ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | ಹಣದ ಹಂಗಾಮಾ - ಚಿನ್ನದ ಮೊಟ್ಟೆ ಇಡುವ ಕೋಳಿ

Last Updated 13 ಫೆಬ್ರುವರಿ 2022, 19:56 IST
ಅಕ್ಷರ ಗಾತ್ರ

ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್‌, ಬಿಸಿಸಿಐನ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಈಗ ವಿಶ್ವ ಕ್ರಿಕೆಟ್‌ನ ಒಟ್ಟು ವಾರ್ಷಿಕ ವಹಿವಾಟಿನಲ್ಲಿ ಐಪಿಎಲ್‌ ಸರಣಿಯೊಂದರ ಪಾಲು ಶೇ 40ರಷ್ಟನ್ನು ಮೀರುತ್ತದೆ. ಅಂದರೆ ಐಪಿಎಲ್‌ನಲ್ಲಿ ಹರಿಯುವ ಹಣದ ಹೊಳೆಯನ್ನು ಅಂದಾಜಿಸಬಹುದು. 2008ರಲ್ಲಿ ಬಿಸಿಸಿಐ ಮೊದಲ ಬಾರಿ ಐಪಿಎಲ್‌ ಆರಂಭಿಸಿದಾಗ, ಐಪಿಎಲ್‌ನಿಂದ ಅದಕ್ಕೆ ದೊರೆತ ಆದಾಯ ಸುಮಾರು ₹900 ಕೋಟಿಯಷ್ಟು. 2022ರಲ್ಲಿ ಐಪಿಎಲ್‌ ಮೂಲಕ ಬಿಸಿಸಿಐ ₹6,000 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸುವ ನಿರೀಕ್ಷೆ ಇದೆ. ಈಗ ಬಿಸಿಸಿಐನ ವಾರ್ಷಿಕ ವರದಿಯಲ್ಲಿ ಐಪಿಎಲ್‌ ಆದಾಯದ ಪಾಲು ಶೇ 60ಕ್ಕಿಂತಲೂ ಹೆಚ್ಚು.

ಐಪಿಎಲ್‌ ಆರಂಭಕ್ಕೂ ಮುನ್ನವೇ ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಎನಿಸಿತ್ತು. ಬಿಸಿಸಿಐನ ಮೌಲ್ಯ, ಆದಾಯ, ವೆಚ್ಚ ಎಲ್ಲವೂ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗಿಂತಲೂ (ಐಸಿಸಿ) ಹೆಚ್ಚು ಇತ್ತು. ಐಪಿಎಲ್‌ ಆರಂಭದ ನಂತರ ಬಿಸಿಸಿಐನ ಆದಾಯ ಮತ್ತು ಸಂಪತ್ತು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಲ್ಲಿ ಬಿಸಿಸಿಐನ ಆದಾಯದ ಲೆಕ್ಕಾಚಾರವನ್ನಷ್ಟೇ ನೀಡಲಾಗಿದೆ. ಪ್ರಾಂಚೈಸಿಗಳ ಬ್ರಾಂಡ್‌ ಮೌಲ್ಯ, ಜಾಹೀರಾತು ಆದಾಯ, ಟಿಕೆಟ್ ಮಾರಾಟದ ಆದಾಯವನ್ನೂ ಪರಿಗಣಿಸಿದರೆ ಒಟ್ಟು ಮೊತ್ತವು ಹತ್ತಾರು ಸಾವಿರ ಕೋಟಿಯನ್ನು ಮೀರುತ್ತದೆ.

ಐಪಿಎಲ್‌ನಿಂದ ಬಿಸಿಸಿಐಗೆ ದೊರೆಯುತ್ತಿರುವ ಒಟ್ಟು ಆದಾಯದಲ್ಲಿ ಪ್ರಸಾರ ಹಕ್ಕುಗಳ ಮಾರಾಟದಿಂದ ದೊರೆಯುವ ಆದಾಯದ್ದೇ ಸಿಂಹಪಾಲು.ಐಪಿಎಲ್ ಆರಂಭವಾದಾಗ ಪ್ರಸಾರದ ಹಕ್ಕಿನ ಮಾರಾಟದಿಂದ ಬಿಸಿಸಿಐಗೆ ₹422 ಕೋಟಿಯಷ್ಟು ಆದಾಯ ದೊರೆತಿತ್ತು. 2018ರಲ್ಲಿ ಒಟ್ಟು ಐದು ವರ್ಷದ ಅವಧಿಗೆ ಪ್ರಸಾರದ ಹಕ್ಕನ್ನು ಮಾರಾಟ ಮಾಡಲಾಗಿತ್ತು. 2018–2023ರ ಅವಧಿಯಲ್ಲಿ ನಡೆಯುವ ಎಲ್ಲಾ ಐಪಿಎಲ್‌ ಸರಣಿ ಮತ್ತು ಪಂದ್ಯಗಳ ಪ್ರಸಾರದ ಹಕ್ಕಿನ ಮಾರಾಟದಿಂದ ಬಿಸಿಸಿಐ ₹16,347 ಕೋಟಿ ಆದಾಯ ಗಳಿಸಿದೆ. ಪ್ರತಿ ಪಂದ್ಯ ನಡೆದಾಗಲೂ ಬಿಸಿಸಿಐಗೆ ₹54.5 ಕೋಟಿಯಷ್ಟು ಆದಾಯ ಜಮೆ ಆಗುತ್ತಿದೆ.

2024–29ರ ಅವಧಿಗೆ ಮತ್ತೆ ಪ್ರಸಾರದ ಹಕ್ಕು ಮಾರಾಟದಿಂದ ಬಿಸಿಸಿಐ ₹35,000 ಕೋಟಿ ಆದಾಯದ ನಿರೀಕ್ಷೆಯಲ್ಲಿದೆ. ಪ್ರಸಾರದ ಹಕ್ಕಿನ ಮಾರಾಟದ ಮೌಲ್ಯವನ್ನು ಹೆಚ್ಚಿಸುವ ಸಲುವಾಗಿ ಪಂದ್ಯಗಳ ಸಂಖ್ಯೆಯನ್ನೂ ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದೆ. ಇದೊಂದು ರೀತಿಯಲ್ಲಿ ಪಂದ್ಯದಿಂದ ದೊರೆಯುವ ಆದಾಯವಲ್ಲ. ಬದಲಿಗೆ ಆದಾಯಕ್ಕಾಗಿ ಪಂದ್ಯ ನಡೆಸುವ ಮಾದರಿ. 2024ರಿಂದ ಪ್ರತಿ ವರ್ಷ 14 ಪಂದ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳುತ್ತಾ ಹೋಗಲು ಬಿಸಿಸಿಐ ಯೋಜನೆ ಸಿದ್ಧಪಡಿಸಿದೆ.

ಪ್ರಾಯೋಜಕತ್ವ

ಪ್ರತಿ ಐಪಿಎಲ್‌ ಸರಣಿಯ ಟೈಟಲ್‌ ಪ್ರಾಯೋಜಕತ್ವದಿಂದಲೂ ಬಿಸಿಸಿಐಗೆ ನೂರಾರು ಕೋಟಿ ರೂಪಾಯಿ ಆದಾಯ ಬರುತ್ತದೆ. ಈ ಬಾರಿ ಟಾಟಾ ಕಂಪನಿಯು ಐಪಿಎಲ್‌ ಟೈಟಲ್‌ನ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಐಪಿಎಲ್‌ನ ಪ್ರಾಯೋಜಕತ್ವಗಳಲ್ಲಿ, ಟೈಟಲ್ ಪ್ರಾಯೋಜಕತ್ವವೇ ಅತ್ಯಂತ ದೊಡ್ಡ ಮೊತ್ತದ್ದು. ಆದರೆ ಇದರ ಜತೆಯಲ್ಲಿ ಒಟಿಟಿ ಸ್ಟ್ರೀಮಿಂಗ್‌ ಪ್ರಾಯೋಜಕತ್ವ, ಅಧಿಕೃತ ಪ್ರಾಯೋಜಕತ್ವ, ಅಂಪೈರ್ ಪ್ರಾಯೋಜಕತ್ವ ಎಲ್ಲವೂ ಸೇರಿ ಪ್ರತೀ ಸರಣಿಯಲ್ಲಿ ಪ್ರಾಯೋಜಕತ್ವದ ಆದಾಯವೇ ಸಾವಿರ ಕೋಟಿ ರೂಪಾಯಿಯನ್ನು ದಾಟುತ್ತದೆ.

ಹರಾಜಿನಲ್ಲಿ ನೂರಾರು ಕೋಟಿ

ಪ್ರತಿ ಐಪಿಎಲ್‌ ಸರಣಿಯ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳು ತಮಗೆ ಅಗತ್ಯವಿರುವ ಆಟಗಾರರನ್ನು ಖರೀದಿಸುತ್ತವೆ. ಆಟಗಾರರ ಖರೀದಿ ಪ್ರಕ್ರಿಯೆಯು ಹರಾಜಿನ ಮೂಲಕ ನಡೆಯುತ್ತದೆ. ಬಿಸಿಸಿಐ ಈ ಹರಾಜನ್ನು ಆಯೋಜಿಸುತ್ತವೆ. ಹರಾಜಿನಲ್ಲಿ ದೇಶಿ ಕ್ರಿಕೆಟ್ ಆಟಗಾರರು, ಭಾರತದ ಅಂತರರಾಷ್ಟ್ರೀಯ ಕ್ರಿಕೆಟ್‌ ಕಲಿಗಳು ಮತ್ತು ವಿಶ್ವದ ಬೇರೆ ದೇಶಗಳ ಕ್ರಿಕೆಟ್ ಆಟಗಾರರೂ ಇರುತ್ತಾರೆ.

ಐಪಿಎಲ್‌ ಆಟಗಾರರ ಹರಾಜು ಎನ್ನುವುದೇ ಒಂದು ದೊಡ್ಡ ಜಾತ್ರೆಯ ಹಾಗೆ. ಆಟಗಾರನೊಬ್ಬನನ್ನು ತಂಡವೊಂದು ಖರೀದಿಸಿದ ವಿದ್ಯಮಾನ ಹಲವು ದಿನಗಳವರೆಗೆ ಬಿಸಿಸುದ್ದಿಯಾಗಿರುತ್ತದೆ. ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರು ಇಡೀ ಸರಣಿಯಲ್ಲಿ ಆಕರ್ಷಣೆಯ ಕೇಂದ್ರವಾಗಿರುತ್ತಾರೆ.

ನಿರ್ದಿಷ್ಟ ಕಾಲಾವಧಿಯವರೆಗೆ ತಂಡಗಳು ಆಟಗಾರರನ್ನು ಖರೀದಿಸಿರುತ್ತವೆ. ಈ ಅವಧಿಯ ಮಧ್ಯೆ ನಡೆಯುವ ಹರಾಜಿನಲ್ಲಿ ತಂಡಗಳು ಕಡಿಮೆ ಹಣವನ್ನು ವೆಚ್ಚ ಮಾಡುತ್ತವೆ. ಆಟಗಾರರೊಂದಿಗೆ ಒಪ್ಪಂದ ಮುಗಿದ ನಂತರ ನಡೆಯುವ ಹರಾಜಿನಲ್ಲಿ ಮತ್ತೆ ಭಾರಿ ಮೊತ್ತವನ್ನು ವಿನಿಯೋಗಿಸುತ್ತವೆ. ಆದರೆ ಐಪಿಎಲ್‌ ಆರಂಭವಾದಾಗಿನಿಂದ ಈವರೆಗೆ ಈ ಎರಡೂ ವೆಚ್ಚಗಳಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ.

ಫ್ರಾಂಚೈಸಿಗಳಿಗೆ ಹಣ

ಕ್ರಿಕೆಟ್ ಪಂದ್ಯಗಳನ್ನು ವಾಹಿನಿಗಳಲ್ಲಿ ನೇರ ಪ್ರಸಾರ ಮಾಡುವ ಹಕ್ಕುಗಳಿಂದ ಬಿಸಿಸಿಐ ಕೋಟ್ಯಂತರ ರೂಪಾಯಿ ಗಳಿಸುತ್ತದೆ. ಈ ಹಣವನ್ನು ಐಪಿಎಲ್‌ ಫ್ರಾಂಚೈಸಿಗಳಿಗೆ ಹಂಚಿಕೆ ಮಾಡುತ್ತದೆ. ಮೂಲಗಳ ಪ್ರಕಾರ, ಪ್ರಸಾರ ಹಕ್ಕುಗಳಿಂದ ಬಂದ ಶೇ 50ರಷ್ಟು ಹಣವನ್ನು ತಂಡಗಳಿಗೆ ನೀಡಲಾಗುತ್ತದೆ.

ಬ್ರಾಂಡ್ ಪ್ರಾಯೋಜಕತ್ವವು ತಂಡಗಳ ಮತ್ತೊಂದು ಆದಾಯದ ಮೂಲವಾಗಿದೆ. ಎಲ್ಲ ತಂಡಕ್ಕೂ ಪ್ರಾಯೋಜಕರು ಇದ್ದಾರೆ. ತಮ್ಮ ಕಂಪನಿಯ ಹೆಸರು ಹಾಗೂ ಲಾಂಛನಗಳನ್ನು ತಂಡದ ಆಟಗಾರರ ಜರ್ಸಿ ಮೇಲೆ ಹಾಕುವ ಮೂಲಕ ಪ್ರಚಾರ ಪಡೆಯುತ್ತಾರೆ. ಇದಕ್ಕೆ ಹಣವನ್ನು ಪಾವತಿಸಲಾಗುತ್ತದೆ.

ಐಪಿಎಲ್ ಟೈಟಲ್ ಪ್ರಾಯೋಜಕತ್ವವೂ ತಂಡಗಳಿಗೆ ಹಣವನ್ನು ತರುತ್ತದೆ. ‘ಡಿಎಲ್‌ಎಫ್ ಐಪಿಎಲ್’, ‘ವಿವೊ ಐಪಿಎಲ್’ – ಹೀಗೆ ಐಪಿಎಲ್‌ನ ಹೆಸರಿನ ಹಿಂದಿರುವ ಡಿಎಲ್‌ಎಫ್ ಹಾಗೂ ವಿವೊ ಹೆಸರುಗಳು ಟೈಟಲ್ ಪ್ರಾಯೋಜಕತ್ವ ವಹಿಸಿಕೊಂಡ ಕಂಪನಿಗಳನ್ನು ಸೂಚಿಸುತ್ತವೆ. ಇದರಿಂದ ಬರುವ ಹಣದ ಪಾಲನ್ನು ಫ್ರಾಂಚೈಸಿಗಳಿಗೆ ಬಿಸಿಸಿಐ ಹಂಚಿಕೆ ಮಾಡುತ್ತದೆ.

ಕ್ರಿಕೆಟ್ ಪಂದ್ಯಗಳ ಟಿಕೆಟ್ ಮಾರಾಟವೂ ಆದಾಯದ ಪ್ರಮುಖ ಮೂಲ. ಟಿಕೆಟ್ ಮಾರಾಟದಿಂದ ಬಂದ ಶೇ 10ರಷ್ಟು ಹಣ ಎರಡೂ ತಂಡಗಳ ನಡುವೆ ಹಂಚಿಕೆಯಾಗುತ್ತದೆ. ಟಿ–ಶರ್ಟ್, ಟೋಪಿ, ಕಿಟ್‌, ಕೈಗಡಿಯಾರಗಳನ್ನು ಮಾರಾಟ ಮಾಡಿಯೂ ತಂಡಗಳು ಹಣ ಸಂಗ್ರಹಿಸುತ್ತವೆ.

ಫೈನಲ್ ಪಂದ್ಯದಲ್ಲಿ ಗೆದ್ದ ಮತ್ತು ಎರಡನೇ ಸ್ಥಾನ ಪಡೆದ ತಂಡ, ತಂಡದ ಆಟಗಾರರಿಗೆ ಪ್ರಶಸ್ತಿಯ ಮೊತ್ತವು ಹಂಚಿಕೆಯಾಗುತ್ತದೆ. 2019ರಲ್ಲಿ ಮುಂಬೈ ತಂಡಕ್ಕೆ ₹20 ಕೋಟಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ₹12.5 ಕೋಟಿ ಪ್ರಶಸ್ತಿ ಮೊತ್ತ ಬಂದಿತ್ತು. ಆದರೆ ಫೈನಲ್ ಪ್ರವೇಶಿಸುವ ತಂಡದ ಬ್ರಾಂಡ್ ಮೌಲ್ಯ ಹೆಚ್ಚಾಗುವುದರಿಂದ ಬರುವ ಆದಾಯಕ್ಕೆ ಹೋಲಿಸಿದರೆ, ಪ್ರಶಸ್ತಿಯ ಮೊತ್ತ ಅಷ್ಟು ಮಹತ್ವದ್ದಲ್ಲ ಎನ್ನುತ್ತಾರೆ ವಿಶ್ಲೇಷಕರು.

ಐಪಿಎಲ್ ಬ್ರಾಂಡ್ ಮೌಲ್ಯ


ಆಧಾರ: ಐಪಿಎಲ್‌20.ಕಾಂ, ಬಿಸಿಸಿಐ ವಾರ್ಷಿಕ ವರದಿಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT