ಜಾನಪದ ನೃತ್ಯಪಟು, ಮಕ್ಕಳಿಗೆ ನೃತ್ಯಗುರು

7
ನೃತ್ಯ ರೂಪಕಗಳ ಮೂಲಕ ಗಮನ ಸೆಳೆಯುವ ಗುಂಡ್ಲುಪೇಟೆ ಮೋಹನ್‌

ಜಾನಪದ ನೃತ್ಯಪಟು, ಮಕ್ಕಳಿಗೆ ನೃತ್ಯಗುರು

Published:
Updated:

ಗುಂಡ್ಲುಪೇಟೆ: ಜಾನಪದ ಗೀತೆಗಳಿಗೆ ನೃತ್ಯ ರೂಪಕಗಳನ್ನು ಮಾಡುತ್ತ, ಆಡುತ್ತ, ರಾಜ್ಯ ಮತ್ತು ರಾಷ್ಟ್ರೀಯಮಟ್ಟದಲ್ಲಿ ಚಾಮರಾಜನಗರ ಜಿಲ್ಲೆಯ ಜಾನಪದ ಕಲೆಯನ್ನು ಪ್ರಚುರಪಡಿಸುತ್ತಿದ್ದಾರೆ ಗುಂಡ್ಲುಪೇಟೆಯ ಮೋಹನ್.

ನೃತ್ಯ ನಿರ್ದೇಶಕ ಎಂದೇ ಚಿರಪರಿಚಿತರಾಗಿರುವ ಮೋಹನ್‌ ಅವರು ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಪ್ರಸಿದ್ಧರು. ತಾಲ್ಲೂಕಿನ ಎಲ್ಲ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಇವರೇ ನೃತ್ಯಗುರು.

ಬಿಳಿರಂಗನಾಥಸ್ವಾಮಿ, ಮಲೆ ಮಹದೇಶ್ವರ ಸ್ವಾಮಿ, ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಕಾವ್ಯ ಮತ್ತು ಭಕ್ತಿಗೀತೆಗಳಿಗೆ ನೃತ್ಯರೂಪಕಗಳನ್ನು ನಿರ್ದೇಶನ ಮಾಡುವುದರ ಜೊತೆಗೆ ಜಾನಪದ ನೃತ್ಯಗಳಿಗೂ ಹೆಜ್ಜೆ ಹಾಕುತ್ತ, ಜಾನಪದ ಕಲಾವಿದರಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಅನೇಕ ಪ್ರಶಸ್ತಿಗಳನ್ನು ಪಡೆದು ಹೆಸರುವಾಸಿಯಾಗಿದ್ದಾರೆ.

ಪ್ರಶಸ್ತಿ, ಮೆಚ್ಚುಗೆ: 2000ದಲ್ಲಿ ಜಿಲ್ಲಾಡಳಿತದ ವತಿಯಿಂದ ಉತ್ತಮ ಜಾನಪದ ನೃತ್ಯ ನಿರ್ದೇಶಕ ಪ್ರಶಸ್ತಿ, 2015-16ನೇ ಸಾಲಿನಲ್ಲಿ ದೆಹಲಿಯ ಕರ್ನಾಟಕ ಭವನದ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಜಾನಪದ ಕಲಾವಿದರ ವತಿಯಿಂದ ಭಾಗವಹಿಸಿದ್ದರು. 2017ರಲ್ಲಿ ಧಾರವಾಡದಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.

ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ತಾಲ್ಲೂಕಿನ 8,000 ಮಕ್ಕಳನ್ನು ಒಂದುಗೂಡಿಸಿ ಅವರಿಂದ ವಂದೇ ಮಾತರಂ ಮತ್ತು ಸೋಲಿಗರ ಹಾಡಿಗೆ ನೃತ್ಯ ಮಾಡಿಸಿ ಮೆಚ್ಚುಗೆ ಗಳಿಸಿದ್ದರು.

ಮೈಸೂರು ದಸರಾದ ಯುವ ದಸರಾ ಮತ್ತು ಯುವ ಸಂಭ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಅನೇಕ ಜಾನಪದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ತಂಡ ಕಟ್ಟಿ ಪ್ರದರ್ಶನ: ‘ಮಲೆಮಹದೇಶ್ವರ ಸ್ವಾಮಿ ಕಾವ್ಯಕ್ಕೆ ನೃತ್ಯರೂಪಕಗಳನ್ನು ಮಾಡಿದ ಮೊದಲಿಗರು ಇವರು. ಖ್ಯಾತ ಜಾನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿ ಅವರಿಗೆ ನೃತ್ಯ ಕಲಿಸಿ, ಅವರಿಂದಲೂ ನೃತ್ಯವನ್ನು ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದೀಗ ಒಂದು ತಂಡವನ್ನು ಕಟ್ಟಿಕೊಂಡು ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತ, ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೃತ್ಯ ಹೇಳಿ ಕೊಡುತ್ತಿದ್ದಾರೆ. ಇವರ ಬಳಿ ನೃತ್ಯ ಕಲಿತ ಐದಾರು ಮಂದಿ ಜೀವನ ರೂಪಿಸಿಕೊಂಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ, ಯುವಕರು ಮೊಬೈಲ್ ಗೀಳಿನಿಂದಾಗಿ ಕಲೆಗಳಿಂದ ದೂರ ಉಳಿಯುತ್ತಿದ್ದಾರೆ. ಜಾನಪದ ಕಲೆಗಳನ್ನು ನಮ್ಮನ್ನು ಗಟ್ಟಿಗೊಳಿಸುತ್ತವೆ. ಜೀವನದ ಪಾಠಗಳನ್ನು ಕಲಿಸುತ್ತವೆ. ಈ ಕಲೆಗಳಿಗೆ ಅಳಿವಿಲ್ಲ. ಅದು ಮುಂದುವರಿಯುತ್ತ ಬೆಳೆಯುತ್ತಿರುತ್ತದೆ. ಸರ್ಕಾರ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು’ ಎಂದು ಹೇಳುತ್ತಾರೆ ಮೋಹನ್‌.

ಜಾನಪದ ಕಲೆಯತ್ತ ವಾಲಿದ ಬಗೆ

ಮೋಹನ್‌ ಅವರ ಸಾಧನೆಗೆ ಪ್ರೇರಣೆಯಾದವರು ಅವರ ತಂದೆ.

‘ತಂದೆ ನಾಟಕ ಕಲಾವಿದರಾಗಿದ್ದರು. ಅವರನ್ನು ನೋಡುತ್ತ ಬೆಳೆದ ನಾನು ಚಿಕ್ಕಂದಿನಲ್ಲಿಯೇ ಶಾಲೆಯಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಶಿಕ್ಷಕರು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಬಳಿಕ ತಂದೆ ಮತ್ತು ತಾಯಿ ನನಗೆ ಇಷ್ಟವಾದ ಕ್ಷೇತ್ರದಲ್ಲಿ ಬೆಳೆಯಲೆಂದು ಬೆಂಗಳೂರಿನ ವಿಜಯ ಫಿಲಂ ಇನ್‌ಸ್ಟಿಟ್ಯೂಟ್‌ಗೆ ಸೇರಿಸಿದರು. ಅಲ್ಲಿ ತರಬೇತಿ ಪಡೆದು ಗಾಂಧಿನಗರದಲ್ಲಿ ಅವಕಾಶಕ್ಕಾಗಿ ತಿರುಗುತ್ತಿದ್ದಾಗ, ಜಿಲ್ಲೆಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರು ಸಿನಿಮಾದಲ್ಲಿ ಅವಕಾಶವಿಲ್ಲ ಎಂದು ಸುಮ್ಮನೆ ಕೂರುವ ಬದಲು ಜಾನಪದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡುವಂತೆ ಕರೆದುಕೊಂಡು ಅವಕಾಶ ಕೊಡಿಸಿದರು.  ನಂತರ ಅದೇ ಜೀವನವಾಯಿತು’ ಎಂದು ಜಾನ‍‍ಪ‍ದ ಕಲೆಯತ್ತ ವಾಲಿದ ಬಗೆಯನ್ನು ವಿವರಿಸುತ್ತಾರೆ ಮೋಹನ್‌.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !