ಭಾನುವಾರ, ಸೆಪ್ಟೆಂಬರ್ 20, 2020
21 °C
ತನಿಖಾ ತಂಡಗಳಿಗೆ ಕಠಿಣ ಸೂಚನೆ ನೀಡಿದ ಜಿ.ಪಂ. ಸಿಇಒ ವಿಕಾಸ್ ಕಿಶೋರ್ ಸುರಳಕರ್

ಡೆಸ್ಕ್ ಹಗರಣ; ಸಮಗ್ರ ತನಿಖಾ ವರದಿ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ‘ಡೆಸ್ಕ್‌ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸಮಗ್ರವಾಗಿ ಕ್ರೋಢೀಕರಿಸಿ. ಎಲ್ಲೆಲ್ಲಿ ಯಾವ್ಯಾವ ತಪ್ಪು ನಡೆದಿದೆ, ಎಷ್ಟು ಹಣವನ್ನು ಸಂಬಂಧಿಸಿದವರಿಂದ ಸರ್ಕಾರಿ ಖಜಾನೆಗೆ ಮರು ಭರ್ತಿ ಮಾಡಿಸಬೇಕು ? ಎಂಬುದು ಸೇರಿದಂತೆ ಇನ್ನಿತರೆ ಪ್ರಮುಖ ಅಂಶಗಳುಳ್ಳ ವರದಿಯನ್ನು ಆದಷ್ಟು ಶೀಘ್ರದಲ್ಲೇ ಸಲ್ಲಿಸಿ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ವಿಕಾಸ್‌ ಕಿಶೋರ್‌ ಸುರಳಕರ್‌ ತನಿಖಾ ತಂಡಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ 11ನೇ ಸಾಮಾನ್ಯ ಸಭೆಯಲ್ಲಿ ಡೆಸ್ಕ್‌ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಗಳ ಮುಖ್ಯಸ್ಥರು, ಸಭೆಗೆ ವರದಿ ಮಂಡಿಸಲು ಅನುವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಬಿ.ಆರ್‌.ಎಂಟಮಾನ, ಕಾಂಗ್ರೆಸ್‌ ಸದಸ್ಯೆ ಪ್ರತಿಭಾ ಪಾಟೀಲ ಹರಿಹಾಯ್ದರು.

‘ಡೆಸ್ಕ್‌ ಪೂರೈಕೆಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಬಿಲ್‌ ಮಂಜೂರು ಮಾಡಬಾರದು ಎಂದು ಸರ್ವಾನುಮತದ ನಿರ್ಣಯ ಅಂಗೀಕರಿಸಿದ್ದರೂ; ಇದ್ಯಾವುದನ್ನು ಲೆಕ್ಕಿಸದೆ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ₨ 1 ಕೋಟಿ ಮೊತ್ತಕ್ಕೂ ಹೆಚ್ಚಿನ ಅವ್ಯವಹಾರ ನಡೆದಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಮಾನತುಗೊಳಿಸಬೇಕು’ ಎಂದು ಸಿಂದಗಿ ತಾಲ್ಲೂಕಿನ ಬಳಗಾನೂರ ಜಿ.ಪಂ. ಕ್ಷೇತ್ರದ ಬಿಜೆಪಿ ಸದಸ್ಯ ಬಿ.ಆರ್‌.ಎಂಟಮಾನ ಆಗ್ರಹಿಸಿದರು.

‘ಹಗರಣ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಗೊಂಡು ವರ್ಷ ಗತಿಸಿದೆ. ಇದೂವರೆಗೂ ಕ್ರಮ ತೆಗೆದುಕೊಳ್ಳಲಾಗಿಲ್ಲ. ತನಿಖಾ ವರದಿಯೂ ಸಮರ್ಪಕವಾಗಿಲ್ಲ. ಹಗರಣ ನಡೆದ ಸಂದರ್ಭ ಯಾವ್ಯಾವ ಅಧಿಕಾರಿಯಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ತಿಕೋಟಾ ಜಿ.ಪಂ.ನ ಕಾಂಗ್ರೆಸ್‌ ಸದಸ್ಯೆ ಪ್ರತಿಭಾ ಪಾಟೀಲ ಆಗ್ರಹಿಸಿದರು.

‘ಪಿಡಿಒಗಳನ್ನು ತತ್‌ಕ್ಷಣಕ್ಕೆ ಅಮಾನತುಗೊಳಿಸುತ್ತೀರಿ. ನಿಮ್ಮ ಕಣ್ಣೆದುರೇ ತಿಮಿಂಗಿಲಗಳು ಆರಾಮಾಗಿದ್ದರೂ; ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ’ ಎಂದು ಇಂಡಿ ತಾಲ್ಲೂಕು ಸಾಲೋಟಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಶಿವಯೋಗೆಪ್ಪ ನೇದಲಗಿ ಸಿಇಒ ವಿರುದ್ಧ ಹರಿಹಾಯ್ದರು.

‘ತನಿಖಾ ತಂಡ ರಚನೆಯಾಗಿ ಎರಡೂವರೆ ತಿಂಗಳು ಗತಿಸಿದರೂ, ಇದೂವರೆಗೂ ಏಕೆ ವರದಿ ಕೊಟ್ಟಿರಲಿಲ್ಲ. ಅಧಿಕಾರಿಗಳು ಏನ್‌ ಮಾಡ್ತಿದ್ದ್ರೀ’ ಎಂದು ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕಿಡಿಕಾರಿದರು.

‘ತನಿಖಾ ವರದಿ ಇನ್ನೂ ಪೂರ್ಣಗೊಂಡಿಲ್ಲ ಎಂದಾದರೇ ಚರ್ಚಿಸೋದು ವೃಥಾ ಕಾಲಹರಣ ಇದ್ದಂತೆ. ಮೂರು ದಿನದೊಳಗೆ ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ಪ್ರತಿಯೊಬ್ಬ ಸದಸ್ಯರಿಗೂ ಪುಟ್ಟ ಟಿಪ್ಪಣಿಯುಳ್ಳ ಮಾಹಿತಿ ಒದಗಿಸಿ’ ಎಂದು ಬಬಲೇಶ್ವರ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯ ಉಮೇಶ ಕೋಳಕೂರ ಆಗ್ರಹಿಸಿದರು.

ಶೂ, ಸಾಕ್ಸ್‌ ಹಗರಣ; ವಾರದೊಳಗೆ ವರದಿ ನೀಡಿ

‘ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಏಜೆನ್ಸಿ ಕಂಪನಿಯ ಗುತ್ತಿಗೆದಾರರು ಪೂರೈಸಿದ ಶೂ, ಸಾಕ್ಸ್ ಕಳಪೆ ಗುಣಮಟ್ಟದವು. ನಕಲಿ ಬಿಲ್‌ ಸೃಷ್ಟಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಡೆದಿರುವ ತನಿಖೆ ಪರಿಪೂರ್ಣಗೊಂಡಿಲ್ಲ. ವಾರದೊಳಗೆ ನಿಖರ ಆಯಾಮದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಿ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ವಿಕಾಸ್‌ ಕಿಶೋರ್‌ ಸುರಳಕರ್‌ ತನಿಖಾ ತಂಡಗಳಿಗೆ ಸೂಚಿಸಿದರು.

ಡೆಸ್ಕ್‌ ಹಗರಣದ ಬಳಿಕ ಶೂ, ಸಾಕ್ಸ್‌ ವಿತರಣೆಗೆ ಸಂಬಂಧಿಸಿದ ಹಗರಣದ ತನಿಖಾ ಪ್ರಗತಿಯ ವರದಿಯನ್ನು ಕೆಲ ಸದಸ್ಯರು ಕೇಳಿದರು. ಈ ಸಂದರ್ಭ ತನಿಖಾ ತಂಡದ ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸದಿದ್ದುದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯ್ತು. ಕೆಲ ಸದಸ್ಯರು ತನಿಖಾ ಹಾದಿಯ ಬಗ್ಗೆ ಸಲಹೆಯನ್ನು ನೀಡಿದರು.

‘ಶೂ, ಸಾಕ್ಸ್‌ ದರದ ಬಗ್ಗೆ ಪ್ರತಿಷ್ಠಿತ ಕಂಪನಿ ಪ್ರತಿನಿಧಿಗಳ ಜತೆ ಚರ್ಚಿಸಿ. ಈಗಾಗಲೇ ವಿತರಣೆಯಾಗಿರುವ ಕಳಪೆ ಗುಣಮಟ್ಟದ ಶೂ, ಸಾಕ್ಸ್‌ಗಳನ್ನು ಗುಣಮಟ್ಟದ ಉತ್ಪನ್ನಗಳ ಜತೆ ಹೋಲಿಕೆ ಮಾಡಿ, ಧಾರಣೆಗೂ, ಸಾಮಗ್ರಿಗೂ ಸರಿಯಿದೆಯೋ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಈಗಾಗಲೇ ಸಲ್ಲಿಕೆಯಾಗಿವೆ ಎಂಬ ನಕಲಿ ಬಿಲ್‌ಗಳ ಜಾಡು ಹಿಡಿದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಎಲ್ಲೆಲ್ಲಿ ಅಕ್ರಮ ನಡೆಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ’ ಎಂದು ಸಿಇಒ ತನಿಖಾ ತಂಡಕ್ಕೆ ಸೂಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು