ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ-ಸುದ್ದಿ: ಡ್ರಗ್ಸ್‌ ಕಳ್ಳಸಾಗಣೆ ಹೆಚ್ಚುತ್ತಿದೆ, ಎಚ್ಚರ

Last Updated 11 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ದೇಶದೊಳಕ್ಕೆ ಮಾದಕವಸ್ತುಗಳ (ಡ್ರಗ್ಸ್‌) ಕಳ್ಳಸಾಗಣೆ ಏರಿಕೆಯಾಗಿದೆ ಎನ್ನುತ್ತದೆ ಕೇಂದ್ರ ಸರ್ಕಾರದ ದತ್ತಾಂಶಗಳು. ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಸಾವಿರಾರು ಕೋಟಿ ಮೌಲ್ಯದ ಮಾದಕವಸ್ತುಗಳು ಪತ್ತೆಯಾಗಿರುವುದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದರ ಮಧ್ಯೆಯೇ, ದೇಶದಲ್ಲಿ ವಶಕ್ಕೆ ಪಡೆದ ಮಾದಕವಸ್ತುಗಳಿಗೆ ಸಂಬಂಧಿಸಿದ ವರದಿ ವಾರದ ಹಿಂದಷ್ಟೇ ಬಿಡುಗಡೆಯಾಗಿದೆ. ಭಾರತದಲ್ಲಿ ಈವರೆಗೆ ಹೆಚ್ಚು ಬಳಕೆಯಲ್ಲಿಲ್ಲದ ಕೊಕೇನ್‌, ಈಗ ಭಾರಿ ಪ್ರಮಾಣದಲ್ಲಿ ನುಸುಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಳವಳ ವ್ಯಕ್ತಪಡಿಸಿದ್ದಾರೆ

ಹತ್ತಾರು ಮಾರ್ಗ

ಮಾದಕವಸ್ತುಗಳನ್ನು ದೇಶದೊಳಕ್ಕೆ ಕಳ್ಳಸಾಗಣೆ ಮಾಡಲು ಕಳ್ಳಸಾಗಣೆದಾರರು ಹತ್ತಾರು ಮಾರ್ಗಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಈ ವರದಿ ಬಿಚ್ಚಿಟ್ಟಿದೆ.ಈ ಮೊದಲು ವಿಮಾನದ ಮೂಲಕ ಕಳ್ಳಸಾಗಣೆ ನಡೆಯುತ್ತಿತ್ತು. ಕೋವಿಡ್‌ ನಂತರದ ದಿನಗಳಲ್ಲಿ ಸರಕು ಸಾಗಣೆ ಹಡಗುಗಳ ಮೂಲಕ ಕಳ್ಳಸಾಗಾಟ ಮಾಡಲಾಗುತ್ತಿದೆ. ಆದರೆ, ಕಳ್ಳಸಾಗಣೆಗೆ ಬಳಕೆಯಾಗುತ್ತಿರುವ ವಿಧಾನಗಳು ಮಾತ್ರ ವಿಚಿತ್ರವಾಗಿವೆ.

ಟ್ರಾಲಿ ಬ್ಯಾಗ್‌: ಹೊಚ್ಚಹೊಸ ಟ್ರಾಲಿಗಳಲ್ಲಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವುದು ಪತ್ತೆಯಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2022ರ ಮಾರ್ಚ್‌ನಲ್ಲಿ 40 ಟ್ರಾಲಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಟ್ರಾಲಿಗಳ ಟೊಳ್ಳು ಕಂಬಿಗಳ ಒಳಗೆ ಹೆರಾಯಿನ್‌ ಅನ್ನು ಪ್ಯಾಕ್‌ ಮಾಡಿ ತುರುಕಲಾಗಿತ್ತು. ಎಲ್ಲಾ ಟ್ರಾಲಿಗಳಲ್ಲಿ ಈ ರೀತಿ 8 ಕೆ.ಜಿ.ಯಷ್ಟು ಹೆರಾಯಿನ್‌ ಅನ್ನು ಕಳ್ಳಸಾಗಣೆ ಮಾಡಲಾಗಿತ್ತು.

ಪಾನಕದಲ್ಲಿ ಮಾದಕಸ್ತು: 2021ರ ಡಿಸೆಂಬರ್‌ನಲ್ಲಿ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇಬು ಮತ್ತು ಮಾವಿನ ಪಾನಕದ ಬಾಟಲಿಗಳಿದ್ದ ಹಲವು ಕೇಸ್‌ಗಳನ್ನು ಸುಂಕಾಧಿಕಾರಿಗಳು ವಶಕ್ಕೆ ಪಡೆದಿದ್ದರು. ಪಾನಕ ಬಾಟಲಿಗಳ ತಳಭಾಗದಲ್ಲಿ ಬಿಳಿ ಬಣ್ಣದ ಮೇಣದಂತಹ ವಸ್ತುಗಳು ಇದ್ದವು. ಪ್ರಯೋಗಾಲಯದಲ್ಲಿ ಪರಿಶೀಲಿಸಿದಾಗ ಅದು, ಹೆರಾಯಿನ್‌ ಎಂಬುದು ಪತ್ತೆಯಾಗಿತ್ತು. ನ್ಯೂಯಾರ್ಕ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇವುಗಳನ್ನು ಭಾರತಕ್ಕೆ ರವಾನಿಸಲಾಗಿತ್ತು.

ಮುಂದ್ರಾ ಬಂದರು...

ದೇಶದಲ್ಲೀಗ ಮಾದಕವಸ್ತು ಕಳ್ಳಸಾಗಣೆಯ ವಿಚಾರ ಚರ್ಚೆಗೆ ಬಂದ ತಕ್ಷಣ ಗುಜರಾತ್‌ನ ಮುಂದ್ರಾ ಬಂದರಿನ ಹೆಸರು ಕೇಳಿಬರುತ್ತದೆ. ಭಾರತದ ಅತ್ಯಂತ ದೊಡ್ಡ ಖಾಸಗಿ ಬಂದರುಗಳಲ್ಲಿ ಮುಂದ್ರಾ ಬಂದರು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಮುಂದ್ರಾ ಬಂದರಿನಲ್ಲಿ ಈಗಾಗಲೇ ಹತ್ತಾರು ಬಾರಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಮಾದಕವಸ್ತು ಎಂದರೆ ಮುಂದ್ರಾ ಬಂದರು ಎಂದು ಬೊಟ್ಟು ಮಾಡುವಂತಹ ಕಾರ್ಯಚರಣೆ ನಡೆದದ್ದು 2021ರ ನವೆಂಬರ್‌ನಲ್ಲಿ.

ಮುಂದ್ರಾ ಬಂದರಿನ ಮೂಲಕ ಮಾದಕವಸ್ತು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಗುಜರಾತ್‌ ಎಟಿಎಸ್‌ ಅಧಿಕಾರಿಗಳು, ಬಂದರಿಗೆ ಬಂದಿಳಿದಿದ್ದ ಎಲ್ಲಾ ಕಂಟೇನರ್‌ಗಳ ಪರೀಶಿಲನೆಗೆ ಮುಂದಾಗಿದ್ದರು. ಆಗ ನಾಲ್ಕು ಕಂಟೇನರ್‌ಗಳಲ್ಲಿ ಟಾಲ್ಕಂ ಪೌಡರ್‌ ಮಧ್ಯೆ ಹೆರಾಯಿನ್‌ ಅನ್ನು ಇರಿಸಿರುವುದು ಪತ್ತೆಯಾಗಿತ್ತು. ಒಟ್ಟು 2,988 ಕೆ.ಜಿ.ಯಷ್ಟು ಹೆರಾಯಿನ್‌ ಅನ್ನು ದೊಡ್ಡ–ದೊಡ್ಡ ಚೀಲಗಳಲ್ಲಿ ತುಂಬಿ, ಕಂಟೇನರ್‌ಗಳಲ್ಲಿ ಇರಿಸಲಾಗಿತ್ತು. ಅಂದಿಗೆ ಅದು ಜಗತ್ತಿನಲ್ಲಿ, ಒಂದೇ ಬಾರಿ ಅತಿಹೆಚ್ಚು ಪ್ರಮಾಣದ ಮಾದಕವಸ್ತು ವಶಕ್ಕೆ ಪಡೆದ ಕಾರ್ಯಾಚರಣೆಯಾಗಿತ್ತು. ವಶಕ್ಕೆ ಪಡೆದ ಹೆರಾಯಿನ್‌ನ ಮಾರುಕಟ್ಟೆ ಮೌಲ್ಯ ₹21,000 ಕೋಟಿ.

ಅಫ್ಗಾನಿಸ್ತಾನದಿಂದ ರಸ್ತೆ ಮಾರ್ಗದಲ್ಲಿ ಇರಾನ್‌ ಛಾಬಹಾರ್ ಬಂದರಿಗೆ ತಂದು, ಅಲ್ಲಿಂದ ಹಡಗಿನಲ್ಲಿ ಮುಂದ್ರಾಗೆ ತರಲಾಗಿತ್ತು. ಈ ಕಂಟೇನರ್‌ಗಳನ್ನು ಚೆನ್ನೈನ ದಂಪತಿ ಬುಕ್‌ ಮಾಡಿದ್ದರು. ಅವರ ವಿಚಾರಣೆಯ ನಂತರ, ಹೆರಾಯಿನ್‌ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದು ಗೊತ್ತಾಯಿತು.ಪ್ರಕರಣದ ಗಂಭೀರತೆ ಅರಿತ ಸರ್ಕಾರವು, ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಿತು. ಪ್ರಕರಣದಲ್ಲಿ 16 ಮಂದಿ ಅಫ್ಗನ್ನರೂ ಸೇರಿ 20 ಮಂದಿಯನ್ನು ಬಂಧಿಸಲಾಗಿದೆ. ಆದರೆ, ತನಿಖೆ ಇನ್ನೂ ಪೂರ್ಣಗೊಂಡಿಲ್ಲ.

ಈ ಮೊದಲು ವಿಮಾನ ಪ್ರಯಾಣಿಕರ ಮೂಲಕ ಭಾರತಕ್ಕೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅದು ಅತ್ಯಂತ ಕಡಿಮೆ ಪ್ರಮಾಣದ ಕಳ್ಳಸಾಗಣೆಗೆ ವಿಮಾನ ಬಳಕೆಯಾಗುತ್ತಿತ್ತು. ಆದರೆ ಈಗ ಮಾದಕ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಣೆ ಮಾಡಲು ಸಮುದ್ರಮಾರ್ಗವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ತನಿಖೆಯಿಂದ ಗೊತ್ತಾಯಿತು.

ಈ ಪ್ರಕರಣದ ನಂತರ ಎನ್‌ಐಎ ಅಧಿಕಾರಿಗಳ ತಂಡಗಳು ಮುಂದ್ರಾ ಸೇರಿ ಗುಜರಾತ್‌ನ ಎಲ್ಲಾ ಬಂದರುಗಳಲ್ಲಿ ಬೀಡುಬಿಟ್ಟಿವೆ. ನಿರಂತರ ಪರಿಶೀಲನೆ ನಡೆಸ ಲಾಗುತ್ತಿದೆ. ನಂತರ ಹಲವು ಬಾರಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆಧಾರ: ರೆವೆನ್ಯು ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಾರ್ಷಿಕ ಮತ್ತು ಮಾಸಿಕ ವರದಿಗಳು, ಪಿಟಿಐ

ಚಿತ್ರಕೃಪೆ: ಡಿಆರ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT