ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಹೆದ್ದಾರಿ ಟೋಲ್‌ ವಿಧಿಸುತ್ತಿರುವುದೇಕೆ?

Last Updated 15 ಮಾರ್ಚ್ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಉದ್ಘಾಟನೆಯ ನಂತರ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ ಸಂಗ್ರಹ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಬಳಕೆದಾರರ ಶುಲ್ಕವನ್ನು ಯಾವ ಮಾನದಂಡದಲ್ಲಿ ನಿಗದಿ ಮಾಡಲಾಗುತ್ತದೆ ಮತ್ತು ಜನರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಹೆದ್ದಾರಿಗೆ ಮತ್ತೆ ಶುಲ್ಕವನ್ನೇಕೆ ಪಾವತಿ ಮಾಡಬೇಕು ಎಂಬ ಚರ್ಚೆ ಆರಂಭವಾಗಿದೆ. ಹೆದ್ದಾರಿ ಬಳಕೆದಾರರ ಶುಲ್ಕಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರಿದಿದೆ. ಜತೆಗೆ ರಸ್ತೆ ಬಳಕೆದಾರರು ತೆರಿಗೆಯ ಮೇಲೆ ತೆರಿಗೆ ಮತ್ತು ಶುಲ್ಕ ವಿಧಿಸುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.

ತೆರಿಗೆಯ ಮೇಲೆ ತೆರಿಗೆ ಮತ್ತು ಟೋಲ್‌
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸಿದ ಅಥವಾ ಪ್ರಾಧಿಕಾರದ ಗುತ್ತಿಗೆಯ ಆಧಾರದಲ್ಲಿ ಯಾವುದೇ ಖಾಸಗಿ ಕಂಪನಿ ನಿರ್ಮಿಸಿದ ನಾಲ್ಕು ಮತ್ತು ಅದಕ್ಕಿಂತಲೂ ಹೆಚ್ಚಿನ ಪಥದ ರಾಷ್ಟ್ರೀಯ ಹೆದ್ದಾರಿಗಳಿಗೆ ಮತ್ತು ಎಕ್ಸ್‌ಪ್ರೆಸ್‌ ಹೆದ್ದಾರಿಗಳಿಗೆ ಬಳಕೆದಾರರ ಶುಲ್ಕ ವಿಧಿಸಲು ‘ರಾಷ್ಟ್ರೀಯ ಹೆದ್ದಾರಿ ಶುಲ್ಕ (ನಿಗದಿ ಮತ್ತು ಸಂಗ್ರಹ) ನಿಯಮಗಳು–2008’ ಅವಕಾಶ ಮಾಡಿಕೊಡುತ್ತದೆ. ಸರ್ಕಾರವೇ ಸಂಪೂರ್ಣ ಬಂಡವಾಳ ಹೂಡಿ ಹೆದ್ದಾರಿ ನಿರ್ಮಿಸಿದ್ದರೂ, ಖಾಸಗಿ ಕಂಪನಿಗಳು ಬಂಡವಾಳ ಹೂಡಿ, ಹೆದ್ದಾರಿ ನಿರ್ಮಿಸಿದ್ದರೂ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಬಹುದು.

ಜನರ ತೆರಿಗೆ ಹಣದಲ್ಲಿ ಸರ್ಕಾರವೇ ನಿರ್ಮಿಸಿದ ಹೆದ್ದಾರಿಗೆ ಬಳಕೆದಾರರ ಶುಲ್ಕ ವಿಧಿಸುವುದನ್ನು ಪ್ರಶ್ನಿಸಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಹಲವು ಪಿಐಎಲ್‌ಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಹಲವು ಅರ್ಜಿಗಳು ಈಗಾಗಲೇ ವಜಾ ಆಗಿವೆ. ಆದರೆ, ವಾಹನಗಳ ಮೇಲೆ ಹಲವು ಹಂತದಲ್ಲಿ ತೆರಿಗೆ ಮತ್ತು ಶುಲ್ಕ ವಿಧಿಸಲಾಗುತ್ತಿದೆ. ಇದು ದರೋಡೆಯೇ ಸರಿ ಎಂದು ಹಲವು ಅರ್ಜಿಗಳಲ್ಲಿ ವಾದ ಮಂಡಿಸಲಾಗಿತ್ತು.

ದೇಶದಲ್ಲಿ ತಯಾರಾಗುವ ಪ್ರತಿ ವಾಹನದ ಎಕ್ಸ್‌ಷೋರೂಂ ಬೆಲೆಯಲ್ಲಿ ಜಿಎಸ್‌ಟಿ ಸೇರಿರುತ್ತದೆ. ಕಾರುಗಳ ಎಕ್ಸ್‌ಷೋರೂಂ ಬೆಲೆಯಲ್ಲಿ ಜಿಎಸ್‌ಟಿ ಮತ್ತು ಸೆಸ್‌ನ ಪ್ರಮಾಣ ಶೇ 28ರಿಂದ ಶೇ 48ರವರೆಗೂ ಇದೆ. ಕೆಲವು ಸ್ವರೂಪದ ವಾಹನಗಳ ಮೇಲೆ ಇಂತಹ ತೆರಿಗೆಯ ಪ್ರಮಾಣ ಶೇ 53ರವರೆಗೂ ಇದೆ. ಈ ತೆರಿಗೆಯನ್ನು ಒಳಗೊಂಡ ಎಕ್ಸ್‌ಷೋರೂಂ ಬೆಲೆಯ ಮೇಲೆ ಮತ್ತೆ ರಸ್ತೆ ತೆರಿಗೆ (ರೋಡ್‌ಟ್ಯಾಕ್ಸ್‌) ವಿಧಿಸಲಾಗುತ್ತದೆ. ಇಲ್ಲಿ ತೆರಿಗೆಯ ಮೊತ್ತದ ಮೇಲೂ ತೆರಿಗೆ ಅನ್ವಯವಾಗುತ್ತದೆ. ವಾಹನಗಳ ಮಾರಾಟ ಬೆಲೆ ಆಧರಿಸಿ, ಹಲವು ಲಕ್ಷ ರೂಗಳಷ್ಟು ರಸ್ತೆ ತೆರಿಗೆ ಕಟ್ಟಬೇಕಾಗಿದೆ. ಜತೆಗೆ ಬಳಕೆದಾರರು ಖರೀದಿಸುವ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ₹5 ಮತ್ತು ಪ್ರತಿ ಲೀಟರ್‌ ಡೀಸೆಲ್‌ ಮೇಲೆ ₹2ಗಳಷ್ಟು ‘ರಸ್ತೆ ಮೂಲಸೌಕರ್ಯ ಸೆಸ್‌’ ಪಾವತಿಸಲಾಗುತ್ತಿದೆ. ಹೀಗೆ ವಾಹನ ಖರೀದಿಸುವಾಗ ಮತ್ತು ಅದರಲ್ಲಿ ಬಳಸುವ ಇಂಧನ ಖರೀದಿಸುವಾಗ ರಸ್ತೆ ಅಭಿವೃದ್ಧಿಗೆಂದೇ ಪ್ರತ್ಯೇಕ ತೆರಿಗೆ ಮತ್ತು ಸೆಸ್‌ ಅನ್ನು ಪಾವತಿಸಲಾಗುತ್ತಿದೆ. ಇದರ ಹೊರತಾಗಿಯೂ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ನಿಲ್ಲಬೇಕು ಎಂದು ಈ ಅರ್ಜಿಗಳಲ್ಲಿ ಪ್ರತಿಪಾದಿಸಲಾಗಿತ್ತು.

ದೆಹಲಿ ಹೈಕೋರ್ಟ್‌ನಲ್ಲಿ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ಇಂತಹ ಎರಡು ಅರ್ಜಿಗಳು ವಿಚಾರಣೆ ಹಂತದಲ್ಲಿವೆ.

ಆರಂಭದಲ್ಲಿ ಕಿ.ಮೀ.ಗೆ 60 ಪೈಸೆ...
2008ರಲ್ಲಿ ಈ ನಿಯಮ ಜಾರಿಗೆ ತಂದಾಗ ‘ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀಪು/ಕಾರು/ವ್ಯಾನ್‌ಗಳಿಗೆ ಕಿ.ಮೀ.ಗೆ 60 ಪೈಸೆಯಂತೆ ಶುಲ್ಕ ವಿಧಿಸಬಹುದು. ಮತ್ತು ಪ್ರತಿ ವರ್ಷ ಇದು ಶೇ3ರ ದರದಲ್ಲಿ ಏರಿಕೆಯಾಗಬೇಕು’ ಎಂದು ವಿವರಿಸಲಾಗಿತ್ತು. ಈ ಪ್ರಕಾರ ಪ್ರತಿ ಕಿ.ಮೀ. ಹೆದ್ದಾರಿಗೆ ಈಗ ಪಾವತಿಸುವ ಶುಲ್ಕವು ಹಲವು ರೂಗಳಿಗೆ ಬಂದು ನಿಂತಿದೆ. ಜತೆಗೆ ಹೆದ್ದಾರಿಗಳಲ್ಲಿ ನಿರ್ಮಿಸಿರುವ ಸೇತುವೆಗಳು, ಅಂಡರ್‌ಪಾಸ್‌ಗಳ ವೆಚ್ಚವು ₹50 ಕೋಟಿ ಮೀರಿದ್ದರೆ, ಅವುಗಳಿಗೆ ಪ್ರತ್ಯೇಕ ದರ ಅನ್ವಯವಾಗುತ್ತದೆ. ಇವೆಲ್ಲವೂ ಸೇರಿ, ಒಂದು ಟೋಲ್‌ ಘಟಕದಿಂದ ಮತ್ತೊಂದು ಟೋಲ್‌ ಘಟಕದ ಮಧ್ಯದ ಅಂತರಕ್ಕೆ ಶುಲ್ಕ ನಿಗದಿ ಮಾಡಲಾಗುತ್ತದೆ. ಸೇತುವೆಗಳು, ಸುರಂಗಗಳು ಮತ್ತು ಅಂಡರ್‌ವಾಸ್‌ಗಳ ಸಂಖ್ಯೆಯ ಆಧಾರದಲ್ಲಿ ಪ್ರತಿ ಹೆದ್ದಾರಿಯಲ್ಲಿ ಒಂದು ಕಿ.ಮೀ.ಗೆ ವಿಧಿಸಲಾಗುವ ಶುಲ್ಕದಲ್ಲಿ ವ್ಯತ್ಯಾಸವಾಗುತ್ತದೆ.

ಶುಲ್ಕ ವಿಧಿಸುವಂತಿಲ್ಲ...
l ಹೆದ್ದಾರಿಯ ಒಟ್ಟು ಉದ್ದದ ಶೇ 75ರಷ್ಟು ಕಾಮಗಾರಿ ಪೂರ್ಣಗೊಳ್ಳದೆ ಯಾವುದೇ ಶುಲ್ಕ ವಿಧಿಸುವಂತಿಲ್ಲ

l ಹೆದ್ದಾರಿಗೆ ಸಮನಾಂತರವಾಗಿ ಸರ್ವಿಸ್‌ ರಸ್ತೆಗಳು ಮತ್ತು ಪರ್ಯಾಯ ರಸ್ತೆಗಳು ಇಲ್ಲದೇ ಇದ್ದರೆ, ಸ್ಥಳೀಯ ವಾಹನಗಳಿಗೆ ಶುಲ್ಕ ವಿಧಿಸುವಂತಿಲ್ಲ

l ಆಟೊಗಳು, ದ್ವಿಚಕ್ರವಾಹನಗಳು ಮತ್ತು ಟ್ರ್ಯಾಕ್ಟರ್‌ಗಳಿಗೆ ಶುಲ್ಕ ವಿಧಿಸುವಂತಿಲ್ಲ (ಸರ್ವಿಸ್‌ ರಸ್ತೆಗಳು ಇಲ್ಲದೇ ಇದ್ದರೆ ಮಾತ್ರ ಅನ್ವಯ)

l ಎಕ್ಸ್‌ಪ್ರೆಸ್‌ ಹೆದ್ದಾರಿಗಳ ಪ್ರವೇಶ ನಿಯಂತ್ರಣ ವ್ಯವಸ್ಥೆ ಇಲ್ಲದೇ ಇರುವಾಗ ಶುಲ್ಕ ವಿಧಿಸುವಂತಿಲ್ಲ

l ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎರಡು ಟೋಲ್‌ ಘಟಕಗಳ ಮಧ್ಯೆ, ಹೆದ್ದಾರಿಗೆ ಪ್ರವೇಶಿಸಿ–ನಿರ್ಗಮಿಸಿದರೆ ಶುಲ್ಕ ವಿಧಿಸುವಂತಿಲ್ಲ

l ಶುಲ್ಕ ಸಂಗ್ರಹ ಒಪ್ಪಂದದ ಅವಧಿ ಮುಗಿದ ನಂತರ ಶುಲ್ಕ ವಿಧಿಸುವಂತಿಲ್ಲ

l ಯಾವ ವಾಹನಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂಬ ಮಾಹಿತಿ ಇರುವ ಫಲಕವನ್ನು ಪ್ರತಿ ಟೋಲ್‌ ಘಟಕದಲ್ಲೂ ಅಳವಡಿಸಬೇಕು

‘ಶೇ 60ರಷ್ಟು ಇಳಿಸಬೇಕು’
ಯಾವುದೇ ಹೆದ್ದಾರಿಯ ನಿರ್ಮಾಣಕ್ಕೆ ವೆಚ್ಚವಾದ ಮೊತ್ತವು ಬಳಕೆದಾರರ ಶುಲ್ಕದ ಮೂಲಕ ವಸೂಲಿಯಾದ ನಂತರ, ಶುಲ್ಕವನ್ನು ಕಡಿತ ಮಾಡಬೇಕು. ಬಳಕೆದಾರರ ಶುಲ್ಕದ ದರವನ್ನು ಶೇ 60ರಷ್ಟು ಕಡಿತ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳು ಹೇಳುತ್ತವೆ. ಉದಾಹರಣೆಗೆ...,:ಒಂದು ಹೆದ್ದಾರಿಯಲ್ಲಿ ನಿಗದಿತ ದೂರವನ್ನು ಕ್ರಮಿಸಲು ₹100 ಶುಲ್ಕ ವಿಧಿಸಲಾಗುತ್ತಿತ್ತು ಎಂದು ಪರಿಗಣಿಸಿದರೆ, ಕಾಮಗಾರಿಯ ವೆಚ್ಚ ಸಂಪೂರ್ಣವಾಗಿ ವಸೂಲಿಯಾದ ನಂತರ ಶುಲ್ಕವನ್ನು ₹40ಕ್ಕೆ ಇಳಿಸಬೇಕು. ಆದರೆ, ಕಾಮಗಾರಿಯ ವೆಚ್ಚ ವಸೂಲಿಯಾಗಿದೆಯೇ ಎಂಬ ಮಾಹಿತಿಯನ್ನು ಬಹಿರಂಗಪಡಿಸುವ ವ್ಯವಸ್ಥೆ ಇಲ್ಲ. ಹೀಗಾಗಿ ಶುಲ್ಕವನ್ನು ಇಳಿಸಿ ಎಂದು ಆಗ್ರಹಿಸುವ ಅವಕಾಶ ಬಳಕೆದಾರರಿಗೆ ಇಲ್ಲವಾಗಿದೆ.

ಸವಲತ್ತಿಗೆ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿ
ಟೋಲ್‌ ಘಟಕದ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶವಿರುವ ಮತ್ತು ಅತಿವೇಗದ ಚಾಲನೆ ಸಾಧ್ಯವಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಮಾತ್ರ ಎಕ್ಸ್‌ಪ್ರೆಸ್‌ ಹೆದ್ದಾರಿ ಎಂದು ಕರೆಯಲಾಗುತ್ತದೆ. ಯಮುನಾ ಎಕ್ಸ್‌ಪ್ರೆಸ್‌ವೇ ದೇಶದ ಅಂತಹ ಹೆದ್ದಾರಿಗಳಲ್ಲಿ ಒಂದು. ದೇಶದ ಅತ್ಯಂತ ದುಬಾರಿ ಎಕ್ಸ್‌ಪ್ರೆಸ್‌ವೇ ಎನಿಸಿದೆ. ಆದರೆ, ಅಲ್ಲಿ ಲಭ್ಯವಿರುವ ಸವಲತ್ತುಗಳೂ ಉತ್ತಮವಾಗಿವೆ.

ದೆಹಲಿ–ಆಗ್ರಾ ನಡುವಿನ ಯಮುನಾ ಎಕ್ಸ್‌ಪ್ರೆಸ್‌ ಹೆದ್ದಾರಿಯು ಸುರಕ್ಷಿತ ಪ್ರಯಾಣ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ದೇಶದ ಗಮನ ಸೆಳೆದಿದೆ. 2012ರಲ್ಲಿ ನಿರ್ಮಾಣವಾದ ಈ ಎಕ್ಸ್‌ಪ್ರೆಸ್‌ ಹೆದ್ದಾರಿಯು 165 ಕಿಲೋಮೀಟರ್ ಉದ್ದವಿದ್ದು, ಸರಿಸುಮಾರು 2 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸಬಹುದಾಗಿದೆ. ಈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಪ್ರತೀ ಕಿಲೋಮೀಟರ್‌ ಪ್ರಯಾಣಕ್ಕೆ (ಕಾರುಗಳಿಗೆ) ಸರಿಸುಮಾರು ₹2.52 ಸುಂಕ ಸಂಗ್ರಹಿಸಲಾಗುತ್ತದೆ. ಈ ಹೆದ್ದಾರಿಯ ವಿನ್ಯಾಸ, ಗುಣಮಟ್ಟ, ಲಭ್ಯವಿರುವ ಸವಲತ್ತುಗಳ ಆಧಾರದಲ್ಲಿ ಹೆಚ್ಚು ಶುಲ್ಕ ನಿಗದಿ ಮಾಡಲಾಗಿದೆ.

ವಾಹನ ಸವಾರರು ಸುರಕ್ಷಿತವಾಗಿ ಪ್ರಯಾಣಿಸುವುದಕ್ಕೆ ಸಾಧ್ಯವಾಗುವ ಎಲ್ಲ ಸವಲತ್ತುಗಳನ್ನು ಕಲ್ಪಿಸಿರುವುದು ಈ ಹೆದ್ದಾರಿಯ ವಿಶೇಷತೆ. ರಿಪೇರಿ, ಅಪಘಾತದ ಸಮಯದಲ್ಲಿ, ರಸ್ತೆ ಮಧ್ಯದ ವಿಭಜಕದ ಒಂದು ಭಾಗವನ್ನು ತೆರವು ಮಾಡಿ, ಅದರ ಮೂಲಕ ವಾಹನಗಳನ್ನು ಸಾಗುವಂತೆ ಮಾಡಿ ದಟ್ಟಣೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆಯಿದೆ. ಪ್ರತೀ ಐದು ಕಿಲೋಮೀಟರ್‌ಗೆ ಒಂದು ಕಡೆ ಈ ರೀತಿ ವಿಭಜಕಗಳನ್ನು ತಾತ್ಕಾಲಿಕವಾಗಿ ತೆರೆಯಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕರಿಗೆ ಮಾಹಿತಿ ನೀಡಲು ಆದ್ಯತೆ ನೀಡಲಾಗಿದೆ. ಸುಮಾರು 12 ಮೀಟರ್‌ ಅಗಲದ ಫಲಕಗಳಲ್ಲಿ ಮಳೆ ಸಾಧ್ಯತೆ, ಬಿಸಿಲು ಹೆಚ್ಚಳದಂತಹ ತಾಪಮಾನ ಬದಲಾವಣೆಯ ಮಾಹಿತಿಯನ್ನೂ ನೀಡಲಾಗುತ್ತದೆ. ವಾಹನಗಳ ವೇಗ ಮಿತಿ, ದಟ್ಟಣೆ, ತಿರುವು ಹಾಗೂ ರಸ್ತೆ ಬಳಕೆಯ ಸೂಚನೆಗಳನ್ನು ನೀಡಲಾಗುತ್ತಿದೆ. ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಲೋಹದ ತಡೆಗೋಡೆಗಳನ್ನು ಅಳವಡಿಸಲಾಗಿದೆ. ಈ ಹೆದ್ದಾರಿ ಗುಣಮಟ್ಟ ಎಷ್ಟಿದೆಯೆಂದರೆ, ಈ ಮಾರ್ಗವನ್ನು ರನ್‌ವೇ ರೀತಿ ಬಳಸಿಕೊಂಡು ಯುದ್ಧ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ.

ಹೆದ್ದಾರಿ ಪ್ರಯಾಣಿಕರಲ್ಲಿ ದಿಢೀರ್ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ಹಾಗೂ ಅಪಘಾತದಂತಹ ತುರ್ತುಸ್ಥಿತಿ ಎದುರಿಸಲು, ಹೆದ್ದಾರಿಯ ಹಲವು ಕಡೆಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವ ಟ್ರಾಮ ಸೆಂಟರ್ ಸ್ಥಾಪಿಸಲಾಗಿದೆ. ಎಲ್ಲ ಟ್ರಾಮ ಸೆಂಟರ್‌ಗಳಲ್ಲಿ ಹಾಗೂ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಆಂಬ್ಯುಲೆನ್ಸ್ ಒದಗಿಸಲಾಗಿದೆ. ಸರಿಸುಮಾರು 50 ಕಿಲೋಮೀಟರ್ ಅಂತರದಲ್ಲಿ ಒಂದು ಟ್ರಾಮ ಸೆಂಟರ್ ಇರುವಂತೆ ನೋಡಿಕೊಳ್ಳಲಾಗಿದೆ.

ಚಿಕಿತ್ಸಾ ಕೇಂದ್ರ, ಆಂಬುಲೆನ್ಸ್ ಎಲ್ಲೆಲ್ಲಿವೆ?
l ದೆಹಲಿಯಿಂದ 16 ಕಿ.ಮೀ.: ಮೊದಲ ಆಂಬುಲೆನ್ಸ್

l 35 ಕಿ.ಮೀ.: ಟ್ರಾಮ ಸೆಂಟರ್ ಹಾಗೂ ಆಂಬುಲೆನ್ಸ್

l 38 ಕಿ.ಮೀ.: ಜೇವರ್ ಟೋಲ್‌ನಲ್ಲಿ ಆಂಬುಲೆನ್ಸ್‌

l 95 ಕಿ.ಮೀ.: ಮಥುರಾ ಟೋಲ್ ಪ್ಲಾಜಾ ಬಳಿ ಆಂಬುಲೆನ್ಸ್

l 107 ಕಿ.ಮೀ.: ಮತ್ತೊಂದು ಟ್ರಾಮ ಸೆಂಟರ್ ಮತ್ತು ಆಂಬುಲೆನ್ಸ್‌

l 150 ಕಿ.ಮೀ.: ಆಗ್ರಾ ಟೋಲ್‌ನಲ್ಲಿ ಆಂಬುಲೆನ್ಸ್. ಇಲ್ಲಿಂದ 15 ಕಿಲೋಮೀಟರ್ ಕ್ರಮಿಸಿದರೆ ಆಗ್ರಾ ನಗರ ತಲುಪಬಹುದು

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಸವಲತ್ತುಗಳಿಲ್ಲ
ಈಚೆಗಷ್ಟೇ ಉದ್ಘಾಟನೆಯಾಗಿರುವ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಕಾರು/ಜೀಪು/ವ್ಯಾನ್‌ ವರ್ಗದ ವಾಹನಗಳಿಗೆ ಈಗ ₹135 ಶುಲ್ಕ ವಿಧಿಸಲಾಗುತ್ತಿದೆ. ಈ ಪ್ರಕಾರ 117 ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ಪ್ರಯಾಣಿಸಲು ಪ್ರತಿ ಕಿ.ಮೀ. ₹1.15 ಶುಲ್ಕ ಪಾವತಿಸಿದಂತಾಗುತ್ತದೆ. ಆದರೆ, ಈ ಶುಲ್ಕವು ಪಾರದರ್ಶಕವಾಗಿಲ್ಲ. ಯಮುನಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಲಭ್ಯವಿರುವಂತಹ ಎಲ್ಲಾ ಅತ್ಯಾಧುನಿಕ ಸೌಲಭ್ಯವೂ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಇಲ್ಲ.

ಯಾವುದೇ ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿಯ ಶೇ 75ರಷ್ಟು ಪೂರ್ಣಗೊಂಡ ನಂತರ ಶುಲ್ಕ ವಿಧಿಸಲು ಅವಕಾಶವಿದೆ. ಪೂರ್ಣಗೊಂಡಿರುವಷ್ಟು ಉದ್ದದ ಹೆದ್ದಾರಿಗೆ ಮಾತ್ರ ಶುಲ್ಕ ವಿಧಿಸಬಹುದಾಗಿದೆ. ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಎಷ್ಟು ಕಿ.ಮೀ.ನಷ್ಟು ಕಾಮಗಾರಿ ಬಾಕಿ ಇದೆ ಎಂಬ ಮಾಹಿತಿ ಲಭ್ಯವಿಲ್ಲ. ಈಗ ವಿಧಿಸಲಾಗುತ್ತಿರುವ ಶುಲ್ಕವು, ಕಾಮಗಾರಿ ಪೂರ್ಣಗೊಂಡಿರುವಷ್ಟು ಹೆದ್ದಾರಿಗೆ ಅನ್ವಯವಾಗುತ್ತಿದೆಯೋ ಅಥವಾ ಪೂರ್ಣ 117 ಕಿ.ಮೀ.ಗೆ ಅನ್ವಯವಾಗುತ್ತಿದೆಯೋ ಎಂಬ ಮಾಹಿತಿಯೂ ಲಭ್ಯವಿಲ್ಲ. ಹೀಗಾಗಿ ಬಳಕೆದಾರರು ಇನ್ನೂ ನಿರ್ಮಾಣ ಹಂತದಲ್ಲಿರುವ ಹೆದ್ದಾರಿಗೆ ಈಗಲೇ ಶುಲ್ಕ ಪಾವತಿಸುತ್ತಿದ್ದಾರೆಯೇ ಅಥವಾ ಕಾಮಗಾರಿ ಪೂರ್ಣಗೊಂಡ ನಂತರ ಶುಲ್ಕ ಇನ್ನಷ್ಟು ಹೆಚ್ಚುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಮುಂಬೈ–ಪುಣೆ ಹೆದ್ದಾರಿ
ದೇಶದ ಮೊದಲ ಎಕ್ಸ್‌ಪ್ರೆಸ್‌ ಹೆದ್ದಾರಿ ಎನಿಸಿಕೊಂಡಿರುವ ಮುಂಬೈ–ಪುಣೆ ಹೆದ್ದಾರಿಯು 2002ರಲ್ಲಿ ನಿರ್ಮಾಣವಾಗಿತ್ತು. 95 ಕಿಲೋಮೀಟರ್ ಉದ್ದದ 6 ಪಥಗಳ ಈ ಮಾರ್ಗವು ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕೆ ಸಿದ್ಧ ಮಾದರಿಯೊಂದನ್ನು ಒದಗಿಸಿತ್ತು. ಈ ಮಾರ್ಗದಲ್ಲಿ 4 ಟೋಲ್‌ ಪ್ಲಾಜಾಗಳು ಸಿಗುತ್ತವೆ. ಕಾರು/ಜೀಪ್ ವಾಹನಗಳಿಗೆ ಪ್ರತಿ ಕಿಲೋಮೀಟರ್‌ಗೆ ₹2.84 ಟೋಲ್ ನಿಗದಿಪಡಿಸಲಾಗಿದೆ. ಈ ಹೆದ್ದಾರಿ ಕ್ರಮಿಸಲು ಒಂದು ಕಾರು/ಜೀಪ್ ₹270 ಟೋಲ್ ಶುಲ್ಕ ಪಾವತಿಸಬೇಕಿದೆ.

ಮುಂಬೈ–ನಾಗ್ಪುರ ‘ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿ’
ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳಾದ ಮುಂಬೈ ಹಾಗೂ ನಾಗ್ಪುರವನ್ನು ಸಂಪರ್ಕಿಸಲು ಸಮೃದ್ಧಿ ಮಹಾಮಾರ್ಗ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಿಸಲಾಗುತ್ತಿದೆ. 6 ಪಥಗಳ ಈ ಹೆದ್ದಾರಿಯು ಒಟ್ಟು 700 ಕಿಲೋಮೀಟರ್ ಉದ್ದ ಇರಲಿದೆ. ನಾಗ್ಪುರ–ಶಿರಡಿ ಮಾರ್ಗದ 502 ಕಿಲೋಮೀಟರ್ ಉದ್ದದ ಮೊದಲ ಹಂತದ ಹೆದ್ದಾರಿಯು ಸಾರ್ವಜನಿಕರಿಗೆ ಬಳಕೆಗೆ ಮುಕ್ತವಾಗಿದೆ. ಅತ್ಯಾಧುನಿಕ ಸವಲತ್ತುಗಳಿರುವ ಈ ಹೆದ್ದಾರಿಯಲ್ಲಿ ಸಂಚರಿಸುವ ಕಾರು/ಜೀಪ್ ವಾಹನಗಳು ಪ್ರತೀ ಕಿಲೋಮೀಟರ್‌ಗೆ ₹1.73 ಟೋಲ್ ಪಾವತಿಸಬೇಕಿದೆ. ಡಿಸೆಂಬರ್‌ನಿಂದ ಮಾರ್ಚ್ ನಡುವಿನ ಮೂರು ತಿಂಗಳ ಅವಧಿಯಲ್ಲಿ ₹84 ಕೋಟಿ ಟೋಲ್ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

____________________________________
ಆಧಾರ: ‘ರಾಷ್ಟ್ರೀಯ ಹೆದ್ದಾರಿ ಶುಲ್ಕ (ನಿಗದಿ ಮತ್ತು ಸಂಗ್ರಹ) ನಿಯಮಗಳು–2008’, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರ್ಜುನ್ ಖಾನ್‌ಪರೆ ವರ್ಸಸ್ ಎನ್‌ಎಚ್‌ಎಐ ಪ್ರಕರಣ, ನಿತಿನ್‌ ಸರದೇಸಾಯಿ ವರ್ಸಸ್ ಎನ್‌ಎಚ್‌ಎಐ ಪ್ರಕರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT