ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | 5G - ಟ್ರಿಲಿಯನ್‌ ಡಾಲರ್‌ ಕನಸಿಗೆ ಶಕ್ತಿವರ್ಧಕ: ರಾಜೀವ್ ಚಂದ್ರಶೇಖರ್

Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

ಹೆಚ್ಚು ಕಮ್ಮಿ ಕಳೆದ ಮೂರು ದಶಕಗಳಿಂದ ಭಾರತೀಯ ಮೊಬೈಲ್ ದೂರಸಂಪರ್ಕ ವಲಯದ ಹುಟ್ಟು, ಬೆಳವಣಿಗೆ ಮತ್ತು ವಿಸ್ತರಣೆಯನ್ನು ಉದ್ಯಮಿ, ಭಾಗೀದಾರ ಮತ್ತು ಪ್ರೇಕ್ಷಕನಾಗಿ ಹತ್ತಿರದಿಂದ ಕಂಡ ನನ್ನಲ್ಲಿ 5ಜಿ ತಂತ್ರಜ್ಞಾನದ ಬರುವಿಕೆಯು ಅಪಾರ ನಿರೀಕ್ಷೆ ಮೂಡಿಸಿದೆ.

ಜನರಿಗೆ ಈ 5 ಜಿ ವೈರ್‌ಲೆಸ್‌, ತಂತ್ರಜ್ಞಾನದ 5ನೇ ತಲೆಮಾರು ಆಗಿದೆಯಾದರೂ, ಇದು ಯಂತ್ರಗಳ ವಿಚಾರದಲ್ಲಿ 1ನೇ ತಲೆಮಾರು (1ಜಿ) ಆಗಿದೆ. 5ಜಿ ತಂತ್ರಜ್ಞಾನವು ತನ್ನ ಅಪಾರ ಸಾಧ್ಯತೆಗಳಿಂದಾಗಿ ಡಿಜಿಟಲ್ ಮತ್ತು ಮೊಬೈಲ್ ಅಂತರ್ಜಾಲ ಕ್ಷೇತ್ರವನ್ನು ಸಮಗ್ರವಾಗಿ ಬದಲಾಯಿಸಲಿದೆ ಮತ್ತು ಮರುವಿನ್ಯಾಸಗೊಳಿಸಲಿದೆ.

ಐಐಟಿ ಚೆನ್ನೈನ ನಿರ್ದೇಶಕರಾದ ಪ್ರೊ. ಕಾಮಕೋಟಿ ಹಾಗೂ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು, ಸಂಪೂರ್ಣವಾಗಿ ಭಾರತವೇ ವಿನ್ಯಾಸಗೊಳಿಸಿರುವ ಮತ್ತು ಅಭಿವೃದ್ದಿಗೊಳಿಸಿರುವ ‘5ಜಿ ಕೋರ್ ಆ್ಯಂಡ್‌ ಸ್ಟಾಕ್’ ತಂತ್ರಜ್ಞಾನ ಬಳಸಿ ಇತ್ತೀಚೆಗೆ ವಿಡಿಯೊ ಕರೆ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಫಾರ್ ಇಂಡಿಯಾ’ ಮತ್ತು ‘ಜಗತ್ತಿಗಾಗಿ ಮೇಕ್ ಇನ್ ಇಂಡಿಯಾ’ಕ್ಕಾಗಿ 5ಜಿ ಎಂಎಂಯೇತರ ತರಂಗಾಂತರ ಮತ್ತು ಎಂಎಂ ತರಂಗಾಂತರಗಳ ಟೆಸ್ಟ್‌ ಬೆಡ್‌ ಅನ್ನು ಮೇನಲ್ಲಿ ಉದ್ಘಾಟಿಸಿದ್ದಾರೆ. ನವೋದ್ಯಮಗಳು ಹಾಗೂ ಕೈಗಾರಿಕೆಗಳಿಗೆ 5ಜಿ ಅನ್ವಯಿಕಗಳು (ಅಪ್ಲಿಕೇಷನ್‌) ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಮಾಣೀಕರಿಸಲು ಇದು ಬಳಕೆಯಾಗುತ್ತದೆ.

ಕಳೆದ ಮೂರು ದಶಕಗಳಲ್ಲಿ 2ಜಿ, 3ಜಿ ಮತ್ತು 4ಜಿ ತಂತ್ರಜ್ಞಾನಗಳಲ್ಲಿ ಭಾರತ ಹೆಚ್ಚುಕಮ್ಮಿ ಆ ತಂತ್ರಜ್ಞಾನದ ಗ್ರಾಹಕನಾಗಿದೆ. ಅಲ್ಲದೇ ಸಂಪರ್ಕಜಾಲ, ಸಾಫ್ಟ್‌ವೇರ್ ಸ್ಟಾಕ್, ಅನ್ವಯಿಕಗಳು, ಸಾಧನ ಸೇರಿ ಪ್ರತಿಯೊಂದನ್ನೂ ಆಮದು ಮಾಡಿಕೊಳ್ಳಲಾಗಿದೆ. ಹೀಗಾಗಿ, ಭಾರತದ ಮಟ್ಟಿಗೆ 5ಜಿ ತಂತ್ರಜ್ಞಾನವು, ಅತ್ಯಂತ ವೇಗದ ಮೊಬೈಲ್ ಅಂತರ್ಜಾಲ ತಂತ್ರಜ್ಞಾನಕ್ಕೆ ದೇಶವು ಪರಿವರ್ತನೆ ಹೊಂದುವುದನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ; ಜತೆಗೆ, ಈ ಹಿಂದೆ ತಂತ್ರಜ್ಞಾನ ಆಮದು ರಾಷ್ಟ್ರವಾಗಿದ್ದ ಭಾರತವು, ತಂತ್ರಜ್ಞಾನದ ಆವಿಷ್ಕಾರಕ ರಾಷ್ಟ್ರವಾಗಿ ಹೊರಹೊಮ್ಮುವುದನ್ನೂ ಪ್ರತಿನಿಧಿಸುತ್ತದೆ.

ಸುಮಾರು 80 ಕೋಟಿ ಭಾರತೀಯರು ಅಂತರ್ಜಾಲ ಬಳಸುತ್ತಿದ್ದಾರೆ. ಉಳಿದ 40 ಕೋಟಿ ಭಾರತೀಯರನ್ನು, ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ಅತ್ಯಂತ ಯಶಸ್ವಿ ಯೋಜನೆ ‘ಡಿಜಿಟಲ್‌ ಇಂಡಿಯಾ’ ಮೂಲಕ ಅಂತರ್ಜಾಲ ಸಂಪರ್ಕ ಜಾಲಕ್ಕೆ ಸೇರಿಸುವುದು ನಮ್ಮ ಆದ್ಯತೆಯಾಗಿದೆ. ಇದರಲ್ಲಿ 5ಜಿ ತಂತ್ರಜ್ಞಾನ ಬಹು ದೊಡ್ಡ ಪಾತ್ರವಹಿಸಲಿದೆ ಮತ್ತು ತಂತ್ರಜ್ಞಾನದ ಪ್ರಯೋಜನಗಳನ್ನು ಜನರಿಗೆ ತಲುಪಿಸುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಭಾರತದ ವರ್ಚಸ್ಸು ಮತ್ತಷ್ಟು ಹೆಚ್ಚಾಗಲಿದೆ. 5ಜಿ ಮತ್ತು ವಿಶ್ವದ ಅತಿ ದೊಡ್ಡ ಗ್ರಾಮೀಣ ಬ್ರಾಡ್‌ಬ್ಯಾಂಡ್‌ ಕಾರ್ಯಕ್ರಮ ‘ಭಾರತ್ ನೆಟ್’ ಮೂಲಕ ಭಾರತ ಶೀಘ್ರವೇ ವಿಶ್ವದ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿರುವ ದೇಶವಾಗಲಿದೆ.

ನಾನು ಪದೇ ಪದೇ ಹೇಳಿರುವಂತೆ, ಭಾರತದ ತಂತ್ರಜ್ಞಾನ ಯುಗದಲ್ಲಿ ವಿದ್ಯುನ್ಮಾನ ಉತ್ಪನ್ನ, ಸೆಮಿಕಂಡಕ್ಟರ್ ವಿನ್ಯಾಸ, ಕೃತಕ ಬುದ್ಧಿಮತ್ತೆ ಮುಂತಾದವುಗಳಲ್ಲಿ ನವೋದ್ಯಮಗಳ ಹೊಸ ಅಲೆಯ ಸುಗ್ಗಿ ಪ್ರಾರಂಭವಾಗಲಿದೆ. ಡಿಜಿಟಲ್ ಆಡಳಿತಕ್ಕೆ ವೇಗ ನೀಡುವುದು ಮತ್ತು ಎಲ್ಲ ಸರ್ಕಾರಿ ಸೇವೆಗಳು ಪ್ರತಿಯೊಬ್ಬ ಭಾರತೀಯನಿಗೂ ಲಭ್ಯವಾಗುವುದನ್ನು ಖಾತರಿಪಡಿಸುವ ಪ್ರಧಾನಿ ಮೋದಿ ಅವರ ಗುರಿಯನ್ನು ಸಾಧಿಸಲು ಕೂಡಾ 5ಜಿ ನೆರವಾಗಬಲ್ಲುದು.

ತಂತ್ರಜ್ಞಾನವು ಭಾರತದ ಪಾಲಿಗೆಮುಂಬರುವ ವರ್ಷಗಳಲ್ಲಿ ಬಹುದೊಡ್ಡ ಅವಕಾಶ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತದ ಆರ್ಥಿಕತೆಯು 5 ಟ್ರಿಲಿಯನ್‌ ಡಾಲರ್‌ಗೆ (ಸುಮಾರು ₹375 ಲಕ್ಷ ಕೋಟಿ) ಬೆಳೆದು ಅಲ್ಲಿಂದ 10 ಟ್ರಿಲಿಯನ್‌ ಡಾಲರ್‌ (ಸುಮಾರು ₹750 ಲಕ್ಷ ಕೋಟಿ) ತಲುಪುವಲ್ಲಿ 5ಜಿ ಮತ್ತು 6ಜಿ ತಂತ್ರಜ್ಞಾನಗಳು ಬಹುದೊಡ್ಡ ಪಾತ್ರ ವಹಿಸಲಿವೆ.

ಭಾರತವು ನೂತನ ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದೆ. ಉದಾಹರಣೆಗೆ, ಇಂದು ವಿಶ್ವದಲ್ಲಿ ಅತಿದೊಡ್ಡ ಮಟ್ಟದಲ್ಲಿ ಇಂಟರ್‌ನೆಟ್‌ ಪ್ರೊಟೊಕಾಲ್‌ 6ನೇ ಆವೃತ್ತಿಯನ್ನು ಅಳವಡಿಸಿಕೊಂಡ ರಾಷ್ಟ್ರಗಳಲ್ಲಿ ಭಾರತವೂ ಒಂದು. ಜಿಎಸ್ಎಂಎ ಇಂಟಲಿಜೆನ್ಸ್ ಫಾರ್ ಕಾಸ್ಟ್ ಅನುಸಾರ, ಭಾರತದಲ್ಲಿ 5ಜಿ ಸಂಪರ್ಕಗಳು 2025ರ ವೇಳೆಗೆ ಒಟ್ಟು ಜನಸಂಖ್ಯೆಯ ಶೇ 6ರಷ್ಟು (7.2 ಕೋಟಿ) ಮತ್ತು 2040ರ ವೇಳೆಗೆ ಶೇಕಡ 93ರಷ್ಟು ಜನರನ್ನು ತಲುಪಲಿವೆ. ಡಿಜಿಟಲ್ ಇಂಡಿಯಾ ನಮ್ಮ ಡಿಜಿಟಲ್ ಆರ್ಥಿಕತೆಯಲ್ಲಿ ಅಭೂತಪೂರ್ವ ಅವಕಾಶಗಳನ್ನು ಒದಗಿಸಿದೆ. ಡಿಜಿಟಲ್ ರಂಗದಲ್ಲಿ ಆವಿಷ್ಕಾರ ನಡೆಸುತ್ತಿರುವ ಸಹಸ್ರಾರು ಯುವ ಉದ್ಯಮಿಗಳು ಮತ್ತು ನವೋದ್ಯಮಗಳನ್ನು ಸೃಷ್ಟಿಸುತ್ತಿದೆ. 5ಜಿ ತಂತ್ರಜ್ಞಾನ, ಭಾರತದ ತಾಂತ್ರಿಕ ಯುಗಕ್ಕೆ ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸಲಿದೆ ಮತ್ತು ಭಾರತ ಜಗತ್ತಿನ ವಿಶ್ವಾಸಾರ್ಹ ತಾಂತ್ರಿಕ ಪಾಲುದಾರನಾಗಿ ಹೊರಹೊಮ್ಮುವಂತೆ ಮಾಡಲಿದೆ.

ಲೇಖಕ: ಕೇಂದ್ರ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT