ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕೋರ್ಟ್ ಕಟಕಟೆಯಲ್ಲಿ ಕಾಶಿ ‘ಜ್ಞಾನವಾಪಿ’

Last Updated 12 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಕಾಶಿಯಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಇದೆ ಎಂದು ಹೇಳಲಾಗುವ ಶ್ರೀಶೃಂಗಾರ ಗೌರಿ ದೇಗುಲದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯು ವಿಚಾರಣೆಗೆ ಯೋಗ್ಯವಾಗಿದೆ ಎಂದು ಜಿಲ್ಲಾ ನ್ಯಾಯಾಲಯ ತೀರ್ಪು ಕೊಟ್ಟಿದೆ. ದೇಶದ ಗಮನವು ಮತ್ತೆ ದೇಗುಲ–ಮಸೀದಿ ವಿವಾದಗಳತ್ತ ಹರಿಯಲು ಇದು ಕಾರಣವಾಗಿದೆ.

******

1991: ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ 1669ರಲ್ಲಿ ದೇವಸ್ಥಾನವನ್ನು ಧ್ವಂಸ ಮಾಡಿ, ಆ ಸ್ಥಳದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಕಾಶಿ ವಿಶ್ವೇಶ್ವರ ದೇವಸ್ಥಾನದ ಭಕ್ತರು ಆರೋಪಿಸಿದ್ದರು. ಎರಡು ಸಾವಿರ ವರ್ಷಗಳ ಹಿಂದೆಯೇ ಹಿಂದೂ ದೊರೆ ವಿಕ್ರಮಾದಿತ್ಯನು ದೇವಸ್ಥಾನ ನಿರ್ಮಿಸಿದ್ದನು ಎಂದು ಪ್ರತಿಪಾದಿಸಿದ್ದರು. ವಾರಾಣಸಿ ಕೋರ್ಟ್‌ನಲ್ಲಿ ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ ಹೆಸರಿನಲ್ಲಿ ಸಲ್ಲಿಸಲಾದ ಮೊದಲ ಅರ್ಜಿಯಲ್ಲಿ ಕೆಲವು ಬೇಡಿಕೆಗಳನ್ನು ಇಡಲಾಗಿತ್ತು. ಇಡೀ ಜ್ಞಾನವಾಪಿ ಸಂಕೀರ್ಣವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಭಾಗ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು.

ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪೂಜೆಗೆ ಅವಕಾಶ ನೀಡಬೇಕು ಹಾಗೂ ದೇವಸ್ಥಾನ ಜೀರ್ಣೋದ್ಧಾರ ಮಾಡಲು ಹಾಗೂ ಮರು ನಿರ್ಮಾಣ ಮಾಡಲು ಅವಕಾಶ ನೀಡಬೇಕು ಎಂದೂ ಭಕ್ತರು ಆಗ್ರಹಿಸಿದ್ದರು. ಹಳೆಯ ವಿಶ್ವೇಶ್ವರ ದೇವಸ್ಥಾನದ ಅವಶೇಷಗಳ ಮೇಲೆ ಮಸೀದಿ ನಿರ್ಮಾಣವಾಗಿರುವ ಕಾರಣ, 1991ರ ಪೂಜಾಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯು ಇದಕ್ಕೆ ಅನ್ವಯವಾಗುವುದಿಲ್ಲ ಎಂದೂ ಪ್ರತಿಪಾದಿಸಲಾಗಿತ್ತು. ಇಲ್ಲಿಂದ ಜ್ಞಾನವಾಪಿ ಮಸೀದಿ ವಿಚಾರ ಮುನ್ನೆಲೆಗೆ ಬಂದಿತು.

1998: 1991ರ ಪೂಜಾಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯ ಆಧಾರದ ಮೇಲೆ ವಿಶ್ವೇಶ್ವರ ದೇವಸ್ಥಾನದ ಭಕ್ತರ ಅರ್ಜಿಯನ್ನು ವಜಾಗೊಳಿಸಬೇಕು ಹಾಗೂ ಕೆಳಹಂತದ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ಪ್ರತಿಪಾದಿಸಿದ ಜ್ಞಾನವಾಪಿ ಮಸೀದಿಯನ್ನು ನಿರ್ವಹಣೆ ಮಾಡುತ್ತಿರುವ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು

2019: ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ ಹೆಸರಿನಲ್ಲಿ ಡಿಸೆಂಬರ್‌ನಲ್ಲಿ ವಾರಾಣಸಿ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಕೀಲ ವಿಜಯ ಶಂಕರ್ ರಸ್ತೋಗಿ ಎಂಬುವರು, ಇಡೀ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪುರಾತತ್ವ ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದರು

2020: ಅಂಜುಮಾನ್ ಸಮಿತಿಯು ಪುರಾತತ್ವ ಸಮೀಕ್ಷೆಯನ್ನು ವಿರೋಧಿಸಿತು. ಅಲಹಾಬಾದ್ ಹೈಕೋರ್ಟ್ ತಡೆ ನೀಡದ ಕಾರಣ, ಕೆಳಹಂತದ ನ್ಯಾಯಾಲಯಕ್ಕೆ ಹೋದ ಸಮಿತಿಯು, 1991ರ ಅರ್ಜಿಯ ವಿಚಾರಣೆಯನ್ನು ಪುನರಾರಂಭಿಸುವಂತೆ ಕೋರಿತು

2021 ಮಾರ್ಚ್: ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರ ನೇತೃತ್ವದ ಪೀಠ ವಿಚಾರಣೆಗೆ ಎತ್ತಿಕೊಂಡಿತ್ತು

2021 ಏಪ್ರಿಲ್: ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ವಾರಾಣಸಿ ಕೋರ್ಟ್ ಆದೇಶ ನೀಡಿತು. ಆದರೆ ಕೋರ್ಟ್ ನಿರ್ಧಾರಕ್ಕೆ ಉತ್ತರ ಪ್ರದೇಶ ವಕ್ಫ್ ಮಂಡಳಿ ಹಾಗೂ ಅಂಜುಮಾನ್ ಸಮಿತಿ ವಿರೋಧ ವ್ಯಕ್ತಪಡಿಸಿದವು. ಇದೇ ಅವಧಿಯಲ್ಲಿ ಎಲ್ಲರ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್, ಪುರಾತತ್ವ ಸಮೀಕ್ಷೆಗೆ ತಡೆ ನೀಡಿತು

2021 ಆಗಸ್ಟ್‌: ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು, ಮಂಜು ವ್ಯಾಸ್ ಹಾಗೂ ರೇಖಾ ಪಾಠಕ್ ಎಂಬ ಐವರು ಮಹಿಳೆಯರು ವಾರಾಣಸಿ ಕೋರ್ಟ್‌ ಮೊರೆ ಹೋದರು. ‘ಜ್ಞಾನವಾಪಿ ಮಸೀದಿಯ ಒಳಗಡೆ ಇರುವ ಹನುಮಾನ್, ನಂದಿ ಮತ್ತು ಶೃಂಗಾರ ಗೌರಿ ವಿಗ್ರಹಗಳಿಗೆ ಪ್ರತಿನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಕೋರಿದ್ದರು. ಜ್ಞಾನವಾಪಿ ಪ್ರಾಂಗಣದಲ್ಲಿ ಇರುವ ಈ ವಿಗ್ರಹಗಳಿಗೆ ಯಾರೂ ಹಾನಿ ಮಾಡದಂತೆ ನಿರ್ದೇಶನ ನೀಡುವಂತೆಯೂ ಕೋರಿದ್ದರು

2022 ಏಪ್ರಿಲ್‌: ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿ ಆಧಾರದಲ್ಲಿ, ಅಡ್ವೊಕೇಟ್ ಕಮಿಷನರ್ ಅವರನ್ನು ನೇಮಿಸಿದ ವಾರಾಣಸಿ ಕೋರ್ಟ್, ಸಂಕೀರ್ಣದ ವಿಡಿಯೊ ಚಿತ್ರೀಕರಣ ಮಾಡಲು ಸೂಚನೆ ನೀಡಿತು. ಈ ನಿರ್ದೇಶನವನ್ನು ಅಂಜುಮಾನ್ ಸಮಿತಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಆದರೆ, ಕೋರ್ಟ್ ಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದ್ದರಿಂದ, ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅರ್ಜಿಯನ್ನು ಸಲ್ಲಿಸಿತು

2022 ಮೇ: ವಿಡಿಯೊ ಚಿತ್ರೀಕರಣ ಮಾಡಲು ಮುಂದಾದ ವಕೀಲರ ತಂಡಕ್ಕೆ ಮಸೀದಿಯ ಒಳಗೆ ಪ್ರವೇಶವನ್ನು ನಿರಾಕರಿಸಲಾಯಿತು ಎನ್ನಲಾಗಿದೆ. ಆದರೆ ಮೇ 17ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡುವಂತೆ ಕೋರ್ಟ್ ಸೂಚಿಸಿತು. ಎರಡು ದಿನಗಳ ಬಳಿಕ ಸಮೀಕ್ಷೆಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಾಯಿತು. ‘ಜ್ಞಾನವಾಪಿ ಸಂಕೀರ್ಣದ ಒಳಗಿನ ತೊಟ್ಟಿಯ ನೀರನ್ನು ಖಾಲಿ ಮಾಡಿದಾಗ, ಅದರಡಿಯಲ್ಲಿ ಶಿವಲಿಂಗದ ಇರುವಿಕೆ ಕಂಡುಬಂದಿದೆ’ ಎಂದು ಅರ್ಜಿದಾರರು ಹೇಳಿಕೊಂಡರು. ಶಿವಲಿಂಗ ಇದೆ ಎನ್ನಲಾದ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವಂತೆ ಜಿಲ್ಲಾಧಿಕಾರಿಗೆ ಕೋರ್ಟ್ ಸೂಚಿಸಿತು

‘ಢಮರುಗ, ಕಮಲ ಹಾಗೂ ತ್ರಿಶೂಲದ ಕುರುಹುಗಳು ಮತ್ತು ಮಸೀದಿಯ ಬುನಾದಿ ಗೋಡೆಯ ಮೇಲೆ ಸನಾತನ ಧರ್ಮಕ್ಕೆ ಸಂಬಂಧಿಸಿದ ಚಿಹ್ನೆಗಳು ಕಂಡುಬಂದಿವೆ’ ಎಂದು ಹಿಂದೂಗಳ ಪರ ವಕೀಲರು ಹೇಳಿಕೊಂಡರು.
ಆದರೆ ಈ ಹೇಳಿಕೆಗಳನ್ನು ಮುಸ್ಲಿಮರ ಪರ ವಕೀಲರು ಅಲ್ಲಗಳೆದರು. ‘ಅಲ್ಲಿರುವುದು ಶಿವಲಿಂಗವಲ್ಲ, ಅದು ಕಾರಂಜಿ’ ಎಂದು ಸ್ಪಷ್ಟನೆ ನೀಡಿದರು

2022 ಜುಲೈ 21: ಐವರು ಮಹಿಳೆಯರು ಸಲ್ಲಿಸಿರುವ ಅರ್ಜಿಯ ಬಗ್ಗೆ ವಾರಾಣಸಿ ಜಿಲ್ಲಾ ನ್ಯಾಯಾಧೀಶರು ನೀಡುವ ತೀರ್ಪಿನವರೆಗೆ ಕಾಯುವುದಾಗಿ ಸುಪ್ರೀಂ ಕೋರ್ಟ್ ಹೇಳಿತು

2022 ಆಗಸ್ಟ್ 24: ಎರಡೂ ಕಡೆಯವರ ವಾದ ಅಲಿಸಿದ ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಅವರು, ಮಹಿಳೆಯರ ಅರ್ಜಿ ವಿಚಾರಣೆಗೆ ಅರ್ಹವೇ ಎಂಬುದನ್ನು ಸೆ. 12ರಂದು ಪ್ರಕಟಿಸುವುದಾಗಿ ಹೇಳಿದ್ದರು

2022 ಸೆ.12: ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಅರ್ಹ ಎಂದು ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಪ್ರಕಟಿಸಿದರು

ಪೂಜಾ ಸ್ಥಳಗಳ ಯಥಾಸ್ಥಿತಿ ಕಾಯುವ ಕಾಯ್ದೆ

ಜ್ಞಾನವಾಪಿ ಮಸೀದಿ ವಿವಾದವು ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991 ಕಡೆಗೆ ಗಮನ ಹರಿಯುವಂತೆ ಮಾಡಿದೆ. ಮಸೀದಿಯ ಒಳಗೆ ಇತ್ತು ಎನ್ನಲಾದ ಶ್ರೀ ಶೃಂಗಾರಗೌರಿ ಮೂರ್ತಿಗೆ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯು ವಿಚಾರಣೆಗೆ ಅರ್ಹವಲ್ಲ ಎಂದು ಜ್ಞಾನವಾಪಿ ಮಸೀದಿಯ ಆಡಳಿತ ನೋಡಿಕೊಳ್ಳುತ್ತಿರುವ ಅಂಜುಮಾನ್‌ ಇಂತೆಜಾಮಿಯಾ ಮಸೀದಿ ಸಮಿತಿಯು ವಾದಿಸಿದೆ. ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯನ್ನು ತನ್ನ ವಾದಕ್ಕೆ ಮುಖ್ಯ ಆಧಾರವಾಗಿ ಮಸೀದಿಯು ಬಳಸಿಕೊಂಡಿದೆ.

ಯಾವುದೇ ಪೂಜಾಸ್ಥಳದ ಸ್ವರೂಪವನ್ನು 1947ರಲ್ಲಿ ಇದ್ದ ರೀತಿಯಲ್ಲಿಯೇ ಉಳಿಸಿಕೊಳ್ಳಬೇಕು. ಯಾವುದೇ ಬದಲಾವಣೆಗೆ ಅವಕಾಶ ಇಲ್ಲ ಎಂದು ಕಾಯ್ದೆ ಹೇಳುತ್ತದೆ. 1991ರ ಜುಲೈ 11ರಂದು ಈ ಕಾಯ್ದೆಯು ಜಾರಿಗೆ ಬಂತು.

ಕಾಯ್ದೆಯ ಸೆಕ್ಷನ್‌ 4 (1) ಹೀಗೆ ಹೇಳುತ್ತದೆ: ‘ಪೂಜಾ ಸ್ಥಳವೊಂದರ ಧಾರ್ಮಿಕ ಸ್ವರೂಪವು 1947ರ ಆಗಸ್ಟ್‌ 15ರಂದು ಹೇಗೆ ಇತ್ತೋ ಅದೇ ರೀತಿಯಲ್ಲಿ ಮುಂದುವರಿಯಬೇಕು’.

ಕಾಯ್ದೆಯ ಸೆಕ್ಷನ್‌ 4 (2) ಹೀಗೆ ಹೇಳುತ್ತದೆ: ‘ಪೂಜಾ ಸ್ಥಳವೊಂದರ ಧಾರ್ಮಿಕ ಸ್ವರೂಪವನ್ನು 1947ರ ಆಗಸ್ಟ್‌ 15ಕ್ಕೂ ಹಿಂದೆ ಪರಿವರ್ತಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದು ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಇನ್ನಿತರ ಪ್ರಾಧಿಕಾರಗಳಲ್ಲಿ ವಿಚಾರಣೆಗೆ ಬಾಕಿ ಇರುವ ಯಾವುದೇ ದಾವೆ, ಮೇಲ್ಮನವಿ ಅಥವಾ ಕಾನೂನು ಪ್ರಕ್ರಿಯೆಗಳು ರದ್ದಾಗಲಿವೆ’. ಈ ಕಾಯ್ದೆಯು ಅಯೋಧ್ಯೆ ರಾಮಮಂದಿರ–ಬಾಬರಿ ಮಸೀದಿ ವಿವಾದಕ್ಕೆ ಅನ್ವಯ ಆಗುವುದಿಲ್ಲ.

ಜ್ಞಾನವಾಪಿ ಮಾದರಿಯ ವಿವಾದಗಳು

ಕುತುಬ್‌ ಮಿನಾರ್‌, ದೆಹಲಿ: 13ನೇ ಶತಮಾನದಲ್ಲಿ ನಿರ್ಮಾಣವಾದ ಕುತುಬ್‌ ಮಿನಾರ್‌ ಇರುವ ಕುತುಬ್‌ ಸಂಕೀರ್ಣವು ಮೂಲದಲ್ಲಿ ಹಿಂದೂ ಮತ್ತು ಜೈನ ದೇವಾಲಯಗಳಾಗಿದ್ದವು. ಕುತುಬ್‌ ಉದ್ದೀನ್‌ ಐಬಕ್‌ ಅವುಗಳನ್ನು ನಾಶ ಮಾಡಿ ಈಗಿನ ಕಟ್ಟಡ ನಿರ್ಮಿಸಿದ್ದಾನೆ, ಅದನ್ನು ಮರಳಿ ಹಿಂದೂಗಳಿಗೆ ನೀಡಬೇಕು ಎಂದು ಕೋರಿ ದೆಹಲಿಯ ನ್ಯಾಯಾಲಯದಲ್ಲಿ 2020ರ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಕೆ ಆಗಿತ್ತು. ಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ 2022ರ ಫೆಬ್ರುವರಿಯಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆಗೆ ಕೋರ್ಟ್‌ ಒಪ್ಪಿಗೆ ಕೊಟ್ಟಿದೆ.ಕುತುಬ್‌ ಮಿನಾರ್ ಹೆಸರನ್ನು ವಿಷ್ಣುಸ್ತಂಭ ಎಂದು ಬದಲಾಯಿಸಬೇಕು ಎಂದು ಹಿಂದುತ್ವವಾದಿ ಸಂಘಟನೆ ಮಹಾಕಾಳ ಮಾನವ ಸೇವಾ 2022ರ ಮೇಯಲ್ಲಿ ಆಗ್ರಹಿಸಿತ್ತು.

ಭೋಜಶಾಲಾ ಸಂಕೀರ್ಣ, ಧಾರ್, ಮಧ್ಯ ಪ್ರದೇಶ: ಮಧ್ಯ ಪ್ರದೇಶದ ಧಾರ್‌ ಜಿಲ್ಲೆಯಲ್ಲಿರುವ 11ನೇ ಶತಮಾನದ ಭೋಜಶಾಲಾ ಸಂಕೀರ್ಣವನ್ನು ಹಿಂದೂಗಳಿಗೆ ನೀಡಬೇಕು ಮತ್ತು ಅಲ್ಲಿ ಮುಸ್ಲಿಮರು ನಮಾಜ್‌ ಮಾಡುವುದನ್ನು ನಿಷೇಧಿಸಬೇಕು ಎಂದು ಕೋರಿ ಮಧ್ಯ ಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ಮಧ್ಯ ಪ್ರದೇಶ ಸರ್ಕಾರಕ್ಕೆ ಮಧ್ಯ ಪ್ರದೇಶ ಹೈಕೋರ್ಟ್ ನೋಟಿಸ್‌ ನೀಡಿದೆ. ಭೋಜಶಾಲಾ–ಕಮಲ್‌ ಮೌಲಾ ಮಸೀದಿ ತಮ್ಮದು ಎಂದು ಹಿಂದೂ ಮತ್ತು ಮುಸ್ಲಿಂ ಸಮುದಾಯ ವಾದಿಸುತ್ತಿವೆ. ಭೋಜಶಾಲಾ ಸಂಕೀರ್ಣದಲ್ಲಿ ನಮಾಜ್‌ ಮಾಡಲು ಮುಸ್ಲಿಮರಿಗೆ ಅವಕಾಶ ನೀಡಿ ಭಾರತೀಯ ಪುರಾತತ್ವ ಇಲಾಖೆಯು 2003ರಲ್ಲಿ ಅಧಿಸೂಚನೆ ಹೊರಡಿಸಿತ್ತು.

ತಾಜ್‌ ಮಹಲ್‌, ಆಗ್ರಾ, ಉತ್ತರ ಪ್ರದೇಶ: ತಾಜ್‌ ಮಹಲ್‌ ಎಂಬುದು ತೇಜೋ ಮಹಾಲಯ ಎಂಬ ಹೆಸರಿನ ಶಿವ ದೇವಾಲಯ. ಅದರ ಕುರುಹುಗಳು ತಾಜ್‌ಮಹಲ್‌ನ ಮುಚ್ಚಿರುವ 20 ಕೊಠಡಿಗಳಲ್ಲಿ ಇವೆ. ಹಾಗಾಗಿ, ಕೊಠಡಿ ತೆರೆಯಲು ಅವಕಾಶ ಕೊಡಬೇಕು ಎಂದು ಕೋರಿ 2022ರ ಮೇಯಲ್ಲಿ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಕೋರ್ಟ್‌ಈ ಅರ್ಜಿಯನ್ನು ಮೇ 11ರಂದು ವಜಾ ಮಾಡಿತು.

ಶಾಹಿ ಮಸೀದಿ, ಮಥುರಾ, ಉತ್ತರ ಪ್ರದೇಶ: ಮಥುರಾದ ಶಾಹಿ ಮಸೀದಿ ಮತ್ತು ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿ ಎರಡು ಪ್ರಕರಣಗಳು ಅಲಹಾಬಾದ್‌ ಹೈಕೋರ್ಟ್ ಮತ್ತು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ. ಶ್ರೀಕೃಷ್ಣ ದೇವಾಲಯದ ಸಮೀಪವೇ ಇರುವ ಶಾಹಿ ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಕೋರಿದ ಅರ್ಜಿಯು 2020ರ ನವೆಂಬರ್‌ನಲ್ಲಿ ಅಲಹಾಬಾದ್‌ ಹೈಕೋರ್ಟ್‌ಗೆ ಸಲ್ಲಿಕೆಯಾಗಿದೆ.ಕೃಷ್ಣ ಜನ್ಮಸ್ಥಾನದಲ್ಲಿ ಮಸೀದಿ ನಿರ್ಮಾಣವಾಗಿದೆ. ಹಾಗಾಗಿ, ಅದನ್ನು ಹಿಂದೂಗಳಿಗೆ ಕೊಡಬೇಕು ಎಂಬುದು ಈ ಅರ್ಜಿಯ ವಾದವಾಗಿದೆ. ಇಂತಹುದೇ ಇನ್ನೊಂದು ಅರ್ಜಿಯು ಮಥುರಾ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಕೆ ಆಗಿದೆ.

ರಾಜಕೀಯ ಪರಿಣಾಮ

ಭಾರತದ ಅತಿ ದೊಡ್ಡ ಧಾರ್ಮಿಕ ವಿವಾದವಾಗಿದ್ದ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದೆ.

‘ರಾಮಮಂದಿರ ನಿರ್ಮಾಣವು 2023ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. 2024ರ ಜನವರಿಯಲ್ಲಿ ಮಕರ ಸಂಕ್ರಾಂತಿ ದಿನದಂದು ಶ್ರೀರಾಮ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ. ಲೋಕಸಭೆಗೆ 2024ರ ಮೇಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ರಾಮ ಜನ್ಮಭೂಮಿ ವಿವಾದವು ರಾಜಕೀಯವಾಗಿ ಬೆಳೆಯಲು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ. ಜ್ಞಾನವಾಪಿ ಮಸೀದಿ ವಿವಾದವು ಕೂಡ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಜ್ಞಾನವಾಪಿ ಮಸೀದಿಯು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ
ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿಯೇ ಇದೆ.

ಆಧಾರ: ಪಿಟಿಐ, ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991, ಲೈವ್‌ ಲಾ ಜಾಲತಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT