ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | Punjab Elections 2022: ಪಂಜಾಬ್‌ ಕಣದಲ್ಲಿ ಕ್ರೀಡಾಕಲಿಗಳು

Last Updated 14 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಚಲನಚಿತ್ರ, ಟಿ.ವಿ. ಧಾರಾವಾಹಿ ತಾರೆಯರು, ಖ್ಯಾತನಾಮ ಕ್ರೀಡಾಪಟುಗಳು ಚುನಾವಣಾ ಕಣಕ್ಕಿಳಿಯುವುದು ಇತ್ತೀಚಿನ ಬೆಳವಣಿಗೆಯೇನಲ್ಲ. ಆದರೆ ಎರಡು ದಶಕಗಳಲ್ಲಿ ರಾಜಕೀಯಕ್ಕೆ ಬಂದು ಚುನಾವಣಾ ಕಣಕ್ಕಿಳಿಯುತ್ತಿರುವ ಕ್ರೀಡಾ ತಾರೆಗಳ ಸಂಖ್ಯೆ ಗಮನಾರ್ಹವಾಗಿ ಏರುತ್ತಿದೆ. ಕ್ರಿಕೆಟಿಗರಾದ ಚೇತನ್‌ ಚೌಹಾಣ್‌ (ಉತ್ತರ ಪ್ರದೇಶದ ಅಮ್ರೋಹಾ), ಮೊಹಮದ್‌ ಅಜರುದ್ದೀನ್‌ (ಉತ್ತರ ಪ್ರದೇಶದ ಮೊರಾದಾಬಾದ್), ಕೀರ್ತಿ ಆಜಾದ್‌ (ಬಿಹಾರದ ದರ್ಬಾಂಗ) ನವಜೋತ್ ಸಿಂಗ್‌ ಸಿಧು (ಅಮೃತಸರ), ಗೌತಮ್‌ ಗಂಭೀರ್‌ (ಪೂರ್ವ ದೆಹಲಿ) ಯಶಸ್ಸನ್ನೂ ಗಳಿಸಿದ್ದಾರೆ.

ಚೌಹಾಣ್ ಮೂರು ಬಾರಿ ಮತ್ತು ಅಜರ್‌ ಒಂದು ಬಾರಿ (ಅಜ್ಮೀರ್‌) ಸೋಲನ್ನೂ ಕಂಡಿದ್ದರು. 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಶೂಟರ್‌ ರಾಜ್ಯವರ್ಧನ್ ರಾಥೋಡ್‌ ಜೈಪುರ ಗ್ರಾಮೀಣ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಸಚಿವರೂ ಆಗಿದ್ದರು. ಅಂತರರಾಷ್ಟ್ರೀಯ ಮಟ್ಟದ ಅಥ್ಲೀಟ್‌, ಮಧ್ಯಮ ದೂರದ ಓಟಗಾರ್ತಿ ಜ್ಯೋತಿರ್ಮಯಿ ಸಿಕ್ದರ್‌ ಅವರು ಪಶ್ಚಿಮ ಬಂಗಾಳದ ಕೃಷ್ಣಾನಗರ್ ಕ್ಷೇತ್ರದಿಂದ ಒಂದು ಅವಧಿಗೆ (2004–09) ಸಿಪಿಎಂನಿಂದ ಆಯ್ಕೆಯಾಗಿದ್ದರು. ಇವೆಲ್ಲಾ ಕೆಲವು ಉದಾಹರಣೆಗಳು ಮಾತ್ರ.

ಇದು ಲೋಕಸಭೆಯ ವಿಷಯವಾಯಿತು. ವಿಧಾನಸಭಾ ಚುನಾವಣೆಗಳಲ್ಲೂ ಕ್ರೀಡಾಪಟುಗಳು ಸ್ಪರ್ಧಿಸಿದ್ದಾರೆ. ಈಗ ಬಂಗಾಳದ ಕ್ರೀಡಾ ಖಾತೆ ಸಹಾಯಕ ಸಚಿವರಾಗಿರುವ ಟಿಎಂಸಿಯ ಮನೋಜ್‌ ತಿವಾರಿ ಭಾರತ ಕ್ರಿಕೆಟ್‌ ತಂಡದಲ್ಲಿ ಬ್ಯಾಟ್ಸ್‌ಮನ್‌ ಆಗಿದ್ದರು. ಅವರಿಗಿಂತ ಮೊದಲು ಲಕ್ಷ್ಮಿ ರತನ್‌ ಶುಕ್ಲಾ ಈ ಖಾತೆ ನಿರ್ವಹಿಸಿದ್ದರು. ಅವರು ಭಾರತ ತಂಡದಲ್ಲಿ ಮಧ್ಯಮ ವೇಗದ ಬೌಲರ್‌ ಆಗಿದ್ದವರು. ಎರಡು ಬಾರಿ ಸಂಸತ್‌ ಸದಸ್ಯರಾಗಿ, ನಂತರ ಸೋಲನುಭವಿಸಿದ್ದ ಚೇತನ್‌ ಚೌಹಾಣ್‌ ಉತ್ತರ ಪ್ರದೇಶ ರಾಜಕೀಯಕ್ಕೆ ಮರಳಿದ ನಂತರ ಅಲ್ಲಿ ಗೆದ್ದು ಸಚಿವರಾಗಿದ್ದರು. ಸಚಿವರಾಗಿದ್ದಾಗಲೇ 2020ರ ಆಗಸ್ಟ್‌ನಲ್ಲಿ ಅಸುನೀಗಿದ್ದರು.

ಹಿಂದೆ ಸರಿದ ಅಜಿತ್‌ ಪಾಲ್‌ ಸಿಂಗ್‌

ಪರ್ಗತ್ ಸಿಂಗ್ ಅವರು 1996ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಧ್ವಜಧಾರಿಯಾಗಿದ್ದರೆ, 20 ವರ್ಷ ಹಿಂದೆ ಮಾಂಟ್ರಿಯಲ್‌ ಒಲಿಂಪಿಕ್ಸ್‌ನಲ್ಲಿ ತಂಡದ ಧ್ವಜಧಾರಿಯಾಗಿದ್ದ ಇನ್ನೊಬ್ಬ ಹಾಕಿ ತಾರೆ ಅಜಿತ್‌ ಪಾಲ್‌ ಸಿಂಗ್ ಅವರಿಗೆ ಟಿಕೆಟ್‌ ನೀಡುವುದಾಗಿ ಪಂಜಾಬ್‌ ಲೋಕ ಕಾಂಗ್ರೆಸ್‌ ಭರವಸೆ ಕೊಟ್ಟಿತ್ತು. ಆದರೆ, ಅವರು ಪಂಜಾಬ್‌ನ ಮತದಾರ ಅಲ್ಲ. ಹಾಗಾಗಿ, ಅವರಿಗೆ ಸ್ಪರ್ಧಿಸುವ ಹಕ್ಕು ಇಲ್ಲ. ಈ ಕಾರಣದಿಂದ ಅವರು ಸ್ಪರ್ಧಿಸುವುದು ಸಾಧ್ಯವಾಗಲಿಲ್ಲ. ಒಟ್ಟು ಮೂರು ಒಲಿಂಪಿಕ್ಸ್‌ಗಳಲ್ಲಿ ಆಡಿರುವ ಅವರು 1975ರಲ್ಲಿ ಭಾರತ ಏಕೈಕ ಬಾರಿ ವಿಶ್ವಕಪ್‌ ಹಾಕಿ ಪ್ರಶಸ್ತಿ ಮುಡಿಗೇರಿಸಿಕೊಂಡಾಗ ತಂಡದ ನಾಯಕರಾಗಿದ್ದರು.

ಅಜಿತ್‌ ಪಾಲ್‌ ಸಿಂಗ್ ನಕೋದರ್‌ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಎರಡು ಒಲಿಂಪಿಕ್ಸ್‌ಗಳಲ್ಲಿ ಆಡಿರುವ ಅಜಿತ್‌ ಪಾಲ್‌ ಸಿಂಗ್‌ 1972ರ ಅರ್ಜುನ ಪ್ರಶಸ್ತಿ ಪುರಸ್ಕೃತರು. ಪಂಜಾಬ್‌ ಪೊಲೀಸ್‌ ಇಲಾಖೆಯಲ್ಲಿ ಐಜಿ ಆಗಿ ನಿವೃತ್ತರಾಗಿದ್ದಾರೆ.

ಸಜ್ಜನ್‌ ಸಿಂಗ್‌ ಚೀಮಾ

ಭಾರತ ಬ್ಯಾಸ್ಕೆಟ್‌ಬಾಲ್‌ ತಂಡದ ನಾಯಕರಾಗಿದ್ದ ಸಜ್ಜನ್‌ ಸಿಂಗ್‌ ಚೀಮಾ ಅವರೂ ಕಣದಲ್ಲಿರುವ ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟುಗಳಲ್ಲಿ ಒಬ್ಬರು.

ದೆಹಲಿ ಏಷ್ಯನ್‌ ಗೇಮ್ಸ್‌ನಲ್ಲಿ (1982) ಆಡಿದ್ದ ಸಜ್ಜನ್‌ ಚೀಮಾ, ಮೂರು ಬಾರಿ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲೂ ತಂಡವನ್ನು ಪ್ರತಿನಿಧಿಸಿದ್ದ ಅನುಭವಿ. ಈಗ ಸುಲ್ತಾನ್‌ಪುರ ಲೋಧಿ ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷದ ಟಿಕೆಟ್‌ ಪಡೆದು ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ಇದೇ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸುವ ಮೊದಲು ಪಂಜಾಬ್‌ ಪೊಲಿಸ್‌ ಇಲಾಖೆಯಲ್ಲಿ ಎಸ್‌ಪಿ ಆಗಿದ್ದರು.

ಕಬಡ್ಡಿ ಆಟಗಾರರು

ವಿಶ್ವಕಪ್‌ ಮತ್ತು ಏಷ್ಯನ್‌ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಆಡಿರುವ ಗುರುಲಾಲ್‌ ಗನ್ನೋರ್‌ ಅವರು ಗನ್ನೋರ್‌ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಪಂಜಾಬ್‌ ಪೊಲೀಸ್‌ ಇಲಾಖೆಯಲ್ಲಿ ಎಎಸ್‌ಐ ಆಗಿದ್ದ ಅವರು ಹುದ್ದೆಗೆ ರಾಜೀನಾಮೆ ನೀಡಿ, 2021ರ ಜೂನ್‌ನಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡಗೊಂಡಿದ್ದಾರೆ. ಗನ್ನೋರ್‌ ಕ್ಷೇತ್ರ ವ್ಯಾಪ್ತಿಯ ಅಜರಾವರ್ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿದ್ದಾರೆ. ‘ನನ್ನ ಕ್ಷೇತ್ರ ಕ್ರೀಡಾ ಮೂಲಸೌಕರ್ಯಗಳಲ್ಲಿ ಹಿಂದುಳಿದಿದೆ. ಇದರ ನಿರ್ಮಾಣ ನನ್ನ ಆದ್ಯತೆ’ ಎಂದಿದ್ದಾರೆ ಗುರ್ಲಾಲ್‌.

ಇನ್ನೊಬ್ಬ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಗುಲ್ಜಾರ್‌ ಮೂನಕ್‌ ಅವರು ಸಂಗ್ರೂರ್‌ನ ದಿರ್ಬಾ ಕ್ಷೇತ್ರದಿಂದ (ಮೀಸಲು) ಅಕಾಲಿದಳ ಅಭ್ಯರ್ಥಿಯಾಗಿದ್ದಾರೆ. ಮೂನಕ್‌ ಕೂಡ ಕೆಲಕಾಲ ಭಾರತ ತಂಡದ ನಾಯಕರೂ ಆಗಿದ್ದರು.

ಪಟಿಯಾಲ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆದಿರುವ ಮೋಹಿತ್‌ ಮಹೀಂದ್ರ ಅರು ಪಂಜಾಬ್‌ ಕಿರಿಯರ ತಂಡವನ್ನು ವಿವಿಧ ವಯೋವರ್ಗಗಳಲ್ಲಿ (15, 19 ವರ್ಷದೊಳಗಿನವರ ವಿಭಾಗ) ಮುನ್ನಡೆಸಿದ್ದರು. ಅವರು ಪಂಜಾಬ್‌ನ ಸಚಿವ ಬ್ರಹ್ಮ ಮಹೀಂದ್ರ ಅವರ ಮಗ. ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಅವರ ಕ್ರೀಡಾ ಜೀವನ ಬಲುಬೇಗ ಮೊಟಕುಗೊಂಡಿತು. ಅವರ ತಂದೆ ಬ್ರಹ್ಮ ಅವರು ಆರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಕಳೆದ ಬಾರಿ ತರಣ್‌ ತಾರಣ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಒಲಿಂಪಿಯನ್‌, ಕುಸ್ತಿಪಟು ಕರ್ತಾರ್ ಸಿಂಗ್ ಅವರಿಗೆ ಆಮ್‌ ಆದ್ಮಿ ಪಕ್ಷ ಕಳೆದ ಬಾರಿ ಟಿಕೆಟ್‌ ನೀಡಿತ್ತು. 1978 ಮತ್ತು 1986ರ ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇರಾಗಿರುವ ಕರ್ತಾರ್ ಅವರಿಗೆ ಈ ಬಾರಿ ಟಿಕೆಟ್‌ ಕೈತಪ್ಪಿದೆ.

ಘಟಾನುಘಟಿಗಳ ಸ್ಪರ್ಧೆ

ಈಗ ಪಂಜಾಬ್‌ ವಿಧಾನಸಭಾ ಚುನಾವಣಾ ಕಣ ಘಟಾನುಘಟಿ ಕ್ರೀಡಾಕಲಿಗಳ ಸ್ಪರ್ಧೆಯಿಂದ ಗಮನ ಸೆಳೆಯುತ್ತಿದೆ. ಮೂವರು ಅರ್ಜುನ ಪ್ರಶಸ್ತಿ ಪುರಸ್ಕೃತರು, ಇಬ್ಬರು ಪದ್ಮಶ್ರೀ ಪುರಸ್ಕೃತರು, ಪಂಜಾಬ್‌ ಸರ್ಕಾರದ ರಣಜಿತ್‌ ಸಿಂಗ್‌ ಕ್ರೀಡಾ ಪ್ರಶಸ್ತಿ ಪಡೆದ ಐವರು ಕ್ರೀಡಾಪಟುಗಳು ವಿವಿಧ ಪಕ್ಷಗಳಿಂದ ಉಮೇದುವಾರರಾಗಿದ್ದಾರೆ. ವಿಶ್ವಕಪ್‌ ಕಬಡ್ಡಿ ಆಡಿದ ಇಬ್ಬರು ಆಟಗಾರರೂ ಇದ್ದಾರೆ. ಫೆಬ್ರುವರಿ 20ರಂದು ಇವರೆಲ್ಲರ ಹಣೆಬರಹ ನಿರ್ಧಾರವಾಗಲಿದ್ದು, ಮಾರ್ಚ್‌ 10ರಂದು ಫಲಿತಾಂಶಕ್ಕೆ ಕಾಯಬೇಕಿದೆ.

ಪಂಜಾಬ್‌ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಮಾಜಿ ಟೆಸ್ಟ್ ಆಟಗಾರ ನವಜೋತ್‌ ಸಿಂಗ್ ಸಿಧು ಅವರು ಪ್ರತಿಷ್ಠಿತ ಅಮೃತಸರ ಪೂರ್ವ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಅಕಾಲಿ ದಳ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌ ಅವರು ತಮ್ಮ ಭಾವ ಬಿಕ್ರಂ ಸಿಂಗ್‌ ಮಜೀಥಿಯಾ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿದ್ದರಿಂದ ಇಲ್ಲಿ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ. ಬಿಜೆಪಿ ಇಲ್ಲಿಂದ ಮಾಜಿ ಐಎಎಸ್‌ ಅಧಿಕಾರಿ ಜಗ್‌ಮೋಹನ್‌ ಸಿಂಗ್ ರಾಜು ಅವರಿಗೆ ಟಿಕೆಟ್‌ ನೀಡಿದೆ.

ಭಾರತ ತಂಡದ ಪರ 51 ಟೆಸ್ಟ್‌ಗಳನ್ನು ಆಡಿರುವ ಸಿಧು ಪ್ರಸ್ತುತ ಸ್ಪರ್ಧಾ ಕಣದಲ್ಲಿರುವ ಕ್ರೀಡಾಪಟುಗಳಲ್ಲಿ ಅನುಭವಿ. ಕ್ರಿಕೆಟ್‌ ಬದುಕಿನ ನಂತರ ವೀಕ್ಷಕ ವಿವರಣೆಗಾರರಾಗಿ ಮೈಕ್‌ ಹಿಡಿದಿದ್ದ ಸಿಧು, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರನ ಸ್ಥಾನದಲ್ಲಿಯೂ ಕಾಣಿಸಿಕೊಂಡಿದ್ದರು. 2004ರಲ್ಲಿ ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿದ ಸಿಧು ಅವರು ಎರಡು ಬಾರಿ ಅಮೃತಸರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಕ್ರೀಡಾಂಗಣದಂತೆ ರಾಜಕೀಯದಲ್ಲಿ ತಮ್ಮ ಮಾತುಗಳಿಂದ ವಿವಾದ ಸೃಷ್ಟಿಸಿಕೊಂಡವರು. ಒಮ್ಮೆ ರಾಜ್ಯಸಭೆಗೂ ಆಯ್ಕೆಯಾದ ಸಿಧು, ನಂತರ ರಾಜ್ಯಸಭೆಗೆ ರಾಜೀನಾಮೆ ನೀಡಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಪಕ್ಷ ಸೇರಿಕೊಂಡರು. 2017ರಲ್ಲಿ ಅವರು ಮೊದಲ ಬಾರಿ ಪಂಜಾಬ್‌ ವಿಧಾನಸಭೆಗೆ ಆಯ್ಕೆಯಾಗಿದ್ದರು. ತಮಗೆ ನೀಡಿದ ಸಚಿವ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದು, ಹಿಂದಿನ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್ ಸಿಂಗ್‌ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಆಗಿದ್ದರು.‌

ಜಲಂಧರ್‌ ಕಂಟೋನ್ಮೆಂಟ್‌ ಕ್ಷೇತ್ರ ಇಬ್ಬರು ಹಾಕಿ ದಿಗ್ಗಜರ ಹಣಾಹಣಿಯಿಂದ ಗಮನ ಸೆಳೆಯುತ್ತಿದೆ. ಮೂರು ಒಲಿಂಪಿಕ್ಸ್‌ಗಳಲ್ಲಿ ಆಡಿರುವ ರಕ್ಷಣೆ ಆಟಗಾರ ಪರಗತ್‌ ಸಿಂಗ್ ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 2012ರಲ್ಲಿ ಮೊದಲ ಬಾರಿ ಅವರು ಶಿರೋಮಣಿ ಅಕಾಲಿ ದಳದಿಂದ ಶಾಸಕರಾಗಿದ್ದರು. ಎರಡನೇ ಬಾರಿ, ಕಾಂಗ್ರೆಸ್‌ನಿಂದ ಆಯ್ಕೆಯಾದ ಮೇಲೆ ಕ್ರೀಡೆ, ಶಿಕ್ಷಣ ಸಚಿವರಾದರು. ಇದು ಅವರಿಗೆ ಮೂರನೇ ಚುನಾವಣೆ.

ಈ ಬಾರಿ ಅವರಿಗೆ ಇನ್ನೊಬ್ಬ ಮಾಜಿ ಅಂತರರಾಷ್ಟ್ರೀಯ ಹಾಕಿ ಆಟಗಾರ, ಆಮ್‌ ಆದ್ಮಿ ಪಕ್ಷದ ಸುರಿಂದರ್ ಸಿಂಗ್ ಸೋಧಿ ಎದುರಾಳಿಯಾಗಿದ್ದಾರೆ. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಸೋಧಿ ಭಾರತ ತಂಡದ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೋಧಿ ಆ ಒಲಿಂಪಿಕ್ಸ್‌ನಲ್ಲಿ 15 ಗೋಲುಗಳನ್ನು ಗಳಿಸಿದ್ದರು. ಪರ್ಗತ್‌ ತಮ್ಮ ಆಟದ ಉತ್ತುಂಗದ ದಿನಗಳಲ್ಲಿ ವಿಶ್ವದ ಶ್ರೇಷ್ಠ ಡಿಫೆನ್ಸ್‌ (ಫುಲ್‌ಬ್ಯಾಕ್‌) ಆಟಗಾರಲ್ಲಿ ಒಬ್ಬರೆನಿಸಿಕೊಂಡವರು. ಅವರಿಗಿಂತ ಹಿರಿಯರಾದ ಸೋಧಿ ಅವರು ಮುಂಚೂಣಿ ಸ್ಥಾನದಲ್ಲಿ (ಸೆಂಟರ್‌ ಫಾರ್ವರ್ಡ್) ಸೈ ಎನಿಸಿಕೊಂಡವರು. ಪರ್ಗತ್ ಸಿಂಗ್ ಅವರ ಮಾವ ದರ್ಬಾರ ಸಿಂಗ್ ಅವರು ಪಂಜಾಬ್‌ನಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿದ್ದ ದಿನಗಳಲ್ಲಿ (1980-93) ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಅವರದು ರಾಜಕೀಯ ಕುಟುಂಬ.

ಸೋಧಿ 2016ರಲ್ಲಿ ಆಮ್‌ ಆದ್ಮಿ ಪಕ್ಷ ಸೇರಿಕೊಂಡರೂ, ಕೆಲವೇ ತಿಂಗಳ ಬಳಿಕ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದರು. ವರ್ಷದ ಹಿಂದೆ ಮತ್ತೆ ಆಮ್‌ ಆದ್ಮಿ ಪಕ್ಷಕ್ಕೆ ಮರುಸೇರ್ಪಡೆಗೊಂಡಿದ್ದಾರೆ.

ಇದೇ ಕ್ಷೇತ್ರದಿಂದ ಸಂಯುಕ್ತ ಸಮಾಜ್‌ ಮೋರ್ಚಾದಿಂದ (ಎಸ್‌ಎಸ್‌ಎಂ) ಸ್ಪರ್ಧಿಸುತ್ತಿರುವ ಜಸ್ವಿಂದರ್‌ ಸಿಂಗ್‌ ಕೂಡ ವಿಶ್ವವಿದ್ಯಾಲಯ ಮಟ್ಟದವರೆಗೆ ಹಾಕಿ ಆಡಿದ್ದಾರೆ. ಈ ಮೂರೂ ಮಂದಿ ಜಲಂಧರ್‌ನ ಲಾಯಲಪುರದ ಖಾಲ್ಸಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳು.

ಸ್ವತಂತ್ರ ಭಾರತದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ಪ್ರಮುಖ ಕ್ರೀಡಾಪಟು, ಭಾರತ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಮನ್ಸೂರ್‌ ಅಲಿ ಖಾನ್‌ ಪಟೌಡಿ. ಆದರೆ ಟೈಗರ್‌ ಪಟೌಡಿ ಅವರಿಗೆ ಕ್ರೀಡಾಂಗಣದ ಯಶಸ್ಸು ‌ರಾಜಕೀಯದಲ್ಲಿ ದಕ್ಕಲಿಲ್ಲ. ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 1971ರಲ್ಲಿ ಮೊದಲ ಬಾರಿ ಹರಿಯಾಣ ವಿಶಾಲ್ ಪಾರ್ಟಿ ಅಭ್ಯರ್ಥಿಯಾಗಿ ಗುಡಗಾಂವ್‌ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. 20 ವರ್ಷಗಳ ನಂತರ, 1991ರಲ್ಲಿ ಭೋಪಾಲ್‌ ಕ್ಷೇತ್ರದಿಂದ ಟಿಕೆಟ್‌ ಪಡೆದಿದ್ದರು. ರಾಜೀವ್‌ ಗಾಂಧಿ ಮತ್ತು ವಿಶ್ವಕಪ್‌ ವಿಜೇತ ತಂಡದ ನಾಯಕರಾಗಿದ್ದ ಕಪಿಲ್‌ ದೇವ್‌ ಅವರ ಪರ ಪ್ರಚಾರ ನಡೆಸಿದ್ದರು.

ಸ್ಪರ್ಧೆಗಿಳಿದ ಮೊದಲ ಕ್ರೀಡಾಪಟು ಪಟೌಡಿ

ಸ್ವತಂತ್ರ ಭಾರತದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ಪ್ರಮುಖ ಕ್ರೀಡಾಪಟು, ಭಾರತ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಮನ್ಸೂರ್‌ ಅಲಿ ಖಾನ್‌ ಪಟೌಡಿ. ಆದರೆ ಟೈಗರ್‌ ಪಟೌಡಿ ಅವರಿಗೆ ಕ್ರೀಡಾಂಗಣದ ಯಶಸ್ಸು ‌ರಾಜಕೀಯದಲ್ಲಿ ದಕ್ಕಲಿಲ್ಲ. ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 1971ರಲ್ಲಿ ಮೊದಲ ಬಾರಿ ಹರಿಯಾಣ ವಿಶಾಲ್ ಹರಿಯಾಣ ಪಾರ್ಟಿ ಅಭ್ಯರ್ಥಿಯಾಗಿ ಗುಡಗಾಂವ್‌ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. 20 ವರ್ಷಗಳ ನಂತರ, 1991ರಲ್ಲಿ ಭೋಪಾಲ್‌ ಕ್ಷೇತ್ರದಿಂದ ಟಿಕೆಟ್‌ ಪಡೆದಿದ್ದರು. ಸ್ವತಃ ರಾಜೀವ್‌ ಗಾಂಧಿ ಮತ್ತು ವಿಶ್ವಕಪ್‌ ವಿಜೇತ ತಂಡದ ನಾಯಕರಾಗಿದ್ದ ಕಪಿಲ್‌ ದೇವ್‌ ಅವರ ಪರ ಪ್ರಚಾರ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT