ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಹರಾಜು ವಿಧಾನದ ಲೋಪ ಗಿರಣಿಗಳಿಗೆ ಅಪಾರ ಲಾಭ

ಲೋಪವನ್ನು ಪತ್ತೆ ಮಾಡಿದ ರಾಷ್ಟ್ರೀಯ ಉತ್ಪಾದಕತೆ ಪರಿಷತ್‌ l ರಿಪೋರ್ಟರ್ಸ್‌ ಕಲೆಕ್ಟಿವ್‌ ವರದಿ
Last Updated 1 ಮೇ 2022, 20:03 IST
ಅಕ್ಷರ ಗಾತ್ರ

ಬಡ ಜನರು ಮತ್ತು ಸಶಸ್ತ್ರ ಪಡೆಗಳಿಗೆ ಧಾನ್ಯ ಒದಗಿಸುವುದಕ್ಕಾಗಿ ಕೇಂದ್ರ ಸರ್ಕಾರವು ನಡೆಸಿದ ₹4,600 ಕೋಟಿ ಮೊತ್ತದ ಹರಾಜಿನ ವಿಧಾನದಲ್ಲಿದ್ದ ಲೋಪದಿಂದಾಗಿ ಕೆಲವು ಗಿರಣಿಗಳಿಗೆ ಅಪಾರ ಲಾಭ ಆಗಿದೆ. ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ನೇತೃತ್ವದ ರಾಷ್ಟ್ರೀಯ ಉತ್ಪಾದಕತೆ ಪರಿಷತ್‌ ನಡೆಸಿದ ತನಿಖೆಯು ಇದನ್ನು ಪತ್ತೆ ಮಾಡಿದೆ.

ಧಾನ್ಯಗಳು ಮತ್ತು ಇತರ ವಸ್ತುಗಳ ದರವನ್ನು ಸ್ಥಿರವಾಗಿ ಇರಿಸುವುದರ ಮೇಲೆ ನಿಗಾ ಇರಿಸುವ ಸಮಿತಿಗೆ, ಪರಿಷತ್‌ ನಡೆಸಿದ ತನಿಖೆಯ ಪ್ರಾಥಮಿಕ ಮಾಹಿತಿಯನ್ನು 2021ರ ಅಕ್ಟೋಬರ್‌ 11ರಂದು ನೀಡಲಾಗಿದೆ. ಈ ವರದಿಯು ರಿಪೋರ್ಟರ್ಸ್‌ ಕಲೆಕ್ಟಿವ್‌ಗೆ ಲಭ್ಯವಾಗಿದೆ.

ಕಚ್ಚಾ ಧಾನ್ಯವನ್ನು ಸಂಸ್ಕರಿಸುವುದಕ್ಕಾಗಿ ಗಿರಣಿಗಳನ್ನು ಆಯ್ಕೆ ಮಾಡುವ ಹರಾಜು ವಿಧಾನವನ್ನು ಪರಿಷತ್‌ ಅಧ್ಯಯನ ನಡೆಸಿದೆ. ಪರಿಷತ್‌, ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಈ ಹರಾಜಿನ ನಿಯಮಗಳಿಂದಾಗಿ, ಸರ್ಕಾರದ ಟನ್‌ಗಟ್ಟಲೆ ಧಾನ್ಯವು ಗಿರಣಿಗಳ ಪಾಲಾಗಿದೆ. ಬಡ ಜನರಿಗೆ ಕಳಪೆ ಗುಣಮಟ್ಟದ ಧಾನ್ಯ ಪೂರೈಸಲಾಗಿದ್ದು, ಉತ್ತಮ ಧಾನ್ಯವನ್ನು ಹೆಚ್ಚಿನ ದರಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ.

ಕೇಂದ್ರ ಕೃಷಿ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟವು (ನಾಫೆಡ್‌) ಹರಾಜು ವಿಧಾನವನ್ನು ಅಭಿವೃದ್ಧಿಪಡಿಸಿದೆ. ಆದರೆ, ಈ ವಿಧಾನವು ಗಿರಣಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಹಾಗಾಗಿ, ಈ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಪರಿಷತ್‌ ಶಿಫಾರಸು ಮಾಡಿದೆ. 2018ರಿಂದಲೇ ಈ ವಿಧಾನವು ಜಾರಿಯಲ್ಲಿದೆ.

ಸರ್ಕಾರವು ಅನುಸರಿಸುತ್ತಿದ್ದ ಸಾಂಪ‍್ರದಾಯಿಕ ಹರಾಜು ಪದ್ಧತಿಯನ್ನು ಬದಲಾಯಿಸುವ ಮೂಲಕ ಟನ್‌ಗಟ್ಟಲೆ ಧಾನ್ಯವು ಗಿರಣಿಗಳ ಪಾಲಾಗುವಂತೆ ನಾಫೆಡ್‌ ಮಾಡಿದೆ ಎಂಬ ಬಗ್ಗೆ ಈ ಹಿಂದೆಯೂ ರಿಪೋರ್ಟರ್ಸ್‌ ಕಲೆಕ್ಟಿವ್‌ ವರದಿ ಪ್ರಕಟಿಸಿತ್ತು. ಪರಿಷತ್‌ನ ಶಿಫಾರಸನ್ನು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಅರ್ಜಿ ಹಾಕಿ ಪಡೆದುಕೊಳ್ಳಲಾಗಿದೆ. ಈ ಹಿಂದೆ ಮಾಡಿದ್ದ ವರದಿಯನ್ನು ಈ ಶಿಫಾರಸು ದೃಢಪಡಿಸಿದೆ.

2021ರ ಅಕ್ಟೋಬರ್‌ನಲ್ಲಿ ಪರಿಷತ್‌ ಹಂಚಿಕೊಂಡ ಮಾಹಿತಿಯನ್ನು ಸರ್ಕಾರವು ನಿರ್ಲಕ್ಷಿಸಿದೆ ಎಂಬುದರ ದಾಖಲೆಗಳು ಕೂಡ ಲಭ್ಯವಾಗಿವೆ. ನಂತರದ ಎರಡು ತಿಂಗಳಲ್ಲಿ 1,37,509 ಟನ್‌ಗಳಷ್ಟು ಧಾನ್ಯವನ್ನು, ಅದೇ ವಿಧಾನ ಬಳಸಿ ಹರಾಜು ಮಾಡಲಾಗಿದೆ. ಇದರ ಮೊತ್ತ ₹875.47 ಕೋಟಿ. ಕಲೆಕ್ಟಿವ್‌ನ ವರದಿಯು ಪ್ರಕಟವಾದ ಬಳಿಕ ಜನರಿಗೆ ವಿತರಿಸುವ ಧಾನ್ಯಗಳನ್ನು ಸಂಸ್ಕರಿಸುವುದನ್ನು ನಾಫೆಡ್‌ ಕೈಬಿಟ್ಟಿದೆ. ಬದಲಿಗೆ, ಕಚ್ಚಾ ಧಾನ್ಯಗಳನ್ನೇ ರಾಜ್ಯಗಳಿಗೆ ಪೂರೈಸಲು ಗ್ರಾಹಕ ವ್ಯವಹಾರಗಳ ಇಲಾಖೆಯು ಈ ಜನವರಿಯಲ್ಲಿ ನಿರ್ಧರಿಸಿತು.

ನಾಫೆಡ್‌, ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಕೃಷಿ ಸಚಿವಾಲಯವು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿಲ್ಲ.

ಒಟಿಆರ್‌ ದೋಷಪೂರಿತವಾಗಿದ್ದು, ಸಣ್ಣ ಗಿರಣಿಗಳಿಗೆ ಟೆಂಡರ್‌ನಲ್ಲಿ ಅವಕಾಶ ಸಿಗುತ್ತಿಲ್ಲ ಎಂಬುದನ್ನು ಉಲ್ಲೇಖಿಸಿರುವ ರಾಷ್ಟ್ರೀಯ ಉತ್ಪಾದಕತೆ ಪರಿಷತ್‌ನ ವರದಿಯ ಪ್ರತಿ
ಒಟಿಆರ್‌ ದೋಷಪೂರಿತವಾಗಿದ್ದು, ಸಣ್ಣ ಗಿರಣಿಗಳಿಗೆ ಟೆಂಡರ್‌ನಲ್ಲಿ ಅವಕಾಶ ಸಿಗುತ್ತಿಲ್ಲ ಎಂಬುದನ್ನು ಉಲ್ಲೇಖಿಸಿರುವ ರಾಷ್ಟ್ರೀಯ ಉತ್ಪಾದಕತೆ ಪರಿಷತ್‌ನ ವರದಿಯ ಪ್ರತಿ

ಕಾರ್ಯವಿಧಾನ: ತೊಗರಿ ಬೇಳೆ ಕೊರತೆಯಿಂದ ಹೊರಬರುವುದಕ್ಕಾಗಿ ರೈತರು ಹೆಚ್ಚು ಹೆಚ್ಚು ತೊಗರಿ ಬೇಳೆ ಬೆಳೆಯುವಂತೆ ಸರ್ಕಾರವು 2015ರಲ್ಲಿ ಪ್ರೋತ್ಸಾಹ ನೀಡಿತು. ಅದರ ಭಾಗವಾಗಿ, ರೈತರಿಂದ ಹೆಚ್ಚು ತೊಗರಿ ಬೇಳೆ ಖರೀದಿಸುವುದಾಗಿ ಭರವಸೆ ಕೊಟ್ಟಿತ್ತು. ಅದರ ಫಲವಾಗಿ, ಸರ್ಕಾರದ ಗೋದಾಮಿನಲ್ಲಿ ತೊಗರಿ ಬೇಳೆ ಸಂಗ್ರಹ ಹೆಚ್ಚಾಯಿತು. ಈ ತೊಗರಿ ಬೇಳೆಯನ್ನು ಮುಗಿಸುವುದಕ್ಕಾಗಿ, ವಿವಿಧ ಯೋಜನೆಗಳ ಅಡಿಯಲ್ಲಿ ಬೇಳೆ ವಿತರಣೆಯ ಪ್ರಸ್ತಾವನ್ನು ನಾಫೆಡ್‌ 2017ರಲ್ಲಿ ಸರ್ಕಾರದ ಮುಂದಿಟ್ಟಿತು. ತೊಗರಿ ಬೇಳೆಯನ್ನು ಸಂಸ್ಕರಿಸಿ, ರಾಜ್ಯಗಳಿಗೆ ಪೂರೈಸುವುದ ಕ್ಕಾಗಿ ಗಿರಣಿಗಳನ್ನು ಆಯ್ಕೆ ಮಾಡಲು ಹರಾಜು ವಿಧಾನ ವನ್ನು ನಾಫೆಡ್‌ ರೂಪಿಸಿತು.

2021ರ ಡಿಸೆಂಬರ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಿದಂತೆ, ಕೆಲವು ಗಿರಣಿದಾರರಿಗೆ ಅನುಕೂಲವಾಗುವ ರೀತಿಯ, ಅಸಹಜವಾದ ಗುತ್ತಿಗೆ ವಿಧಾನವನ್ನು ನಾಫೆಡ್‌ ರೂಪಿಸಿತು. ಅತ್ಯಂತ ಕಡಿಮೆ ಶುಲ್ಕದ ಬಿಡ್ಡರ್‌ಗೆ ಹರಾಜು ಗುತ್ತಿಗೆ ನೀಡುವುದು ಸರ್ಕಾರದ ಪದ್ಧತಿ. ಆದರೆ, ನಾಫೆಡ್‌ ವಿಧಾನವನ್ನೇ ಬದಲಿಸಿತು. ಪಡೆದುಕೊಂಡ ಕಚ್ಚಾ ಧಾನ್ಯದಿಂದ ಅತಿ ಹೆಚ್ಚು ಸಂಸ್ಕರಿಸಿದ ಬೇಳೆಯನ್ನು ನೀಡುವುದಾಗಿ (ಒಟಿಆರ್‌) ಬಿಡ್‌ ಮಾಡಿದ ಗಿರಣಿಗೆ ಬೇಳೆ ಸಂಸ್ಕರಿಸುವ ಗುತ್ತಿಗೆ ನೀಡುವುದೇ ಈ ಹೊಸ ಪದ್ಧತಿ.

ಒಟಿಆರ್‌ ಅಂದರೆ, ಕಚ್ಚಾ ಬೇಳೆಕಾಳು ಮತ್ತು ಸಂಸ್ಕರಿತ ಬೇಳೆಕಾಳುಗಳ ನಡುವಿನ ಅನುಪಾತ.

ಉದಾಹರಣೆಗೆ, 100 ಕೆ.ಜಿ. ಕಚ್ಚಾ ಬೇಳೆಯಿಂದ 80 ಕೆ.ಜಿ. ಸಂಸ್ಕರಿಸಿದ ಬೇಳೆ ಮತ್ತು 10 ಕೆ.ಜಿ. ಹೊಟ್ಟು ಉಪ ಉತ್ಪನ್ನವಾಗಿ ಸಿಗುತ್ತದೆ ಎಂದು ಗಿರಣಿದಾರರು ಬಿಡ್‌ನಲ್ಲಿ ಹೇಳುತ್ತಾರೆ. ಅವರು ಸರ್ಕಾರಕ್ಕೆ 70 ಕೆ.ಜಿ. ಬೇಳೆಯನ್ನಷ್ಟೇ ಕೊಡುತ್ತಾರೆ. 10 ಕೆ.ಜಿ. ಬೇಳೆಯನ್ನು ಸಂಸ್ಕರಣೆ, ಸಾಗಾಟದ ವೆಚ್ಚ ಮತ್ತು ತಮ್ಮ ಲಾಭವಾಗಿ ಉಳಿಸಿಕೊಳ್ಳುತ್ತಾರೆ.

ಒಟಿಆರ್‌ನಲ್ಲಿ ಕನಿಷ್ಠ ಅನುಪಾತವನ್ನು ನಾಫೆಡ್‌ ನಿಗದಿ ಮಾಡಿಲ್ಲ. ಒಟಿಆರ್‌ ಕಡಿಮೆ ಆದಷ್ಟು ಗಿರಣಿದಾರರಿಗೆ ಲಾಭ ಹೆಚ್ಚು. ಗಿರಣಿದಾರರು ವಿಪರೀತ ಲಾಭ ಮಾಡಿಕೊಳ್ಳುವುದಕ್ಕೆ ತಡೆ ಒಡ್ಡುವಲ್ಲಿ ನಾಫೆಡ್‌ ವಿಫಲವಾಗಿದೆ.

ನಾಫೆಡ್‌ಗೆ ಈ ಬಗ್ಗೆ ಅರಿವೇ ಇರಲಿಲ್ಲ ಎಂದೇನೂ ಇಲ್ಲ. ಆಂಧ್ರ ಪ್ರದೇಶದಲ್ಲಿ ಅಕ್ಕಿ ಸಂಸ್ಕರಣೆಯಲ್ಲಿ ಒಟಿಆರ್‌ ಆಧಾರಿತ ಹರಾಜು ಪ್ರಕ್ರಿಯೆ ಅನುಸರಿಸಿದ್ದರ ವಿರುದ್ಧ ಮಹಾಲೇಖಪಾಲರು ಎಚ್ಚರಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಗಿರಣಿದಾರರಿಂದ ಸರ್ಕಾರಕ್ಕೆ ₹1,195 ಕೋಟಿ ನಷ್ಟವಾಗಿದೆ ಎಂದು ಮಹಾಲೇಖಪಾಲರು ಹೇಳಿದ್ದರು. ಹೀಗಿದ್ದರೂ, ಹೊಸ ಹರಾಜು ವಿಧಾನವನ್ನು ರಾಷ್ಟ್ರ ಮಟ್ಟಕ್ಕೆ ನಾಫೆಡ್‌ ವಿಸ್ತರಿಸಿತು. ಕನಿಷ್ಠ ಒಟಿಆರ್‌ ನಿಗದಿ ಮಾಡಬೇಕು ಎಂಬುದನ್ನು ಮರೆಯಿತು.

ಹಗರಣ ಖಚಿತಪಡಿಸಿದ ಸರ್ಕಾರ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಅಡಿಯಲ್ಲಿ ಬೇಳೆಕಾಳುಗಳನ್ನು ಪೂರೈಸಲು ಈ ಹರಾಜು ವಿಧಾನವನ್ನು ಅನುಸರಿಸಲಾಗಿದೆ.

2015ರಲ್ಲಿ ಶುರುವಾದ ಬೇಳೆಕಾಳುಗಳ ಬೆಲೆ ಸ್ಥಿರೀಕರಣ ನಿಧಿ ಯೋಜನೆ ಪರಿಣಾಮಕಾರಿಯಾಗಿದೆಯೇ ಎಂಬುದನ್ನು ಈ ಪರಿಷತ್ತು ಪರಿಶೀಲನೆ ನಡೆಸುತ್ತಿದೆ. 2016–17 ಹಾಗೂ 2019–20ರ ಅವಧಿಯಲ್ಲಿ ದೇಶದಲ್ಲಿ ಬೇಳೆಕಾಳುಗಳ ಬೆಲೆ ಹಾಗೂ ಅವುಗಳ ಬೇಡಿಕೆ ಬಗ್ಗೆ ಅಧ್ಯಯನ ನಡೆಸಿದ ಪರಿಷತ್ತು, ಒಟಿಆರ್ ಪದ್ಧತಿಯು ಗಿರಣಿ ಮಾಲೀಕರಿಗೆ ಹೆಚ್ಚು ಲಾಭದಾಯಕವಾಗಿದೆ ಎಂದು ತಿಳಿಸಿದೆ. ಈ ಪದ್ಧತಿಯಿಂದ ಗಿರಣಿ ಮಾಲೀಕರ ಬಳಿ ಸಾಕಷ್ಟು ಪ್ರಮಾಣದ ಧಾನ್ಯ ದಾಸ್ತಾನು ಉಳಿಯುತ್ತದೆ. ಗಿರಣಿ ಮಾಲೀಕರಿಗೆ ಇದಕ್ಕೆ ಅವಕಾಶ ನೀಡಿದ್ದರಿಂದ ಅವರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಒಟಿಆರ್‌ ಪದ್ಧತಿಯನ್ನು ವಿರೋಧಿಸಿರುವ ಪರಿಷತ್ತು, ಬೇಳೆಕಾಳು ಸಂಸ್ಕರಣೆ ವೇಳೆ ದೊರೆಯುವ ಉಪಉತ್ಪನ್ನಗಳ ಮೊತ್ತವನ್ನು ಕಳೆದು, ಸಂಸ್ಕರಣೆಗೆ ತಗುಲಿದ ಶುಲ್ಕವನ್ನು ಗಿರಣಿಯವರಿಗೆ ಪಾವತಿಸಬೇಕು ಎಂದು ಶಿಫಾರಸು ಮಾಡಿದೆ. ಈಗ ಇರುವ ಒಟಿಆರ್ ಪದ್ಧತಿ ಪ್ರಕಾರ, ಗಿರಣಿಗಳು ನಮೂದಿಸುವ ಅನುಪಾತವನ್ನು ಆಂತರಿಕ ಸಮಿತಿ ಅನುಮೋದಿಸುತ್ತದೆ. ಆಂತರಿಕ ಸಮಿತಿಯ ಸಭೆಯ ವಿಚಾರಗಳನ್ನು ಗೋಪ್ಯವಾಗಿ ಇಡಲಾಗುತ್ತದೆ. ಆರ್‌ಟಿಐ ಮೂಲಕ ಈ ಸಭೆಯ ಮಾಹಿತಿಗಳನ್ನು ಪಡೆಯಲು ಯತ್ನಿಸಿದಾಗ, ಕೋರ್ಟ್ ಆದೇಶವನ್ನು ಮುಂದಿಟ್ಟು, ಮಾಹಿತಿ ನೀಡಲು ನಾಫೆಡ್ ನಿರಾಕರಿಸಿತು.

ದೊಡ್ಡ ದೊಡ್ಡ ಗಿರಣಿಗಳೇ ಆಯ್ಕೆಯಾಗುವ ರೀತಿಯಲ್ಲಿ ಹರಾಜು ಪ್ರಕ್ರಿಯೆಯನ್ನು ವಿನ್ಯಾಸ ಮಾಡಿರುವ ಅಂಶವನ್ನು ಪರಿಷತ್‌ ಗಮನಿಸಿದ್ದು, ಆಯ್ಕೆ ವಿಧಾನವನ್ನು ಪರಿಶೀಲನೆ ಮಾಡಬೇಕು ಎಂದಿದೆ. ‘ಈಗ, ಕೆಲವೇ ಗಿರಣಿ ಯವರು ನಾಫೆಡ್ ನೀಡುವ ಬೇಳೆಕಾಳುಗಳನ್ನು ಸಂಸ್ಕರಣೆ ಮಾಡುತ್ತಿದ್ದು, ಸಣ್ಣ ಸಣ್ಣ ಗಿರಣಿಯವರಿಗೂ ಅವಕಾಶ ನೀಡಬೇಕು. ಈಗ 100 ಟನ್‌ ಸಾಮರ್ಥ್ಯದ ಗಿರಣಿಗಳಿಗೆ ಮಾತ್ರ ಅವಕಾಶವಿದ್ದು, ಎಂಎಸ್ಎಂಇ ವಲಯದ ಗಿರಣಿಯವರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಸ್ಕರಣೆ ಸಾಮರ್ಥ್ಯವನ್ನು 25 ಟನ್‌ಗೆ ಇಳಿಸಿದರೆ ಸಣ್ಣ ವ್ಯಾಪಾರಿಗಳಿಗೆ ಅವಕಾಶ ಸಿಗುತ್ತದೆ’ ಎಂದು ಪರಿಷತ್‌ ಹೇಳಿದೆ.

ದೇಶದಲ್ಲಿ 7,000 ಗಿರಣಿಗಳಿವೆ. ಆದರೆ ನೋಂದಾಯಿತ ಗಿರಣಿಗಳ ಸಂಖ್ಯೆ 320 ಎಂದು ದಾಖಲೆಗಳು ಹೇಳುತ್ತವೆ. ದೊಡ್ಡ ಗಿರಣಿಗಳಿಗೆ ಅವಕಾಶ ನೀಡುವ ಮೂಲಕ ನಾಫೆಡ್ ಸಾವಿರಾರು ಸಣ್ಣ ಗಿರಣಿ ಮಾಲೀಕರಿಗೆ ಅವಕಾಶದ ಬಾಗಿಲು ಮುಚ್ಚಿದೆ ಎಂದು ಆರೋಪಿಸಿದೆ.

ನಮ್ಮಂತಹ ಕೆಲವರನ್ನು ಹರಾಜು ಪ್ರಕ್ರಿಯೆಯಿಂದ ಹೊರಗಿಡಲೆಂದೇ ನಾಫೆಡ್‌ ಹರಾಜು ನಿಯಮಗಳನ್ನು ವಿನ್ಯಾಸಗೊಳಿಸಿದೆ. ಉದಾಹರಣೆಗೆ, ಕಂಪನಿಯ ಕನಿಷ್ಠ ವಹಿವಾಟು ಇಷ್ಟಿರಬೇಕು, ಇಂತಹ ರಾಜ್ಯಗಳು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಬೇಕು ಎಂಬ ನಿಯಮಗಳನ್ನು ನಾಫೆಡ್‌ ರೂಪಿಸಿದೆ

- ಒಟಿಆರ್‌ ಹರಾಜಿನಲ್ಲಿ ಭಾಗವಹಿಸಿದ್ದ ಗಿರಣಿ ಮಾಲೀಕ

ನಾಫೆಡ್‌ನ ಕೆಲವು ಟೆಂಡರ್‌ಗಳು ಎಲ್ಲರಿಗೂ ಮುಕ್ತವಾಗಿರುತ್ತವೆ. ಆದರೆ, ಅವುಗಳನ್ನು ಕೆಲವು ವ್ಯಕ್ತಿಗಳು ನಿಯಂತ್ರಿಸಿ, ತಮಗೆ ಬೇಕಾದವರಿಗೆ ಅನುಕೂಲ ಕಲ್ಪಿಸಲು ಷರತ್ತುಗಳನ್ನು ವಿಧಿಸುತ್ತಾರೆ. ಉದಾಹರಣೆಗೆ, ಕಳೆದ ವರ್ಷ ಎಪಿಒ (ಸೇನಾ ಖರೀದಿ) ಟೆಂಡರ್ ಕರೆದಿದ್ದರು. ಹಿಂದಿನ ಬಾರಿ ಎಪಿಒ ಟೆಂಡರ್‌ನಲ್ಲಿ ಭಾಗವಹಿಸಿದ್ದವರು ಮಾತ್ರ ಈ ಬಾರಿ ಭಾಗವಹಿಸಬೇಕು ಎಂಬ ಷರತ್ತು ರೂಪಿಸಿದ್ದರು. ಈ ನಿಯಮದಿಂದಾಗಿ ನನಗೆ ಟೆಂಡರ್‌ನಲ್ಲಿ ಭಾಗವಹಿಸಲು ಆಗಿಲಿಲ್ಲ. ಇದು ಸ್ಪರ್ಧೆಯನ್ನು ನಿರ್ಬಂಧಿಸಿದ್ದಲ್ಲದೇ, ಕಡಿಮೆ ಒಟಿಆರ್‌ ನಮೂದಿಸಲು ಅವಕಾಶ ಮಾಡಿಕೊಟ್ಟಿತು

- ಒಟಿಆರ್‌ ಹರಾಜಿನಲ್ಲಿ ಭಾಗವಹಿಸಿದ್ದ ವ್ಯಾಪಾರಿ

ಕಳಪೆ ಗುಣಮಟ್ಟ

ಸಾಂಕ್ರಾಮಿಕದ ಅವಧಿಯಲ್ಲಿ ಬಡವರ ಕಲ್ಯಾಣ ಯೋಜನೆಯಡಿ ನಾಫೆಡ್ ಪೂರೈಸಿದ್ದ ಬೇಳೆಕಾಳುಗಳು ತಿನ್ನಲು ಯೋಗ್ಯವಲ್ಲ ಎಂದು ಹಲವು ರಾಜ್ಯಗಳು ಆರೋಪ ಮಾಡಿದ್ದಕ್ಕೆ ಕಾರಣಗಳಿವೆ ಎಂದು ಪರಿಷತ್ತು ಹೇಳಿದೆ. ಈ ದೂರಿನ ಬಗ್ಗೆ ರಿಪೋರ್ಟರ್ಸ್ ಕಲೆಕ್ಟಿವ್ ಈ ಹಿಂದೆ ವಿಸ್ತೃತ ವರದಿ ಮಾಡಿತ್ತು. ಇದಾದ ಬಳಿಕ, ಕಳಪೆ ಧಾನ್ಯ ಪೂರೈಕೆಗೆ ಆಯಾ ಗಿರಣಿಯವರೇ ಹೊಣೆ ಎಂದು ನಾಫೆಡ್ ಹೊಣೆಗಾರಿಕೆಯನ್ನು ವರ್ಗಾಯಿಸಿತ್ತು.

ಖರೀದಿ ಹಾಗೂ ಪೂರೈಕೆ ಹಂತದಲ್ಲಿ ಧಾನ್ಯಗಳ ಗುಣಮಟ್ಟ ಪರೀಕ್ಷಿಸುವ ವಿಧಾನ ತೀರಾ ದುರ್ಬಲವಾಗಿದೆ ಎಂಬುದನ್ನು ಪರಿಷತ್‌ ತನ್ನ ಅಧ್ಯಯನ ವರದಿಯಲ್ಲಿ ಕಂಡುಕೊಂಡಿದೆ. ತರಬೇತಿ ಪಡೆಯದ ಹಾಗೂ ಸೂಕ್ತ ಸಾಧನಗಳನ್ನು ಹೊಂದಿರದ ಅಧಿಕಾರಿಗಳು ಗುಣಮಟ್ಟ ಪರೀಕ್ಷೆ ನಡೆಸಿದ್ದಾರೆ. ಕೃಷಿ ಇಲಾಖೆ ರೂಪಿಸಿದ ಮಾನದಂಡಗಳ ಪ್ರಕಾರ, ಯಾವ ಯಾವ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ ಎಂದು ಗುರುತು ಮಾಡಬೇಕಿತ್ತು. ಆದರೆ ಅವರು ಹಲವು ಚೌಕಗಳನ್ನು ಖಾಲಿ ಬಿಟ್ಟಿದ್ದರು.

ಭಾರತ ಆಹಾರ ನಿಗಮದ (ಎಫ್‌ಸಿಐ) ಧಾನ್ಯಗಳನ್ನು ಹರಾಜು ಹಾಕುವ ವೇಳೆ, ಮೊದಲು ಖರೀದಿಸಿ ದಾಸ್ತಾನು ಮಾಡಲಾದ ಧಾನ್ಯಗಳನ್ನು ಮೊದಲಿಗೆ ಹರಾಜು ಹಾಕಲಾಗುತ್ತದೆ. ಹೀಗೆ ಮಾಡುವುದರಿಂದ ಉಗ್ರಾಣಗಳಲ್ಲಿ ಹಳೆಯ ದಾಸ್ತಾನು ಉಳಿದುಕೊಳ್ಳದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ನಾಫೆಡ್ ‘ಮೊದಲು ಬಂದ ಧಾನ್ಯ ಮೊದಲಿಗೆ ಪೂರೈಕೆ’ ನಿಯಮವನ್ನು ಗಾಳಿಗೆ ತೂರಿತು.

‘ಪಿಎಂಜಿಕೆಎವೈ ಅಡಿ, ‘ಮೊದಲು ಬಂದ ಧಾನ್ಯ ಮೊದಲಿಗೆ ಪೂರೈಕೆ’ ನಿಯಮವನ್ನು ಅನ್ವಯ ಮಾಡುವುದಿಲ್ಲ’ ಎಂದು 2020ರ ಏಪ್ರಿಲ್‌ನಲ್ಲಿ ಗ್ರಾಹಕ ವ್ಯವಹಾರ ಇಲಾಖೆಗೆ ನಾಫೆಡ್ ತಿಳಿಸಿತ್ತು. ನಾಫೆಡ್ ಪ್ರಕಾರ, ಅಂತರ್‌ ಸಚಿವಾಲಯ ಕಾರ್ಯದರ್ಶಿಗಳ ಸಮಿತಿಯು ಈ ಶಿಫಾರಸು ಮಾಡಿತ್ತು. ನಾಫೆಡ್ ಈ ಹಿಂದೆ ಹಲವು ಬಾರಿ ಈ ನಿಯಮವನ್ನು ಉಲ್ಲಂಘಿಸಿರುವ ಅಂಶವನ್ನು ಪರಿಷತ್ತು ವರದಿಯಲ್ಲಿ ಉಲ್ಲೇಖಿಸಿದೆ.

ಧಾನ್ಯಗಳ ಬಳಕೆಗೆ ಸಾಮಾನ್ಯವಾಗಿ ಆರು ತಿಂಗಳು ಸಮಯವಿರುತ್ತದೆ. ಗೊತ್ತುಪಡಿಸಿದ ದಾಸ್ತಾನು ಕ್ರಮಗಳನ್ನು ತೆಗೆದುಕೊಂಡರೆ, ಇನ್ನೂ ಕೆಲವು ತಿಂಗಳು ಶೇಖರಿಸಿ ಇರಿಸಬಹುದು. ಆದರೆ, ಯಾವುದೇ ನಿರ್ವಹಣೆ ಇಲ್ಲದೇ 3 ವರ್ಷಕ್ಕಿಂತ ಹೆಚ್ಚು ಕಾಲ ಬೇಳೆಕಾಳುಗಳನ್ನು ಸಂಗ್ರಹಿಸಿರುವುದನ್ನು ಪರಿಷತ್‌ ಗಮನಿಸಿದೆ. ಇಂತಹ ಧಾನ್ಯಗಳನ್ನು ಹರಾಜು ಹಾಕುವಾಗ, ನಾಫೆಡ್ ಅವುಗಳ ಬಳಕೆಯ ಗುಣಮಟ್ಟದ ಬಗ್ಗೆ ಯಾವುದೇ ಗಮನ ಹರಿಸದಿರುವುದನ್ನು ಪರಿಷತ್ ಬೊಟ್ಟುಮಾಡಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಹೊಸ ಆದೇಶ

ರಾಜ್ಯಗಳಿಗೆ ಕಚ್ಚಾ ಧಾನ್ಯವನ್ನೇ ಪೂರೈಸುವಂತೆ ನಾಫೆಡ್‌ಗೆ ಸೂಚಿಸಿ ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆಯು 2022ರ ಫೆಬ್ರುವರಿ 11ರಂದು ಆದೇಶ ನೀಡಿದೆ. ಹಾಗಿದ್ದರೂ ಮೂರು ಮುಖ್ಯ ವಿಧಗಳಲ್ಲಿ ಒಟಿಆರ್‌ ಹರಾಜು ವಿಧಾನವನ್ನು ಮುಂದುವರಿಸುವ ಅವಕಾಶವನ್ನು ಹೊಸ ಆದೇಶದಲ್ಲಿಯೂ ಉಳಿಸಿಕೊಳ್ಳಲಾಗಿದೆ.

ಮೊದಲನೆಯದಾಗಿ, ಕಲ್ಯಾಣ ಯೋಜನೆಗಳ ಮೂಲಕ ಪೂರೈಸುವ ಧಾನ್ಯಗಳಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ. ಸಶಸ್ತ್ರ ಪಡೆಗಳಿಗೆ ಕಳೆದ ನಾಲ್ಕು ವರ್ಷಗಳಲ್ಲಿ ₹580 ಕೋಟಿ ಮೌಲ್ಯದ ಸಂಸ್ಕರಿಸಿದ ಧಾನ್ಯವನ್ನು ನಾಫೆಡ್‌ ಪೂರೈಸಿದೆ. ಈ ಸಂಸ್ಕರಣೆಗೆ ಒಟಿಆರ್‌ ಆಧಾರಿತ ವಿಧಾನವನ್ನೇ ಅನುಸರಿಸಲಾಗಿದೆ. ಆದೇಶವು ಇದರ ಬಗ್ಗೆ ಮೌನವಾಗಿದೆ.

ಎರಡನೆಯದಾಗಿ, ಹರಾಜು ವಿಧಾನವನ್ನು ಆದೇಶವು ನಿಷೇಧಿಸಿಲ್ಲ. ಅಂದರೆ, ಕಚ್ಚಾ ಧಾನ್ಯಗಳನ್ನು ಪೂರೈಸಿದಾಗ ರಾಜ್ಯಗಳು ಇದೇ ವಿಧಾನವನ್ನು ಅನುಸರಿಸಲು ಅವಕಾಶ ಇದೆ.

ಕೊನೆಯದಾಗಿ, ಧಾನ್ಯಗಳ ಸಂಸ್ಕರಣೆಗೆ ನಾಫೆಡ್‌ ಈ ಹರಾಜು ವಿಧಾನ ಅನುಸರಿಸುವುದಕ್ಕೆ ಮಾತ್ರ ತಡೆ ಇದೆ. 2019–20ನೇ ವರ್ಷದಲ್ಲಿ ₹180 ಕೋಟಿ ಮೌಲ್ಯದ ಶೇಂಗಾ ಎಣ್ಣೆ ಮತ್ತು ₹52.78 ಕೋಟಿ ಮೌಲ್ಯದ ಸಾರವರ್ಧಿತ ಸಾಸಿವೆ ಎಣ್ಣೆಯನ್ನು ಸಂಸ್ಕರಿಸುವ ಗುತ್ತಿಗೆಯನ್ನು ಇದೇ ಹರಾಜು ವಿಧಾನ ಬಳಸಿ ನೀಡಲಾಗಿದೆ.

*ವರದಿಗಾರ ರಿಪೋರ್ಟರ್ಸ್‌ ಕಲೆಕ್ಟಿವ್‌ನ ಸದಸ್ಯ. ಈ ವರದಿಯ ಇಂಗ್ಲಿಷ್‌ ಅವತರಣಿಕೆಯು ‘ದಿ ವೈರ್‌’ನಲ್ಲಿ ಪ್ರಕಟವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT