರುವ ಅವರ ಹೆಸರಿನಲ್ಲೇ ಕಹಳೆ ಪದ ಬೆರೆತು ಹೋಗಿದೆ. 

ಆಡುಮಾತಿನಲ್ಲಿ ಕೊಂಬು ಎಂದು ಕರೆಸಿಕೊಳ್ಳುವ ಕಹಳೆ, ಮನೋಹರವಾದ ವಾದ್ಯ. ಊದುವ ತುದಿ ಚಿಕ್ಕದಾಗಿ ಮುಂದೆ ದಪ್ಪವಾಗಿ ಬಾಗಿರುತ್ತದೆ. ಅಲ್ಲಿಂದ ಮುಂದೆ ಇನ್ನೂ ದಪ್ಪವಾಗಿ ಕೊನೆಯಲ್ಲಿ ಬಾಯಿ ದೊಡ್ಡದಾಗಿ ಗಾಳಿಗೆ ತೆಗೆದಿರುತ್ತದೆ. ಇಡಿಯ ಕೊಂಬನ್ನು ಮೂರು ಭಾಗ ಮಾಡಿ ಬೇರ್ಪಡಿಸಿ ಇಡುತ್ತಾರೆ.

ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಶುಭ ಸೂಚಕವೆಂದು ಪರಿಗಣಿಸಲಾಗಿರುವ ಜಾನಪದ ವಾದ್ಯ ಕೊಂಬು. ರವಿಚಂದ್ರ ಅವರ ಕುಟುಂಬ ಹಲವು ತಲೆಮಾರುಗಳಿಂದ ಕಹಳೆಯೊಂದಿಗೆ ನಂಟು ಹೊಂದಿದೆ. ಇವರ ತಾತ ಯಜಮಾನ್‌ ಕೊಂಬಿನ ಹೊನ್ನಯ್ಯ ಅವರು ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದವರು. ಕೊಂಬಿನ ಹೊನ್ನಯ್ಯ ಎಂದರೆ ಜಿಲ್ಲೆ ಹಾಗೂ ನೆರೆರಾಜ್ಯ ತಮಿಳುನಾಡಿನಲ್ಲೂ ಪ್ರಸಿದ್ದರು.

ಅವರ ನಂತರ ಅವರ ಮಗ ಮಹದೇವಯ್ಯ ಕಹಳೆ ಊದುವ ಕಲೆಯನ್ನು ಮುಂದುವರಿಸಿಕೊಂಡು ಬಂದರು. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯೂ ದೊರಕಿತ್ತು. ಅವರಿಂದ ರವಿಚಂದ್ರ ಪ್ರಸಾದ್ ಅವರಿಗೆ ಕಲೆ ಬಳುವಳಿಯಾಗಿ ಬಂದಿದೆ. ಸದ್ಯ ಅವರು ಜಾನಪದ ವಾದ್ಯ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 

ಈ ಕಲೆ ಉಳಿಯಬೇಕು ಎಂಬ ಉದ್ದೇಶದಿಂದ ತಮ್ಮ ತಾತನ ಹೆಸರಿನಲ್ಲಿ ‘ಕೊಂಬಿನ ಹೊನ್ನಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’ ಎಂಬ ಸಂಸ್ಥೆಯನ್ನು 2014ರಲ್ಲಿ ಸ್ಥಾಪಿಸಿದ್ದಾರೆ. ರಂಗಭೂಮಿ ಕಲಾವಿದರನ್ನು ಗುರುತಿಸಿ ಅವರಿಗೆ ‘ಕೊಂಬಿನ ಹೊನ್ನಯ್ಯ ಜಾನಪದ ಸಿರಿ ಪ್ರಶಸ್ತಿ’ ಪ್ರದಾನ ಮಾಡಿ ಪ್ರೋತ್ಸಾಹಿಸುತ್ತಿದ್ದಾರೆ.

‘ಬಾಲ್ಯದಿಂದಲೂ ಕಲೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೆ. ಇದು ವಿಶಿಷ್ಟವಾದ ಕಲೆ. ಬೇರೆ ಬೇರೆ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲಿ ಕಹಳೆ ಊದುವ ಸಂಪ್ರದಾಯ ಇತ್ತು. ಮದುವೆ ಮೊದಲಾದ ಶುಭ ಸಮಾರಂಭಗಳಿಗೆ ಕೈಯಲ್ಲಿ ಮುದ್ರೆ ಹಿಡಿದು ಊದಲಾಗುತ್ತದೆ. ಯುದ್ದದ ಸಂದರ್ಭದಲ್ಲಿ ರಣಕಹಳೆ ಮೊಳಗಿಸುವುದಿತ್ತು’ ಎಂದು ರವಿಚಂದ್ರ ಪ್ರಸಾದ್ ವಿವರಿಸಿದರು.

ಜಾನಪದ ಶಾಲೆ: ‘ಜಿಲ್ಲೆಯಲ್ಲಿ ಜಾನಪದ ಶಾಲೆ ತೆರೆದು ಕಲಾವಿದರಿಗೆ ತರಬೇತಿ ನೀಡಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ. ಕಲೆ ನಶಿಸಬಾರದು ಎಂಬ ಉದ್ದೇಶದಿಂದ ಆಸಕ್ತರಿಗೆ ಕಹಳೆ ಊದುವುದನ್ನು ಕಲಿಸಲೂ ಮುಂದಾಗಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೊಂಬು ಊದುವುದು ಸುಲಭವಲ್ಲ’

‘ಕಹಳೆ ಆನೆ ಸೊಂಡಿಲಿನಂತಿದೆ. ಗಾಳಿ ತುಂಬಿ ಊದಬೇಕಾದರೆ ಪರಿಶ್ರಮಬೇಕು. ಉಸಿರು ಬಿಗಿ ಹಿಡಿದು ಊದಬೇಕು. ಹಾಗಾಗಿ, ತರಬೇತಿ ಇಲ್ಲದವರಿಗೆ ಊದಲು ಕಷ್ಟವಾಗುತ್ತದೆ’ ಎಂದು ರವಿಚಂದ್ರ ಪ್ರಸಾದ್ ಹೇಳಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. 2016–17ರ ದಸರಾದಲ್ಲಿ ಪಾಲ್ಗೊಂಡಿದ್ದೆ. ಚಾಮರಾಜೇಶ್ವರ ರಥೋತ್ಸವದಲ್ಲಿ ಕಹಳೆ ಊದುತ್ತೇನೆ. ಹಾಸನ, ಮಂಡ್ಯ, ಮೈಸೂರು ಹಾಗೂ ನೆರೆ ರಾಜ್ಯ ತಮಿಳುನಾಡು ಸೇರಿದಂತೆ  ಗಣೇಶ ಮೂರ್ತಿ ವಿಸರ್ಜನೆ, ವಿಶೇಷ ದಿನಗಳಲ್ಲಿ ಜಾನಪದ ಕಲಾವಿದರೊಂದಿಗೆ ಹೋಗಿ ಪ್ರದರ್ಶನ ನೀಡುತ್ತೇನೆ’ ಎಂದು ಅವರು ಹೇಳಿದರು.

Post Comments (+)