ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕರ್ನಾಟಕದ ಶೇಕಡ 18 ಮಂದಿಗೆ ಶೌಚಾಲಯವಿಲ್ಲ

ಸ್ವಚ್ಛ ಭಾರತ ಅಭಿಯಾನ ಜಾಲತಾಣದ ಮಾಹಿತಿಗೆ ವ್ಯತಿರಿಕ್ತವಾದ ಎನ್‌ಎಫ್‌ಎಚ್‌ಎಸ್ ವರದಿ
Last Updated 1 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಕರ್ನಾಟಕದ ಜನರಲ್ಲಿ ಶೌಚಾಲಯ ಲಭ್ಯತೆ ಇರುವವರಿಗಿಂತ, ಮೊಬೈಲ್‌ ಫೋನ್‌ ಮತ್ತು ಟಿ.ವಿ. ಹೊಂದಿರುವವರ ಪ್ರಮಾಣ ಅತ್ಯಧಿಕವಾಗಿದೆ ಎನ್ನುತ್ತವೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ (ಎನ್‌ಎಫ್‌ಎಚ್‌ಎಸ್) ವರದಿಯ ದತ್ತಾಂಶಗಳು.ರಾಜ್ಯದ ಸಮಸ್ತ ಜನರಿಗೂ ಶೌಚಾಲಯ ಲಭ್ಯವಿದೆ. ರಾಜ್ಯವು ಬಯಲು ಬಹಿರ್ದೆಸೆ ಮುಕ್ತವಾಗಿದೆ ಎಂದು ಸ್ವಚ್ಛ ಭಾರತ ಅಭಿಯಾನದ ಜಾಲತಾಣ ಹೇಳುತ್ತದೆ. ಆದರೆ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಎನ್‌ಎಫ್‌ಎಚ್‌ಎಸ್‌ ವರದಿಯಲ್ಲಿ ರಾಜ್ಯದ ಶೇ 18ರಷ್ಟು ಜನರಿಗೆ ಶೌಚಾಲಯವಿಲ್ಲ ಎಂದು ಹೇಳಿದೆ.

* ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಹೊಂದಿರುವ ಜನರ ಪ್ರಮಾಣಕ್ಕಿಂತ ಮೊಬೈಲ್‌ ಪೋನ್ ಇರುವವರ ಪ್ರಮಾಣವೇ ಹೆಚ್ಚು. ಮೊಬೈಲ್‌ ಫೋನ್‌ ಹೊಂದಿರುವವರಿಗೆ ಹೋಲಿಸಿದರೆ ಶೌಚಾಲಯ ಲಭ್ಯತೆ ಇಲ್ಲದೇ ಇರುವವರ ಸಂಖ್ಯೆಯು 15.2 ಶೇಕಡಾವಾರು ಅಂಶಗಳಷ್ಟು ಕಡಿಮೆ

* ರಾಜ್ಯದ ನಗರ ಪ್ರದೇಶದಲ್ಲಿಯೂ ಶೌಚಾಲಯ ಹೊಂದಿರುವವರಿಗಿಂತ ಹೆಚ್ಚಿನ ಪ್ರಮಾಣದ ಜನರು ಮೊಬೈಲ್‌ ಪೋನ್ ಹೊಂದಿದ್ದಾರೆ. ಶೌಚಾಲಯ ಲಭ್ಯತೆ ಇಲ್ಲದೇ ಇರುವವರ ಪ್ರಮಾಣವುಮೊಬೈಲ್‌ ಫೋನ್‌ ಹೊಂದಿರುವವರಿಗೆ ಹೋಲಿಸಿದರೆ 2.2 ಶೇಕಡಾವಾರು ಅಂಶಗಳಷ್ಟು ಕಡಿಮೆ

* ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಟಿ.ವಿ. ಹೊಂದಿರುವವರ ಪ್ರಮಾಣಕ್ಕೆ ಹೋಲಿಸಿದರೆ ಶೌಚಾಲಯ ಲಭ್ಯ ಇಲ್ಲದವರ ಪ್ರಮಾಣವು 4.1 ಶೇಕಡಾವಾರು ಅಂಶಗಳಷ್ಟು ಕಡಿಮೆ

ಗಂಡನಿಂದ ಹಲ್ಲೆ: ಶೇ 77 ಸ್ತ್ರೀಯರ ಸಮರ್ಥನೆ

ವಿವಿಧ ಕಾರಣಗಳಿಗೆ ವಿವಾಹಿತ ಮಹಿಳೆಯ ಮೇಲೆ ಪತಿ ನಡೆಸುವ ಹಲ್ಲೆ, ಬೈಗುಳದಂತಹ ಕೌಟುಂಬಿಕ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುವ ಪುರುಷರ ಪ್ರಮಾಣ ಶೇ 82ರಷ್ಟಿದೆ. ಆದರೆ ಶೇ 77ರಷ್ಟು ಮಹಿಳೆಯರೂ, ವಿವಾಹಿತ ಮಹಿಳೆಯ ಮೇಲೆ ಆಕೆಯ ಪತಿ ಹಲ್ಲೆ ನಡೆಸುವುದು ಸರಿ ಎಂದು ಹೇಳಿದ್ದಾರೆ. ದ್ವಿತೀಯ ಪಿಯುಸಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ಮಹಿಳೆಯರಲ್ಲಿಯೂ ಇಂತಹ ಹಲ್ಲೆಯನ್ನು ಸಮರ್ಥಿಸಿಕೊಳ್ಳುವವರ ಪ್ರಮಾಣ ಶೇ 72ರಷ್ಟಿದೆ.

ಪತಿಯ ತಂದೆ–ತಾಯಿ ಮತ್ತು ಸೋದರ–ಸೋದರಿಯರಿಗೆ ಗೌರವ ನೀಡದಿದ್ದಾಗ ತಮ್ಮ ಮೇಲೆ ಪತಿ ಹಲ್ಲೆ ನಡೆಸುವುದು ಸರಿ ಎಂದು ಶೇ 59ರಷ್ಟು ಮಹಿಳೆಯರು ಹೇಳಿದ್ದಾರೆ. ಇದನ್ನು ಸಮರ್ಥಿಸಿಕೊಳ್ಳುವ ಪುರುಷರ ಪ್ರಮಾಣ ಶೇ 71ರಷ್ಟಿದೆ.

ಮನೆಯ ಕೆಲಸ ಮತ್ತು ಮಕ್ಕಳ ಲಾಲನೆ–ಪಾಲನೆ ಕಡೆಗಣಿಸಿದಾಗ ಪತಿಯು ಪತ್ನಿಗೆ ಹೊಡೆಯಬಹುದು ಎಂದು ಶೇ 52ರಷ್ಟು ಮಹಿಳೆಯರು ಹೇಳಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಮನೆಯ ಕೆಲಸ ಮತ್ತು ಮಕ್ಕಳ ಲಾಲನೆ–ಪಾಲನೆ ಕಡೆಗಣಿಸಿದಾಗ ಪತಿಯು ಪತ್ನಿಯ ಮೇಲೆ ಹಲ್ಲೆ ನಡೆಸಬಹುದು ಎಂಬುದನ್ನು ಒಪ್ಪಿಕೊಳ್ಳುವ ಪುರುಷರ ಪ್ರಮಾಣವು ಶೇ 48ರಷ್ಟಿದೆ. ಇಂತಹ ಹಲ್ಲೆಯನ್ನು ಸಮರ್ಥಿಸಿಕೊಳ್ಳುವ ಪುರುಷರಿಗಿಂತ, ಮಹಿಳೆಯರ ಪ್ರಮಾಣವೇ ಹೆಚ್ಚು.

ದೇಶದಲ್ಲಿ ಶೇ 75ರಷ್ಟು ಮಹಿಳೆಯರು ಇಂತಹ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಇದನ್ನು ಸಮರ್ಥಿಸಿಕೊಳ್ಳುವ ಮಹಿಳೆಯರ ಪ್ರಮಾಣವು (ಶೇ 77) ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು. ಒಟ್ಟಾರೆ ರಾಜ್ಯದಲ್ಲಿ ಇಂತಹ ಕೌಟುಂಬಿಕ ದೌರ್ಜನ್ಯವನ್ನು ಸಮರ್ಥಿಸುವವರ ಪ್ರಮಾಣವು, ಇದನ್ನು ವಿರೋಧಿಸುವವರ ಪ್ರಮಾಣಕ್ಕಿಂತ ಅಧಿಕ.

ನಿರ್ಧಾರ ತೆಗೆದುಕೊಳ್ಳುವಿಕೆ: ಪುರುಷರ ಪಾಲ್ಗೊಳ್ಳುವಿಕೆ ಅಧಿಕ

ರಾಜ್ಯದಲ್ಲಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರಿಗೂ ಪ್ರಮುಖ ಸ್ಥಾನ ನೀಡಲಾಗುತ್ತಿದೆ ಎನ್ನುತ್ತದೆ ಈ ವರದಿಯ ದತ್ತಾಂಶಗಳು. ಕುಟುಂಬದ ದೈನಂದಿನ ಆಗುಹೋಗುಗಳಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವಲ್ಲಿ ರಾಜ್ಯದ ಶೇ 65ರಷ್ಟು ವಿವಾಹಿತ ಮಹಿಳೆಯರು ಭಾಗಿಯಾಗುತ್ತಾರೆ. ಆದರೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪುರುಷರ ಪಾಲ್ಗೊಳ್ಳುವಿಕೆ ಶೇ 93ರಷ್ಟು ಇದೆ.

ಸಂಬಂಧಿಕರ ಮನೆಗೆ ಭೇಟಿ ನೀಡುವುದು, ವೈಯಕ್ತಿಕ ಆರೋಗ್ಯ ಮತ್ತು ಮನೆವಸ್ತುಗಳ ಖರೀದಿಯಂತಹ ವಿಚಾರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚು ಇದೆ. ತಾವು ಮತ್ತು ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಮಹಿಳೆಯರ ಪ್ರಮಾಣ ಶೇ 75ರಷ್ಟು ಇದೆ.ಮನೆ ವಸ್ತುಗಳ ಖರೀದಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗಿಯಾಗುವ ಮಹಿಳೆಯರ ಪ್ರಮಾಣ ಶೇ 73ರಷ್ಟು ಇದೆ.

ತಮ್ಮ ವೈಯಕ್ತಿಕ ಆರೋಗ್ಯದ ಆಗುಹೋಗುಗಳು ಮತ್ತು ಚಿಕಿತ್ಸೆ ಮತ್ತಿತರ ವಿಚಾರಗಳಲ್ಲಿ ಶೇ 74ರಷ್ಟು ಮಹಿಳೆಯರು ಸ್ವತಃ ನಿರ್ಧಾರ ತೆಗೆದುಕೊಳ್ಳುತ್ತಾರೆ. ಶೇ 26ರಷ್ಟು ಮಹಿಳೆಯರು, ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ವೈಯಕ್ತಿಕ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಶೇ 26ರಷ್ಟು ಮಹಿಳೆಯರಿಗೆ ಸಾಧ್ಯವಿಲ್ಲದೇ ಇರುವುದು ಕಳವಳಕಾರಿ ಅಂಶ ಎಂದು ವಿಶ್ಲೇಷಿಸಲಾಗಿದೆ.

ಶೌಚಾಲಯ: ಪರಿಶಿಷ್ಟ ಜಾತಿಯವರು ಹಿಂದೆ

ರಾಜ್ಯದಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿತ್ತು. ಕರ್ನಾಟಕವನ್ನು ‘ಬಯಲು ಬಹಿರ್ದೆಸೆ ಮುಕ್ತ ರಾಜ್ಯ’ ಎಂದೂ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ರಾಜ್ಯದ ಶೇ 18ರಷ್ಟು ಜನರು ಶೌಚಾಲಯಗಳನ್ನು ಬಳಸುತ್ತಿಲ್ಲ. ಅವರು ಈಗಲೂ ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ.

ರಾಜ್ಯದ ಶೇ 83ರಷ್ಟು ಕುಟುಂಬಗಳಲ್ಲಿ ಶೌಚಾಲಯ ಸೌಲಭ್ಯವಿದೆ. ಶೇ 1ರಷ್ಟು ಜನರಿಗೆ ಸೌಲಭ್ಯ ಇದ್ದರೂ ಅವರು ಬಳಕೆ ಮಾಡಿಕೊಳ್ಳುತ್ತಿಲ್ಲ. ನಗರ ಭಾಗದ ಶೇ 93ರಷ್ಟು ಹಾಗೂ ಗ್ರಾಮೀಣ ಭಾಗದ ಶೇ 76ರಷ್ಟು ಮನೆಗಳಲ್ಲಿ ಶೌಚಾಲಯಗಳು ಬಳಕೆಯಾಗುತ್ತಿವೆ. ಪರಿಶಿಷ್ಟ ಜಾತಿಯ ಶೇ 76ರಷ್ಟು ಕುಟುಂಬಗಳು ಶೌಚಾಲಯ ಸವಲತ್ತು ಬಳಸುತ್ತಿವೆ. ಆದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರದ ಜಾತಿಗಳ ಶೇ 88ರಷ್ಟು ಕುಟುಂಬಗಳು ಈ ಸೌಲಭ್ಯ ಹೊಂದಿವೆ. ಅಂದರೆ ಈ ಎರಡರ ನಡುವೆ ಶೇ 12ರಷ್ಟು ಅಂತರವಿದ್ದು, ಪರಿಶಿಷ್ಟ ಜಾತಿ ಜನರು ಈ ಸೌಲಭ್ಯ ಪಡೆಯುವಲ್ಲಿ ಹಿಂದೆ ಉಳಿದಿದ್ದಾರೆ.

ಜಿಲ್ಲೆಗಳ ಪೈಕಿ ಯಾದಗಿರಿಯಲ್ಲಿ ಕೇವಲ ಶೇ 47ರಷ್ಟು ಕುಟುಂಬಗಳು ಈ ಸೌಲಭ್ಯಕ್ಕೆ ಒಳಪಟ್ಟಿವೆ. ದಕ್ಷಿಣ ಕನ್ನಡದಲ್ಲಿ ಶೇ ನೂರರಷ್ಟು ಸಾಧನೆಯಾಗಿದೆ. ದಕ್ಷಿಣ ಕನ್ನಡ, ಕೊಡಗು ಹಾಗೂ ಉಡುಪಿ ಜಿಲ್ಲೆಗಳ ನಗರ ಪ್ರದೇಶದ ಎಲ್ಲ ಮನೆಗಳಲ್ಲಿ ಶೌಚಾಲಯಗಳಿವೆ.

ಗಂಡುಮಗು ಬೇಕೇ, ಹೆಣ್ಣುಮಗು ಸಾಕೇ?

ರಾಜ್ಯದ ಜನರಲ್ಲಿ ಗಂಡು ಸಂತಾನಕ್ಕೆ ಆದ್ಯತೆ ನೀಡುವ ಪ್ರವೃತ್ತಿ ಕಂಡುಬಂದಿದೆ. ಮಹಿಳೆಯರಿಗೆ (ಶೇ 14) ಹೋಲಿಸಿದರೆ, ಪುರುಷರಲ್ಲಿ (ಶೇ 16) ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಬಯಕೆ ಅಧಿಕ. ಆದರೆ ಶೇ 6–7ರಷ್ಟು ಜನರು ಗಂಡುಮಕ್ಕಳಿಗಿಂತ ಹೆಣ್ಣು ಮಕ್ಕಳನ್ನು ಪಡೆಯುವ ಇಚ್ಛೆ ಹೊಂದಿದ್ದಾರೆ. ಶೇ 76ರಷ್ಟು ಮಹಿಳೆಯರು ಹಾಗೂ ಶೇ 77ರಷ್ಟು ಪುರುಷರು ಕನಿಷ್ಠ ಪಕ್ಷ ಒಂದು ಗುಂಡು ಮಗುವನ್ನಾದರೂ ಪಡೆಯುವ ಹಂಬಲ ಹೊಂದಿದ್ದರೆ, ಶೇ 73ರಷ್ಟು ಜನರು (ಮಹಿಳೆ–ಪುರುಷ ಸೇರಿ) ಕನಿಷ್ಠ ಒಂದು ಹೆಣ್ಣುಮಗುವನ್ನು ಹೊಂದಲು ಇಚ್ಛಿಸುತ್ತಿದ್ದಾರೆ.

ಕಾಲುಭಾಗದಷ್ಟು ಜನರಿಗೆ ಆರೋಗ್ಯ ವಿಮೆ

ಧುತ್ತನೆ ಎದುರಾಗುವ ಆರೋಗ್ಯ ಸಮಸ್ಯೆಗಳು ಜನರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತವೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಆರೋಗ್ಯ ವಿಮೆ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ರಾಜ್ಯದ ಶೇ 28ರಷ್ಟು ಜನರು ಮಾತ್ರ ಆರೋಗ್ಯ ವಿಮೆ ರಕ್ಷಣೆಗೆ ಒಳಪಟ್ಟಿದ್ದಾರೆ.

ರಾಜ್ಯದ ಶೇ 22ರಷ್ಟು ಮಹಿಳೆಯರು ಆರೋಗ್ಯ ವಿಮೆಗೆ ಒಳಪಟ್ಟಿದ್ದರೆ, ಶೇ 26ರಷ್ಟು ಪುರುಷರು ವಿಮೆ ಮಾಡಿಸಿಕೊಂಡಿದ್ದಾರೆ. ವಿಮೆ ರಕ್ಷಣೆಗೆ ಒಳಪಟ್ಟವರ ಪೈಕಿ, ಯುವಜನರಿಗೆ ಹೋಲಿಸಿದರೆ ವಯಸ್ಸಾದವರೇ ಅಧಿಕ. ವಿಮೆ ಮಾಡಿಸುವ ಪ್ರವೃತ್ತಿಯು 12 ವರ್ಷ ಅಥವಾ ಅದಕ್ಕೂ ಹೆಚ್ಚಿನ ವರ್ಷ ವಿದ್ಯಾಭ್ಯಾಸ ಮಾಡಿದವರಲ್ಲಿ ಅಧಿಕವಾಗಿದೆ.

ಶಾಲೆಯ ಮುಖ ನೋಡದ ಶೇ 20ರಷ್ಟು ಮಹಿಳೆಯರು

ರಾಜ್ಯದ 15ರಿಂದ 49 ವರ್ಷದೊಳಗಿನವರ ಪೈಕಿ ಶೇ 85ರಷ್ಟು ಪುರುಷರು ಹಾಗೂ ಶೇ 73ರಷ್ಟು ಮಹಿಳೆಯರು ಸಾಕ್ಷರರು. 9ನೇ ತರಗತಿ ಉತ್ತೀರ್ಣರಾಗಿರುವವರು ಹಾಗೂ ಸಮೀಕ್ಷೆಗಾಗಿ ನಡೆಸಿದ ಸರಳ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಸಾಕ್ಷರರು ಎಂದು ಇಲ್ಲಿ ಪರಿಗಣಿಸಲಾಗಿದೆ.

ಈ ವಯೋಮಾನದವರಲ್ಲಿ ಶೇ 20ರಷ್ಟು ಮಹಿಳೆಯರು ಹಾಗೂ ಶೇ 11ರಷ್ಟು ಪುರುಷರು ಶಾಲೆಯ ಮುಖವನ್ನೇ ನೋಡಿಲ್ಲ. ಶೇ 28ರಷ್ಟು ಮಹಿಳೆಯರು ಹಾಗೂ ಶೇ 34ರಷ್ಟು ಪುರುಷರು ಕನಿಷ್ಠ 12ನೇ ತರಗತಿವರೆಗೆ ಓದಿದ್ದಾರೆ.

ಮಾಧ್ಯಮಗಳ ಬಳಕೆ

*ರಾಜ್ಯದ ಶೇ 74ರಷ್ಟು ಮಹಿಳೆಯರು ವಾರದಲ್ಲಿ ಒಮ್ಮೆಯಾದರೂ ಟಿ.ವಿ. ವೀಕ್ಷಿಸುತ್ತಾರೆ. ಈ ವಿಚಾರದಲ್ಲಿ ಪುರುಷರ ಪ್ರಮಾಣ ಶೇ 68

*ಮಹಿಳೆಯರಿಗೆ (ಶೇ 29) ಹೋಲಿಸಿದರೆ ಶೇ 43ರಷ್ಟು ಪುರುಷರು ವಾರದಲ್ಲಿ ಒಮ್ಮೆಯಾದರೂ ಪತ್ರಿಕೆ ಅಥವಾ ನಿಯತಕಾಲಿಕಗಳನ್ನು ಓದುತ್ತಾರೆ

*ಶೇ 13ರಷ್ಟು ಪುರುಷರು ಹಾಗೂ ಶೇ 20ರಷ್ಟು ಮಹಿಳೆಯರು ಮುದ್ರಣ ಮಾಧ್ಯಮ ಸೇರಿದಂತೆ, ಯಾವುದೇ ರೀತಿಯ ಮಾಧ್ಯಮಗಳನ್ನು ನಿಯಮಿತವಾಗಿ ಬಳಸುವುದಿಲ್ಲ

ಆಧಾರ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ಕರ್ನಾಟಕ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT