ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ –ಅಗಲ: ಪ್ರಗತಿ ಪ್ರತಿಮೆ

Last Updated 9 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರಿನ ಕೆಂ‍‍ಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಮತ್ತು 22 ಎಕರೆಯ ಥೀಂ ಪಾರ್ಕ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಶುಕ್ರವಾರ ಲೋಕಾರ್ಪಣೆ ಮಾಡಲಿದ್ದಾರೆ. ಕಂಚಿನ ಈ ಪ್ರತಿಮೆಗೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಪ್ರತಿಮೆ ನಿರ್ಮಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ.

ಇಂತಹ ಪ್ರಮುಖ ನಾಯಕರ ಪ್ರತಿಮೆಗಳನ್ನು ನಿರ್ಮಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿತ್ತು. ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಿಸಲಾಯಿತು. ಮುಂಬೈ ಸಮೀಪ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಈ ಪ್ರತಿಮೆಗಳ ನಿರ್ಮಾಣಕ್ಕೆ ಭಾರಿ ಮೊತ್ತದ ಹಣ ವೆಚ್ಚ ಮಾಡಿದ ಕಾರಣಕ್ಕೆ ವಿರೋಧ ಪಕ್ಷಗಳು, ಜನಸಾಮಾನ್ಯರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಆದರೆ, ಸರ್ಕಾರವು ನಿರ್ಮಿಸಿದ ಈ ಪ್ರತಿಮೆಗಳು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಯಾಗುತ್ತಿವೆ. ಕೇಂದ್ರದ ಮೋದಿ ಸರ್ಕಾರವು ತುಳಿದ ಹಾದಿಯನ್ನೇ ರಾಜ್ಯದ ಬಿಜೆಪಿ ಸರ್ಕಾರವೂ ಅನುಸರಿಸುತ್ತಿದೆ.ಪ್ರಗತಿಯ ಪ್ರತಿಮೆಯ ಜತೆಯಲ್ಲಿಯೇ ರಾಜ್ಯದ ಹಲವು ಪ್ರಮುಖ ಸುಧಾರಕರು ಮತ್ತು ನಾಯಕರ ಪ್ರತಿಮೆಗಳನ್ನು ರಾಜ್ಯದ ಹಲವೆಡೆ ಸ್ಥಾಪಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.

**
ನ್ಯಾಯ ಸಲ್ಲಿಸುವ ಕೆಲಸ
ಕೆಂಪೇಗೌಡರು ಪಾಳೇಗಾರರಲ್ಲ. ವಿಜಯನಗರದ ಸಾಮಂತ ರಾಜರಾಗಿದ್ದರು. ಅವರು ಕಟ್ಟಿದ ಬೆಂಗಳೂರಿನಲ್ಲಿ ನಾವೆಲ್ಲಾ ಇದ್ದೇವೆ. ಅವರು ಒಳ್ಳೆಯ ಉದ್ದೇಶದಿಂದ ಸಾಮಾಜಿಕ ನ್ಯಾಯ ಕಲ್ಪಿಸಿ ಕಟ್ಟಿದ ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಇನ್ನೂ ಬೆಳೆಯುತ್ತಲೇ ಇದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೆಂಪೇಗೌಡರಿಗೆ ನ್ಯಾಯ ಸಿಕ್ಕಿರಲಿಲ್ಲ. ಇಂದು ನಮ್ಮ ಸರ್ಕಾರ ಆ ಕೆಲಸ ಮಾಡುತ್ತಿದೆ.
–ಆರ್.ಅಶೋಕ,ಕಂದಾಯ ಸಚಿವ

**
ವಿಶ್ವ ದಾಖಲೆ
ಪ್ರಪಂಚದ ಯಾವ ನಗರದಲ್ಲೂ, ಆ ನಗರದ ಸಂಸ್ಥಾಪಕರ ಇಷ್ಟು ಎತ್ತರದ ಪ್ರತಿಮೆ ಇಲ್ಲ. ಈ ಮೂಲಕ ಕೆಂಪೇಗೌಡರ ಪ್ರತಿಮೆಯು ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರಿದೆ. ಪ್ರತಿಮೆ ಮತ್ತು 22 ಎಕರೆ ಥೀಂ ಪಾರ್ಕ್‌ಗೆ ಒಟ್ಟು 84 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ.
–ಸಿ.ಎನ್.ಅಶ್ವತ್ಥನಾರಾಯಣ,ಉನ್ನತ ಶಿಕ್ಷಣ ಸಚಿವ ಹಾಗೂ ಕೆಂಪೇಗೌಡ ಪ್ರಾಧಿಕಾರದ ಉಪಾಧ್ಯಕ್ಷ

**

ಮತ್ತಷ್ಟು ಪ್ರತಿಮೆಗಳು...

* ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

*ವಿಧಾನಸೌಧದ ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವುದಾಗಿ ಸರ್ಕಾರ ಹೇಳಿದೆ.

*ಶಾಸಕರ ಭವನದಲ್ಲಿ ಈಗಾಗಲೇ ವಾಲ್ಮೀಕಿ ಪ್ರತಿಮೆ ಇದ್ದು, ಕನಕದಾಸರ ಪ್ರತಿಮೆ ಸ್ಥಾಪಿಸಲಾಗಿದೆ. ಕನಕದಾಸರ ಪ್ರತಿಮೆ ಇನ್ನಷ್ಟೇ ಲೋಕಾರ್ಪಣೆ ಯಾಗಬೇಕಿದೆ.

*ದೆಹಲಿಯ ಸಂಸತ್ ಭವನದ ಆವರಣದಲ್ಲಿ ಕೆಂಪೇಗೌಡ ಪುತ್ಥಳಿ ಸ್ಥಾಪಿಸುವಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಆಗ್ರಹಿಸಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ
ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ

ದಾರ್ಶನಿಕರಿಗೆ ಪ್ರತಿಮೆಯ ರೂಪ
ಸಮಾಜ ಸುಧಾರಕರು, ರಾಜಕೀಯ ನಾಯಕರ ನೂರಾರು ಪ್ರತಿಮೆಗಳು ದೇಶದ ಉದ್ದಗಲಕ್ಕೂ ಕಾಣಸಿಗುತ್ತವೆ. ಗಾಂಧೀಜಿ, ತಿರುವಳ್ಳುವರ್, ಸ್ವಾಮಿ ವಿವೇಕಾನಂದ, ಸುಭಾಷ್‌ಚಂದ್ರ ಬೋಸ್, ಅಂಬೇಡ್ಕರ್ ಮೊದಲಾದವರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ರಾಮ, ಹನುಮಂತ, ಶಿವನ ವಿಗ್ರಹಗಳೂ ಅಧಿಕವಾಗಿವೆ. ಆದರೆ ಕೆಲವು ಪ್ರತಿಮೆಗಳು 100 ಅಡಿಗಿಂತಲೂ ಹೆಚ್ಚು ಎತ್ತರವಿದ್ದು, ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ.

*ಏಕತಾ ಪ್ರತಿಮೆ: ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯನ್ನು ‘ಏಕತಾ ಪ್ರತಿಮೆ’ ಹೆಸರಿನಲ್ಲಿ ಗುಜರಾತ್‌ನಲ್ಲಿ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಪ್ರತಿಮೆ ಉದ್ಘಾಟಿಸಿದರು. ಇದು ಸುಮಾರು 600 ಅಡಿ ಎತ್ತರವಿದ್ದು, ದೇಶದ ಅತಿದೊಡ್ಡ ಪ್ರತಿಮೆ ಎನಿಸಿದೆ. ಸರ್ದಾರ್ ಸರೋವರ ಜಲಾಶಯದ ತಟದಲ್ಲಿ ಇದು ನಿರ್ಮಾಣವಾಗಿದ್ದು, ಮ್ಯೂಸಿಯಂ ಮೊದಲಾದ ಪ್ರವಾಸಿ ಆಕರ್ಷಣೆಗಳನ್ನೂ ಹೊಂದಿದೆ. ಪ್ರವಾಸಿಗರನ್ನು ಸೆಳೆಯಲು ಕೇವಡಿಯಾ ಜಿಲ್ಲೆಗೆ ದೇಶದ ವಿವಿಧ ಭಾಗಗಳಿಂದ ರೈಲುಗಳ ಸೌಕರ್ಯ ಕಲ್ಪಿಸಲಾಗಿದೆ. ಗುತ್ತಿಗೆ, ಪರಿಸರ ಹಾಗೂ ಟಿಕೆಟ್ ಹಣ ದುರ್ಬಳಕೆ ವಿಚಾರಗಳಲ್ಲಿ ಈ ಪ್ರತಿಮೆಯು ವಿವಾದಕ್ಕೂ ಕಾರಣವಾಗಿತ್ತು.

*ರಾಮಾನುಜರ ಪುತ್ಥಳಿ: ಹೈದರಾಬಾದ್ ಸಮೀಪದ ಮುಂಚಿತಾಲ್ ಎಂಬಲ್ಲಿ ರಾಮಾನುಜಾಚಾರ್ಯರ ಹೆಸರಿನಲ್ಲಿ ಸಮಾನತೆಯ ಪುತ್ಥಳಿ ನಿರ್ಮಿಸಲಾಗಿದೆ. ಇದು 216 ಅಡಿ ಎತ್ತರವಿದೆ. 34 ಎಕರೆ ವಿಸ್ತೀರ್ಣದಲ್ಲಿ ಸುಮಾರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರ್ತಿ ತಲೆ ಎತ್ತಿದೆ. ಸುತ್ತಲೂ 108 ದೇವಸ್ಥಾನಗಳು ಹಾಗೂ ಗ್ಯಾಲರಿ ಇವೆ. ಇದೇ ಫೆಬ್ರುವರಿಯಲ್ಲಿ ಪ್ರಧಾನಿ ಮೋದಿ ಅವರು ಪ್ರತಿಮೆಯನ್ನು ಉದ್ಘಾಟಿಸಿದ್ದರು.

*ಗದಗ್‌ನಲ್ಲಿ ಬಸವೇಶ್ವರ: ಗದಗ್‌ನಲ್ಲಿ ಜಗತ್ತಿನ ಅತಿ ಎತ್ತರದ ಬಸವೇಶ್ವರ ಮೂರ್ತಿ ಸ್ಥಾಪಿಸಲಾಗಿದೆ. ಇದು 116.7 ಅಡಿ ಎತ್ತರವಿದೆ. ಕೆರೆ ಹಾಗೂ ಉದ್ಯಾನಗಳು ಈ ಜಾಗವನ್ನು ಪ್ರವಾಸಿ ತಾಣವನ್ನಾಗಿಸಿವೆ. ಬಸವಣ್ಣನವರ ಸಾಮಾಜಿಕ ಸುಧಾರಣೆ ಹಾಗೂ ಜೀವನದ ಬಗ್ಗೆ ಮಾಹಿತಿ ನೀಡುವ ಕಲಾ ಗ್ಯಾಲರಿಯೂ ಇಲ್ಲಿ ಮೈದಳೆದಿದೆ.

*ಬಸವಕಲ್ಯಾಣದ ಬಸವಣ್ಣ: ವಚನಕಾರ ಬಸವೇಶ್ವರರ ಪ್ರತಿಮೆಯನ್ನುಬೀದರ್‌ನ ಬಸವ ಕಲ್ಯಾಣದಲ್ಲಿ ಸ್ಥಾಪಿಸಲಾಗಿದೆ. 108 ಅಡಿ ಎತ್ತರದ ಈ ಪ್ರತಿಮೆಯನ್ನು 2012ರಲ್ಲಿ ನಿರ್ಮಿಸಲಾಯಿತು.

ಸಿದ್ಧತೆ ಹಂತದಲ್ಲಿ ಶ್ರೀರಾಮ, ಶಿವಾಜಿ ಪ್ರತಿಮೆ...

*ಅತಿ ಎತ್ತರದ ಶಿವಾಜಿ ಪ್ರತಿಮೆ: ಏಕತಾ ಪ್ರತಿಮೆಯ ಎತ್ತರವನ್ನೂ ಮೀರಿಸುವ ಛತ್ರಪತಿ ಶಿವಾಜಿ ಮೂರ್ತಿಮುಂಬೈ ಸಮೀಪ ನಿರ್ಮಾಣವಾಗಲಿದೆ. ಇದರ ಎತ್ತರ 690 ಅಡಿ. ₹3,600 ಕೋಟಿ ವೆಚ್ಚವಾಗಲಿದೆ. ಸುರಕ್ಷತೆ ಮತ್ತು ಪರಿಸರ ಕಾರಣಗಳಿಗೆ ಈ ಯೋಜನೆ ವಿವಾದದಲ್ಲಿದೆ.

*ಆದಿ ಶಂಕರಾಚಾರ್ಯರು: ಮಧ್ಯಪ್ರದೇಶ ಸರ್ಕಾರವು ನರ್ಮದಾ ನದಿ ತೀರದಲ್ಲಿ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಮೂರ್ತಿ ಸ್ಥಾಪನೆಗೆ ಮುಂದಾಗಿದೆ. ₹2,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ‘ವಿಶ್ವವೇ ಒಂದು ಕುಟುಂಬ’ ಎಂದು ಸಾರುವುದು ಈ ಪ್ರತಿಮೆಯ ಉದ್ದೇಶ.

*ಅಯೋಧ್ಯೆಯಲ್ಲಿ ಶ್ರೀರಾಮ: ಅಯೋಧ್ಯೆಯಲ್ಲಿ ಶ್ರೀರಾಮನ ಅತಿ ಎತ್ತರದ ಪ್ರತಿಮೆ ನಿರ್ಮಾಣವಾಗಲಿದೆ. ₹2,500 ವೆಚ್ಚದಲ್ಲಿ 823 ಅಡಿ ಎತ್ತರಕ್ಕೆ ತಲೆ ಎತ್ತಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ, ಇದು ಅತಿ ಎತ್ತರದ ಪ್ರತಿಮೆ ಎನಿಸಿಕೊಳ್ಳಲಿದೆ.

*ಬಸವಣ್ಣನ ಪ್ರತಿಮೆ: ಚಿತ್ರದುರ್ಗದ ಮುರುಘಾ ಮಠದ ಸಮೀಪ ಬಸವೇಶ್ವರರ ಪುತ್ಥಳಿ ತಲೆ ಎತ್ತಲಿದೆ. 210 ಅಡಿ ಎತ್ತರದ ಮೂರ್ತಿ ನಿರ್ಮಾಣ ಕಾಮಗಾರಿ 2024ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 80 ಎಕರೆಯಲ್ಲಿ ಥೀಂ ಪಾರ್ಕ್ ಇರಲಿದೆ.

ಆಧಾರ:Statue of prosperity.com ಜಾಲತಾಣ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರದ ಪ್ರಕಟಣೆಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT