ದೇವರ ಜಾತ್ರೆಗೆ ದೇಸಿ ಛತ್ರಿ

7

ದೇವರ ಜಾತ್ರೆಗೆ ದೇಸಿ ಛತ್ರಿ

Published:
Updated:
Deccan Herald

ದ್ವಿಚಕ್ರ ವಾಹನದ ಹಿಂಬದಿಗೆ ಅಗಲವಾದ ಹಸಿ ಗರಿಗಳನ್ನು ಕಟ್ಟಿಕೊಂಡ ಇಬ್ಬರು ಯುವಕರು ಶಿಶಿಲದ ಮುಖ್ಯ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿದ್ದರು. ‘ಬಹುಶಃ ಮರದ ದಿಮ್ಮಿಗಳನ್ನು ಸಾಗಿಸಲು ಸಲಗಗಳು ಗ್ರಾಮಕ್ಕೆ ಬಂದಿರಬಹುದು. ಅವುಗಳಿಗೆ ಮೇವಿಗಾಗಿ ಈ ಗರಿಗಳನ್ನು ಸಾಗಿಸುತ್ತಿರಬಹುದು’ ಎಂದುಕೊಂಡು ಕುತೂಹಲದಿಂದ ಅವರನ್ನು ಹಿಂಬಾಲಿಸಿದೆ. ಅವರು ನೇರವಾಗಿ ನಲಿಕೆಯವರ ಮನೆಯಂಗಳದಲ್ಲಿ ನಿಂತರು. ವಾಹನದಲ್ಲಿದ್ದ ಗರಿಗಳನ್ನು ಇಳಿಸಿದರು. ಆದರೆ, ಅಲ್ಲೆಲ್ಲೂ ಸಲಗಗಳು ಕಾಣಲಿಲ್ಲ.

ಮತ್ತೆ ‘ಏತಕ್ಕಾಗಿ ಈ ಗರಿಗಳು’ ಎಂದು ಕುತೂಹಲ ತಣಿಯದೇ ಕೇಳಿದಾಗ, ಇದು ‘ಛತ್ರಿ’ ತಯಾರಿಸುವುದಕ್ಕಾಗಿ (ದಕ್ಷಿಣ ಕನ್ನಡದಲ್ಲಿ ಛತ್ರ ಎನ್ನುತ್ತಾರೆ. ಜಾತ್ರೆ, ಉತ್ಸವಗಳಲ್ಲಿ ಬಳಸಲ್ಪಡುವ ದೇಸಿ ಕೊಡೆ) ಪನೆ ಮರದ ಗರಿಗಳನ್ನು ತಂದಿದ್ದಾರೆ’ ಎಂಬ ಉತ್ತರ ಸಿಕ್ಕಿತು.

ನಾರ್ಣ ನಲಿಕೆ ಅವರು ದೈವ ನರ್ತಕರು (ಭೂತದ ಪಾತ್ರಿ). ನಲಿಕೆ ಕುಟುಂಬದವರು ಈಚಲು ಗರಿಯ ಬುಟ್ಟಿ, ತೆಂಗಿನ ಕಡ್ಡಿಗಳ ಕೂರಿ, ಬಿದಿರಿನ ಗೊರಬೆ, ಮುಂಡೋವು ಗರಿಗಳ ಚಾಪೆ, ತೆಂಗು/ಪನೋಳಿ ಗರಿಗಳ ಕರಿಂಜೋಳು.. ಹೀಗೆ ವೈವಿಧ್ಯಮಯ ಪರಿಕರಗಳ ತಯಾರಿಕೆಯಲ್ಲಿ ಪರಿಣತರು. ಇಂಥ ಆಧುನಿಕ ಯುಗದಲ್ಲೂ ದೇಸಿ ಪರಿಕರಗಳ ತಯಾರಿಕೆಯನ್ನು ಆ ಕುಟುಂಬ ಮುಂದುವರಿಸಿದೆ. ಇವರು ತಯಾರಿಸುವ ಪನೆ ಮರದ ಗರಿಗಳ ಛತ್ರಿಗೆ ಇವತ್ತಿಗೂ ಬೇಡಿಕೆ ಇದೆ.

ಆಶ್ವೀಜ ಉತ್ಸವದಲ್ಲಿ..

ಆಶ್ವೀಜ ಮಾಸದ ಅಮಾವಾಸ್ಯೆಯಂದು ದಕ್ಷಿಣ ಕನ್ನಡದ ಬಹತೇಕ ದೇವಾಲಯಗಳಲ್ಲಿ ‘ನಿತ್ಯ ಬಲಿ’ ಉತ್ಸವದ ಪ್ರಾರಂಭ. ಇದಕ್ಕೆ ಇದೇ ಪನೆ ಮರದ ಛತ್ರಿ (ಚಾಮರ, ವ್ಯಜನ, ಪಕ್ಕಿ, ನಿಶಾನೆಯಂತಹ ಪರಿಕರಗಳನ್ನೂ ಬಳಸುತ್ತಾರೆ) ಬಳಸುತ್ತಾರೆ. ಇಲ್ಲಿಂದ ಮುಂದೆ ನಡೆಯುವ ಉತ್ಸವಗಳಲ್ಲೂ ಛತ್ರಿ ಬಳಕೆಯಾಗುತ್ತದೆ. ಹಾಗಾಗಿಯೇ, ದೀಪಾವಳಿ ಸಮಯದಲ್ಲಿ ಛತ್ರಿ ತಯಾರಿಕೆ ಆರಂಭವಾಗುತ್ತದೆ. ಆಟಿ ಕಳಂಜ ಜಾನಪದ ಆಚರಣೆಗಳಲ್ಲಿ ಇದನ್ನು ಬಳಸುತ್ತಾರೆ.

ಛತ್ರಿಯನ್ನು ಸ್ಥಳೀಯ ಪ್ರಾಕೃತಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ವಾತಾವರಣದ ಉಷ್ಣತೆಯಿಂದ ಕ್ರಮೇಣ ತನ್ನ ಬಿಗಿ ಕಳೆದುಕೊಂಡು ಜೀರ್ಣಾವಸ್ಥೆಗೆ ತಲುಪುತ್ತದೆ. ಆದ್ದರಿಂದಲೇ ಪ್ರತಿ ವರ್ಷ ಇದನ್ನು ಹೊಸದಾಗಿಯೇ ತಯಾರಿಸುತ್ತಾರೆ. ಇದರ ತಯಾರಿಕೆಗೆ ಭಕ್ತಿ-ಭಾವದ ತನ್ಮಯತೆ, ತಾಳ್ಮೆ ಬೇಕು. ಆ ಗುಣ ನಾರ್ಣ ನಲಿಕೆಯವರಲ್ಲಿದೆ.

ನಾರ್ಣ ನಲಿಕೆಯವರು ಶಿಶಿಲೇಶ್ವರ ದೇವಸ್ಥಾನ, ಧರ್ಮಸ್ಥಳ, ಕೊಕ್ಕಡ ವೈದ್ಯನಾಥೇಶ್ವರ ಸೇರಿದಂತೆ ಹಲವು ದೇವಾಲಯಗಳಿಗೆ ಛತ್ರಿಯನ್ನು ಉಚಿತವಾಗಿ ತಯಾರಿಸಿ ಕೊಡುತ್ತಿದ್ದಾರೆ. ಈ ವೃತ್ತಿಗೆ ಇಂತಿಷ್ಟೇ ಹಣ ಎಂಬ ಸ್ವಾರ್ಥದ ಬೇಡಿಕೆ ಅವರಲ್ಲಿಲ್ಲ. ಇದೊಂದು ದೇವರ ಸೇವೆ ಎಂದುಕೊಂಡು ತಯಾರಿಸಿ ಕೊಡುತ್ತಾರೆ.

ಛತ್ರಿ ತಯಾರಿಸುವ ವಿಧಾನ

ಛತ್ರ ತಯಾರಿಗೆ ಕನಿಷ್ಠ ಒಂದು ವಾರವಾದರೂ ಬೇಕು. ಇನ್ನೇನು ದೀಪಾವಳಿಗೆ ಹತ್ತು ದಿನಗಳಿರುವಾಗ ನಲಿಕೆಯವರು ಹಳ್ಳಿಯಲ್ಲಿರುವ ಪನೆ(ಪಾಮ್ ಜಾತಿಗೆ ಸೇರಿದ) ಮರ ಹುಡುಕಿ ಅದರಿಂದ ಗರಿಗಳನ್ನು ಸಂಗ್ರಹಿಸುತ್ತಾರೆ. ಹಸಿ ಗರಿಗಳನ್ನು ನೆರಳಲ್ಲಿ ಒಂದೆರಡು ದಿನ ಬಾಡಿಸುತ್ತಾರೆ. ಬಿದಿರ ಗಳ ತಂದು ಅದರ ಮುಳ್ಳು ಸವರಿ ಕಡ್ಡಿಗಳನ್ನು ತಯಾರಿಸುತ್ತಾರೆ. ‘ಕೈರೊಳು’ ಜಾತಿಯ ಬಳ್ಳಿಯ ಮೇಲ್ಪದರ ಸಿಗಿದು, ದಾರ ಮಾಡಿಕೊಳ್ಳುತ್ತಾರೆ. ಬಿದಿರ ಕಡ್ಡಿಗಳನ್ನು ಬಾಗಿಸಿ ಕೊಡೆಯಾಕಾರದಲ್ಲಿ ಜೋಡಿಸುತ್ತಾರೆ. ಪನೆ ಮರದ ಎರಡು ಗರಿಗಳ ನಡುವಿನ ಕೋಲನ್ನು (ದಬ್ಬೆ) ಸೀಳಿ ಇದನ್ನು ಕೊಡೆಯ ಒಳಮೈಯ ಮಧ್ಯ ಭಾಗದಲ್ಲಿ ಸುರುಳಿ ಸುತ್ತುತ್ತಾ ಬಿದಿರ ಕಡ್ಡಿಗಳನ್ನು ಭದ್ರಪಡಿಸುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ರೇಷ್ಮೆ ಕೃಷಿಯಲ್ಲಿ ಬಳಸುವ ‘ಚಂದ್ರಿಕೆ’ಯ ಹಾಗೆ.

ಈ ಸುರುಳಿ ಸುತ್ತುವಿಕೆಯು ಕೊಡೆಯ ನಡುಭಾಗಕ್ಕೆ ಬರುತ್ತಿದ್ದಂತೆಯೆ ಎರಡು ಅಡಿ ಉದ್ದದ ಬಿದಿರ ಕೊಳವೆಯನ್ನು ಇದರೊಳಕ್ಕೆ ಸೇರಿಸಿ ಕಟ್ಟುತ್ತಾರೆ. ಕೊಡೆಯ ಮೇಲ್ಭಾಗದಲ್ಲಿ ಎರಡು ಅಥವಾ ಮೂರು ಹಂತಗಳಲ್ಲಿ ಗರಿಗಳನ್ನು ಹೊದಿಸಿ, ಅದರ ಮಗ್ಗುಲನ್ನು ಒಳಕ್ಕೆ ಬಾಗಿಸಿ ‘ಕೈರೊಳು’ ಬಳ್ಳಿಯ ಸಪೂರ ದಾರದಿಂದ ಹೊಲಿಯುತ್ತಾರೆ. ಇದಕ್ಕೆ ಅಡಕೆ ಹಾಳೆಯಿಂದ ತಯಾರಿಸಲಾದ ವಿವಿಧ ವಿನ್ಯಾಸದ ಲೋಲಕಗಳನ್ನು ನೇತು ಹಾಕಿ ‘ಛತ್ರಿ’ ಯನ್ನು ಮತ್ತಷ್ಟು ಅಲಂಕರಿಸುತ್ತಾರೆ.

ತಂಪು, ಮಳೆಯಿಂದ ರಕ್ಷಣೆ

ಪನೆ ಮರದ ಛತ್ರಿ ಬಿಸಿಲಿಗೆ ತಂಪು ನೀಡುತ್ತದೆ. ಬಿರುಸಿನ ಮಳೆ ನೀರು ಕಿಂಚಿತ್ತೂ ಒಳ ಸೇರದಂತೆ ತಡೆಯುತ್ತದೆ. ಈ ಛತ್ರಿಗೆ ದೇವತಾ ಉತ್ಸವದಲ್ಲಿ ಪವಿತ್ರ ಸ್ಥಾನ. ವಾಮನಾವತಾರದಲ್ಲಿ ಈ ಛತ್ರದ ಉಲ್ಲೇಖ ಇದೆ. ಅದು ಬಿಟ್ಟರೆ ವೇದ, ಪುರಾಣಗಳಲ್ಲೆಲ್ಲೂ ಇದರ ಪ್ರಸ್ತಾಪ ಇಲ್ಲ. ‘ಇದೊಂದು ರಾಜೋಪಚಾರದ ಸಂಕೇತವಷ್ಟೆ’ ಎಂಬುದು ಕೆಲ ಹಿರಿಯರ ಅಭಿಪ್ರಾಯ.

ಹಳ್ಳಿಗಳಲ್ಲಿ ಪನೆ ಮರ ಕಡಿಮೆಯಾಗಿದೆ. ಈ ಮರ ಪಾವಿತ್ರ್ಯದ ಸಂಕೇತ ಎಂದು ನಂಬಿರುವ ಕೆಲವರು, ತಮ್ಮ ಮನೆಯ ಬಳಿ ಇದನ್ನು ಬೆಳೆಸಿದ್ದಾರೆ. ತಿಳಿವಳಿಕೆಯಿಲ್ಲದವರು ಮರಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ವಿಸ್ತರಿಸಿದ್ದಾರೆ. ಆಯುಷ್ಯ ಮುಗಿದ ಮರಗಳು ಧರೆಗುರುಳುತ್ತಿವೆ. ಇವೆಲ್ಲದರ ಜತೆಗೆ ಕುಸುರಿ ಕೆಲಸದ ಬಗ್ಗೆ ಜ್ಞಾನವಿಲ್ಲದ ಇಂದಿನ ಯುವಕರಿಗೆ ಆಸಕ್ತಿಯೂ ಕಡಿಮೆಯಾಗುತ್ತಿದೆ’ ಎಂದು ನಸು ನಗುತ್ತಲೇ ನೋವನ್ನು ನಾರ್ಣ ನಲಿಕೆಯವರು ವ್ಯಕ್ತಪಡಿಸುತ್ತಾರೆ.

ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !