ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮತ್ತೆ ಸೇನೆಯ ಕೈಗೆಮ್ಯಾನ್ಮಾರ್‌ ಚುಕ್ಕಾಣಿ

Last Updated 2 ಫೆಬ್ರುವರಿ 2021, 17:49 IST
ಅಕ್ಷರ ಗಾತ್ರ

ಮ್ಯಾನ್ಮಾರ್‌ನಲ್ಲಿ ಮತ್ತೆ ಸೇನೆಯ ಆಳ್ವಿಕೆ ಶುರುವಾಗಿದೆ. ಒಂದು ವರ್ಷದ ಮಟ್ಟಿಗೆ ಆಡಳಿತದ ಚುಕ್ಕಾಣಿ ಹಿಡಿಯುವ ಮಾತು ನೀಡಿ ಸೇನಾ ಮುಖ್ಯಸ್ಥರು ಅಧಿಕಾರವನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು ಐದು ದಶಕಗಳ ಸೇನಾಡಳಿತದ ಬಳಿಕ ಮ್ಯಾನ್ಮಾರ್‌ನಲ್ಲಿ 2011ರಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಸೇನೆಗೂ ಹಿಡಿತ ಇದ್ದುದರಿಂದ ಪ್ರಜಾಪ್ರಭುತ್ವವು ಪೂರ್ಣ ಮಟ್ಟದಲ್ಲಿ ಜಾರಿಗೆ ಬಂದಿರಲಿಲ್ಲ. ಅದಾಗಿ ದಶಕ ತುಂಬುವ ಮೊದಲೇ ಸೇನೆಯು ಆಳ್ವಿಕೆಯನ್ನು ಮತ್ತೆ ಕೈಗೆತ್ತಿಕೊಂಡಿದೆ.

***

ಕ್ಷಿಪ್ರಕ್ರಾಂತಿಗೆ ಕಾರಣ ಏನು?

2020ರ ನವೆಂಬರ್ 8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರಾಕರಿಸಿತ್ತು ಎಂದು ಸೇನೆ ಆರೋಪ ಮಾಡಿದೆ. ಆಂಗ್‌ ಸಾನ್‌ ಸೂಕಿ ಅವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ಈ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿತ್ತು.ಮತದಾರರ ಪಟ್ಟಿ ಪರಿಶೀಲನೆ ನಡೆಸುವ ಸಲುವಾಗಿ ಆಡಳಿತವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ; ಇದು ಪ್ರಜಾಪ್ರಭುತ್ವದ ರಕ್ಷಣೆಗೆ ತೆಗೆದುಕೊಂಡ ಕ್ರಮ ಎಂದು ಸೇನೆಯು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

‘ಸಂವಿಧಾನದ ಅನುಸಾರವಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಷ್ಟ್ರಕ್ಕೆ ಬೆದರಿಕೆ ಎದುರಾದಾಗ ಘೋಷಿಸಲಾಗುವ ತುರ್ತು ಪರಿಸ್ಥಿತಿಯಲ್ಲಿ ದೇಶದ ಅಧ್ಯಕ್ಷರಿಂದ ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ ಅಧಿಕಾರವನ್ನು ವರ್ಗಾಯಿಸಲು ಅನುಮತಿ ನೀಡುವ ವಿಧಿ ಸಂವಿಧಾನದಲ್ಲಿದೆ’ ಎಂದು ಸೇನೆ ಹೇಳಿಕೊಂಡಿದೆ.

2008ರ ಸಂವಿಧಾನಕ್ಕೆ ಬದ್ಧವಾಗಿದ್ದುಕೊಂಡು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದಾಗಿ ಸೇನಾ ಆಡಳಿತ ಭರವಸೆ ನೀಡಿದೆ.ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಚುನಾಯಿತ ಸರ್ಕಾರ ವಾಜಾಕ್ಕೆ ಕಾರಣ ಏನು?

l ಸೇನೆಯ ಮುಖ್ಯಸ್ಥ ಜನರಲ್ ಆಂಗ್ ಲಾಯ್‌ ಅವರ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯೇ ಸೇನಾ ದಂಗೆಗೆ ಕಾರಣ ಎಂದು ಮ್ಯಾನ್ಯಾರ್ ಸೇನೆಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಲಾಯ್‌ ಅವರ ಕಡ್ಡಾಯ ನಿವೃತ್ತಿ ಸನ್ನಿಹಿತವಾಗಿತ್ತು. ಎನ್‌ಎಲ್‌ಡಿ ನೇತೃತ್ವದ ಸರ್ಕಾರವು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇರಲಿಲ್ಲ.

l ರೋಹಿಂಗ್ಯಾ ಮುಸ್ಲಿಮರ ವಿರುದ್ಧದ ಯುದ್ಧಾಪರಾಧ ಪ್ರಕರಣದಲ್ಲಿ ಲಾಯ್‌ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯಗಳಲ್ಲಿ ವಿಚಾರಣೆ ಬಾಕಿ ಇದ್ದು, ಯಾವಾಗ ಬೇಕಾದರೂ ಅವರ ಬಂಧನ ಆಗಬಹುದು ಎಂಬ ಸ್ಥಿತಿ ನಿರ್ಮಾಣವಾಗಿತ್ತು.

l ಸಂಸತ್ತಿನಲ್ಲಿ ಸೇನೆಯ ಪ್ರಾಬಲ್ಯವನ್ನು ಕಡಿಮೆ ಮಾಡಲು ಸಂವಿಧಾನ ತಿದ್ದುಪಡಿಗೆ ಎನ್‌ಎಲ್‌ಡಿ ಸರ್ಕಾರ ಮುಂದಾಗಿತ್ತು. ಇದನ್ನು ತಡೆಯುವ ಕ್ರಮವಾಗಿ ಮ್ಯಾನ್ಮಾರ್ ಸೇನಾ ಕ್ಷಿಪ್ರಕ್ರಾಂತಿಯನ್ನು ನೋಡಬಹುದು ಎನ್ನುತ್ತಾರೆ ತಜ್ಞರು.

l ಸಂಸತ್ತಿನಲ್ಲಿ ಸೇನೆಯನ್ನು ಪ್ರತಿನಿಧಿಸುತ್ತಿದ್ದ ಸಾಲಿಡಾರಿಟಿ ಅಂಡ್ ಡೆವಲಪ್‌ಮೆಂಟ್ ಪಕ್ಷವು ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ತೀರಾ ಕಳಪೆ ಸಾಧನೆ ಮಾಡಿತ್ತು. 476 ಸ್ಥಾನಗಳಲ್ಲಿ 33 ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತವಾಗಿತ್ತು – ಈ ಎಲ್ಲ ಕಾರಣಗಳಿಂದ ಲಾಯ್‌ ಅವರು ಅಧಿಕಾರ ಹಿಡಿದಿದ್ದಾರೆ ಎಂಬ ವಾದವಿದೆ.

ಸೂಕಿ ಹೋರಾಟದ ಹಾದಿ

ಆಂಗ್‌ ಸಾನ್‌ ಸೂಕಿ, ಮ್ಯಾನ್ಮಾರ್‌ನ ಪರಮೋಚ್ಚ ನಾಯಕಿ. ದೇಶವನ್ನು ಸೇನೆಯ ಹಿಡಿತದಿಂದ ಮುಕ್ತಗೊಳಿಸುವ ವಿಚಾರದಲ್ಲಿ ಇವರ ಹೋರಾಟ ನಿರ್ಣಾಯಕವಾದದ್ದು. ಹೋರಾಟದ ಕಾರಣಕ್ಕಾಗಿ 15ಕ್ಕೂ ಹೆಚ್ಚು ವರ್ಷಗಳನ್ನು ಅವರು ಗೃಹಬಂಧನದಲ್ಲೇ ಕಳೆದಿದ್ದಾರೆ. ಅವರ ಸುದೀರ್ಘ ಮತ್ತು ದಿಟ್ಟ ಹೋರಾಟವನ್ನು ಇಡೀ ಜಗತ್ತು ಬೆಂಬಲಿಸಿತ್ತು. 1991ರಲ್ಲಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿತ್ತು.

ಆದರೆ, ಅಲ್ಪಸಂಖ್ಯಾತ ರೋಹಿಂಗ್ಯಾ ಸಮುದಾಯದವರನ್ನು ದೇಶದಿಂದ ನಿರ್ದಯವಾಗಿ ಹೊರಗಟ್ಟುವ ವಿಚಾರದಲ್ಲಿ ಸೇನೆಗೆ
ಸಹಕಾರ ನೀಡಿದ್ದರಿಂದ, ಜಾಗತಿಕ ಮಟ್ಟದಲ್ಲಿ ಅವರ ವರ್ಚಸ್ಸಿಗೆ ಧಕ್ಕೆ ಉಂಟಾಯಿತು. 2019ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅವರು, ರೋಹಿಂಗ್ಯಾ ಮುಸ್ಲಿಮರನ್ನು ಹೊರದಬ್ಬಿದ್ದನ್ನು ಸಮರ್ಥಿಸಿಕೊಂಡಿದ್ದರು.

ತಕ್ಷಣದ ಪರಿಣಾಮ

ಆಂಗ್‌ ಸಾನ್‌ ಸೂಕಿ, ಅಧ್ಯಕ್ಷ ಯು ವಿನ್‌ ಮಿಂಟ್‌, ಸಂಪುಟ ಸಚಿವರು, ವಿವಿಧ ಪ್ರಾಂತಗಳ ಮುಖ್ಯಮಂತ್ರಿಗಳು ಹಾಗೂ ಇತರ ಹಿರಿಯ ನಾಯಕರನ್ನು ಸೋಮವಾರ ಏಕಾಏಕಿ ಬಂಧಿಸಲಾಯಿತು. ವಿರೋಧ ಪಕ್ಷಗಳ ನಾಯಕರು ಹಾಗೂ ಹೋರಾಟಗಾರರೂ ಬಂಧನಕ್ಕೊಳಗಾದರು.

ಸ್ವಲ್ಪ ಹೊತ್ತಿನಲ್ಲೇ ಸೇನಾ ಸ್ವಾಮ್ಯದ ಟಿ.ವಿ. ವಾಹಿನಿಯಲ್ಲಿ ಕಾಣಿಸಿಕೊಂಡ ಸೇನೆಯ ಮುಖ್ಯಸ್ಥರು, ‘2008ರಲ್ಲಿ ರಚನೆಯಾದ ಸಂವಿಧಾನವು ನೀಡಿರುವ ಅಧಿಕಾರವನ್ನು ಬಳಸಿಕೊಂಡು, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಒಂದು ವರ್ಷದ ಅವಧಿಗೆ ಇದು ಜಾರಿಯಲ್ಲಿರಲಿದೆ’ ಎಂದು ತಿಳಿಸಿದರು. ಬಳಿಕ ಇಡೀ ವ್ಯವಸ್ಥೆಯ ಮೇಲೆ ಸೇನೆ ಹಿಡಿತ ಸಾಧಿಸಿತು. ಅನೇಕ ಟಿ.ವಿ. ವಾಹಿನಿಗಳ ಪ್ರಸಾರವನ್ನು ಸ್ಥಗಿತಗೊಳಿಸಲಾಯಿತು. ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದುಪಡಿಸಲಾಯಿತು. ಪ್ರಮುಖ ನಗರಗಳಲ್ಲಿ ಫೋನ್‌ ಹಾಗೂ ಇಂಟರ್‌ನೆಟ್‌ ಸೇವೆಗಳೂ ರದ್ದಾದವು. ಷೇರು ಮಾರುಕಟ್ಟೆ, ವಾಣಿಜ್ಯ ಬ್ಯಾಂಕ್‌ಗಳನ್ನು ಮುಚ್ಚಲಾಯಿತು.

ಸಂವಿಧಾನವೇ ನೀಡಿದ ಬಲ

ಮ್ಯಾನ್ಮಾರ್‌ನ ಸಂವಿಧಾನವೇ ಅಲ್ಲಿನ ಸೇನೆಗೆ ವಿಶೇಷವಾದ ಅಧಿಕಾರಗಳನ್ನು ನೀಡಿದೆ. ವಾಸ್ತವದಲ್ಲಿ ಸಂವಿಧಾನ ರಚನೆಯಲ್ಲಿ ಸೇನೆಯ ಪಾತ್ರವೇ ಹಿರಿದಾಗಿತ್ತು. 2005ರಲ್ಲಿ ಸಂವಿಧಾನವನ್ನು ಅಂಗೀಕರಿಸುವ ಸಂದರ್ಭದಲ್ಲಿ, ಮ್ಯಾನ್ಮಾರ್‌ನ ಶಾಸಕಾಂಗದಲ್ಲಿ ಶೇ 25ರಷ್ಟು ಸ್ಥಾನಗಳನ್ನು ಸೇನೆಗೆ ಮೀಸಲಿಡಬೇಕು ಎಂದು ಷರತ್ತು ವಿಧಿಸಲಾಗಿತ್ತು. ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ಮಾಡಬೇಕಿದ್ದರೂ ಶೇ 75ಕ್ಕೂ ಹೆಚ್ಚು ಸದಸ್ಯರ ಬೆಂಬಲ ಇರುವುದು ಅಗತ್ಯ. ಆದ್ದರಿಂದ ಸೇನೆಯ ಒಪ್ಪಿಗೆ ಇಲ್ಲದೆ ಸಂವಿಧಾನ ತಿದ್ದುಪಡಿ ಅಸಾಧ್ಯ ಎಂಬಂತಾಗಿತ್ತು. ಆದರೆ ಸೇನೆಯು ಯಾವಾಗ ಬೇಕಾದರೂ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.

ಈ ನಿಯಮಗಳನ್ನು ಒಪ್ಪಿಕೊಳ್ಳಬೇಕು ಮತ್ತು ಯಾವ ಕಾರಣಕ್ಕೂ ದೇಶದ ಅಧ್ಯಕ್ಷೆ ಆಗಬಾರದು ಎಂಬ ಷರತ್ತಿನೊಂದಿಗೆ ಸೇನಾ ಆಡಳಿತವು 2010ರಲ್ಲಿ ಸೂಕಿ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಿತ್ತು. 2015ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಆಂಗ್‌ ಸಾನ್‌ ಸೂಕಿ ನೇತೃತ್ವದ ಎನ್‌ಎಲ್‌ಡಿ ಶೇ 77ರಷ್ಟು ಸ್ಥಾನಗಳನ್ನು ಪಡೆಯಿತು. ಅಧ್ಯಕ್ಷೆ ಆಗಬಾರದೆಂಬ ಷರತ್ತು ಇದ್ದುದರಿಂದ ಸೂಕಿ ಅವರಿಗಾಗಿಯೇ ಅಲ್ಲಿ ‘ಸ್ಟೇಟ್‌ ಕೌನ್ಸಿಲರ್‌’ ಎಂಬ ಸ್ಥಾನವನ್ನು ಸೃಷ್ಟಿಸಲಾಯಿತು. ಈ ಹುದ್ದೆಯು ಅಧ್ಯಕ್ಷರ ಮೂಲಕ ತಾವೇ ಆಡಳಿತ ನಡೆಸುವಷ್ಟು ಅಧಿಕಾರವನ್ನು ಅವರಿಗೆ ನೀಡಿತ್ತು.

ಸೇನಾ ಆಡಳಿತ ಎಷ್ಟು ದಿನ?

ಸಂವಿಧಾನದ ಉಲ್ಲೇಖದಂತೆ ತುರ್ತು ಪರಿಸ್ಥಿತಿಯನ್ನು ಒಂದು ವರ್ಷದವರೆಗೆ ಹೇರಬಹುದು. ಆದರೆ, ನಿಗದಿತ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಚುನಾವಣೆ ನಡೆಸುವ ಭರವಸೆಯನ್ನು ಉಸ್ತುವಾರಿ ಸಮಿತಿಯ (ಜುಂಟಾ) ಮುಖ್ಯಸ್ಥರು ನೀಡಿದ್ದಾರೆ.
ಆಂಗ್‌ ಸಾನ್‌ ಸೂಕಿ ಅವರ ಸಂಪುಟವನ್ನು ವಜಾಗೊಳಿಸಿದ ನಂತರ ಹೊಸ ಮಂತ್ರಿ ಪರಿಷತ್ತನ್ನು ನೇಮಿಸಲಾಗಿದೆ. ಹೊಸ ಮಂತ್ರಿ ಪರಿಷತ್ತಿನ ಯಾರನ್ನೂ ಹಂಗಾಮಿ ಅಥವಾ ಪ್ರಭಾರ ಎಂದು ಹೆಸರಿಸಿಲ್ಲ. ಒಂದು ವರ್ಷದ ಬಳಿಕವೂ ಸೇನೆಯು ಅಧಿಕಾರದಿಂದ ಕೆಳಗೆ ಇಳಿಯದು ಎಂಬುದರ ಸೂಚನೆ ಇದು ಎಂದು ಪ್ರಜಾಪ್ರಭುತ್ವವಾದಿ ಹೋರಾಟಗಾರರು ಹೇಳುತ್ತಾರೆ. 1990ರ ಚುನಾವಣೆಯ ಬಳಿಕ ಎನ್‌ಎಲ್‌ಡಿಗೆ ಸರ್ಕಾರ ರಚಿಸಲು ಸೇನೆಯು ಅವಕಾಶ ಕೊಟ್ಟದ್ದು ಭರ್ತಿ ಎರಡು ದಶಕಗಳು ಕಳೆದ ಮೇಲೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಆಧಾರ: ರಾಯಿಟರ್ಸ್‌, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT