ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಬಿಟ್ಟು ವಾರ: ಕೊರೊನಾ ಕಲಿಸಿದ ಹೊಸ ಮಂತ್ರ

Last Updated 12 ಮೇ 2020, 20:00 IST
ಅಕ್ಷರ ಗಾತ್ರ

‘ಜಾನ್‌ ಭೀ, ಜಹಾನ್‌ ಭೀ’ (ಜೀವದಷ್ಟೆ ಜೀವನೋಪಾಯ ಕೂಡ ಮುಖ್ಯ) – ಇದು ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆ. ಹಾಸಿ, ಹೊದ್ದು ಮಲಗಿಬಿಟ್ಟಿರುವ ಆರ್ಥಿಕ ಚಟುವಟಿಕೆಗಳಿಗೆ ಮರುಚೇತನ ನೀಡುವುದು ಹೇಗೆ ಎನ್ನುವುದು ಸದ್ಯ ಜಗತ್ತನ್ನೇ ಕಾಡುತ್ತಿರುವ ಪ್ರಶ್ನೆ. ನೂರಾರು ಕೋಟಿ ಮಂದಿ ಮತ್ತೆ ಉದ್ಯೋಗಕ್ಕೆ ತೆರಳಲು ಹಾತೊರೆಯುತ್ತಿರುವ ಈ ಹೊತ್ತಿನಲ್ಲಿ ‘ಜೀವರಕ್ಷಣೆಯೇ ಪರಮೋಚ್ಛ ಗುರಿ ಆಗಿರುವಾಗ ಆರ್ಥಿಕತೆಗೆ ಮರು ಚಾಲನೆ ನೀಡಲು ಕಾಯಲೇಬೇಕಿರುವುದು ಅನಿವಾರ್ಯ’ ಎಂಬ ವಾದ ಕೇಳಿಬರುತ್ತಿದೆ. ಆದರೆ, ಕೆಲಸವಿಲ್ಲದೆ ‘ಹತಾಶೆಯ ಸಾವು’ಗಳು ಸಂಭವಿಸುತ್ತಾ ಹೊರಟರೆ ಯಾವ ಜೀವವನ್ನು ರಕ್ಷಿಸುತ್ತೀರಿ’ ಎಂಬ ಪ್ರಶ್ನೆಯೂ ಅದನ್ನು ಹಿಂಬಾಲಿಸಿಕೊಂಡು ಬರುತ್ತಿದೆ. ಹಾಗಾದರೆ ನಮ್ಮ ಆರ್ಥಿಕ ಚಟುವಟಿಕೆಗಳ ಮುಂದಿನ ದಾರಿ ಹೇಗಿರಬೇಕು?

ಕೊರೊನಾ ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಿದರೆ ದೊಡ್ಡ ಗಂಡಾಂತರ ಕಟ್ಟಿಟ್ಟ ಬುತ್ತಿ. ಸೋಂಕಿನ ಸುಪ್ತ ಸಮಯವನ್ನು ಅನುಸರಿಸಿ, ಅದಕ್ಕೆ ತಕ್ಕಂತೆ ಆರ್ಥಿಕ ಚಟುವಟಿಕೆಗಳೂ ಸುಗಮವಾಗಿ ಸಾಗಲು ಅಗತ್ಯ ಸೂತ್ರವೊಂದನ್ನು ಕಂಡುಕೊಳ್ಳುವುದು ಸದ್ಯ ನಮ್ಮ ಮುಂದಿರುವ ಜಾಣನಡೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಸೋಂಕು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡಲು ಸರಾಸರಿ ಮೂರು ದಿನ ತೆಗೆದುಕೊಂಡಿರುವುದು ಇದುವರೆಗಿನ ಬೆಳವಣಿಗೆಗಳಿಂದ ವೇದ್ಯ. ಹೀಗಾಗಿ ಸಂಸ್ಥೆಯ ಒಟ್ಟು ಮಾನವ ಸಂಪನ್ಮೂಲವನ್ನು ಎರಡು ಭಾಗಗಳಾಗಿ ಮಾಡಿ, ವಾರ ಬಿಟ್ಟು ವಾರ (two-week cycle) ಒಂದೊಂದು ತಂಡಕ್ಕೆ ಉದ್ಯೋಗದ ಸ್ಥಳದಲ್ಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಮತ್ತೊಂದು ತಂಡ ಆ ಅವಧಿಯಲ್ಲಿ ಮನೆಯಿಂದ ಕಾರ್ಯ ನಿರ್ವಹಿಸಬೇಕು. ಇದರಿಂದ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಲಿದ್ದು, ಸೋಂಕು ಹರಡುವುದನ್ನೂ ತಪ್ಪಿಸಿದಂತಾಗುತ್ತದೆ.

ಉದ್ಯೋಗದ ಸ್ಥಳದಲ್ಲಿ ಮೊದಲ ನಾಲ್ಕು ದಿನಗಳ ಕೆಲಸದ ಸಂದರ್ಭದಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣ ಕಾಣಿಸಿದರೆ ಅವರನ್ನು ಮುಂದಿನ ಹತ್ತು ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಿಸಬೇಕು. ವಾರ ಬಿಟ್ಟು ವಾರದ ಕೆಲಸ ಇದಕ್ಕೆ ಪೂರಕ. ದೊಡ್ಡ ಕಂಪನಿಗಳ ಕಾರ್ಯ ನಿರ್ವಹಣೆಗೆ ಸದ್ಯ ಇದೇ ಸರಳ ಸೂತ್ರ ಎನ್ನುತ್ತಾರೆ ತಜ್ಞರು.

ಆಸ್ಟ್ರೇಲಿಯಾದ ಶಾಲೆಗಳಲ್ಲಿ ಸಹ ವಾರ ಬಿಟ್ಟು ವಾರ ನಿಯಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಮೇ 18ರಿಂದ ಅಲ್ಲಿ ಶಾಲೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳನ್ನು ಎರಡು ತಂಡ ಮಾಡಿ, ಪ್ರತಿಯೊಂದು ತಂಡಕ್ಕೂ ವಾರ ಬಿಟ್ಟು ವಾರ ಐದು ದಿನಗಳವರೆಗೆ ಶಾಲಾ ತರಗತಿಗಳಿಗೆ ಹಾಜರಾಗುವ ಅವಕಾಶ ನೀಡಲಾಗುತ್ತಿದೆ. ಪಾಲಕರು ಕೆಲಸಕ್ಕೆ, ಮಕ್ಕಳು ಶಾಲೆಗೆ ವಾರ ಬಿಟ್ಟು ವಾರ ಹೋಗುವುದರಿಂದ ಉಳಿದ ಒಂದು ವಾರ ಮಕ್ಕಳನ್ನು ಮನೆಯಲ್ಲಿ ನಿಭಾಯಿಸಲೂ ತಂದೆ–ತಾಯಿಗಳಿಗೆ ಸಾಧ್ಯವಾಗಲಿದೆ.

ಇಸ್ರೇಲ್‌ನ ವೈಜ್‌ಮನ್‌ ಇನ್‌ಸ್ಟಿಟ್ಯೂಟ್‌ ಕೂಡ ತನ್ನ ಪ್ರತಿಯೊಬ್ಬ ಉದ್ಯೋಗಿಗೆ ವಾರ ಬಿಟ್ಟು ವಾರ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದು, ಸೋಂಕು ನಿಯಂತ್ರಣದಲ್ಲಿ ಬಹುಪಾಲು ಯಶಸ್ಸು ಕಂಡಿದೆ. ಹೀಗಾಗಿ ಈ ಮಾದರಿ ಕೊರೊನಾ ಮಾರಿಯನ್ನು ಎದುರಿಸಿ, ಆರ್ಥಿಕ ಬಂಡಿಯನ್ನು ಎಳೆಯಲು ಸಹಕಾರಿಯಾಗಿದೆ ಎಂಬ ಸಲಹೆ ಕೇಳಿಬಂದಿದೆ.

ವಾರ ಬಿಟ್ಟು ವಾರ ನಿಯಮದಿಂದ ಉತ್ಪಾದನಾ ವಲಯಗಳಿಗೂ ಶೇ 50 ರಷ್ಟು ಕಾರ್ಮಿಕರ ಬಲ ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಸಿಗಲಿದೆ. ಇದರಿಂದ ಉತ್ಪಾದಕ ಚಟುವಟಿಕೆಗಳಿಗೆ ವೇಗ ಸಿಗಲಿದೆ. ಅಂತರ ಕಾಯ್ದುಕೊಳ್ಳುವ ಜತೆಗೆ ಮಾನವ ಸಂಪನ್ಮೂಲದ ಆರೋಗ್ಯ ರಕ್ಷಣೆಗೂ ಈ ನಿಯಮದ ಪಾಲನೆಯಿಂದ ಒತ್ತು ಕೊಟ್ಟಂತಾಗುತ್ತದೆ. ಅಲ್ಲದೆ, ಬಹುತೇಕರು ಉದ್ಯೋಗ ಉಳಿಸಿಕೊಳ್ಳಲೂ ಸಾಧ್ಯವಾಗುತ್ತದೆ (ಸಂಬಳದ ಪ್ರಮಾಣ ಕಡಿಮೆ ಆಗುವುದಾದರೂ ಬದುಕಿಗೆ ಬೇಕಾದ ಉದ್ಯೋಗದ ಆಸರೆ ಉಳಿಯುತ್ತದೆ).

‘ವಾರ ಬಿಟ್ಟು ವಾರ’ ಅಥವಾ ‘ದಿನ ಬಿಟ್ಟು ದಿನ’ ಮುಂದಿನ ದಿನಗಳಲ್ಲಿ ಶಾಲೆ, ವಾಣಿಜ್ಯ ಸಂಸ್ಥೆಗಳಿಗೆ ಮಾತ್ರವಲ್ಲ, ನಗರ, ರಾಜ್ಯ, ದೇಶದ ಎಲ್ಲ ಚಟುವಟಿಕೆಗಳ ಮಂತ್ರವೂ ಆಗಬೇಕು. ಪಾಳಿಯ ಈ ನಿಯಮದಿಂದ (cycle) ಸೋಂಕು ಹರಡುವುದನ್ನು ಬಹುಮಟ್ಟಿಗೆ ನಿಯಂತ್ರಿಸಬಹುದು. ಸರ್ಕಾರವೇ ಇದಕ್ಕೊಂದು ಮಾರ್ಗಸೂಚಿ ರೂಪಿಸಿದರೆ ಇನ್ನೂ ಉತ್ತಮ. ಏಕೆಂದರೆ, ಇಂತಹ ನಿಯಮದಿಂದ ಒಟ್ಟು ಜನಸಂಖ್ಯೆಯ ಶೇ 50ರಷ್ಟು ಭಾಗ ಪ್ರತಿದಿನ ಮನೆಯಲ್ಲಿಯೇ ಉಳಿದರೆ, ಉಳಿದರ್ಧ ಭಾಗ ಕಚೇರಿ, ಕೆಲಸದ ಸ್ಥಳ ಅಥವಾ ಶಾಲೆಗಾಗಿ ಮನೆಯಿಂದ ಹೊರಗೆ ಇರುತ್ತದೆ. ಜತೆಗೆ ಸೋಂಕು ಹರಡುವುದೂ ತಪ್ಪುತ್ತದೆ. ಅಲ್ಲದೆ, ಸದ್ಯದ ಲಾಕ್‌ಡೌನ್‌ನ ಭಾರದಿಂದ ಮುಕ್ತರಾಗಿ ಜನ ನಿಟ್ಟುಸಿರು ಬಿಡುವಂತಾಗುತ್ತದೆ ಎನ್ನುವುದು ತಜ್ಞರ ಅಭಿಮತ.

ಕೆಲವು ಮಿಥ್ಯಾವಾದಗಳು...ತಜ್ಞರು ನೀಡಿದ ಉತ್ತರಗಳು

ಕೊರೊನಾ ಸೋಂಕಿನ ಪರಿಣಾಮ ಆರ್ಥಿಕ ಚಟುವಟಿಕೆ ನಿಲ್ಲಿಸಿರುವುದಕ್ಕೆ ಕೆಲವು ಪ್ರಶ್ನೆಗಳು ಎದ್ದಿವೆ. ಅದಕ್ಕೆ ತಜ್ಞರು ನೀಡಿದ ಉತ್ತರಗಳೂ ಜತೆಗಿವೆ.

*ಹಿಂದೆ ಸಾರ್ಸ್‌ ಬಂದಾಗ ಆರ್ಥಿಕ ಚಟುವಟಿಕೆ ನಿಲ್ಲಿಸಿರಲಿಲ್ಲ. ಈಗೇಕೆ ನಿಲ್ಲಿಸಬೇಕು?
–ಜಗತ್ತಿನಲ್ಲಿ ಸಾರ್ಸ್‌ ಸೋಂಕಿನಿಂದ ಬಳಲಿದವರ ಸಂಖ್ಯೆ ಕೇವಲ 8,000 ಹಾಗೂ ಸತ್ತವರ ಸಂಖ್ಯೆ 800. ಆದರೆ, ಕೊರೊನಾ ಸೋಂಕು ಪ್ರಪಂಚದ 41 ಲಕ್ಷಕ್ಕೂ ಅಧಿಕ ಜನರನ್ನು ಕಾಡಿದೆ. ಹೆಚ್ಚು–ಕಡಿಮೆ ಮೂರು ಲಕ್ಷದಷ್ಟು ಸಾವುಗಳು ಸಂಭವಿಸಿವೆ. ಈ ಸೋಂಕು ಕ್ಷಿಪ್ರವಾಗಿ ಹರಡುತ್ತಿದೆ

*ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂತರ ಕಾಯ್ದುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ;
–ಅಂತರ ಕಾಯ್ದುಕೊಳ್ಳುವಂತಹ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಒಬ್ಬ ಸೋಂಕಿತನಿಂದ ಸರಾಸರಿ ಮೂರು ವ್ಯಕ್ತಿಗಳಿಗೆ ಸೋಂಕು ಹರಡಿದೆ. ಅದೇ ಅಂತರ ಕಾಯ್ದುಕೊಂಡ ಬಳಿಕ ಒಬ್ಬ ವ್ಯಕ್ತಿಯಿಂದ ಹೆಚ್ಚೆಂದರೆ ಇನ್ನೊಬ್ಬ ವ್ಯಕ್ತಿಗೆ ಮಾತ್ರ ಸೋಂಕು ವ್ಯಾಪಿಸಿದೆ

*ಎಲ್ಲ ನಿರ್ಬಂಧಗಳನ್ನೂ ತೆಗೆದುಹಾಕಿ. ಜನ ಗುಂಪಿನಲ್ಲಿ ಇದ್ದುಕೊಂಡು ನೈಸರ್ಗಿಕವಾಗಿಯೇ ಸೋಂಕು ಪ್ರತಿರೋಧಕ ಶಕ್ತಿ ಪಡೆಯಲಿ; –ಪ್ರತಿರೋಧಕ ಶಕ್ತಿ ಇಲ್ಲದಿರುವ ಕಾರಣವೇ ಸೋಂಕುಪೀಡಿತರು ಅಷ್ಟೊಂದು ಪ್ರಮಾಣದಲ್ಲಿ ಸಾವನ್ನಪ್ಪುತ್ತಿದ್ದಾರೆ. ಹಾಗೊಂದು ವೇಳೆ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಿದರೆ ಆಸ್ಪತ್ರೆಗಳು ಕಿಕ್ಕಿರಿದು ತುಂಬಲಿದ್ದು, ಸಾವು–ನೋವುಗಳು ಭಾರಿ ಪ್ರಮಾಣದಲ್ಲಿ ಸಂಭವಿಸಲಿವೆ

ಶಾಲೆಗಳ ಸ್ಥಿತಿ ಹೇಗಿರಲಿದೆ?

ಕೊರೊನೋತ್ತರ ಅವಧಿಯ ಶಾಲೆಗಳ ಚಿತ್ರಣ ಸಂಪೂರ್ಣ ಬದಲಾಗಲಿದ್ದು, ಅಂತರ ಕಾಯ್ದುಕೊಂಡೇ ಶಿಕ್ಷಣ ಪಡೆಯುವುದು ಅನಿವಾರ್ಯವಾಗಲಿದೆ ಎನ್ನುವುದು ಆರೋಗ್ಯ ತಜ್ಞರ ಅಭಿಮತ. ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ಕಿಕ್ಕಿರಿದು ತುಂಬಿರುತ್ತಿದ್ದ ತರಗತಿಗಳ ಸ್ಥಿತಿ ಇನ್ನುಮುಂದೆ ಬದಲಾಗಲಿದೆ. ಏಕೆಂದರೆ, ಅಂತರ ಕಾಯ್ದುಕೊಳ್ಳುವಂತೆ ಮಕ್ಕಳಿಗೆ ಆಸನದ ವ್ಯವಸ್ಥೆ ಮಾಡಬೇಕಾಗುತ್ತದೆ. ಗ್ರಂಥಾಲಯ, ಪ್ರಯೋಗಾಲಯ, ಕ್ಯಾಂಟೀನ್‌ನ ನಿಯಮಗಳು ಸಹ ಬದಲಾಗಲಿವೆ. ಹಾಸ್ಟೆಲ್‌ಗಳ ಸ್ವರೂಪವೂ ಬದಲಾಗಲಿದ್ದು, ಪಾಲಕರ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶಾಲೆಗಳ ಪುನರಾರಂಭ ಮಾಡುವಾಗ ಸಮುದಾಯದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು ಎನ್ನುವುದು ವಿಶ್ವಸಂಸ್ಥೆಯು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ನೀಡಿರುವ ಸಲಹೆಯಾಗಿದೆ. ಪ್ರತಿ ತರಗತಿಯನ್ನು ಎರಡು ತಂಡಗಳನ್ನಾಗಿ ಮಾಡಿ, ಪಾಳಿಯ ಪ್ರಕಾರ, ಒಂದು ತಂಡಕ್ಕೆ ತರಗತಿಯಲ್ಲಿ ಪಾಠ ಮಾಡಿದರೆ, ಮತ್ತೊಂದು ತಂಡಕ್ಕೆ ಆನ್‌ಲೈನ್‌ ಮೂಲಕ ಮನೆಯಲ್ಲೇ ಪಾಠದ ವ್ಯವಸ್ಥೆಮಾಡುವ ವ್ಯವಸ್ಥೆ ಬಂದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT