ಭಾನುವಾರ, ಜುಲೈ 3, 2022
26 °C

ಆಳ-ಅಗಲ| ಹಿಂದಿ ರಾಷ್ಟ್ರಭಾಷೆ ಎಂಬ ಮಿಥ್ಯೆ

ಉದಯ ಯು./ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

‘ಹಿಂದಿ ಭಾರತದ ರಾಷ್ಟ್ರಭಾಷೆ’ ಎಂಬ ಭಾವನೆ ಹಲವರಲ್ಲಿದೆ. ಜಾಗತಿಕ ಮಟ್ಟದಲ್ಲೂ ಇದೇ ಧೋರಣೆ ಎದ್ದು ಕಾಣುತ್ತದೆ. ಆದರೆ, ಭಾರತದ ಸಂವಿಧಾನವು ಹಿಂದಿಯನ್ನು ‘ರಾಷ್ಟ್ರಭಾಷೆ’ ಎಂದು ಹೇಳಿಲ್ಲ. ಬದಲಿಗೆ ‘ಆಡಳಿತ ಭಾಷೆ’ ಎಂದು ಹೇಳಿದೆ. ಆದರೆ, ವಿವಿಧ ರಾಜ್ಯಗಳಲ್ಲಿ ಆಡಳಿತ ಭಾಷೆಗಳೆಂದು ಅಂಗೀಕೃತವಾಗಿರುವ ಇತರ 22 ಭಾಷೆಗಳಿಗಿಂತ ಸ್ವಲ್ಪ ಹೆಚ್ಚಿನ ಸ್ಥಾನಮಾನವು ಹಿಂದಿ ಭಾಷೆಗೆ ಸಂದಿದೆ ಎಂಬುದು ವಾಸ್ತವ.

ರಾಷ್ಟ್ರಭಾಷೆಯ ವಿಚಾರದಲ್ಲಿ ಸಂಸತ್ತಿನಲ್ಲಿ ಚರ್ಚೆಗಳಾಗಿವೆ, ಕೋರ್ಟ್‌ನಲ್ಲಿ ವಾದ–ಪ್ರತಿವಾದಗಳೂ ನಡೆದಿವೆ. 2010ರ ಜ.25ರಂದು ಗುಜರಾತ್‌ ಹೈಕೋರ್ಟ್‌ ನೀಡಿದ್ದ ತೀರ್ಪು ಈ ವಿಚಾರದಲ್ಲಿ ಉಲ್ಲೇಖಾರ್ಹ.

ಭಾರತದಲ್ಲಿ ತಯಾರಾದ ಎಲ್ಲಾ ಉತ್ಪನ್ನಗಳ ಮೇಲೆ ಅದರ ಬೆಲೆ, ತೂಕ, ತಯಾರಾದ ದಿನ, ಅದರಲ್ಲಿ ಬಳಸಿದ ಸಾಮಗ್ರಿ ಮುಂತಾದ ವಿವರಗಳನ್ನು ಹಿಂದಿ ಭಾಷೆಯಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಸುರೇಶ್‌ ಕಛಾಡಿಯಾ ಎಂಬುವರು ಗುಜರಾತ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಹಿಂದಿ ರಾಷ್ಟ್ರಭಾಷೆಯಾಗಿರುವುದರಿಂದ ಅದರ ಬಳಕೆ ಕಡ್ಡಾಯಗೊಳಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌, ‘ದೇಶದ ಹೆಚ್ಚಿನ ಜನರು ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಒಪ್ಪಿರಬಹುದು, ಹಿಂದಿಯನ್ನೇ ಮಾತನಾಡುತ್ತಿರಬಹುದು, ದೇವನಾಗರಿ ಲಿಪಿ ಬಳಸಿ ಅದನ್ನು ಬರೆಯುತ್ತಿರಬಹುದು. ಆದರೆ, ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಿರುವ ಬಗ್ಗೆ ಸಂವಿಧಾನದಲ್ಲಿ ಯಾವುದೇ ದಾಖಲೆಗಳಿಲ್ಲ’ ಎಂದು ಸ್ಪಷ್ಟಪಡಿಸಿತ್ತು.

ಅದೇ ವರ್ಷದ ಮೇ ತಿಂಗಳಲ್ಲಿ ಉತ್ತರ ಪ್ರದೇಶದ ದೇವರಿಯಾ ಕ್ಷೇತ್ರದ ಸಂಸದ ಗೋರಖ್‌ಪ್ರಸಾದ್‌ ಜೈಸ್ವಾಲ್‌ ಅವರು, ‘ಹಿಂದಿಗೆ ರಾಷ್ಟ್ರಭಾಷೆ ಸ್ಥಾನಮಾನ ನೀಡಲು ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ’ ಎಂದು ಸಂಸತ್ತಿನಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸರ್ಕಾರವು ‘ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಪರಿಗಣಿಸಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿತ್ತು.

ತುಳು ಹಾಗೂ ಕೊಡವ ಭಾಷೆಗಳನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಕುರಿತು 2017ರ ಜುಲೈನಲ್ಲಿ ಸಂಸತ್ತಿನಲ್ಲಿ ಚರ್ಚೆಯ ವೇಳೆ ಕೇಂದ್ರ ಸಚಿವ ಕಿರಣ್ ರಿಜಿಜು, ‘ನಾವು ಹಿಂದಿಯನ್ನು ಹೇರುತ್ತಿಲ್ಲ. ರಾಷ್ಟ್ರಭಾಷೆ ಎಂದು ಕರೆದಿಲ್ಲ. ಭಾರತದಲ್ಲಿ ಇರುವ ಎಲ್ಲಾ ಅಧಿಕೃತ ಭಾಷೆಗಳೂ ರಾಷ್ಟ್ರಭಾಷೆಗಳೇ. ಆದರೆ ಹಿಂದಿಯನ್ನು ಆಡಳಿತ ಭಾಷೆ ಎಂದು ಒಪ್ಪಿಕೊಳ್ಳಲಾಗಿದೆ. ಹಿಂದಿಗೆ ವಿಶೇಷ ಸ್ಥಾನಮಾನ ನೀಡಿಲ್ಲ’ ಎಂದು ಹೇಳಿರುವುದೂ ಇಲ್ಲಿ ಉಲ್ಲೇಖಾರ್ಹ.

ಆಡಳಿತ ಭಾಷೆಯಾಗಿ ಮಾತ್ರ ಮಾನ್ಯತೆ

ಬಹುಭಾಷೆ, ಬಹು ಸಂಸ್ಕೃತಿಗಳ ಈ ನಾಡಿನಲ್ಲಿ ಯಾವ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಸ್ವೀಕರಿಸಬೇಕು ಎಂಬ ವಿಚಾರವಾಗಿ ಸಂವಿಧಾನ ರಚನಾಕಾರರೂ ಸಾಕಷ್ಟು ಚರ್ಚಿಸಿದ್ದಾರೆ. ಇಂದು ಇರುವ ಗೊಂದಲಗಳು, ಧೋರಣೆಗಳು ಅಂದೂ ಇದ್ದವು. ಅವುಗಳ ಬಗ್ಗೆ ಸಮಿತಿಯು ಸುದೀರ್ಘವಾಗಿ ಚರ್ಚಿಸಿತ್ತು ಎಂಬುದಕ್ಕೆ ಸಾವಿರಾರು ಪುಟಗಳ ದಾಖಲೆಗಳು ಲಭಿಸುತ್ತವೆ. ಸುದೀರ್ಘ ಚರ್ಚೆಯ ನಂತರ ಬಹಳ ಮಹತ್ವದ ಮತ್ತು ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡಬಲ್ಲಂಥ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಕೊನೆಗೂ ಆಡಳಿತ ಭಾಷೆಯಾಗಿ ಇಂಗ್ಲಿಷ್‌ ಜತೆಗೆ ಹಿಂದಿಗೂ ಸ್ಥಾನ ಲಭಿಸಿದೆ ಎಂಬುದು ಮಾತ್ರ ಆ ಭಾಷೆಯ ಹೆಗ್ಗಳಿಕೆಯಾಗಿ ಉಳಿಯಿತು.

ಸಂವಿಧಾನದ 343(1) ವಿಧಿಯು, ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯನ್ನು ಆಡಳಿತ ಭಾಷೆಯೆಂದು ತಿಳಿಸುತ್ತದೆ. 343(2)ನೇ ವಿಧಿಯಲ್ಲಿ 15 ವರ್ಷಗಳವರೆಗೆ ಇಂಗ್ಲಿಷ್‌ ಅನ್ನು ಆಡಳಿತಭಾಷೆಯಾಗಿ ಬಳಸಲು ಅವಕಾಶ ಕೊಡಲಾಗಿದೆ. ರಾಷ್ಟ್ರಪತಿಯ ಅನುಮತಿ ಪಡೆದು, ಈ ಅವಧಿಯಲ್ಲಿ ಹಿಂದಿಯನ್ನೂ ಬಳಸಬಹುದಾಗಿತ್ತು. ಆ ಹದಿನೈದು ವರ್ಷಗಳ ನಂತರವೂ ಇಂಗ್ಲಿಷ್‌ ಅನ್ನು ಆಡಳಿತಭಾಷೆಯಾಗಿ ಮುಂದುವರಿಸುವ ಕಾನೂನು ರೂಪಿಸಲು ಸಂವಿಧಾನದ 343(3)ನೇ ವಿಧಿ ಅನುಮತಿ ನೀಡಿತ್ತು.

1966ರಲ್ಲಿ ‘ಹಿಂದಿ ಮತ್ತು ಇಂಗ್ಲಿಷ್‌ ಎರಡೂ ಆಡಳಿತ ಭಾಷೆಗಳು’ ಎಂದು ಕೇಂದ್ರ ಸರ್ಕಾರ ಕಾನೂನು ರೂಪಿಸಿತು. ಜತೆಗೆ ಸಂವಿಧಾನದ 344, 346, ಮತ್ತು 351ನೇ ವಿಧಿಗಳಡಿ ಹಿಂದಿ ಭಾಷೆಗೆ ನೀಡಲಾಗಿದ್ದ ಕೆಲವು ಸವಲತ್ತುಗಳನ್ನು ಹಾಗೆಯೇ ಮುಂದುವರಿಸಲಾಯಿತು. ರಾಜ್ಯಗಳು ಅವುಗಳದ್ದೇ ಪ್ರಾದೇಶಿಕ ಭಾಷೆಯನ್ನು ಮತ್ತು ಇಂಗ್ಲಿಷ್‌ ಅನ್ನು ಸಂವಹನ ಮತ್ತು ಆಡಳಿತ ಭಾಷೆಗಳಾಗಿ ಬಳಸುತ್ತಿವೆ. ಇದರ ಜತೆಗೆ ಯಾವುದಾದರೂ ಇನ್ನೊಂದು ಭಾಷೆಯನ್ನು ಅಧಿಕೃತವಾಗಿ ಬಳಸಲು ರಾಜ್ಯಗಳಿಗೆ ಅವಕಾಶ ನೀಡಲಾಗಿದೆ.

344ನೇ ವಿಧಿಯ ಪ್ರಕಾರ ರಾಷ್ಟ್ರಪತಿಯು ಹಿಂದಿಗಾಗಿ ವಿಶೇಷ ಆಯೋಗವೊಂದನ್ನು ರಚಿಸಿ ಶಿಫಾರಸುಗಳನ್ನು ಪಡೆಯಬಹುದು. ರಾಜ್ಯಗಳು ಅವುಗಳನ್ನು ಒಪ್ಪಿದರೆ 346ನೇ ವಿಧಿ ಪ್ರಕಾರ ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬಳಸಬಹುದು. ಆದರೆ, ಹೀಗೆ ರೂಪಿಸಲಾದ ವರದಿ ಹಾಗೂ ತ್ರಿಭಾಷಾ ಸೂತ್ರವನ್ನು ದಕ್ಷಿಣದ ರಾಜ್ಯಗಳು ತಿರಸ್ಕರಿಸಿದ್ದು, ಹಿಂದಿ ವಿರೋಧಿ ಹೋರಾಟಗಳು ನಡೆದದ್ದು ಎಲ್ಲವೂ ಈಗ ಇತಿಹಾಸ.

ಆದ್ದರಿಂದ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿಲ್ಲ ಎಂಬುದು ಸ್ಪಷ್ಟ.

ಹೇರಿಕೆ ವಿರುದ್ಧ ಹೋರಾಟ ನಿರಂತರ

ಹಿಂದಿ ಹೇರಿಕೆ ವಿರೋಧಿ ಹೋರಾಟಕ್ಕೆ 80 ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾದ ಈ ವಿರೋಧವು ಈಗಲೂ ಮುಂದುವರಿದಿದೆ. ಹಿಂದಿ ಮಾತ್ರವೇ ದೇಶವನ್ನು ಒಗ್ಗೂಡಿಸಬಲ್ಲದು ಎಂದು ಕಳೆದ ವರ್ಷ ತಮಿಳುನಾಡಿಗೆ ಭೇಟಿ ನೀಡಿದ್ದಾಗ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲೂ ಇದೇ ರೀತಿಯಲ್ಲಿ ಹಿಂದಿಯನ್ನು ಹಿಂದಿಯೇತರ ಭಾಷಾ ರಾಜ್ಯಗಳ ಮೇಲೆ ಹೇರುವ ಯತ್ನ ನಡೆದಿತ್ತು. ಈ ಯತ್ನದ ವಿರುದ್ಧ ತಮಿಳರು, ಕನ್ನಡಿಗರು ಮತ್ತು ಬಂಗಾಳಿಗಳು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಹಿಂದಿ ಭಾರತವನ್ನು ಒಗ್ಗೂಡಿಸುವ ಭಾಷೆ ಅಲ್ಲ ಎಂಬುದನ್ನು ಈ ಹೋರಾಟಗಳು ಪದೇ-ಪದೇ ಸಾಬೀತುಮಾಡಿವೆ. ಹಿಂದಿ ರಾಷ್ಟ್ರಭಾಷೆ ಎಂಬುದನ್ನು ಹೇರುವ ಯತ್ನ ನಡೆದಾಗಲೆಲ್ಲಾ, ಅದು ಸುಳ್ಳು ಎಂಬುದನ್ನು ಈ ಹೋರಾಟಗಳು ತೋರಿಸಿಕೊಟ್ಟಿವೆ. ದೇಶದ ಸಮಸ್ತ ಜನರು ಹಿಂದಿ ರಾಷ್ಟ್ರಭಾಷೆ ಎಂಬುದನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಹೀಗಾಗಿಯೇ ಹಿಂದಿ ರಾಷ್ಟ್ರಭಾಷೆ ಎಂಬುದಕ್ಕೆ ಸಂವಿಧಾನದ ಮುದ್ರೆ ಒತ್ತಲು ಸಾಧ್ಯವಾಗಿಲ್ಲ.

ಹಿಂದಿ ಹೇರಿಕೆ ವಿರುದ್ಧದ ಹೋರಾಟದಲ್ಲಿ ಸದಾ ಮುಂದೆ ಇರುವುದು ತಮಿಳರು. 1938ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಅಡಿಯಲ್ಲಿ ತಮಿಳರ ಮೇಲೆ ಹಿಂದಿ ಹೇರಿಕೆ‍ಯ ಆದೇಶ ಹೊರಬಿದ್ದಿತ್ತು. ಇದರ ವಿರುದ್ಧ ತಮಿಳರು ಹೋರಾಟ ಆರಂಭಿಸಿದರು. ಪೆರಿಯಾರ್ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟವು, ಹಿಂದಿ ಹೇರಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಪೆರಿಯಾರ್ ಚಳವಳಿ ಎಂದೇ ಹೆಸರಾದ ಈ ಹೋರಾಟವನ್ನು ಪೆರಿಯಾರ್ ಅವರು, ‘ತಮಿಳುನಾಡು ತಮಿಳರಿಗಾಗಿ’ ಎಂಬ ಘೋಷವಾಕ್ಯದ ಮೂಲಕ ಸಂಘಟಿಸಿದ್ದರು. 1940ರಲ್ಲಿ ಸರ್ಕಾರ ಆದೇಶವನ್ನು ಹಿಂಪಡೆಯಿತು. 1965ರಲ್ಲಿ ಮತ್ತೆ ಹಿಂದಿ ಹೇರಿಕೆಯ ಯತ್ನಗಳು ನಡೆದವು. ಆಗ ಡಿಎಂಕೆ ಪಕ್ಷವು ಇದರ ವಿರುದ್ಧ ಹೋರಾಟ ನಡೆಸಿತ್ತು. ಡಿಎಂಕೆ ಹೋರಾಟಕ್ಕೆ ವಿದ್ಯಾರ್ಥಿ ಚಳವಳಿಯೂ ಜತೆಯಾಗಿತ್ತು. ಈ ಹೋರಾಟದಲ್ಲಿ ಹಲವರ ಆತ್ಮಾಹುತಿಯ ನಂತರ ಸರ್ಕಾರ ಈ ಯತ್ನವನ್ನು ಕೈಬಿಟ್ಟಿತು. ಹಿಂದಿ ನಮಗೆ ಸಂಪರ್ಕ ಭಾಷೆ ಆಗಲು ಸಾಧ್ಯವಿಲ್ಲ. ಇಂಗ್ಲಿಷ್ ಮಾತ್ರವೇ ಸಂಪರ್ಕ ಭಾಷೆಯಾಗಬಲ್ಲದು ಎಂಬುದು ತಮಿಳರ ಪ್ರತಿಪಾದನೆ. ಹೀಗಾಗಿಯೇ ಹಿಂದಿ ಹೇರಿಕೆಯ ರೂಪವಾದ ತ್ರಿಭಾಷಾ ಸೂತ್ರವನ್ನು ತಮಿಳುನಾಡು ಈವರೆಗೆ ಒಪ್ಪಿಕೊಂಡಿಲ್ಲ.

ಕರ್ನಾಟಕದ ಮಟ್ಟಿಗೆ ಹಿಂದಿ ಹೇರಿಕೆ ವಿರುದ್ಧದ ಹೋರಾಟದ ಭಾಗವಾಗಿ, ಕನ್ನಡ ಭಾಷಾ ಮಾಧ್ಯಮ ಶಿಕ್ಷಣ ಜಾರಿಗಾಗಿ ಆಗ್ರಹಿಸಿ ಹೋರಾಟ ನಡೆಯಿತು. ವಿ.ಕೃ.ಗೋಕಾಕ್ ಅವರ ವರದಿಯ ಶಿಫಾರಸಿನಂತೆ ಕನ್ನಡ ಭಾಷಾ ಮಾಧ್ಯಮ ಶಿಕ್ಷಣದ ಪರವಾಗಿ ಸಾಹಿತಿಗಳು ಹೋರಾಟ ಆರಂಭಿಸಿದರು. ಗೋಕಾಕ್ ಚಳವಳಿ ಎಂದೇ ಹೆಸರಾದ ಈ ಹೋರಾಟಕ್ಕೆ, ಭಾಷಾ ತಜ್ಞರು, ಕಲಾವಿದರು ಕೊನೆಗೆ ಜನಸಾಮಾನ್ಯರೂ ಜತೆಯಾದರು. ಈ ಹೋರಾಟದ ಫಲವಾಗಿ 1ರಿಂದ 10ನೇ ತರಗತಿವರೆಗೆ ಕನ್ನಡ ಭಾಷಾ ಮಾಧ್ಯಮ ಶಿಕ್ಷಣ ಜಾರಿಯಾಯಿತು. ಈಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟಗಳು ನಡೆದಿವೆ. ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ತನ್ನ ನಿಲ್ದಾಣಗಳ ನಾಮಫಲಕಗಳಲ್ಲಿ ಹಿಂದಿಗೆ ಆದ್ಯತೆ ನೀಡಿತ್ತು. ಮೊದಲ ಸಾಲಿನಲ್ಲಿ ಹಿಂದಿ, ಎರಡನೇ ಸಾಲಿನಲ್ಲಿ ಇಂಗ್ಲಿಷ್ ಮತ್ತು ಮೂರನೇ ಸಾಲಿನಲ್ಲಿ ಕನ್ನಡದಲ್ಲಿ ಹೆಸರುಗಳನ್ನು ಬರೆಯಲಾಗಿತ್ತು. ಇದರ ವಿರುದ್ಧ ಕೆಲವು ಸಂಘಟನೆಗಳು ಆರಂಭಿಸಿದ ಹೋರಾಟವು, ಪರಿಣಾಮಕಾರಿಯಾಯಿತು. ಕನ್ನಡಪರ ಸಂಘಟನೆಗಳು ಮಾತ್ರವಲ್ಲದೆ, ಜನಸಾಮಾನ್ಯರೂ ಹೋರಾಟದಲ್ಲಿ ಭಾಗಿಯಾದರು. ಹಿಂದಿಗೆ ಪ್ರಾಧಾನ್ಯತೆ ನೀಡಿದ್ದ ನಾಮಫಲಕಗಳಿಗೆ ಕಪ್ಪುಮಸಿ ಬಳಿಯಲಾಯಿತು. ಕೊನೆಗೆ ಬಿಎಂಆರ್‌ಸಿಎಲ್‌ ತನ್ನ ಹಿಂದಿ ಹೇರಿಕೆ ನೀತಿಯನ್ನು ಹಿಂಪಡೆಯಿತು.

ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯಲ್ಲೂ ಹಿಂದಿ ಹೇರಿಕೆಯ ಅಂಶಗಳು ಇದ್ದವು. ಹಿಂದಿಯೇತರ ಭಾಷಾ ರಾಜ್ಯಗಳಲ್ಲಿ ಹಿಂದಿಯನ್ನು ತ್ರಿಭಾಷಾ ಸೂತ್ರದ ಅಡಿ ಕಲಿಯಬೇಕು ಎಂದು ನೂತನ ಶಿಕ್ಷಣ ನೀತಿಯ ಕರಡು ನಿಯಮಗಳಲ್ಲಿ ಹೇಳಲಾಗಿತ್ತು. ಹಿಂದಿಯೇತರ ಭಾಷಾ ರಾಜ್ಯಗಳು ಅದರಲ್ಲೂ ಮುಖ್ಯವಾಗಿ ತಮಿಳುನಾಡು, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ಇದನ್ನು ವಿರೋಧಿಸಿದವು. ಹೋರಾಟದ ಫಲವಾಗಿ ಈ ಅಂಶಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕಾಯಿತು.

‘ಹಿಂದಿ ಬಲಾತ್ಕಾರದ ಭಾಷೆ’

ಸಾಮಾನ್ಯವಾಗಿ ಮಂತ್ರಿಗಳೆಲ್ಲ ತ್ರಿಭಾಷಾ ಸೂತ್ರವನ್ನು ನಿಶ್ಯಂಕೆಯಿಂದ ಸಾರುತ್ತಾರೆ; ಅದರ ಅಪಾಯಗಳನ್ನು ಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ನಾವು ಹಗಲುಗುರುಡರಾಗಿ ವರ್ತಿಸಬಾರದು. ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೆ ಆಗಿದೆ...

ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲಿಷುಗಳು ಬಲಾತ್ಕಾರ ಭಾಷೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಈ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಗಳೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ?

ಇಂಗ್ಲಿಷಿನ ಸ್ಥಾನದಲ್ಲಿ ಹಿಂದಿಯನ್ನು ತಂದು ಕೂರಿಸಬೇಕೆಂಬುದು ಹಿಂದಿವಾದಿಗಳ ಸಂಚು. ಇದನ್ನು ಕನ್ನಡಿಗರು ಪ್ರತಿಭಟಿಸಿ ವಿಫಲಗೊಳಿಸಬೇಕು. ಕೇಂದ್ರ ಸರ್ಕಾರವನ್ನು ಮೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರ ಹಿಂದಿ ವಿಶ್ವವಿದ್ಯಾನಿಲಯ ಸ್ಥಾಪನೆಯೇ ಮುಂತಾದ ಅವಿವೇಕದ ಕಾರ್ಯಗಳಿಗೆ ಕೈಹಾಕಿ ಕನ್ನಡಿಗರ ಹಿತವನ್ನು ಬಲಿಕೊಡಬಾರದು.

ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ.

* ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಪುಸ್ತಕದ, ‘ಕರ್ನಾಟಕ: ಇಟ್ಟ ಹೆಸರು ಕೊಟ್ಟ ಮಂತ್ರ’ ಲೇಖನದ ಆಯ್ದ ಭಾಗಗಳು

***

‘ಬಲವಂತದ ಹೇರಿಕೆ ಬೇಡ’

ದೇಶದ ಎಲ್ಲ ಭಾಷೆಗಳೂ ಪ್ರಧಾನ ಭಾಷೆಗಳೇ. ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯನ್ನು ಹೇರಿಕೆ ಮಾಡುವುದು ಸರಿಯಲ್ಲ. ಹಿಂದಿ ಭಾಷೆಯ ಅದೃಷ್ಟದ ಕಾರಣಕ್ಕೆ ಟಿ.ವಿ, ಮಾಧ್ಯಮಗಳ ಮೂಲಕ ಎಲ್ಲೆಡೆ ತಲುಪಿದೆ. ಹಿಂದಿ ಎಲ್ಲರಿಗೂ ಬರುತ್ತದೆ ಎಂಬ ಕಾರಣ ಮುಂದಿಟ್ಟು ದೇಶದೆಲ್ಲೆಡೆ ಹಿಂದಿ ಹೇರಿಕೆ ಮಾಡಲು ಹೊರಡುವುದು ಖಂಡನೀಯ. ಹಿಂದಿ, ಸಂಸ್ಕೃತ ಯಾವುದೇ ಭಾಷೆಯನ್ನು ಪ್ರೀತಿಸುವುದು ಒಳ್ಳಯದೇ, ಆದರೆ, ನಮ್ಮ ಭಾಷೆಯೇ ನಮ್ಮ ಉಸಿರು. ಉಸಿರೇ ಕನ್ನಡವಾಗಿರುವಾಗ ಹಿಂದಿಯನ್ನು ಉಸಿರಾಡಿ ಎನ್ನುವುದು ಮಹಾ ಪ್ರಮಾದ. ಹಿಂದಿ ಭಾಷೆ ಕಲಿಯಬೇಡಿ ಎಂದು ಹೇಳುವುದಿಲ್ಲ; ಹೇರಿಕೆ ಮಾಡಬೇಡಿ ಅಷ್ಟೆ. ಯಾವುದೇ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡಲು ಹೊರಟರೆ ಅದರ ಮೇಲೆ ಸಹಜವಾಗಿ ಇರುವ ಪ್ರೀತಿಯೇ ಹೊರಟು ಹೋದೀತು. ಹುಷಾರ್‌.

ವೈದೇಹಿ, ಹಿರಿಯ ಲೇಖಕಿ

---------

‘ಹಿಂದಿ ಹೇರಬಾರದು, ಕನ್ನಡ ತಿರಸ್ಕರಿಸಬಾರದು’

‘ಭಾಷೆಯ ಆಧಾರದ ಮೇಲೆಯೇ ರಾಜ್ಯಗಳು ರಚನೆಯಾಗಿರುವುದರಿಂದ ಯಾವುದೇ ರಾಜ್ಯದಲ್ಲಿ, ಬೇರೆ ಯಾವುದೇ ಭಾಷೆ ಹೇರುವುದು ಸರಿಯಲ್ಲ. ಹಿಂದಿಯನ್ನು ಭಾಷೆಯಾಗಿ ಕಲಿಯಬಹುದು. ಆದರೆ, ಕನ್ನಡವನ್ನು ತಿರಸ್ಕರಿಸುವ ಕೆಲಸವಾಗಬಾರದು. ಸರ್ಕಾರದ ಯಾವುದೇ ಸಭೆ–ಸಮಾರಂಭಗಳಾಗಿ, ಕಾರ್ಯಕ್ರಮದಲ್ಲಾಗಲಿ ಆಯಾ ಪ್ರಾದೇಶಿಕ ಭಾಷೆಗೆ ಸ್ಥಾನವಿರಲೇಬೇಕು. ಅಂದರೆ, ಸರ್ಕಾರದ ಅಥವಾ ಅಧಿಕಾರಿಗಳು ನಡೆಸುವ ವ್ಯವಹಾರ ಆ ಪ್ರದೇಶದ ಜನರಿಗೆ ತಿಳಿಯಬೇಕು ಎಂಬುದು ಇದರ ಉದ್ದೇಶ. ಬಹುತೇಕರಿಗೆ ಹಿಂದಿ ಅಥವಾ ಇಂಗ್ಲಿಷ್‌ ತಿಳಿದಿರುವುದಿಲ್ಲ. ಆದರೆ, ಪ್ರಾದೇಶಿಕ ಭಾಷೆಯ ಗೊತ್ತಿರುತ್ತದೆ’.

ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

 --------

‘ಪ್ರಾದೇಶಿಕ ಭಾಷೆಗಳ ಸಾರ್ವಭೌಮತ್ವ ಕಾಪಾಡಬೇಕು’

ದಕ್ಷಿಣ ಭಾರತದ ರಾಜ್ಯಗಳಿಗೆ ಹೊಂದಿಕೆ ಆಗದಂತಹ ಏಕೈಕ ಭಾಷೆಯೆಂದರೆ ಅದು ಹಿಂದಿ. ಇಡೀ ದೇಶದ ಮೇಲೆ ಹಿಂದಿ ಹೇರಿಕೆ ಮಾಡಿದರೆ 32 ಪ್ರಾದೇಶಿಕ ಭಾಷೆಗಳು ನಾಶವಾಗುತ್ತವೆ. ನಮ್ಮ ದೇಶ ಬಹಳ ವೈವಿಧ್ಯಮಯವಾಗಿರುವ, ಬಹುಭಾಷೆಗಳಿಂದ ಕೂಡಿರುವಂತಹದ್ದು. ಆಯಾ ಪ್ರಾದೇಶಿಕ ಭಾಷೆಗಳಿಗೆ ಪ್ರಾಶಸ್ತ್ಯ ಕೊಡುವುದರ ಜತೆಗೆ ಅವುಗಳ ಸಾರ್ವಭೌಮತ್ವ ಕಾಪಾಡಬೇಕು. ಎಲ್ಲರೂ ಹಿಂದಿ ಒಪ್ಪಿಕೊಳ್ಳಬೇಕು ಎಂದು ಹೇಳುತ್ತಿರುವುದು ಅಮಾನವೀಯ. ಅದನ್ನು ಎಲ್ಲರೂ ಖಂಡಿಸಬೇಕು. ದೊಡ್ಡರಂಗೇಗೌಡ ಅಧಿಕಾರರೂಢ ಪಕ್ಷದವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿ. ಯಾರು ಅಧಿಕಾರದಲ್ಲಿ ಇರುತ್ತಾರೋ ಅವರ ಡಾರ್ಲಿಂಗ್‌. ಈ ಹಿಂದೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಸಂಸ್ಕೃತ ದೇಶ ಭಾಷೆ ಎಂದು ಹೇಳಿದ್ದರು. ಈಗ ದೊಡ್ಡರಂಗೇಗೌಡರು ಹಿಂದಿ ದೇಶ ಭಾಷೆ ಆಗಬೇಕು ಎನ್ನುತ್ತಿದ್ದಾರೆ. ಆಳುವ ಪಕ್ಷದ ಹಿತಾಸಕ್ತಿ ಕಾಪಾಡುವ ಈ ಧೋರಣೆ ತೀವ್ರ ಖಂಡನಾರ್ಹ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಆಳುವ ಪಕ್ಷದ ಕಡೆಗೆ ವಾಲಿರುವುದು ದುರದೃಷ್ಟಕರ.

ಕುಂ. ವೀರಭದ್ರಪ್ಪ, ಹಿರಿಯ ಸಾಹಿತಿ

 ---------

ಭಾಷೆಗಳ ವಿಚಾರದಲ್ಲಿ ಭಾವನೆ ಬಡಿದೆಬ್ಬಿಸಬಾರದು

ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯ ಇರಬೇಕು ಎನ್ನುವುದು ಸರಿ. ಆದರೆ, ಹಿಂದಿ ಇದ್ದರೆ, ಕಲಿತರೆ ತೊಂದರೆ ಏನಿದೆ. ಭಾಷೆಗಳ ವಿಚಾರದಲ್ಲಿ ನಾವು ಸಂಕುಚಿತ ಮನೋಭಾವ ಹೊಂದಬಾರದು. ರಾಜ್ಯದಲ್ಲಿ ಕನ್ನಡದಲ್ಲೇ ವ್ಯವಹಾರ ನಡೆಯಬೇಕು, ಪ್ರಾಶಸ್ತ್ಯ ಸಿಗಬೇಕು. ಇದಕ್ಕೆ ಬೇರೆ ಏನೂ ಕಾರಣ ಅಲ್ಲ; ಏನು ನಡೆಯುತ್ತಿದೆ ಎಂಬುದು ಜನರಿಗೆ ಸರಳವಾಗಿ ತಿಳಿಯಬೇಕು ಎಂಬ ಕಾರಣಕ್ಕೆ ಮಾತೃಭಾಷೆ ಮುಖ್ಯವಾಗುತ್ತದೆ. ಹಿಂದಿ– ಕನ್ನಡ ಎಂದು ಭಾಷೆಗಳ ವಿಚಾರದಲ್ಲಿ ಭಾವನೆಗಳನ್ನು ಬಡಿದೆಬ್ಬಿಸುವುದು ಸರಿ ಅನ್ನಿಸಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೇ ಪ್ರಾಶಸ್ತ್ಯ ನೀಡಬೇಕು ಎಂಬುದಕ್ಕೆ ದೊಡ್ಡರಂಗೇಗೌಡರದೂ ವಿರೋಧ ಇರಲಿಕ್ಕಿಲ್ಲ. ಯಾವುದೇ ಭಾಷೆಯನ್ನು ಹೇರಿಕೆ ಮಾಡುವ ಮನೋಭಾವ ಇದ್ದರೆ ಅದು ತಪ್ಪು. ಹಿಂದಿಯನ್ನು ಒಂದು ಭಾಷೆಯಾಗಿ ಕಲಿಸಲು, ಪರಿಚಯಿಸಲು ಯಾರ ವಿರೋಧವೂ ಇರಬಾರದು. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪಾವಿತ್ರ್ಯ, ಸೊಗಸು, ಸರಳತೆ ಇರುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.

ಕೆ.ಆರ್‌. ರಮೇಶ್‌ ಕುಮಾರ್, ಮಾಜಿ ಸಭಾಪತಿ

––––––––

ಹಿಂದಿ ಕುರಿತ ಅಸಹನೆ ರಾಜಕೀಯ ಪ್ರೇರಿತ

ಭಾಷೆ ಜಗಳ ಆಡುವ ವಿಷಯ ಅಲ್ಲ. ನಮ್ಮತನ ಇದ್ದರೆ ನೂರು ಭಾಷೆ ಕಲಿತೂ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬಹುದು. ನಮ್ಮತನ ಇಲ್ಲದಿದ್ದರೆ, ಇನ್ನೊಂದು ಭಾಷೆ ವಿರೋಧಿಸಿ ನಮ್ಮ ಭಾಷೆ ಉಳಿಸಿಕೊಳ್ಳಲು ಆಗಲ್ಲ. ಈಗ ಅಪಾಯ ಇರುವುದು ನಮ್ಮತನದ ಸ್ವಾಭಿಮಾನ ಶೂನ್ಯತೆ. ನೂರಕ್ಕೆ ನೂರು ಕನ್ನಡಿಗರೇ ಇರುವ ಊರಲ್ಲೇ ಕನ್ನಡ ಶಾಲೆಗಳು ಏಕೆ ಮುಚ್ಚುತ್ತಿವೆ. ಕಾರಣವೇನು? ಏನಾದರೂ ಮಾಡಿ ಜಗಳ ಆಡುವ ಜನಕ್ಕೆ ಒಂದು ನೆಪ ಸಿಗುತ್ತದೆ. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ. ದೊಡ್ಡರಂಗೇಗೌಡರನ್ನು ವಿರೋಧಿಸುವವರು ತಮ್ಮ ಬದುಕಿನಲ್ಲಿ ಶೇ 10ರಷ್ಟು ಕನ್ನಡ ಅಳವಡಿಸಿಕೊಂಡಿದ್ದರೆ, ಅರ್ಥ ಇರುತ್ತದೆ. ಪರಕೀಯ ಇಂಗ್ಲಿಷ್‌ ಭಾಷೆ ಒಪ್ಪಿಕೊಳ್ಳುವವರು ಹಿಂದಿ ಏಕೆ ಒಪ್ಪಿಕೊಳ್ಳಬಾರದು. ಇಂಗ್ಲಿಷ್‌ ಹೇರಿಕೆ ಪ್ರಶ್ನಿಸದವರು, ಹಿಂದಿ ಬಗ್ಗೆ ಏಕೆ ಪ್ರಶ್ನಿಸಬೇಕು? ಹಿಂದಿ ಬಗೆಗಿನ ಅಸಹನೆ ರಾಜಕೀಯ ಪ್ರೇರಿತ. ಬಹಳಷ್ಟು ಜನ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕಾಯಂ ಆಗಿ ಇಂಗ್ಲಿಷ್‌ ಮೀಡಿಯಂ ಶಾಲೆಗಳಿಗೆ ಕಳಿಸಿ ಈಗ ಮಾತಾಡ್ತಾ ಇದ್ದಾರೆ.

ಸಿ.ಟಿ.ರವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು