ಬುಧವಾರ, ಡಿಸೆಂಬರ್ 8, 2021
23 °C

ಪಾಕ್‌ ಸೇನೆ–ಸರ್ಕಾರದ ನಡುವೆ ಜಟಾಪಟಿ: ಅಧಿಕಾರಕ್ಕೆ ಇಮ್ರಾನ್‌ ಕಸರತ್ತು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್‌ ಸರ್ವಿಸಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಮಹಾ ನಿರ್ದೇಶಕನ ನೇಮಕ ಸಂಬಂಧ, ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಸೇನಾ ಮುಖ್ಯಸ್ಥ ಜ. ಖಮರ್‌ ಜಾವೇದ್‌ ಬಾಜ್ವಾ ನಡುವೆ ತೀವ್ರ ಜಟಾಪಟಿ ನಡೆದಿದೆ ಎಂದು ವರದಿಗಳು ಹೇಳುತ್ತಿವೆ. ಪಾಕಿಸ್ತಾನದ ರಾಜಕೀಯದ ಬಗ್ಗೆ ಅರಿವಿರುವವರಿಗೆ ಇದು ನಿಜಕ್ಕೂ ಆಶ್ಚರ್ಯಕರ ಸುದ್ದಿ. 

ಪಾಕಿಸ್ತಾನದ ಪ್ರಧಾನಿ ಯಾರಾಗಬೇಕು ಎಂಬುದು ಸೇರಿದಂತೆೆ ಎಲ್ಲ ನಿರ್ಧಾರಗಳನ್ನೂ ಸೇನೆಯೇ ಕೈಗೊಳ್ಳುತ್ತದೆ ಎಂಬುದು ರಹಸ್ಯ ಏನಲ್ಲ. ಹಾಗಾಗಿ, ಸೇನಾ ಮುಖ್ಯಸ್ಥರೇ ಅಲ್ಲಿ ಪ್ರಧಾನಿಗಿಂತ ಪ್ರಭಾವಿ. ಸೇನೆಯ ಜತೆಗೆ ಮಾಡಿಕೊಂಡ ಒಪ್ಪಂದಕ್ಕೆ ಅನುಗುಣವಾಗಿಯೇ ಇಮ್ರಾನ್‌ ಪ್ರಧಾನಿಯಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಿರುವಾಗ, ಸೇನಾ ಮುಖ್ಯಸ್ಥ ಮತ್ತು ಇಮ್ರಾನ್‌ ನಡುವಣ ಕಿತ್ತಾಟವು ಜಗತ್ತಿನ ಗಮನ ಸೆಳೆದಿದೆ.

ಐಎಸ್‌ಐನ ಮುಖ್ಯಸ್ಥರಾಗಿದ್ದ ಫೈಝ್‌ ಹಮೀದ್‌ ಅವರನ್ನು ಪೆಶಾವರ ಕೋರ್‌ನ ಕಮಾಂಡರ್‌ ಆಗಿ ವರ್ಗಾಯಿಸಲಾಗಿದೆ. ಐಎಸ್‌ಐ ಮುಖ್ಯಸ್ಥ ಸ್ಥಾನಕ್ಕೆ ಕರಾಚಿ ಕೋರ್‌ನ ಕಮಾಂಡರ್‌ ನದೀಮ್‌ ಅಂಜುಂ ಅವರನ್ನು ನೇಮಕ ಮಾಡಲಾಗಿದೆ. ಆದರೆ, ಈ ನೇಮಕದ ಆದೇಶಕ್ಕೆ ಇಮ್ರಾನ್‌ ಖಾನ್‌ ಸಹಿ ಮಾಡಲು ಹಿಂದೆ ಮುಂದೆ ನೋಡಿದ್ದಾರೆ.

ಜ. ಬಾಜ್ವಾ ಅವರ ಹತ್ತು ವರ್ಷದ ಯೋಜನೆಯ ಭಾಗವಾಗಿ ಇಮ್ರಾನ್ ಅವರು ಪ್ರಧಾನಿ ಹುದ್ದೆಗೆ ಏರಿದ್ದಾರೆ. ಫೈಝ್‌ ಹಮೀದ್‌ ಅವರು ಬಾಜ್ವಾ ಅವರ ಕಾರ್ಯತಂತ್ರದಲ್ಲಿ ಒಂದು ಸಣ್ಣ ಎಳೆ ಮಾತ್ರ. ಅಂತಹುದೊಂದು ಸಣ್ಣ ಎಳೆಗಾಗಿ ಪ್ರಭಾವಿ ಸೇನಾ ಮುಖ್ಯಸ್ಥರನ್ನು ಇಮ್ರಾನ್‌ ಎದುರು ಹಾಕಿಕೊಳ್ಳಲು ಮುಂದಾಗಿದ್ದು ಏಕೆ ಎಂಬುದು ಮಾತ್ರ ವಿಶ್ಲೇಷಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. 

ಐಎಸ್‌ಐ ನೇಮಕ ಕುರಿತ ವಿವಾದವು ಶೀಘ್ರವೇ ಬಗೆಹರಿಯಲಿದೆ ಎಂದು ಪಾಕಿಸ್ತಾನದ ಗೃಹ ಸಚಿವ ಶೇಕ್‌ ರಶೀದ್ ಅಹ್ಮದ್‌ ಹೇಳಿದ್ದಾರೆ. ನಾಗರಿಕ ಸರ್ಕಾರ ಮತ್ತು ಸೇನೆಯ ನಡುವೆ ಯಾವುದೇ ವಿವಾದ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಆಡಳಿತಾರೂಢ ಪಾಕಿಸ್ತಾನ್‌ ತೆಹ್ರೀಕ್‌–ಇ–ಇನ್ಸಾಫ್‌ ಪಕ್ಷದ ಮುಖ್ಯ ಸಚೇತಕ ಭಿನ್ನವಾದ ಹೇಳಿಕೆ ಕೊಟ್ಟಿದ್ದಾರೆ. ಲೆ. ಜ. ಫೈಝ್‌ ಅವರು ಹುದ್ದೆಯಲ್ಲಿ ಮುಂದುವರಿಯಬೇಕು ಎಂಬುದು ಇಮ್ರಾನ್‌ ಅವರ ಇಚ್ಛೆ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ. 

ಅಧಿಕಾರ ಲೆಕ್ಕಾಚಾರ

ಐಎಸ್‌ಐ ಮುಖ್ಯಸ್ಥ ಸ್ಥಾನ ಎಂಬುದು ಪಾಕಿಸ್ತಾನದ ಮಟ್ಟಿಗೆ ಅತ್ಯಂತ ಆಯಕಟ್ಟಿನ ಸ್ಥಾನ. ಈ ಸ್ಥಾನದಲ್ಲಿದ್ದ ಫೈಝ್‌ ಅವರು ಇಮ್ರಾನ್‌ ಅವರು ಅಧಿಕಾರ ಗಟ್ಟಿಮಾಡಿಕೊಳ್ಳಲು ಬೇಕಿದ್ದ ಎಲ್ಲ ನೆರವು ಕೊಟ್ಟಿದ್ದಾರೆ. ಹಾಗಾಗಿಯೇ ಅವಧಿ ಮುಗಿದ ಬಳಿಕವೂ ಅವರನ್ನು ಅದೇ ಹುದ್ದೆಯಲ್ಲಿ ಉಳಿಸಿಕೊಳ್ಳಬೇಕು ಎಂಬುದು ಇಮ್ರಾನ್‌ ಅವರ ಬೇಡಿಕೆ.

ಫೈಝ್ ಅವರಿಗೆ ಪೆಶಾವರ ಕೋರ್‌ನ (ವಿಭಾಗ) ಕಮಾಂಡರ್ ಆಗಿ ಹೆಚ್ಚುವರಿ ಹೊಣೆ ನೀಡಬೇಕು ಅಥವಾ ಐಎಸ್‌ಐ ಮುಖ್ಯಸ್ಥ ಹುದ್ದೆಯನ್ನು ಕೋರ್‌ ಕಮಾಂಡರ್‌ ಹುದ್ದೆಗೆ ಸಮನಾಂತರವಾಗಿಸಬೇಕು ಎಂಬ ಬೇಡಿಕೆಯನ್ನೂ ಇಮ್ರಾನ್‌ ಅವರು ಸೇನೆಯ ಮುಂದೆ ಇರಿಸಿದ್ದಾರೆ ಎನ್ನಲಾಗಿದೆ. 

ಬಾಜ್ವಾ ಅವರು ಮುಂದಿನ ನವೆಂಬರ್‌ಗೆ ನಿವೃತ್ತರಾಗಲಿದ್ದಾರೆ. ಅವರ ನಿವೃತ್ತಿಯ ಬಳಿಕ ಸೇನಾ ಮುಖ್ಯಸ್ಥ ಹುದ್ದೆಗೆ ಫೈಝ್‌ ಅವರನ್ನು ನೇಮಿಸಬೇಕು ಎಂಬುದು ಇಮ್ರಾನ್‌ ಅವರ ಯೋಜನೆ. ಹಾಗಾದರೆ, 2023ರಲ್ಲಿ ಚುನಾವಣೆ ನಡೆಯುವ ಹೊತ್ತಿಗೆ ತಮ್ಮ ನಂಬಿಕಸ್ಥ ವ್ಯಕ್ತಿಯು ಸೇನಾ ಮುಖ್ಯಸ್ಥರಾಗಿರುತ್ತಾರೆ. ಅದು ಮರಳಿ ಅಧಿಕಾರಕ್ಕೆ ಬರಲು ಸಹಕಾರಿ ಎಂಬುದು ಇಮ್ರಾನ್‌ ಲೆಕ್ಕಾಚಾರ. 

ಆದರೆ, ಹೆಸರು ಕೆಡಿಸಿಕೊಂಡಿರುವ ಫೈಝ್‌ ಅವರನ್ನು ಐಎಸ್‌ಐ ಮುಖ್ಯಸ್ಥರಾಗಿ ಇನ್ನೊಂದು ಅವಧಿಗೆ ಮುಂದುವರಿಸುವುದು ಸೇನೆಗೆ ಇಷ್ಟವಿಲ್ಲ. ಪೆಶಾವರ ಕೋರ್‌ನ ಮುಖ್ಯಸ್ಥರನ್ನಾಗಿ ಮಾಡುವುದು ಕೂಡ ಸೇನೆಗೆ ಬೇಕಿಲ್ಲ. ಹಾಗಾಗಿಯೇ ಸರ್ಕಾರ ಮತ್ತು ಸೇನೆಯ ನಡುವೆ ಜಟಾಪ‍ಟಿ ಆಗಿದೆ ಎನ್ನಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು