ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸುರಕ್ಷಿತ ಕಾರುಗಳಿಗಾಗಿ ಭಾರತ್‌–ಎನ್‌ಸಿಎಪಿ ‘ಕ್ರ್ಯಾಷ್‌ ಟೆಸ್ಟ್’

Last Updated 29 ಜೂನ್ 2022, 20:41 IST
ಅಕ್ಷರ ಗಾತ್ರ

ಭಾರತದಲ್ಲಿ ಮಾರಾಟವಾಗುವ ಕಾರುಗಳನ್ನು ಕಡ್ಡಾಯವಾಗಿ ಕ್ರ್ಯಾಷ್‌ ಟೆಸ್ಟ್‌ಗೆ ಒಳಪಡಿಸುವ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ‘ಭಾರತ್–ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ–ಬಿಎನ್‌ಸಿಎಪಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ’. ಈ ಅಧಿಸೂಚನೆಗೆ ಸಾರ್ವಜನಿಕರ ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ.

ಬಿ–ಎನ್‌ಸಿಎಪಿ ಜಾರಿಗೆ ಬಂದರೆ, ದೇಶದಲ್ಲಿ ಮಾರಾಟವಾಗುವ ಕಾರುಗಳನ್ನು ಕ್ರ್ಯಾಷ್‌ ಟೆಸ್ಟ್‌ಗೆ ಒಳಪಡಿಸಬೇಕಾಗುತ್ತದೆ. ಕ್ರ್ಯಾಷ್‌ ಟೆಸ್ಟ್‌ನಲ್ಲಿ ಅವುಗಳು ಪಡೆದ ರೇಟಿಂಗ್‌ ಅನ್ನು ಪ್ರದರ್ಶಿಸುವುದು ಕಡ್ಡಾಯವಾಗಲಿದೆ. ಜಗತ್ತಿನ ಹಲವೆಡೆ ಈಗಾಗಲೇ ಜಾರಿಯಲ್ಲಿರುವ ಗ್ಲೋಬಲ್‌ ಎನ್‌ಸಿಎಪಿ, ಯೂರೊ ಎನ್‌ಸಿಎಪಿ ಮತ್ತು ಆಸಿಯಾನ್‌ ಎನ್‌ಸಿಎಪಿಗಳಿಗಿಂತ ಭಾರತ್‌–ಎನ್‌ಸಿಎಪಿಯಲ್ಲಿ ಕೆಲವು ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಅದರೆ, ಕೆಲವು ಮಹತ್ವದ ನಿಯಮಗಳನ್ನು ಕೈಬಿಡಲಾಗಿದೆ. 2023ರ ಏಪ್ರಿಲ್‌ 1ರಿಂದ ಭಾರತ್ ಎನ್‌ಸಿಎಪಿಯನ್ನು ಜಾರಿಗೆ ತರಲು ಸಚಿವಾಲಯವು ಸಿದ್ಧತೆ ನಡೆಸಿದೆ.

ದೇಶದಲ್ಲಿ ಮಾರಾಟವಾಗುವ ಜನಪ್ರಿಯ ಕಾರುಗಳಿಗೆ ಕ್ರ್ಯಾಷ್‌ ಟೆಸ್ಟ್‌ ಅನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ. ಕ್ರ್ಯಾಷ್‌ ಟೆಸ್ಟ್‌ನಲ್ಲಿ ಕಾರುಗಳು ಪಡೆಯುವ ರೇಟಿಂಗ್‌ ಅನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲು ಸಿದ್ಧತೆ ನಡೆದಿದೆ. ಆದರೆ ಯೂರೊ ಎನ್‌ಸಿಎಪಿ, ಆಸ್ಟ್ರೇಲಿಯಾ ಎನ್‌ಸಿಎಪಿಗಳಲ್ಲಿ ಇರುವಂತೆ ಕಾರುಗಳಿಗೆ ಕನಿಷ್ಠ ರೇಟಿಂಗ್‌ ಅನ್ನು ಕಡ್ಡಾಯಗೊಳಿಸುವ ಉಲ್ಲೇಖ ಭಾರತ್ –ಎನ್‌ಸಿಎಪಿ ಕರಡು ಅಧಿಸೂಚನೆಯಲ್ಲಿ ಇಲ್ಲ.

ಹೀಗಾಗಿ ಗ್ರಾಹಕರು ತಾವು ತೆಗೆದುಕೊಳ್ಳುವ ಕಾರುಗಳು ಎಷ್ಟು ಸುರಕ್ಷಿತ ಎಂದು ತಿಳಿದುಕೊಳ್ಳಬಹುದೇ ಹೊರತು, ಸುರಕ್ಷಿತವಲ್ಲದ ಕಾರುಗಳ ಮಾರಾಟವನ್ನು ಸರ್ಕಾರವು ನಿಷೇಧಿಸುತ್ತಿಲ್ಲ. ಸುರಕ್ಷಿತ ಕಾರುಗಳನ್ನು ಕೊಳ್ಳಬೇಕೇ ಅಥವಾ ಕಡಿಮೆ ರೇಟಿಂಗ್‌ ಇರುವ ಕಾರನ್ನು ಖರೀದಿಸಬೇಕೇ ಎಂಬುದು ಗ್ರಾಹಕರಿಗೆ ಬಿಟ್ಟ ಆಯ್ಕೆಯಾಗುತ್ತದೆ.

ಯಾವುದಕ್ಕೆಲ್ಲಾ ಅನ್ವಯ

lಭಾರತದಲ್ಲಿ ಮಾರಾಟವಾಗುವ ಎಲ್ಲಾ ಪ್ರಯಾಣಿಕರ ಕಾರುಗಳಿಗೆ ಭಾರತ್–ಎನ್‌ಸಿಎಪಿ ಕ್ರ್ಯಾಷ್‌ ಟೆಸ್ಟ್‌ ಅನ್ವಯವಾಗುತ್ತದೆ. ಆದರೆ, ಇದಕ್ಕಾಗಿ ಕೆಲವು ಷರತ್ತುಗಳನ್ನು ಕರಡು ಅಧಿಸೂಚನೆಯಲ್ಲಿ ನಿಗದಿ ಮಾಡಲಾಗಿದೆ

lಗರಿಷ್ಠ ಎಂಟು ಸೀಟುಗಳು ಮತ್ತು ಅದಕ್ಕಿಂತ ಕಡಿಮೆ ಸೀಟಿನ ಸಾಮರ್ಥ್ಯದ ಕಾರುಗಳಿಗೆ ಮಾತ್ರ ಕಡ್ಡಾಯ ಕ್ರ್ಯಾಷ್‌ ಟೆಸ್ಟ್‌ ಅನ್ವಯವಾಗುತ್ತದೆ

lಒಟ್ಟು ತೂಕ 3.5 ಟನ್‌ಗಿಂತ ಕಡಿಮೆ ಇರುವ ಕಾರುಗಳನ್ನು ಮಾತ್ರ ಬಿ–ಎನ್‌ಸಿಎಪಿ ಅಡಿ ಕ್ರ್ಯಾಷ್‌ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ

lಕ್ಯಾಲೆಂಡರ್‌ ವರ್ಷವೊಂದರಲ್ಲಿ 30,000ಕ್ಕಿಂತಲೂ ಹೆಚ್ಚು ಘಟಕಗಳು ಮಾರಾಟವಾಗುವ ಮಾದರಿಯ ಕಾರುಗಳು ಕಡ್ಡಾಯವಾಗಿ ಕ್ರ್ಯಾಷ್‌ ಟೆಸ್ಟ್‌ಗೆ ಹೋಗಬೇಕಾಗುತ್ತದೆ. ಕನಿಷ್ಠ ಇಷ್ಟು ಸಂಖ್ಯೆಯಲ್ಲಿ ಮಾರಾಟವಾಗುವ ಕಾರುಗಳನ್ನು ‘ಜನಪ್ರಿಯ ಮಾಡೆಲ್‌’ ಎಂದು ಪರಿಗಣಿಸಲಾಗುತ್ತದೆ

lಈ ಯಾವ ಷರತ್ತಿನ ಅಡಿ ಬರದೇ ಇರುವ ಕಾರುಗಳನ್ನು ತಯಾರಕ ಕಂಪನಿಯು ಸ್ವಯಂ ಪ್ರೇರಿತವಾಗಿ ಕ್ರ್ಯಾಷ್‌ ಟೆಸ್ಟ್‌ಗೆ ನೀಡಬಹುದು

lಈ ಷರತ್ತುಗಳು ಅನ್ವಯವಾಗದೇ ಇರುವ ಕಾರುಗಳನ್ನೂ ಕ್ರ್ಯಾಷ್‌ ಟೆಸ್ಟ್‌ಗೆ ಒಳಪಡಿಸುವಂತೆ,ಸಾರ್ವಜನಿಕ
ಹಿತಾಸಕ್ತಿಯ ಅಡಿಯಲ್ಲಿ ಸರ್ಕಾರವೇಸೂಚನೆ ನೀಡಬಹುದು

ಪರೀಕ್ಷೆಗೆ ಕಾರುಗಳ ಆಯ್ಕೆ ಹೇಗೆ?

ಭಾರತದಲ್ಲಿ ಮಾರಾಟವಾಗುವ, ಬಿ–ಎನ್‌ಸಿಎಪಿ ಷರತ್ತುಗಳಿಗೆ ಒಳಪಡುವ ಜನಪ್ರಿಯ ಮಾದರಿಯ ಕಾರುಗಳನ್ನು ಕ್ರ್ಯಾಷ್‌ ಟೆಸ್ಟ್‌ಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೀಗೆ ಕ್ರ್ಯಾಷ್‌ ಟೆಸ್ಟ್‌ಗೆ ಆಯ್ಕೆ ಮಾಡಿಕೊಳ್ಳುವಕಾರುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೂ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗಿದೆ. ಕರಡು ಅಧಿಸೂಚನೆಯಲ್ಲಿ ಈ ನಿಯಮಗಳನ್ನು ವಿವರಿಸಲಾಗಿದೆ.

l‘ಜನಪ್ರಿಯ ಮಾದರಿ’ಯ ಬೇಸ್‌ ಅವತರಣಿಕೆಯ ಕಾರುಗಳನ್ನಷ್ಟೇಕ್ರ್ಯಾಷ್‌ ಟೆಸ್ಟ್‌ಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬೇಸ್‌ ಅವತರಣಿಕೆಯಲ್ಲಿ ಕಡ್ಡಾಯ ಸುರಕ್ಷತಾ ಸವಲತ್ತುಗಳಾದ ಚಾಲಕ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌, ಆ್ಯಂಟಿ ಲಾಕಿಂಗ್‌ ಬ್ರೇಕಿಂಗ್‌ ಸಿಸ್ಟಂ (ಎಬಿಎಸ್‌), ಎಲೆಕ್ಟ್ರಿಕಲ್ ಬ್ರೇಕ್‌ ಡಿಸ್ಟ್ರಿಬ್ಯೂಷನ್ (ಇಬಿಡಿ), ಮೂರು ಪಾಯಿಂಟ್‌ಗಳ ಸೀಟ್‌ಬೆಲ್ಟ್‌... ಇಂತಹ ಸವಲತ್ತುಗಳು ಇರಬೇಕು

lಮಾದರಿ ಮತ್ತು ಅವತರಣಿಕೆಯನ್ನು ಗುರುತಿಸಿದ ನಂತರ ಕಂಪನಿಯ ತಯಾರಿಕಾ/ಜೋಡಣಾ ಘಟಕದಿಂದ ನೇರವಾಗಿ ಕಾರನ್ನು ಕ್ರಾಶ್‌ ಟೆಸ್ಟ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ. ಇದಕ್ಕಾಗಿ ತಯಾರಿಕಾ ಕಂಪನಿಯು 50 ಕಾರುಗಳನ್ನು ಒದಗಿಸಬೇಕು. ಅದರಲ್ಲಿ ಒಂದು ಕಾರನ್ನು ಪರೀಕ್ಷಾ ಸಂಸ್ಥೆಯು ಆಯ್ಕೆ ಮಾಡಿ ತೆಗೆದುಕೊಂಡು ಹೋಗುತ್ತದೆ

lಗ್ರಾಹಕರಿಗೆ ಮಾರಾಟ ಮಾಡುವ ಅವತರಣಿಕೆ ಮತ್ತುಕ್ರ್ಯಾಷ್‌ ಟೆಸ್ಟ್‌ಗೆ ಒಳಪಡಿಸುವ ಅವತರಣಿಕೆಯ ಮಧ್ಯೆ ಯಾವುದೇ ವ್ಯತ್ಯಾಸ ಇರುವಂತಿಲ್ಲ.ಕ್ರ್ಯಾಷ್‌ ಟೆಸ್ಟ್‌ಗೆಂದು ಮಾತ್ರ ಕಂಪನಿಗಳು ತಮ್ಮ ಕಾರುಗಳನ್ನು ಹೆಚ್ಚು ಸದೃಢಪಡಿಸುವುದು ನಿಯಮದ ಉಲ್ಲಂಘನೆಯಾಗುತ್ತದೆ

lಬೇಸ್‌ ಅವತರಣಿಕೆಗಳನ್ನು ಹೊರತುಪಡಿಸಿ, ಬೇರೆ ಅವತರಣಿಕೆಗಳನ್ನೂ ಕಂಪನಿಗಳು ಸ್ವಯಂ ಪ್ರೇರಿತವಾಗಿಕ್ರ್ಯಾಷ್‌ ಟೆಸ್ಟ್‌ಗೆ ನೀಡಬಹದು

lಒಂದೇ ಪ್ಲಾಟ್‌ಫಾರಂ, ಎಂಜಿನ್‌–ಗಿಯರ್‌ಬಾಕ್ಸ್ ಮತ್ತು ಸುರಕ್ಷತಾ ಸವಲತ್ತುಗಳು ಇರುವ ಆದರೆ ಬೇರೆ ಬ್ರ್ಯಾಂಡ್‌/ಬ್ಯಾಡ್ಜ್‌ನಲ್ಲಿ ಮಾರಾಟವಾಗುವ ಕಾರುಗಳನ್ನು ‘ಕಾರ್ಪೊರೇಟ್‌ ಟ್ವಿನ್ಸ್‌’ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಒಂದು ಬ್ರ್ಯಾಂಡ್‌ನ ಕಾರುಕ್ರ್ಯಾಷ್‌ ಟೆಸ್ಟ್‌ಗೆ ಒಳಪಟ್ಟರೆ ಸಾಕು, ಅದರ ರೇಟಿಂಗ್‌, ಆ ಕಾರಿನ ಅವಳಿ ಬ್ರ್ಯಾಂಡ್‌ಗೂ ಅನ್ವಯವಾಗುತ್ತದೆ. (ಉದಾಹರಣೆಗೆ ಮಾರುತಿ ಸುಜುಕಿಯ ಬಲೆನೊ ಮತ್ತು ಟೊಯೋಟಾ ಗ್ಲಾನ್ಝಾ)

ಪಾದಚಾರಿ ಸುರಕ್ಷತೆಗೆ ಕೊಕ್‌

ಯೂರೊ ಎನ್‌ಸಿಎಪಿಯಲ್ಲಿ ಕಾರುಗಳ ಕ್ರ್ಯಾಷ್‌ ಟೆಸ್ಟ್‌ ನಡೆಸುವ ವೇಳೆ, ಪಾದಚಾರಿಗಳ ಸುರಕ್ಷತೆಯನ್ನೂ ಒಂದು ಪ್ರಮುಖ ಮಾನದಂಡವಾಗಿ ಬಳಸಲಾಗುತ್ತದೆ. ಆದರೆ, ಕೇಂದ್ರ ಸಾರಿಗೆ ಸಚಿವಾಲಯವು ರೂಪಿಸಿರುವ ಭಾರತ್–ಎನ್‌ಸಿಎಪಿ ಕರಡು ಅಧಿಸೂಚನೆಯಲ್ಲಿ ಪಾದಚಾರಿ ಸುರಕ್ಷತೆ (ಪೆಡಸ್ಟ್ರಿಯನ್‌ ಸೇಫ್ಟಿ ಟೆಸ್ಟ್‌) ಪರೀಕ್ಷೆಯನ್ನು ಕೈಬಿಡಲಾಗಿದೆ.

ದೇಶದಲ್ಲಿ ಪ್ರತಿ ವರ್ಷ ಅಪಘಾತಗಳಿಂದ ಸಂಭವಿಸುವ ಸಾವುಗಳಲ್ಲಿ ಪಾದಚಾರಿಗಳದ್ದು ದೊಡ್ಡ ಸಂಖ್ಯೆ. 2020ರಲ್ಲಿ ದೇಶದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 1.32 ಲಕ್ಷ ಜನರು ಮೃತಪಟ್ಟಿದ್ದಾರೆ. ಇದರಲ್ಲಿ 23,483 ಜನರು ಪಾದಚಾರಿಗಳು. ಇದು ಒಟ್ಟು ಅಪಘಾತದ ಸಾವುಗಳ ಶೇ 17ರಷ್ಟಾಗುತ್ತದೆ. ಆದರೆ, ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡುವ ನಿಯಮಗಳನ್ನೇ ಭಾರತ್–ಎನ್‌ಸಿಎಪಿಯಲ್ಲಿ ಕೈಬಿಡಲಾಗಿದೆ.

ಪಾದಚಾರಿಗೆ ಕಾರು ಡಿಕ್ಕಿಯಾದರೆ, ಅವರ ಕಾಲಿಗೆ ಹೆಚ್ಚು ಹಾನಿಯಾಗುವುದನ್ನು ತಡೆಯವಂತೆ ಬಂಪರ್‌ ವಿನ್ಯಾಸ ಮಾಡಿದ್ದರೆ ಕ್ರ್ಯಾಷ್‌ ಟೆಸ್ಟ್‌ನಲ್ಲಿ ಕಾರುಗಳಿಗೆ ಹೆಚ್ಚು ರೇಟಿಂಗ್‌ ದೊರೆಯುತ್ತದೆ. ಜತೆಗೆ, ಪಾದಚಾರಿಗೆ ಜೋರಾಗಿ ಅಪ್ಪಳಿಸಿದಾಗ ಅವರು ಕಾರಿನ ಬಾನೆಟ್‌ ಮೇಲೆ ಬೀಳುವಂತೆ ಬಂಪರ್ ಮತ್ತು ಬಾನೆಟ್‌ ವಿನ್ಯಾಸ ಮಾಡಿರಬೇಕು. ಆಗ ಹೆಚ್ಚು ಅಂಕಗಳು ದೊರೆಯುತ್ತವೆ. ಇಂತಹ ಅಪಘಾತದ ಸಂದರ್ಭದಲ್ಲಿ ಪಾದಚಾರಿ ಕಾರಿನ ಕೆಳಭಾಗಕ್ಕೆ ಸಿಲುಕಿದರೆ, ಕಾರಿಗೆ ದೊರೆಯುವ ಕ್ರ್ಯಾಷ್‌ ರೇಟಿಂಗ್‌ ಕಡಿಮೆಯಾಗುತ್ತದೆ. ಈ ನಿಯಮಗಳನ್ನು ಭಾರತ್–ಎನ್‌ಸಿಎಪಿಯಲ್ಲಿ ಕೈಬಿಡುವ ಮೂಲಕ ಪಾದಚಾರಿಗಳ ಸುರಕ್ಷತೆಯನ್ನು ಕಡೆಗಣಿಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಎನ್‌ಸಿಎಪಿ ಪರಿಕಲ್ಪನೆ

ಕಾರುಗಳ ಸುರಕ್ಷತೆ ವಿಚಾರವು ಆದ್ಯತೆ ಪಡೆದ ಮೇಲೆ ಎನ್‌ಸಿಎಪಿ (ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಪರಿಕಲ್ಪನೆ ಮಹತ್ವ ಪಡೆದುಕೊಂಡಿತು. ಕಾರುಗಳ ಸುರಕ್ಷತೆಯನ್ನು ಪರೀಕ್ಷಿಸುವ ಮತ್ತು ಸುರಕ್ಷತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಯತ್ನ 1980ರಲ್ಲಿ ಯೂರೋಪ್‌ನಲ್ಲಿ ಆಯಿತು.ನಂತರದ ದಿನಗಳಲ್ಲಿ ಕಾರುಗಳ ಸುರಕ್ಷತೆ ತಿಳಿಸಲು ಕ್ರ್ಯಾಷ್ ಟೆಸ್ಟ್ ಮಾರ್ಗವನ್ನು ಕಂಡುಕೊಳ್ಳಲಾಯಿತು. 80ರ ದಶಕದಲ್ಲಿ ಆರಂಭವಾದ ಈ ಯತ್ನಕ್ಕೆ ಯೂರೋ–ಎನ್‌ಸಿಎಪಿಯ ರೂಪ ದೊರೆತಿದ್ದು 1998ರಲ್ಲಿ.ವಿವಿಧ ದೇಶಗಳಲ್ಲೂ ಇಂತಹ ಯತ್ನಗಳು ಆರಂಭವಾದವು. ಆಸ್ಟ್ರೇಲಿಯನ್ ಎನ್‌ಸಿಎಪಿ, ಯೂರೊಎನ್‌ಸಿಎಪಿ, ಜಪಾನ್ಎನ್‌ಸಿಎಪಿ, ಆಸಿಯಾನ್ಎನ್‌ಸಿಎಪಿ, ಚೀನಾಎನ್‌ಸಿಎಪಿ, ಕೊರಿಯನ್ಎನ್‌ಸಿಎಪಿ ಮತ್ತು ಲ್ಯಾಟಿನ್ ಎನ್‌ಸಿಎಪಿ ಈಗ ಅಸ್ತಿತ್ವದಲ್ಲಿವೆ. ಭಾರತದಲ್ಲಿ ಇದೀಗ ಪ್ರತ್ಯೇಕ ಎನ್‌ಸಿಎಪಿ ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ.

ಗ್ಲೋಬಲ್ ಎನ್‌ಸಿಎಪಿ:ಬ್ರಿಟನ್‌ನಲ್ಲಿ ‘ಗ್ಲೋಬಲ್ಎನ್‌ಸಿಎಪಿ’ ಎಂಬ ಸ್ವತಂತ್ರ ಸಂಸ್ಥೆ 2011ರಲ್ಲಿ ಅಸ್ತಿತ್ವಕ್ಕೆ ಬಂದಿತು.ವಿವಿಧ ದೇಶಗಳಎನ್‌ಸಿಎಪಿಗಳ ಜೊತೆ ಸಹಕಾರ ಹಾಗೂ ಸಮನ್ವಯ ಸಾಧಿಸುವ ಉದ್ದೇಶದೊಂದಿಗೆ ಗ್ಲೋಬಲ್ ಎನ್‌ಸಿಎಪಿ ಜನ್ಮತಳೆಯಿತು. ವಾಹನಗಳ ಕ್ರ್ಯಾಷ್ ಟೆಸ್ಟ್ ಹಾಗೂ ಅದರ ಫಲಿತಾಂಶವನ್ನು ಕಾರು ಮಾರುಕಟ್ಟೆಗೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶ. ‘ಸೇಫರ್ ಕಾರ್ಸ್ ಫಾರ್ ಇಂಡಿಯಾ’, ಹಾಗೂ ‘ಸೇಫರ್ ಕಾರ್ಸ್ ಫಾರ್ ಆಫ್ರಿಕಾ’ ಎಂಬ ಪ್ರಮುಖ ಅಭಿಯಾನಗಳನ್ನು ಗ್ಲೋಬಲ್ ಎನ್‌ಸಿಎಪಿ ಹಮ್ಮಿಕೊಂಡಿದೆ.

ಪ್ರತ್ಯೇಕ ಎನ್‌ಸಿಎಪಿ ಹೊಂದಿಲ್ಲದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಭಾರತ, ಆಫ್ರಿಕಾದಂತಹ ದೇಶಗಳಲ್ಲಿ ಗ್ಲೋಬಲ್ ಎನ್‌ಸಿಎಪಿ ಅಡಿ ಕ್ರ್ಯಾಷ್ ಟೆಸ್ಟ್ ನಡೆಸಲಾಗುತ್ತದೆ. ಗೊತ್ತುಪಡಿಸಿದ ಪ್ರತೀ ಮಾನದಂಡಗಳಿಗೂ ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಗ್ರಾಹಕರನ್ನು ಸೆಳೆಯಲು ಭಾರತದ ಕಾರು ತಯಾರಿಕಾ ಕಂಪನಿಗಳು ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದವು. ಆದರೆ, ಕಾರು ಬಳಕೆದಾರರ ಸುರಕ್ಷತೆಗೆ ಒತ್ತು ನೀಡಲಾಗಿದ್ದು, ಏರ್‌ಬ್ಯಾಗ್, ಎಬಿಸಿ ಮೊದಲಾದ ಸುರಕ್ಷತಾ ಸವಲತ್ತುಗಳನ್ನು ಕಡ್ಡಾಯ ಮಾಡಲಾಗಿದೆ.

ಯೂರೊ ಎನ್‌ಸಿಎಪಿ:ಗ್ಲೋಬಲ್ ಎನ್‌ಸಿಎಪಿಗೆ ಹೋಲಿಸಿದರೆ, ಯೂರೊ ಎನ್‌ಸಿಎಪಿ ಉತ್ಕೃಷ್ಟ ದರ್ಜೆಯ ಕ್ರ್ಯಾಷ್ ಟೆಸ್ಟ್‌ಗೆ ಹೆಸರಾಗಿದೆ. ಇಲ್ಲಿ ನಾಲ್ಕು ರೀತಿಯ ಕ್ರ್ಯಾಷ್ ಟೆಸ್ಟ್‌ಗಳನ್ನು ನಡೆಸಲಾಗುತ್ತದೆ. ಪಾದಚಾರಿಗಳ ಸುರಕ್ಷತಾ ಪರೀಕ್ಷೆಗಳನ್ನು ನಡೆಸುವುದು ಇಲ್ಲಿಯ ವಿಶೇಷತೆ. ಗ್ಲೋಬಲ್‌ ಎನ್‌ಸಿಎಪಿಯಲ್ಲಿ ಗರಿಷ್ಠ ರೇಟಿಂಗ್ ಪಡೆಯುವ ಕಾರೊಂದು ಯೂರೊ ಎನ್‌ಸಿಪಿಯಲ್ಲಿ ಅಷ್ಟೇ ರೇಟಿಂಗ್ ಪಡೆಯದಿರಬಹುದು. ಅಂದರೆ, ಎರಡೂ ಎನ್‌ಸಿಪಿಗಳ ಮಾನದಂಡಗಳಲ್ಲಿ ವ್ಯತ್ಯಾಸವಿರುತ್ತದೆ.

ಆಸಿಯಾನ್ ಎನ್‌ಸಿಎಪಿ:ಮಲೇಷ್ಯಾದ ರಸ್ತೆ ಸುರಕ್ಷತೆ ಸಂಶೋಧನಾ ಸಂಸ್ಥೆ ಮತ್ತು ಗ್ಲೋಬಲ್ ಎನ್‌ಸಿಎಪಿ ಸಹಯೋಗಲ್ಲಿ 2011ರಲ್ಲಿ ಆಸಿಯಾನ್ ಎನ್‌ಸಿಎಪಿ ಅಸ್ತಿತ್ವಕ್ಕೆ ಬಂದಿತು. ಮಲೇಷ್ಯಾ, ಸಿಂಗಪುರ, ಥಾಯ್ಲೆಂಡ್ ಹಾಗೂ ಫಿಲಿಪ್ಪೀನ್ಸ್‌ನ ಆಟೊಮೊಬೈಲ್ ಸಂಘಟನೆಗಳು ಬೆಂಬಲಿಸಿವೆ. ಈಗ ಎರಡು ರೀತಿಯ ಕ್ರ್ಯಾಷ್ ಟೆಸ್ಟ್‌ಗಳನ್ನು ನಡೆಸಲಾಗುತ್ತಿದೆ.

.....

ಆಧಾರ: ‘ಭಾರತ್–ನ್ಯೂ ಕಾರ್‌ ಅಸೆಸ್‌ಮೆಂಟ್ ಪ್ರೋಗ್ರಾಂ’ ಕರಡು ಅಧಿಸೂಚನೆ, ಪಿಟಿಐ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವೀಟ್‌ಗಳು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊನ ‘ಭಾರತದಲ್ಲಿ ಅಪಘಾತ–2020’ ವರದಿ, ಚಿತ್ರ ಕೃಪೆ: ಗ್ಲೋಬಲ್ ಮತ್ತು ಯೂರೊ ಎನ್‌ಸಿಎಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT