ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಪಠ್ಯದಲ್ಲಿ ಹೆಡಗೇವಾರ್‌; ಪರ–ವಿರೋಧದ ಪರಾಕಾಷ್ಠೆ

Last Updated 17 ಮೇ 2022, 19:45 IST
ಅಕ್ಷರ ಗಾತ್ರ

ಆರ್‌ಎಸ್‌ಎಸ್‌ ಸ್ಥಾಪಕ ಹೆಡಗೇವಾರ್‌ ಅವರ ಭಾಷಣವೊಂದರ ಬರಹರೂಪವನ್ನು ಹತ್ತನೇ ತರಗತಿಯ ಪಠ್ಯದಲ್ಲಿ ಸೇರಿಸಲಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಜಿ.ರಾಮಕೃಷ್ಣ ಅವರು ಭಗತ್‌ ಸಿಂಗ್‌ ಬಗ್ಗೆ ಬರೆದಿರುವ ಲೇಖನವು ಈ ಹಿಂದೆ ಪಠ್ಯದಲ್ಲಿ ಇತ್ತು. ಅದನ್ನು ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಹೆಡಗೇವಾರ್‌ ಭಾಷಣದ ಬರಹರೂಪವನ್ನು ಪಠ್ಯದಲ್ಲಿ ಸೇರಿಸಿದ್ದಕ್ಕೆ ವ್ಯಾಪಕ ಪರ ಮತ್ತು ವಿರೋಧ ವ್ಯಕ್ತವಾಗಿದೆ. ಹೆಡಗೇವಾರ್‌ ಭಾಷಣ ಮತ್ತು ಪಠ್ಯಕ್ಕೆ ಅದನ್ನು ಸೇರಿಸಿದ್ದಕ್ಕೆ ವ್ಯಕ್ತವಾದ ಕೆಲವು ಅಭಿಪ್ರಾಯಗಳು ಇಲ್ಲಿವೆ:

ನಿಜವಾದ ಆದರ್ಶ ಪುರುಷ ಯಾರಾಗಬೇಕು?

-ಕೇಶವ ಬಲಿರಾಮ್ ಹೆಡಗೇವಾರ್

ನನ್ನ ಗೆಳೆಯರು ನನಗೆ ಬಗೆ ಬಗೆಯ ಪ್ರಶ್ನೆಗಳನ್ನು ಹಾಕುವುದುಂಟು. ಅವುಗಳಲ್ಲೊಂದು: ನಾವು ಇನ್ನು ಮುಂದೆ ಇಟ್ಟುಕೊಳ್ಳಬೇಕಾದ ಆದರ್ಶ ಯಾವುದು? ತತ್ವವೇ ಅಥವಾ ವ್ಯಕ್ತಿಯೇ? ಯಾರಾದರೊಬ್ಬ ವ್ಯಕ್ತಿಯನ್ನೇ ಆದರ್ಶವೆಂದು ನಾವು ಭಾವಿಸುವುದಾದರೆ, ಆತ ಯಾರು?

ತತ್ವವೇ ಎಂದೆಂದೂ ನಮ್ಮ ಆದರ್ಶವಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತತ್ವದ ಪ್ರತಿಪಾದನೆಯು ಎಷ್ಟು ಸವಿ ಅನಿಸುತ್ತದೆಯೋ ಅದನ್ನು ಆಚರಣೆಯಲ್ಲಿ ತರುವುದು ಅಷ್ಟೇ ಕಠಿಣ. ಸಮಾಜದಲ್ಲಿ ಮೂರ್ತಿಪೂಜೆಯು ರೂಢಿಯಲ್ಲಿ ಬಂದಿರುವುದಕ್ಕೂ ಇದೇ ಕಾರಣ. ವಾಸ್ತವವಾಗಿ ಕಲ್ಲಿನಲ್ಲಿ ಭಗವಂತ ಇದ್ದಾನೆಯೆ? ಅದೃಶ್ಯ, ಅವ್ಯಕ್ತ ಹಾಗೂ ಅಸ್ಪಷ್ಟ ವಿಶ್ವಚಾಲಕ ಶಕ್ತಿಯನ್ನು ನಿರ್ಗುಣ ಮತ್ತು ನಿರಾಕಾರ ರೂಪದಲ್ಲಿ ಪೂಜೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ಆ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ. ಆದರೂ ಮೂರ್ತಿ ಪೂಜೆಯೇ ಧರ್ಮದ ಜೀವಾಳವಲ್ಲ. ಮೂರ್ತಿಪೂಜೆ ಮಾಡುವುದು, ಆ ಮೂರ್ತಿ ಸುಂದರವಾಗಿದೆ, ಲಕ್ಷಣವಾಗಿದೆ ಎಂದಾಗಲೀ ಉತ್ತಮ ಕಲೆಯ ಪ್ರತೀಕ ಎಂದಾಗಲೀ ಅಲ್ಲ. ಆದರೆ ಒಂದು ವಿಶಿಷ್ಟ ತತ್ವವು ಆ ಮೂರ್ತಿಯ ರೂಪದಲ್ಲಿ ಗೋಚರವಾಗುತ್ತದೆ ಎಂದೇ ಅದಕ್ಕೆ ಪೂಜೆ ಸಲ್ಲುತ್ತದೆ. ಜನಸಾಮಾನ್ಯರಿಗೆ ವಿಶ್ವಶಕ್ತಿಯ ನಿರಾಕಾರ ಸ್ವರೂಪದಅರಿವು ಮೂಡಿಸಲು ಮೂರ್ತಿ ಪೂಜೆಯು ಒಂದು ಸುಲಭ ಸಾಧನ, ಅಷ್ಟೆ.

ಒಬ್ಬ ಆದರ್ಶ ವ್ಯಕ್ತಿಯ ಬಗ್ಗೆ ಚಿಂತಿಸುವಾಗಲೂ ಇದೇ ನಮ್ಮ ದೃಷ್ಟಿ. ನಮ್ಮಿಂದ ಎಂದೂ ದೂರವಾಗದಂಥ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು. ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ, ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ, ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ. ಆಗ ಪುನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು. ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ. ಆದ್ದರಿಂದ ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ. ಅಷ್ಟೇ ಅಲ್ಲ, ನಾವು ಆದರ್ಶವೆಂದು ಭಾವಿಸುವ ಎಲ್ಲ ಗುಣಗಳೂ ಆ ವ್ಯಕ್ತಿಯಲ್ಲಿ ನಮಗೆ ಎದ್ದು ಕಾಣಬೇಕು.

ನಾವು ಧ್ವಜವನ್ನೇ ಗುರುವೆಂದು ಭಾವಿಸಿ ಗುರುಪೂರ್ಣಿಮಾ ದಿನದಂದು ಅದನ್ನು ಪೂಜಿಸುತ್ತೇವೆ. ನಾವು ಯಾವ ವ್ಯಕ್ತಿಯನ್ನೂ ಪೂಜಿಸುವುದಿಲ್ಲ. ಏಕೆಂದರೆ ಯಾರೇ ಆಗಲಿ ಅವರು ತಮ್ಮ ಮಾರ್ಗದಲ್ಲಿ ಅಚಲರಾಗಿಯೇ ಇದ್ದಾರು ಎಂಬ ಭರವಸೆಯಾದರೂ ಏನು? ಕೇವಲ ತತ್ವ ಒಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು. ಅದನ್ನು ಧ್ವಜವು ಸಾಂಕೇತಿಸುವುದು. ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆಯೋ, ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆಯೋ, ಹೃದಯದಲ್ಲಿ ಅಪೂರ್ವ ಸ್ಫೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ.

ಮಹಾಪುರುಷರ ವಿಷಯದಲ್ಲಿ ಕೆಲವು ವಿಚಿತ್ರ ಭಾವನೆಗಳು ಸಮಾಜದಲ್ಲಿ ಬೇರೂರಿಬಿಟ್ಟಿವೆ. ಶ್ರೀಕೃಷ್ಣನನ್ನು ಆದರ್ಶ ಎನ್ನಬಹುದಾದಂಥ ಹಲವಾರು ಮಹಾನ್ ಕಾರ್ಯಗಳನ್ನು ಅವನು ತನ್ನ ಜೀವನದಲ್ಲಿ ಸಾಧಿಸಿದ್ದಾನೆ. ಆದರೆ ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ; ಅವನಾದರೋ ದೇವರು, ಪೂರ್ಣಾವತಾರನಾಗಿದ್ದ; ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೆ?– ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ. ಶ್ರೀಕೃಷ್ಣನಂತಹ ಪೂರ್ಣ ಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ, ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ, ಕೇವಲ ಪುಣ್ಯಸಂಚಯಕ್ಕಾಗಿ! ಎಂಥ ಸಂಕುಚಿತ ಯೋಚನೆ ಇದು!

ಇದಕ್ಕೆ ಒಂದು ಉದಾಹರಣೆ ಹೇಳುತ್ತೇನೆ. ಒಮ್ಮೆ ನಮ್ಮ ಪರಿಚಿತ ಮಹನೀಯರೊಬ್ಬರು ನಮ್ಮಲ್ಲಿ ಬಂದರು. ಅವರು ದಿನನಿತ್ಯ ಸ್ನಾನ, ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು. ಒಂದು ದಿನ ನಾನು ಊಟದ ಸಮಯದಲ್ಲಿ, ‘ನೀವು ಈಗಾಗಲೇ
ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ?’ ಎಂದು ಅವರನ್ನು ಕೇಳಿದೆ. ನಾನು ಅಷ್ಟು ಕೇಳಿದ್ದೇ ತಡ ಅವರು ಕೆರಳಿ ಕೆಂಡವಾದರು. ‘ನೀವು ಶ್ರೀರಾಮಚಂದ್ರನ, ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ? ನಾನು ಗುಣಗ್ರಹಣಕ್ಕಾಗಿ ಅಲ್ಲ, ಆದರೆ ಪುಣ್ಯಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತೇನೆ’ ಎಂದರು!

ನಮ್ಮ ಸಮಾಜದ ಅಧಃಪತನಕ್ಕೆ ಕಾರಣವಾದ ಅಂಶಗಳಲ್ಲಿ ಇದೂ ಒಂದು. ವಾಸ್ತವಿಕವಾಗಿ ನಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಒಂದಕ್ಕಿಂತ ಒಂದು ಶ್ರೇಷ್ಠವಾದ ಗ್ರಂಥಗಳಿವೆ. ನಮ್ಮ ಗತ ಇತಿಹಾಸವಾದರೂ ಅಷ್ಟೇ, ಅತ್ಯಂತ ಮಹತ್ವಪೂರ್ಣವಾಗಿದೆ, ವೀರರಸಪ್ರಧಾನವಾಗಿದೆ. ಹಾಗೆಯೇ ಸ್ಫೂರ್ತಿದಾಯಕವೂ ಆಗಿದೆ. ಆದರೆ ನಾವೆಂದೂ ಅವುಗಳ ಬಗ್ಗೆ ಯೋಗ್ಯ ದೃಷ್ಠಿಯಿಂದ ಯೋಚಿಸಲು ಕಲಿತಿಲ್ಲ. ಎಲ್ಲಿಯಾದರೂ ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮತಾಳಿದರೆ ಸಾಕು, ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ. ಅವನಿಗೆ ದೇವತ್ವವನ್ನು ಹೊರಿಸಲು ಕಿಂಚಿತ್ತೂ ತಡಮಾಡೆವು. ಈಗಂತೂ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ. ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ. ‘ಶಿವಚರಿತ್ರೆ’ (ಶಿವಾಜಿಯ ಚರಿತ್ರೆ)ಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ! ಬಿಡಿ, ಲೋಕಮಾನ್ಯ ತಿಲಕರು ನಮ್ಮ ಕಾಲದಲ್ಲೇ ಆಗಿಹೋದ ನಾಯಕರು. ಆದರೆ ನಾನೊಮ್ಮೆ ಅವರದೊಂದು ಚಿತ್ರ ನೋಡಿದೆ. ಅದರಲ್ಲಿ ಅವರನ್ನು ಚತುರ್ಭುಜರನ್ನಾಗಿ ಮಾಡಿ, ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮಗಳನ್ನು ಕೊಡಲಾಗಿತ್ತು! ಈ ರೀತಿ ನಮ್ಮ ಮಹಾಪುರುಷರನ್ನು ದೇವತೆಗಳ ಶ್ರೇಣಿಗೆ ತಳ್ಳುವುದು ನಿಜಕ್ಕೂ ಅದೆಷ್ಟು ವಿಚಿತ್ರ! ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ, ಅವರಾಗಲೇ ದೇವಸ್ಥಾನ ಸೇರಿದಂತೆಯೇ ಲೆಕ್ಕ! ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ; ಆದರೆ ಅವರ ಗುಣಗಳನ್ನು ಅನುಸರಿಸುವ ಸೊಲ್ಲು ಮಾತ್ರ ಕೇಳುವುದಿಲ್ಲ. ಒಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ಬುದ್ಧಿಪೂರ್ವಕವಾಗಿ ದೂರ ಸರಿಸುವಂಥ ಈ ಅದ್ಭುತ ಕಲೆಯನ್ನು ನಾವು ಸೊಗಸಾಗಿ ಸಾಧಿಸಿಕೊಂಡಿದ್ದೇವೆ.

ಆದ್ದರಿಂದ ನಾವು ಯಾರ ಗುಣಗಳನ್ನನುಸರಿಸಲು ಸಾಧ್ಯವೋ ಅಂಥ ನಿರ್ದೋಷ ವ್ಯಕ್ತಿಯನ್ನೇ ಆದರ್ಶವಾಗಿ ಭಾವಿಸಬೇಕಾಗಿದೆ. ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು. ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಮುಂದೆ ಅವು ಪೂರ್ಣ ವಿಕಸಿತವಾಗಲಾರವು. ಯಾವ ಪುಷ್ಪವು ಪೂರ್ತಿ ಅರಳಿದೆಯೋ, ನಿಸ್ಸಂದೇಹವಾಗಿಯೂ ಶುದ್ಧವಾಗಿ ಕ್ರಿಮಿರಹಿತವಾಗಿದೆಯೋ ಮತ್ತು ಯಾವುದರ ಒಳಹೊರಗನ್ನು ಚೆನ್ನಾಗಿ ಕಾಣಬಹುದೋ ಅಂಥ ಪುಷ್ಪವನ್ನೇ ಆದರ್ಶವಾಗಿ ಸ್ವೀಕರಿಸುವುದರಿಂದ ನಮ್ಮ ಕಾರಕುಸುಮದಲ್ಲಿಯೂ ನವಚೈತನ್ಯದ ಸೊಬಗು ತುಂಬಿಬಂದೀತು. ಇದನ್ನೇ ಬೇರೆ ಪದಗಳಲ್ಲಿ ಹೇಳುವುದಾದರೆ, ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಅಕಲಂಕವಾಗಿದೆಯೋ ನಿರ್ಭಿಡೆಯಿಂದ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ, ಯಾರ ಧ್ಯೇಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು.

‘ಪ್ರಾದೇಶಿಕ ಕನ್ನಡ ಪ್ರಜ್ಞೆಗೆ ಮಾಡಿದ ಅವಮಾನ’

ಪತ್ರಕರ್ತ ಪಿ.ಲಂಕೇಶ್‌, ಸಾರಾ ಅಬೂಬಕ್ಕರ್‌ ಹಾಗೂ ಜಿ.ರಾಮಕೃಷ್ಣ ಅವರ ಪಠ್ಯಗಳನ್ನು ಕೈಬಿಟ್ಟಿರುವುದು ಪ್ರಾದೇಶಿಕ ಕನ್ನಡ ಪ್ರಜ್ಞೆಗೆ ಮಾಡಿದ ಅವಮಾನ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕ್ಷೇತ್ರದಲ್ಲಿ ಪ್ರಾದೇಶಿಕ ಅಸ್ಮಿತೆ ಹಾಗೂ ಅನನ್ಯತೆ ಕಾಪಾಡಿಕೊಳ್ಳುವುದು ಶಿಕ್ಷಣದ ಧರ್ಮ. ಅದಕ್ಕೆ ಚ್ಯುತಿ ಬರುವ ರೀತಿಯಲ್ಲಿ ಪಠ್ಯಗಳನ್ನು ತಿರುಚಲಾಗಿದೆ, ಸೇರಿಸಲಾಗಿದೆ ಹಾಗೂ ಕೈಬಿಡಲಾಗಿದೆ. ಇದು ಕನ್ನಡಿಗರಿಗೆ ಮಾಡಿದ ದ್ರೋಹ.

ಹೆಡಗೇವಾರ್‌ ಅವರ ಭಾಷಣ ಸೇರ್ಪಡೆ ಮಾಡಿ, ಭಗತ್‌ ಸಿಂಗ್‌ಗೆ ಸಂಬಂಧಿಸಿದ ಪಠ್ಯ ಕೈಬಿಟ್ಟಿರುವುದು ಅ‍ಪಾಯಕಾರಿ ಬೆಳವಣಿಗೆ. ಭಗತ್‌ ಸಿಂಗ್‌ ಸ್ವಾತಂತ್ರ್ಯ ಹೋರಾಟಗಾರ. ಹೆಡಗೇವಾರ್‌ ಆರ್‌ಎಸ್‌ಎಸ್‌ ಕಟ್ಟಿಕೊಂಡಿದ್ದವರು. ಆರ್‌ಎಸ್‌ಎಸ್‌ ಎನ್ನುವುದು ಬಹುತ್ವ ಭಾರತವನ್ನು ಗೌರವಿಸುವುದಲ್ಲ. ಪಠ್ಯದ ಮೂಲಕ ಹೆಡಗೇವಾರ್‌ ಬಗ್ಗೆ ಹೇಳುತ್ತಲೇ ಎಳೆಯ ಮಕ್ಕಳಿಗೆ ಆರ್‌ಎಸ್‌ಎಸ್‌ ಕುರಿತು ಪರಿಚಯಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಇದು ಆರ್‌ಎಸ್‌ಎಸ್‌ನವರ ರಹಸ್ಯ ಕಾರ್ಯಸೂಚಿ.

–ಪ್ರೊ.ಎಸ್‌.ಜಿ.ಸಿದ್ದರಾಮಯ್ಯ,ಸಾಹಿತಿ

‘ವಿಕೃತಿಯ ಪರಾಕಾಷ್ಠೆ’

ಮಹಾನ್‌ ರಾಷ್ಟ್ರಪ್ರೇಮಿ, ಬ್ರಿಟಿಷರಿಗೆ ಸಿಂಹಸ್ವಪ್ನ, ಭಾರತಮಾತೆಯ ಹೆಮ್ಮೆಯ ಪುತ್ರ ಸರ್ದಾರ್‌ ಭಗತ್‌ ಸಿಂಗ್‌ ಅವರ ಪಠ್ಯಕ್ಕೆ ಕೊಕ್‌ ಕೊಟ್ಟು, ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಕುರಿತ ಮಾಹಿತಿಯನ್ನು ಪಠ್ಯಕ್ಕೆ ತುರುಕುತ್ತಿರುವ ಬಿಜೆಪಿ ಮತ್ತವರ ಪಟಾಲಂ ವಿಕೃತಿಗೆ ಇದು ಪರಾಕಾಷ್ಠೆ.

ಭಗತ್‌ ಸಿಂಗ್‌ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದರು. ಸಂಘ ಪರಿವಾರಿಗಳು ಅದೇ ಬ್ರಿಟಿಷರಿಗೆ ಪರಿಚಾರಿಕೆ ಮಾಡಿಕೊಂಡು ಸ್ವಾತಂತ್ರ್ಯಕ್ಕಿಂತ ಗುಲಾಮಗಿರಿಯೇ ಲೇಸೆಂದುಕೊಂಡಿದ್ದರು. ಇಂಥವರು, ಭಗತ್‌ ಸಿಂಗ್‌ರಂಥ ರಾಷ್ಟ್ರಪ್ರೇಮಿಗಳನ್ನು ಸಹಿಸಿಕೊಳ್ಳುತ್ತಾರೆಯೇ?

ಪಠ್ಯವನ್ನು ವಿಕೃತಿಗೊಳಿಸುತ್ತಿರುವುದು ಎಂದರೆ, ಕನ್ನಡ ಆಸ್ಮಿತೆಯನ್ನು ಹತ್ತಿಕ್ಕುವ ಪಾತಕ ಯತ್ನ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು, ಪ್ರಶ್ನಿಸಬೇಕು. ಹೋರಾಟಕ್ಕೂ ಇಳಿಯಬೇಕು.ಅಯ್ಯೋ.. ಕರ್ನಾಟಕ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ!

–ಕುಮಾರಸ್ವಾಮಿ,ವಿಧಾನಸಭೆಯಲ್ಲಿ ಜೆಡಿಸ್‌ ಶಾಸಕಾಂಗ ಪಕ್ಷದ ಮುಖ್ಯಸ್ಥ

‘ಹೆಡಗೇವಾರ್ ಭಾಷಣಕ್ಕೆ ವಿರೋಧ ಬೌದ್ಧಿಕ ಫ್ಯಾಸಿಸಂ ಅಲ್ಲವೇ?’

ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ಅಭಿನಂದನೀಯ. 1925ರಲ್ಲಿ ಆರ್‌ಎಸ್‌ಎಸ್‌ ಸ್ಥಾಪಿಸಿ ‘ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ’ ಎಂಬ ಉದಾತ್ತ ವಿಷನ್ ಮತ್ತು ಮಿಷನ್ ಎರಡನ್ನೂ ನೀಡಿದ ಪ್ರಯೋಗಶೀಲ ರಾಷ್ಟ್ರಚಿಂತಕರ ಬಗ್ಗೆ ವಿದ್ಯಾರ್ಥಿಗಳು ಓದಬೇಕು.

ಬರಗೂರು ರಾಮಚಂದ್ರಪ್ಪ, ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಎಡಪಂಥೀಯ ಚಿಂತಕರು ಕಳೆದು ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. ಈವರೆಗೆ ಅವರು ರಚಿಸಿರುವ ಪಠ್ಯಪುಸ್ತಕಗಳಲ್ಲಾಗಲೀ ಅವರ ಸ್ವತಂತ್ರ ಕೃತಿಗಳಲ್ಲಾಗಲೀ ಆರ್‌ಎಸ್‌ಎಸ್‌ ಕುರಿತು ಒಂದಾದರೂ ಒಳ್ಳೆಯ ಅಂಶವನ್ನು ಬರೆದಿದ್ದಾರೆಯೇ?

ಈವರೆಗೆ ಪಠ್ಯ ಪುಸ್ತಕಗಳಲ್ಲಿ ಆರ್‌ಎಸ್‌ಎಸ್‌ ಚಿಂತನೆಗಳನ್ನು ಸೇರಿಸದೇ ಇದ್ದುದಕ್ಕೆ ಕಾರಣವೇನು? ಬೌದ್ಧಿಕ ಅಸ್ಪೃಶ್ಯತೆ ಒಂದು ಮಾನಸಿಕ ರೋಗವಲ್ಲವೇ? ಈಗ ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದಕ್ಕೆ ವಿರೋಧಿಸುತ್ತಿರುವುದು ಅಸಹಿಷ್ಣುತೆ ಮತ್ತು ಬೌದ್ಧಿಕ ಫ್ಯಾಸಿಸಂ ಅಲ್ಲವೇ?

-ಡಾ.ಬಿ.ವಿ. ವಸಂತಕುಮಾರ್, ಅಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

‘ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದರೇ?’

ಆರ್‌ಎಸ್‌ಎಸ್‌ ಸರಸಂಘಚಾಲಕರಾಗಿದ್ದ ಕೇಶವ ಬಿ. ಹೆಡಗೇವಾರ್ ಅವರ ಭಾಷಣವನ್ನು ರಾಜ್ಯ ಸರ್ಕಾರವು 10ನೇ ತರಗತಿ ಪಠ್ಯಪುಸ್ತಕದಲ್ಲಿ ಸೇರಿಸಿದೆ. ಅವರೇನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರೇ? ದೇಶದ ಏಕತೆ, ಬಡವರ ಹಿತ, ಆರ್ಥಿಕ ಬೆಳವಣಿಗೆ ಸೇರಿದಂತೆ ದೇಶ ಕಟ್ಟುವ ವಿಚಾರದಲ್ಲಿ ಹೆಡಗೇವಾರ್ ಕೊಡುಗೆ ಏನೂ ಇಲ್ಲ. ಆದರೂ, ತಮ್ಮದೇ ಸರ್ಕಾರ ಇದೆಯೆಂದು ಆರ್‌ಎಸ್‌ಎಸ್‌ ಮುಖಂಡರ ವಿಚಾರಗಳನ್ನು ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿರುವುದು ಸರಿಯಲ್ಲ.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಪಠ್ಯದಲ್ಲಿ ಸೇರಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. ಗಾಂಧೀಜಿ ದೇಶದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು. ನೆಹರೂ ಅವರು ಪ್ರಧಾನಿಯಾದ ಬಳಿಕ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದರು. ಅಂಬೇಡ್ಕರ್ ಅವರು ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಪೂರ್ವ ಸಂವಿಧಾನವನ್ನು ನೀಡಿದರು.

–ಮಲ್ಲಿಕಾರ್ಜುನ ಖರ್ಗೆ,ರಾಜ್ಯಸಭೆ ವಿರೋಧ ಪಕ್ಷದ ನಾಯಕ

‘ಇದು ಇಷ್ಟಕ್ಕೆ ನಿಲ್ಲುವುದಿಲ್ಲ’

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿಕೀಳು ಅಭಿರುಚಿಯ ರೋಹಿತ್‌ ಚಕ್ರತೀರ್ಥ ನೇಮಕವಾದಾಗಲೇ ಬಿಜೆ‍ಪಿ ಹಾಗೂ ಆರ್‌ಎಸ್‌ಎಸ್‌ನ ಉದ್ದೇಶ ಸ್ಪಷ್ಟವಾಗಿತ್ತು. ಇದಕ್ಕೆ ರಾಜ್ಯದ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದಷ್ಟೇ ಈಗಿರುವ ಪ್ರಶ್ನೆ.

ಇದು ಯೋಜಿತ ನಿರ್ಧಾರ. ಇದರ ಹಿಂದೆ ಸಾಕಷ್ಟು ಶಕ್ತಿಗಳು ಕೆಲಸ ಮಾಡಿವೆ. ಇದನ್ನು ಹೇಗೆ ತಡೆಯಬೇಕು ಎಂಬುದನ್ನು ಕಾಲವೇ ಹೇಳಬೇಕು. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಅವರು ಇನ್ನೂ ಅತಿರೇಕಕ್ಕೆ ಹೋಗುತ್ತಾರೆ. ತಾಜ್‌ಮಹಲ್‌ ಕೆಡವಿದರೂ ಅಚ್ಚರಿಪಡಬೇಕಿಲ್ಲ.

ಕುವೆಂಪು ಅವರನ್ನು ಅವಮಾನಿಸಿದವನನ್ನೇ ಹುಡುಕಿ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸುತ್ತಾರೆ ಎಂದರೆ ಅರ್ಥವೇನು? ಚಕ್ರತೀರ್ಥನಿಗಿಂತಲೂ ಹೆಚ್ಚು ತಿಳಿದುಕೊಂಡಿರುವವರು ಬಲಪಂಥೀಯರಲ್ಲಿ ಯಾರೂ ಇಲ್ಲವೆ?

–ಪ್ರೊ. ಪುರುಷೋತ್ತಮ ಬಿಳಿಮಲೆ,ಲೇಖಕ

‘ಮಕ್ಕಳ ಮನಸ್ಸನ್ನು ಒಡೆಯಲಾಗುತ್ತಿದೆ’

‘ಶಾಲಾ–ಕಾಲೇಜುಗಳನ್ನು ಪವಿತ್ರ ಸ್ಥಳಗಳು ಎಂದು ಇತ್ತೀಚಿನ ದಿನಗಳವರೆಗೂ ಕರೆಯಲಾಗು
ತ್ತಿತ್ತು. ಆದರೆ, ವಿದ್ಯಾಸಂಸ್ಥೆಗಳ ಒಳಗಡೆಯೇ ಕೋಮುವಾದವನ್ನು ದೊಡ್ಡ ಪ್ರಮಾಣದಲ್ಲಿ ಬಿತ್ತರಿಸಲಾಗುತ್ತಿದೆ. ಮಕ್ಕಳ ಮನಸ್ಸನ್ನು ಒಡೆಯಲಾಗುತ್ತಿದೆ. ಧರ್ಮದ ಅಮಲನ್ನು ಮಕ್ಕಳಲ್ಲಿ ತುಂಬುತ್ತಾ ಹೋದರೆ, ಕೋಮುವಾದದ ವಿಚಾರಧಾರೆಯನ್ನು ಬಿತ್ತರಿಸಿದವರನ್ನೇ ನಾಯಕರು ಎಂದು ಬಿಂಬಿಸಿದರೆ ಅದರ ಪರಿಣಾಮ ಕ್ರೂರ ಆಗುತ್ತದೆ. ಭಾರತೀಯತೆ ಎನ್ನುವ ಪರಿಕಲ್ಪನೆ ಆದರ್ಶದ ಮಟ್ಟದಲ್ಲಿಯೂ ಕುಸಿದು ಹೋದರೆ ಭಾರತದ ಭವಿಷ್ಯ ಅಂಧಕಾರಕ್ಕೆ ಹೊಗಲಿದೆ. ಶಾಲಾ–ಕಾಲೇಜುಗಳನ್ನು ‘ಸರ್ವಜನಾಂಗದ ಶಾಂತಿಯ ತೋಟ’ವಾಗಿ ಉಳಿಸಿಕೊಳ್ಳಲು ಅವಕಾಶ ನೀಡಬೇಕು. ಆಗ ಮಾತ್ರ ದೇಶಕ್ಕೆ ಭವಿಷ್ಯ ಇರುತ್ತದೆ.’

–ವಿನಯಾ ಒಕ್ಕುಂದ,ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT