ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಪತ್ರಿಕೆಗಳಿಗೆ ಮುದ್ರಣ ಕಾಗದದ ಹೊರೆ– ಮುದ್ರಣ ನಿಲ್ಲಿಸುವ ಸ್ಥಿತಿ!

Last Updated 21 ಏಪ್ರಿಲ್ 2022, 19:10 IST
ಅಕ್ಷರ ಗಾತ್ರ

ಉಪಾಲಿ ನ್ಯೂಸ್‌ಪೇಪರ್ಸ್‌ ಲಿಮಿಟೆಡ್‌ ಸಂಸ್ಥೆಯ ದಿ ಐಲ್ಯಾಂಡ್‌ ಎಂಬ ಇಂಗ್ಲಿಷ್‌ ದಿನಪ‍ತ್ರಿಕೆ, ದಿವಾಯಿನಾ ಎಂಬ ಹೆಸರಿನ ಸಿಂಹಳ ಭಾಷೆಯ ದಿನಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸುವುದಾಗಿ ಮಾರ್ಚ್‌ 26ರಂದು ಘೋಷಿಸಿದವು. ಶ್ರೀಲಂಕಾದ ವಿದೇಶಿ ವಿನಿಮಯ ಕೊರತೆ ಇದಕ್ಕೆ ಮುಖ್ಯ ಕಾರಣ. ಭಾರತದ ಮತ್ತು ಜಗತ್ತಿನ ಇತರ ಭಾಗಗಳ ಪತ್ರಿಕೆಗಳ ಪರಿಸ್ಥಿತಿಯೂ ಹೀಗೆಯೇ ಇದೆ. ಕಾರಣ ಮಾತ್ರ ಭಿನ್ನ. ಹಲವು ಪತ್ರಿಕೆಗಳು ಮುದ್ರಣ ನಿಲ್ಲಿಸುವ ಸ್ಥಿತಿ ಸದ್ಯದಲ್ಲಿಯೇ ಎದುರಾಗಬಹುದು ಎಂದು ಮುದ್ರಣ ಕ್ಷೇತ್ರದ ಪರಿಣತರು ಹೇಳುತ್ತಾರೆ. ಮುದ್ರಣ ಕಾಗದದ ಕೊರತೆ ಮತ್ತು ಕಾಗದದ ದರದಲ್ಲಿ ಆಗಿರುವ ಅತಿಯಾದ ಏರಿಕೆ ಇದಕ್ಕೆ ಕಾರಣ. ಮುದ್ರಣ ಕಾಗದದ ಕೊರತೆ ಮತ್ತು ದರ ಏರಿಕೆಯ ಹಿಂದೆ ಹಲವು ಕಾರಣಗಳು ಇವೆ.

ಕೋವಿಡ್‌ ಕರಿನೆರಳು

ಕೋವಿಡ್‌ ಕಾಲವು ದಿನಪತ್ರಿಕೆಗಳನ್ನು ದುಃಸ್ವಪ್ನ ದಂತೆ ಕಾಡಿದೆ. ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಹೇರಿದ್ದ ಲಾಕ್‌ಡೌನ್‌ನಿಂದಾಗಿ ಪತ್ರಿಕೆಗಳ ಆದಾಯದ ಮುಖ್ಯ ಮೂಲವಾಗಿದ್ದ ಜಾಹೀರಾತು ಪ್ರಕಟಣೆಯು ಪಾತಾಳಕ್ಕೆ ಕುಸಿಯಿತು. ಕೋವಿಡ್‌ ವ್ಯಾಪಿಸಿದಂತೆಲ್ಲ ದಿನಪತ್ರಿಕೆಗಳ ಮೂಲಕವೇ ಕೊರೊನಾ ಸೋಂಕು ಹರಡುತ್ತಿದೆ ಎಂಬ ಅಪಪ್ರಚಾರವೂ ನಡೆಯಿತು. ಪತ್ರಿಕೆಯಿಂದ ಕೊರೊನಾ ವೈರಾಣು ಹರಡುವುದಿಲ್ಲ ಎಂದು ವೈದ್ಯರು ಮತ್ತು ಪರಿಣತರು ಸ್ಪಷ್ಟನೆ ಕೊಟ್ಟರೂ ಜನರಿಗೆ ಅದು ಮನದಟ್ಟಾಗಲು ಬಹಳ ಸಮಯವೇ ಬೇಕಾಯಿತು. ಹೀಗಾಗಿ, ಕೋವಿಡ್‌ ಅವಧಿಯಲ್ಲಿ ಜಾಹೀರಾತು ಮತ್ತು ಪ್ರಸರಣದ ವರಮಾನಕ್ಕೆ ದೊಡ್ಡ ಹೊಡೆತ ಬಿತ್ತು. ಅದೇ ಹೊತ್ತಿಗೆ ಮುದ್ರಣ ಕಾಗದದ ಬೆಲೆಯಲ್ಲಿ ಆದ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಯಿತು.

ಕೋವಿಡ್‌ ಪೂರ್ವದಲ್ಲಿ ಅಂದರೆ, 2020ರ ಆರಂಭದಲ್ಲಿ ಒಂದು ಟನ್‌ ಮುದ್ರಣ ಕಾಗದದ ದರ ಸುಮಾರು 300 ಡಾಲರ್‌ (ಸುಮಾರು ₹23,000) ಇತ್ತು. ಜಗತ್ತಿನಾದ್ಯಂತ ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ಮುದ್ರಣ ಕಾಗದದ ದರದಲ್ಲಿ ಏರಿಕೆ ಆಯಿತು. ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಒಂದು ಟನ್‌ ಕಾಗದದ ದರವು ಪ್ರತಿ ಟನ್‌ಗೆ 500ರಿಂದ 600 ಡಾಲರ್‌ಗೆ (ಸುಮಾರು ₹38,000ದಿಂದ ₹45,500) ಏರಿಕೆ ಆಯಿತು. ಕೋವಿಡ್‌ನ ಎರಡನೇ ಅಲೆಯ ಹೊತ್ತಿಗೆ ದರವು ಪ್ರತಿ ಟನ್‌ಗೆ 700ರಿಂದ 800 ಡಾಲರ್‌ಗೆ (ಸುಮಾರು ₹53,300ರಿಂದ ₹61,000) ಏರಿಕೆ ಆಯಿತು.

ಜಗತ್ತಿನ ವಿವಿಧ ಭಾಗಗಳಲ್ಲಿನ ಲಾಕ್‌ಡೌನ್‌ ಮತ್ತು ಅದರಿಂದಾದ ಸಂಚಾರ ಸ್ಥಗಿತದ ಸ್ಥಿತಿಯು ಮುದ್ರಣ ಕಾಗದ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಹಲವು ಪತ್ರಿಕೆಗಳು ತಾತ್ಕಾಲಿಕವಾಗಿ ಮುದ್ರಣ ನಿಲ್ಲಿಸಿದವು. ಕಾಗದ ತಯಾರಿಕೆಗೆ ಬಳಸುವ ಮರದ ತಿರುಳಿನ ಕೊರತೆ, ಕಾರ್ಮಿಕರ ಕೊರತೆ ಮತ್ತು ಕಾಗದದ ಪೂರೈಕೆಗೆ ಇದ್ದ ಅಡಚಣೆಯಿಂದಾಗಿ ಯುರೋಪ್‌ನ ಹಲವು ಕಾರ್ಖಾನೆಗಳು ಬಾಗಿಲು ಮುಚ್ಚಿದವು. ಹಡಗು ಸಂಚಾರ ಸ್ಥಗಿತ, ಕಾಗದ ಸಾಗಿಸಲು ಬಳಸುವ ಕಂಟೇನರ್‌ಗಳ ಕೊರತೆಯೂ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಭಾರಿ ಸಂಖ್ಯೆಯ ಕಂಟೇನರ್‌ಗಳು ಚೀನಾದಲ್ಲಿಯೇ ಉಳಿದುಹೋದದ್ದು ಸಮಸ್ಯೆ ಸೃಷ್ಟಿಸಿತು. ಇದು ಕೋವಿಡ್‌ ಕಾಲದಲ್ಲಿ ಕಾಗದದ ದರದಲ್ಲಿ ತೀವ್ರ ಏರಿಕೆಯ ಹಿಂದಿನ ಕಾರಣಗಳು.

ಆಮದಿನ ಅವಲಂಬನೆ

ಭಾರತೀಯ ಮುದ್ರಣ ಕಾಗದ ತಯಾರಕರ ಸಂಘದ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿಯ ಪ್ರಕಾರ, ಭಾರತದ ಕಾಗದದ ಬೇಡಿಕೆಯ ಶೇ 56ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. 2017–18ರಲ್ಲಿ 10.7 ಲಕ್ಷ ಟನ್‌ಗಳಷ್ಟು ದೇಶೀಯವಾಗಿ ತಯಾರಿಸಲಾದ ಕಾಗದದ ಬಳಕೆ ಆಗಿದ್ದರೆ, 14.5 ಲಕ್ಷ ಟನ್‌ ಕಾಗದವನ್ನು ಆಮದು ಮಾಡಿಕೊಳ್ಳಲಾಗಿದೆ.

ಭಾರತಕ್ಕೆ ರಷ್ಯಾ ಮತ್ತು ಯುರೋಪ್‌ನಿಂದ ಮುದ್ರಣ ಕಾಗದ ಆಮದಾಗುತ್ತಿದೆ. ಒಟ್ಟು ಆಮದಿನಲ್ಲಿ ರಷ್ಯಾದ ಪಾಲು ಸುಮಾರು ಶೇ 50ರಷ್ಟಿದೆ.ಪತ್ರಿಕೆಗಳ ಮುದ್ರಣಕ್ಕೆ ವಿದೇಶಿ ಮುದ್ರಣ ಕಾಗದವೇ ಹೆಚ್ಚು ಬಳಕೆ ಆಗುತ್ತಿದೆ. ಒಟ್ಟು ಬಳಕೆಯಲ್ಲಿ ದೇಶೀ ತಯಾರಿಕೆಯ ಪಾಲು ಸುಮಾರು ಶೇ 44ರಷ್ಟಿದೆ. ಆದರೆ, ಪತ್ರಿಕೆಗಳ ಮುದ್ರಣಕ್ಕೆ ಇವು ಹೆಚ್ಚಾಗಿ ಬಳಕೆ ಆಗುತ್ತಿಲ್ಲ. ಭಾರತದಲ್ಲಿ ತಯಾರಾಗುವ ಮುದ್ರಣ ಕಾಗದದ ಗುಣಮಟ್ಟ ವಿದೇಶಿ ಕಾಗದದ ಗುಣಮಟ್ಟಕ್ಕೆ ಸರಿಸಾಟಿಯಾಗಿ ಇಲ್ಲ. ಭಾರತದಲ್ಲಿ ತಯಾರಾಗುವ ಕಾಗದದಲ್ಲಿ ಶೇ 58ರಷ್ಟು ಪುನರ್ಬಳಕೆ (ರೀಸೈಕಲ್ಡ್‌) ಕಾಗದ ಬಳಸಿ ತಯಾರಿಸಲಾಗುತ್ತಿದೆ. ಕೃಷಿ ಉತ್ಪನ್ನ ಬಳಸಿ ಶೇ 17ರಷ್ಟು ಮತ್ತು ಮರದ ತಿರುಳು ಬಳಸಿ ಶೇ 25ರಷ್ಟು ಕಾಗದ ತಯಾರಿಸಲಾಗುತ್ತಿದೆ. ಈ ಕಾಗದದ ಗುಣಮಟ್ಟವು ಕಡಿಮೆ.

ಜಿಎಸ್‌ಟಿ: ತೆರಿಗೆ ಏರಿಕೆಯ ಹೊಡೆತ

ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬರುವ ಮುನ್ನ ಮುದ್ರಣ ಕಾಗದದ ಮೇಲೆ ಒಟ್ಟಾರೆ ಶೇ 3ರಷ್ಟು ತೆರಿಗೆ ಮಾತ್ರ ಬೀಳುತ್ತಿತ್ತು. ಆದರೆ, ಜಿಎಸ್‌ಟಿ ಜಾರಿಗೆ ಬಂದ ನಂತರ ಕಾಗದದ ಮೇಲೆ ಶೇ 5ರಷ್ಟು ತೆರಿಗೆ ಹೇರಲಾಯಿತು. ಇದರಿಂದ ಪತ್ರಿಕಾಲಯಗಳು ಕಾಗದದ ಮೇಲೆ ನೀಡಬೇಕಿದ್ದ ತೆರಿಗೆಯಲ್ಲಿ ಶೇ 68ರಷ್ಟು ಏರಿಕೆಯಾಯಿತು.

ತೆರಿಗೆ ಹೆಚ್ಚಳವನ್ನು ವಿರೋಧಿಸಿ ದೇಶದ ಪ್ರಮುಖ ಪತ್ರಿಕಾ ಸಂಸ್ಥೆಗಳು 2018ರಲ್ಲೇ ಜಿಎಸ್‌ಟಿ ಮಂಡಳಿಗೆ ಪತ್ರ ಬರೆದಿದ್ದವು. ತೆರಿಗೆಯನ್ನು ಕಡಿತ ಮಾಡುವಂತೆ ಕೋರಿದ್ದವು. ಆದರೆ ಸರ್ಕಾರವಾಗಲೀ, ಜಿಎಸ್‌ಟಿ ಮಂಡಳಿಯಾಗಲೀ ತೆರಿಗೆ ಕಡಿತ ಮಾಡುವುದನ್ನು ಪರಿಗಣಿಸಲೇ ಇಲ್ಲ.ಜಾಗತಿಕ ಮಾರುಕಟ್ಟೆ
ಯಲ್ಲಿ ಕಾಗದದ ದರ ಏರಿಕೆಯಾದಂತೆ, ಅದರ ಮೇಲೆ ನೀಡಬೇಕಿದ್ದ ತೆರಿಗೆಯ ಮೊತ್ತವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಯಿತು. ಕಾಗದದ ಒಟ್ಟಾರೆ ಬೆಲೆಯಲ್ಲಿ ಭಾರಿ ಏರಿಕೆಯಾಗಲು ಇದು ಸಹ ಕಾರಣವಾಯಿತು.

ಜಿಎಸ್‌ಟಿ ಜಾರಿಗೆ ಬರುವ ಮುನ್ನ ನೋಂದಾಯಿತ ಪತ್ರಿಕಾ ಸಂಸ್ಥೆಗಳು ಖರೀದಿಸುವ ಕಾಗದದ ಮೇಲೆ ಕಡಿಮೆ ದರದ ತೆರಿಗೆ ವಿಧಿಸಲಾಗುತ್ತಿತ್ತು. ಪುಸ್ತಕ ಪ್ರಕಾಶನ ಸಂಸ್ಥೆಗಳು ಮತ್ತು ಆರ್‌ಎನ್‌ಐನಲ್ಲಿ ನೋಂದಾಯಿಸಿಕೊಳ್ಳದೇ ಇರುವ ಸಂಸ್ಥೆಗಳಿಗೆ ಹೆಚ್ಚಿನ ದರದ ತೆರಿಗೆ ವಿಧಿಸಲಾಗುತ್ತಿತ್ತು. ಈ ಎರಡೂ ರೀತಿಯ ಖರೀದಿದಾರರ ನಡುವೆ ಸ್ಪಷ್ಟವಾದ ವ್ಯತ್ಯಾಸ ಇರುವಂತೆ ನಿಯಮಗಳನ್ನು ರೂಪಿಸಲಾಗಿತ್ತು.

ಜಿಎಸ್‌ಟಿಯಲ್ಲೂ ಆರ್‌ಎನ್‌ಐ ನೋಂದಾಯಿತ ಪತ್ರಿಕಾ ಸಂಸ್ಥೆಗಳಿಗೆ ಶೇ 5ರಷ್ಟು ಜಿಎಸ್‌ಟಿ ನಿಗದಿ ಮಾಡಲಾಗಿದೆ. ನೋಂದಾಯಿತವಲ್ಲದ ಸಂಸ್ಥೆಗಳು ಮತ್ತು ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಶೇ 12ರಷ್ಟು ಜಿಎಸ್‌ಟಿ ನಿಗದಿ ಮಾಡಲಾಗಿದೆ. ಆದರೆ, ಖರೀದಿ ವೇಳೆ ನೋಂದಾಯಿತ ಮತ್ತು ನೋಂದಾಯಿತವಲ್ಲದ ಸಂಸ್ಥೆಗಳನ್ನು ಗುರುತಿಸುವ ಹಾಗೂ ಇವುಗಳಿಗೆ ಪ್ರತ್ಯೇಕ ತೆರಿಗೆ ವಿಧಿಸುವ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಹೀಗಾಗಿ ಪುಸ್ತಕ ಪ್ರಕಾಶನ ಸಂಸ್ಥೆಗಳು ಮತ್ತು ನೋಂದಾಯಿತವಲ್ಲದ ಸಂಸ್ಥೆಗಳು ಶೇ 5ರ ಜಿಎಸ್‌ಟಿಯಲ್ಲೇ ಮುದ್ರಣ ಕಾಗದ ಖರೀದಿಸುತ್ತಿವೆ. ಇದರಿಂದ ಪತ್ರಿಕಾ ಸಂಸ್ಥೆಗಳಿಗೆ ಕಾಗದವು ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಈ ನ್ಯೂನತೆಗಳನ್ನು ಸರಿಪಡಿಸುವಂತೆ ಭಾರತೀಯ ಮುದ್ರಣ ಕಾಗದ ತಯಾರಕರ ಸಂಘಟನೆಯು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ಆಮದು ಮಾಡಿಕೊಳ್ಳುವ ಮುದ್ರಣ ಕಾಗದದ ಮೇಲೆ ಶೇ 5ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ. ಈ ಹೊರೆಯನ್ನು ತಗ್ಗಿಸಲು ಆಮದು ಸುಂಕವನ್ನು ಕಡಿತ ಮಾಡಿ ಎಂದು ಬಿಜೆಪಿ ಸಂಸದ ಸುಶೀಲ್‌ ಕುಮಾರ್ ಮೋದಿ ಅವರು ಕೇಂದ್ರ ಸರ್ಕಾರವನ್ನು ಈಚೆಗೆ ಆಗ್ರಹಿಸಿದ್ದರು.

ತೈಲ ದರ ಹೆಚ್ಚಳ

ಕೋವಿಡ್‌ ನಂತರದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗುತ್ತಲೇ ಹೋಗಿದೆ. ಕಚ್ಚಾ ತೈಲದ ಬೆಲೆಯು 2021ರ ಏಪ್ರಿಲ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 53 ಡಾಲರ್‌ ಇತ್ತು. ಈಗ ಅದು 103 ಡಾಲರ್‌ಗೆ ಏರಿದೆ. ಹೀಗಾಗಿ, ಕಾಗದ ತಯಾರಿಕೆಯ ವೆಚ್ಚ ಭರಿಸಲಾಗದೆ ಕೆಲವು ಕಾಗದ ಕಾರ್ಖಾನೆಗಳು ತಾತ್ಕಾಲಿಕವಾಗಿ ಮುಚ್ಚಿವೆ. ತೈಲ ಮತ್ತು ಅನಿಲ ದರ ಏರಿಕೆಯ ಹೊರೆಯನ್ನು ನಿಭಾಯಿಸುವುದಕ್ಕಾಗಿ ಕೆಲವು ಕಂಪೆನಿಗಳು ಕಾಗದದ ಮೇಲೆ ಇಂಧನ ಸರ್‌ಚಾರ್ಜ್‌ ಹೆಚ್ಚಿಸಿವೆ. ಯುರೋಪ್‌ನ ವಿವಿಧ ದೇಶಗಳಲ್ಲಿ 13 ಕಾರ್ಖಾನೆಗಳನ್ನು ಹೊಂದಿರುವ ಯುಪಿಎಂ ಮಿಲ್ಸ್‌ ಪ್ರತಿ ಟನ್‌ ಮೇಲೆ 175 ಯೂರೊ (ಸುಮಾರು ₹14,500) ಸರ್‌ಚಾರ್ಜ್‌ ವಿಧಿಸುತ್ತಿದೆ.

ದರ ಗಗನಕ್ಕೇರಿಸಿದ ಸಮರ

ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ದಾಳಿಯು ಮುದ್ರಣ ಕಾಗದದ ದರವನ್ನು ಗಗನಕ್ಕೇ ಏರಿಸಿ‌ಬಿಟ್ಟಿತು. ಈಗ ಒಂದು ಟನ್‌ ಮುದ್ರಣ ಕಾಗದದ ದರ 1,000ದಿಂದ 1,100 ಡಾಲರ್‌ಗೆ (ಸುಮಾರು ₹76,000ದಿಂದ ₹84,000) ಏರಿದೆ. ಇದು ಸಾರ್ವಕಾಲಿಕ ದಾಖಲೆ.

ಬೇಡಿಕೆ ಮತ್ತು ಪೂರೈಕೆಯ ನಡುವೆ ತಾಳಮೇಳವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮುದ್ರಣಕ್ಕೆ ಬೇಕಾದ ಕಾಗದವನ್ನು ಹೊಂದಿಸಿಕೊಳ್ಳುವುದು ದಿನಪತ್ರಿಕೆಗಳಿಗೆ ಬಹುದೊಡ್ಡ ಸವಾಲಾಗಿದೆ. ಕಾಗದ ತಯಾರಕರು ಹೇಳಿದ ದರ ಕೊಟ್ಟರೂ ಮುದ್ರಣ ಕಾಗದ ದೊರಕುತ್ತಿಲ್ಲ.

ರಷ್ಯಾದಿಂದ ಭಾರತಕ್ಕೆ ಕಾಗದದ ಆಮದು ಯುದ್ಧದ ಕಾರಣದಿಂದಾಗಿ ಸಂಪೂರ್ಣ ಸ್ಥಗಿತವಾಗಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ ಬಂದರು ಮೂಲಕ ಭಾರತಕ್ಕೆ ಕಾಗದ ಪೂರೈಕೆ ಆಗುತ್ತಿತ್ತು. ಯುದ್ಧದ ಕಾರಣದಿಂದಾಗಿ ಸರಕು ಮತ್ತು ಹಡಗಿಗೆ ವಿಮೆ ಕೊಡಲು ಯಾವುದೇ ವಿಮಾ ಸಂಸ್ಥೆ ಮುಂದಾಗುತ್ತಿಲ್ಲ. ಹೀಗಾಗಿ ರಷ್ಯಾದಿಂದ ಕಾಗದದ ಪೂರೈಕೆ ಸದ್ಯಕ್ಕೆ ಸರಿ ಹೋಗುವ ಸಾಧ್ಯತೆ ಗೋಚರಿಸುತ್ತಿಲ್ಲ.

ರಷ್ಯಾ ಬಳಿಕ ಅತಿ ಹೆಚ್ಚು ಕಾಗದ ಪೂರೈಕೆ ಆಗುತ್ತಿರುವುದು ಯುರೋಪ್‌ನ ದೇಶಗಳಿಂದ. ಆದರೆ, ಯುರೋಪ್‌ನ ಯಾವುದೇ ದೇಶ ಈಗ ಭಾರತಕ್ಕೆ ಮುದ್ರಣ ಕಾಗದ ಪೂರೈಕೆ ಮಾಡುತ್ತಿಲ್ಲ. ಆಂತರಿಕ ಬಳಕೆಯ ಬಗ್ಗೆಯೇ ಅಲ್ಲಿನ ಕಾರ್ಖಾನೆಗಳು ಗಮನ ಕೇಂದ್ರೀಕರಿಸಿವೆ. ಯುರೋಪ್‌ನಿಂದ ಆಗುತ್ತಿದ್ದ ಕಾಗದ ಪೂರೈಕೆ ಸ್ಥಗಿತಗೊಂಡಿದ್ದು ಭಾರತದಲ್ಲಿನ ಕೊರತೆಯನ್ನು ಇನ್ನಷ್ಟು ಹೆಚ್ಚಿಸಿತು. ಕೆನಡಾ ಕೂಡ ಮುದ್ರಣ ಕಾಗದ ರಫ್ತು ಮಾಡುತ್ತಿದೆ. ಆದರೆ, ಜುಲೈವರೆಗೆ ಹೊಸ ಬೇಡಿಕೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅಲ್ಲಿನ ತಯಾರಕರು ಘೋಷಿಸಿದ್ದಾರೆ.

ಆಧಾರ: ಜಿಎಸ್‌ಟಿ ಮಂಡಳಿ, ಭಾರತೀಯ ನ್ಯೂಸ್‌ಪ್ರಿಂಟ್ ತಯಾರಕರ ಸಂಘಟನೆ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT