ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಜಮ್ಮು–ಕಾಶ್ಮೀರ: ಮರಳಿ ಜನತಂತ್ರದತ್ತ ಹೆಜ್ಜೆ

Last Updated 27 ಜೂನ್ 2021, 21:09 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರದ ಬೆಳವಣಿಗೆಗಳು ಅನೇಕರ ಟೀಕೆಗೆ ಒಳಗಾಗಿದ್ದವು. ರಾಜಕೀಯ ಮುಖಂಡರ ಗೃಹಬಂಧನ, ಇಂಟರ್‌ನೆಟ್ ಸ್ಥಗಿತ, ಸಂಚಾರಕ್ಕೆ ನಿರ್ಬಂಧ ಮುಂತಾದ ಕ್ರಮಗಳನ್ನು ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಸಂಘಟನೆಗಳು ಹಾಗೂ ಕೆಲವು ರಾಷ್ಟ್ರಗಳು ಟೀಕಿಸಿದ್ದವು. ಆದರೆ, ತನ್ನ ತೀರ್ಮಾನವನ್ನು ಭಾರತವು ಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಬಂದಿದೆ.

ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಈಗ ಎರಡು ವರ್ಷವಾಗುತ್ತಾ ಬಂದಿದೆ. ‘ಸರಿಯಾದ ಸಮಯದಲ್ಲಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗಳನ್ನು ನಡೆಸಿ, ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲಾಗುವುದು. ಅದಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ನೀಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲೇ ಭರವಸೆ ನೀಡಿದ್ದರು. ಆ ಬಹುದೊಡ್ಡ ಹೊಣೆಯನ್ನು ಸರ್ಕಾರ ಈಗ ನಿರ್ವಹಿಸಬೇಕಾಗಿದೆ. ಆ ದಿಸೆಯಲ್ಲಿ ಈಗಾಗಲೇ ಕೆಲವು ಹೆಜ್ಜೆಗಳನ್ನಿಟ್ಟಿದೆ.

ಆದರೆ, ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ಪಕ್ಷಗಳ ಸ್ಥಿತಿ ಅಷ್ಟೇನೂ ಗಟ್ಟಿಯಾಗಿಲ್ಲ. ಆದ್ದರಿಂದ ಚುನಾವಣೆಗಳು ಯಶಸ್ವಿಯಾಗಿ ನಡೆಯಬೇಕಾದರೆ ಸ್ಥಳೀಯ ಪಕ್ಷಗಳ ಬೆಂಬಲ ಪಡೆಯುವುದು ಅಗತ್ಯವಾಗಿದೆ. ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದನ್ನೇ ವಿರೋಧಿಸುತ್ತಿರುವ ಸ್ಥಳೀಯ ಪಕ್ಷಗಳು ಚುನಾವಣೆಗೆ ಸಹಕಾರ ನೀಡುತ್ತವೆಯೇ? ಸ್ಥಳೀಯ ಪಕ್ಷಗಳನ್ನು ಹೊರಗಿಟ್ಟು ಚುನಾವಣೆಗಳನ್ನು ನಡೆಸಿದರೂ ಅಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆ ಸಾಧ್ಯವಾಗಬಹುದೇ ಎಂಬುದು ಪ್ರಶ್ನೆಯಾಗಿದೆ.

ರವಿಂದರ್‌ ರೈನಾ
ರವಿಂದರ್‌ ರೈನಾ

ಚುನಾವಣೆಗಳ ಬಗ್ಗೆ ರಾಜ್ಯದ ಜನರ ನಾಡಿ ಮಿಡಿತವನ್ನು ತಿಳಿಯಲು ಚುನಾವಣೆಯ ಪ್ರಯೋಗವೊಂದನ್ನು ಸರ್ಕಾರ 2020ರಲ್ಲಿ ನಡೆಸಿದೆ. ರಾಜ್ಯದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಗಳನ್ನು ರಚಿಸಿ, ಅವುಗಳಿಗೆ 2020ರ ನವೆಂಬರ್‌ನಲ್ಲಿ ಚುನಾವಣೆಯನ್ನು ನಡೆಸಿದೆ. ಒಂದೆರಡು ಸ್ಥಳೀಯ ಪಕ್ಷಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಇತರ ಕೆಲವು ಪಕ್ಷಗಳು ಗುಪ್ಕಾರ್‌ ಕೂಟದಡಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಚುನಾವಣೆಯ ಈ ಪ್ರಯೋಗ ಯಶಸ್ವಿಯಾಗಿತ್ತು.

ಈ ಚುನಾವಣೆಯಿಂದ ಪ್ರೇರಣೆ ಪಡೆದು ಈಗ ಕೇಂದ್ರ ಸರ್ಕಾರವು ಅಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಪ್ರಯತ್ನ ಆರಂಭಿಸಿದೆ. ಆರು ರಾಜಕೀಯ ಪಕ್ಷಗಳ ‘ಗುಪ್ಕಾರ್‌’ ಕೂಟವೂ ಸೇರಿದಂತೆ ಒಟ್ಟು 14 ಸ್ಥಳೀಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಮಾತುಕತೆ ನಡೆಸಿದ್ದಾರೆ. ಇನ್ನೊಂದೆಡೆ, ಕ್ಷೇತ್ರ ಮರು ವಿಂಗಡಣೆಯ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ‘ಕ್ಷೇತ್ರ ಮರುವಿಂಗಡಣೆ ಬಳಿಕ ಚುನಾವಣೆ ನಡೆಸಲಾಗುವುದು’ ಎಂದೂ ಪ್ರಧಾನಿ ಹೇಳಿದ್ದಾರೆ.

ಸಭೆ ಮುಗಿಸಿ ಕಾಶ್ಮೀರಕ್ಕೆ ಮರಳಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಅವರು ‘ವಿಶೇಷ ಸ್ಥಾನಮಾನ ಮತ್ತು 35ಎ ಕಲಮು ಮರುಸ್ಥಾಪನೆ ಆಗದೆ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದಿದ್ದಾರೆ. ಆದರೆ, ಆ ಷರತ್ತಿಗೆ ಅವರದ್ದೇ ಪಕ್ಷದ ನಾಯಕರ ವಿರೋಧವೂ ವ್ಯಕ್ತವಾಗಿದೆ. ಒಟ್ಟಿನಲ್ಲಿ ಕಣಿವೆ ರಾಜ್ಯದಲ್ಲಿ ಹಲವು ದಶಕಗಳ ಅತಂತ್ರ ಸ್ಥಿತಿಯನ್ನು ಕೊನೆಗೊಳಿಸಿ, ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸುವ ಪ್ರಯತ್ನವಂತೂ ಆರಂಭವಾಗಿದೆ.

ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ಕ್ಷೇತ್ರ ಮರುವಿಂಗಡಣೆಯ ಸವಾಲು
ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಕ್ಕೆ ಮುನ್ನ ಅಲ್ಲಿನ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆಯಬೇಕಿದೆ ಎಂಬುದು ಕೇಂದ್ರ ಸರ್ಕಾರದ ನಿಲುವು. ಕಾಶ್ಮೀರವು ವಿಶೇಷ ಸ್ಥಾನಮಾನ ಹೊಂದಿದ್ದಾಗ, ಭಾರತದ ಸಂವಿಧಾನ, ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಹಾಗೂ ಜಮ್ಮು–ಕಾಶ್ಮೀರ ಜನ ಪ್ರಾತಿನಿಧ್ಯ ಕಾಯ್ದೆ 1957ರ ಪ್ರಕಾರ ಕ್ಷೇತ್ರ ಮರುವಿಂಗಡಣೆ ನಡೆಯಬೇಕಿತ್ತು. ಆದರೆ, ಈಗ ಭಾರತದ ಸಂವಿಧಾನದ ಪ್ರಕಾರ ಕ್ಷೇತ್ರ ಮರು ವಿಂಗಡನೆ ನಡೆಯಬೇಕು.

ಜಮ್ಮು–ಕಾಶ್ಮೀರದ ವಿಧಾನಸಭೆಯು 2001ರ ಜನಗಣತಿಯ ಬಳಿಕ ಅಲ್ಲಿನ ಕ್ಷೇತ್ರದ ಮರುವಿಂಗಡಣೆಯನ್ನು 2026ರವರೆಗೆ ಮುಂದೂಡಿತ್ತು. ಆದರೆ, ಈಗ ಜಮ್ಮು–ಕಾಶ್ಮೀರವು ರಾಜ್ಯ ಮತ್ತು ಸಂವಿಧಾನದನ 370ನೇ ವಿಧಿ ಅಡಿಯಲ್ಲಿನ ವಿಶೇಷ ಸ್ಥಾನಮಾನವನ್ನು ಕಳೆದುಕೊಂಡಿದೆ. ಜಮ್ಮು–ಕಾಶ್ಮೀರ ಪುನಾರಚನೆ ಕಾಯ್ದೆ 2019ರ ಪ್ರಕಾರ, ವಿಧಾನಸಭೆಯು 90 ಸದಸ್ಯ ಬಲ ಹೊಂದಿರಬೇಕು. ಈಗ ಇರುವುದಕ್ಕಿಂತ ಏಳು ಕ್ಷೇತ್ರ ಹೆಚ್ಚಳ ಆಗಬೇಕಿದೆ. ಹಾಗಾಗಿ, ಈ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಚಾಲನೆ ಕೊಡಲು ಕ್ಷೇತ್ರ ಪುನರ್‌ ವಿಂಗಡಣೆ ಅನಿವಾರ್ಯವೇ ಆಗಿದೆ.

2019ಕ್ಕೆ ಮೊದಲು ವಿಧಾನಸಭೆಯ ಸದಸ್ಯ ಬಲ 87 ಇತ್ತು. ಅದರಲ್ಲಿ ಲಡಾಖ್‌ನ ನಾಲ್ಕು ಕ್ಷೇತ್ರಗಳು ಸೇರಿದ್ದವು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಬರುವ 24 ಕ್ಷೇತ್ರಗಳು ಖಾಲಿ ಇದ್ದವು.

ಕ್ಷೇತ್ರ ಮರು ವಿಂಗಡಣೆಗೆ ಎರಡು ಮುಖ್ಯ ಆಕ್ಷೇಪಗಳಿವೆ. ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯ ಸ್ಥಾನ ರದ್ದತಿಗೆ ಕೇಂದ್ರ ಸರ್ಕಾರವು 2019ರ ಸೆಪ್ಟೆಂಬರ್‌ನಲ್ಲಿ ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಇತರ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಈ ಅರ್ಜಿ ಇತ್ಯರ್ಥ ಆಗುವತನಕ ಕ್ಷೇತ್ರ ಮರುವಿಂಗಡಣೆ ಬೇಡ ಎಂದು ಈ ಪಕ್ಷಗಳು ಹೇಳುತ್ತಿವೆ.

ಕ್ಷೇತ್ರ ಮರುವಿಂಗಡಣೆಯು ಜನಸಂಖ್ಯೆ ಆಧಾರದಲ್ಲಿ ನಡೆಯುತ್ತದೆ. 2011ರ ಜನಗಣತಿ ಪ್ರಕಾರ, ಕಾಶ್ಮೀರದ ಜನಸಂಖ್ಯೆ 68 ಲಕ್ಷವಾದರೆ, ಜಮ್ಮು ಪ್ರದೇಶದ ಜನಸಂಖ್ಯೆ 53 ಲಕ್ಷ. ಜನಸಂಖ್ಯೆಯ ಆಧಾರದಲ್ಲಿ ಕಾಶ್ಮೀರ ಕಣಿವೆ ಪ್ರದೇಶದ ಕ್ಷೇತ್ರಗಳ ಸಂಖ್ಯೆ ಹೆಚ್ಚುತ್ತದೆ. ಜಮ್ಮುವಿನ ಹಲವು ಸಂಘಟನೆಗಳು ಕ್ಷೇತ್ರ ಮರು ವಿಂಗಡಣೆಯನ್ನು ಬಲವಾಗಿ ವಿರೋಧಿಸುತ್ತಿವೆ.

ಈಗ, ಕಾಶ್ಮೀರದಲ್ಲಿ 46 ಮತ್ತು ಜಮ್ಮುವಿನಲ್ಲಿ 37 ವಿಧಾನಸಭಾ ಕ್ಷೇತ್ರಗಳಿವೆ.

ಗುಲಾಂ ನಬಿ ಆಜಾದ್‌
ಗುಲಾಂ ನಬಿ ಆಜಾದ್‌

ಚುನಾವಣೆ: ರಾಜಕೀಯ ಪಕ್ಷಗಳ ನಿಲುವೇನು?
ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಯಿತು. ರದ್ದುಗೊಂಡಿರುವ ವಿಶೇಷ ಸ್ಥಾನಮಾನವನ್ನು ಮರಳಿ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಬಹುತೇಕ ರಾಜಕೀಯ ಪಕ್ಷಗಳು ಮಂಡಿಸಿವೆ.

ಆದರೆ, ಕಾಶ್ಮೀರದಲ್ಲಿ ಚುನಾವಣಾ ಪ್ರಕ್ರಿಯೆ ಶುರು ಮಾಡುವ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಬಿಜೆಪಿ ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಿವೆ. ‘ಚುನಾವಣೆ ಸ್ವಾಗತಾರ್ಹ. ಆದರೆ ವಿಶೇಷ ಸ್ಥಾನಮಾನ ಮೊದಲು, ಆಮೇಲೆ ಚುನಾವಣೆ’ ಎಂಬ ನಿರ್ಧಾರಕ್ಕೆ ಬಂದಿವೆ.

‘ಜಮ್ಮು ಕಾಶ್ಮೀರಕ್ಕೆ ಮೊದಲು ರಾಜ್ಯದ ಸ್ಥಾನಮಾನ ನೀಡಿ, ಆ ನಂತರ ಚುನಾವಣೆ ಪ್ರಕ್ರಿಯೆಗಳನ್ನು ಆರಂಭಿಸಿ’ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಅಭಿಪ್ರಾಯಪಟ್ಟಿದ್ದಾರೆ.

‘ನೀವು ಚುನಾವಣೆ ನಡೆಸಬೇಕು ಎಂದು ಬಯಸಿದರೆ, ಅದಕ್ಕೂ ಮುನ್ನ ಕಿತ್ತುಕೊಂಡಿರುವ ರಾಜ್ಯ ಸ್ಥಾಮಮಾನವನ್ನು ಮರಳಿ ನೀಡಿ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ವಿಶೇಷ ಸ್ಥಾನಮಾನ ನೀಡದ ಹೊರತು ಚುನಾವಣೆ ನಡೆಸುವುದರಲ್ಲಿ ಅರ್ಥವಿಲ್ಲ. ರಾಜ್ಯದ ಸ್ಥಾನಮಾನ ಮರಳಿ ಕೊಟ್ಟಾಗ ಮಾತ್ರ ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ವಿಶೇಷಾಧಿಕಾರ ರದ್ದು ಮಾಡುವ ತನ್ನ 70 ವರ್ಷಗಳ ಕಾರ್ಯಸೂಚಿಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. 70 ವಾರಗಳಾಗಲೀ, 70 ತಿಂಗಳಾಗಲಿ. ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ’ ಎಂದು ಒಮರ್ ಹೇಳಿದ್ದಾರೆ.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ನಿಲುವೂ ಇದೇ ಆಗಿದೆ. ಸಂವಿಧಾನದ 370 ಹಾಗೂ 35ಎ ವಿಧಿಗಳನ್ನು ಮರು ಜಾರಿಗೊಳಿಸದಿದ್ದರೆ ತಾವು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಅವರು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ

ಬಿಜೆಪಿ ನಿಲುವು ಎಲ್ಲ ಪಕ್ಷಗಳಿಗಿಂತ ಸಹಜವಾಗಿ ಭಿನ್ನವಾಗಿದೆ. ‘370ನೇ ವಿಧಿ ಮರುಸ್ಥಾಪನೆ ಬಗ್ಗೆ ಕೆಲವು ನಾಯಕರು ಇನ್ನೂ ಕನಸು ಕಾಣುತ್ತಿದ್ದಾರೆ. ಆದರೆ ಅದು ಅಸಾಧ್ಯ’ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ. ವಿಧಾನಸಭಾ ಚುನಾವಣೆ ಘೋಷಣೆಯಾದಾಗ, ಅದರಲ್ಲಿ ಭಾಗವಹಿಸುವಂತೆ ಅವರು ಇತರ ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದ್ದಾರೆ.

ಏಳು ದಶಕಗಳ ಏಳುಬೀಳು
1947, ಆ.15: ಭಾರತ ಹಾಗೂ ಪಾಕಿಸ್ತಾನ ಪ್ರತ್ಯೇಕ ದೇಶಗಳ ಉದಯ. ದೇಶೀಯ ಸಂಸ್ಥಾನಗಳಿಗೆ ಮೂರು ಆಯ್ಕೆ. ಸ್ವತಂತ್ರವಾಗಿರುವುದು, ಭಾರತದ ಜೊತೆ ಸೇರುವುದು ಅಥವಾ ಪಾಕಿಸ್ತಾನದ ಜೊತೆ ಸೇರುವುದು. ಸ್ವತಂತ್ರವಾಗಿ ಉಳಿಯಲು ಜಮ್ಮು ಕಾಶ್ಮೀರದ ಮಹಾರಾಜ ಹರಿಸಿಂಗ್ ನಿರ್ಧಾರ

1947 ಅ.26: ಪಾಕ್ ಬೆಂಬಲದೊಂದಿಗೆ ವಾಯವ್ಯ ಪ್ರಾಂತ್ಯದ ಬುಡಕಟ್ಟು ಜನರಿಂದ ಜಮ್ಮು ಕಾಶ್ಮೀರದ ಮೇಲೆ ದಾಳಿ. ಭಾರತದ ಸಹಾಯ ಕೋರಿದ ಹರಿಸಿಂಗ್. ಭಾರತದ ಜತೆ ಸೇರ್ಪಡೆಯಾಗುವ ಷರತ್ತಿನೊಂದಿಗೆ ಜಮ್ಮು ಕಾಶ್ಮೀರಕ್ಕೆ ಸೇನಾ ಬೆಂಬಲ ನೀಡಿದ ಭಾರತ. ಒಪ್ಪಂದಕ್ಕೆ ಸಹಿ

1949, ಅಕ್ಟೋಬರ್ 17: ಸಂವಿಧಾನದ 370ನೇ ವಿಧಿಗೆ ಭಾರತೀಯ ಸಂವಿಧಾನ ಸಭೆ ಅಂಗೀಕಾರ. ಇದು ಭಾರತೀಯ ನ್ಯಾಯವ್ಯಾಪ್ತಿಯೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮತ್ತು ಆಂತರಿಕ ಸ್ವಾಯತ್ತೆ ಖಾತರಿಪಡಿಸಿದೆ.

1947: ಸ್ವಾತಂತ್ರ್ಯ ಲಭಿಸಿದ ಬಳಿಕ ಮೊದಲ ಚುನಾವಣೆ. ಶೇಖ್ ಅಬ್ದುಲ್ಲಾ ಗೆಲುವು

1953, ಆಗಸ್ಟ್ 9: ಜಮ್ಮು ಮತ್ತು ಕಾಶ್ಮೀರ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಅವರ ಬಂಧನ. ಸಂಪುಟವು ವಿಶ್ವಾಸ ಕಳೆದುಕೊಂಡಿದೆ ಎಂಬ ಆರೋಪದ ಮೇಲೆ ಸರ್ಕಾರ ವಜಾ

1954, ಮೇ 14: ರಾಷ್ಟ್ರಪತಿ ಆದೇಶದ ಮೇರೆಗೆ 35ಎ ವಿಧಿ ಜಾರಿ. ಕಾಶ್ಮೀರದ ಮೂಲ ನಿವಾಸಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ಅವರ ರಕ್ಷಣೆಗೆ ನಿಲ್ಲುವ ಈ ಕಾನೂನಿಗೆ ರಾಜ್ಯ ಶಾಸನಸಭೆ ಅಂಗೀಕಾರ

1989: ಬಂಡಾಯದ ಆರಂಭ. ಅನೇಕ ಉಗ್ರಗಾಮಿ ಗುಂಪುಗಳ ಉದಯ. ಮುಫ್ತಿ ಮೊಹಮ್ಮದ್ ಸಯೀದ್ ಅವರನ್ನು ಕೇಂದ್ರ ಗೃಹ ಸಚಿವರನ್ನಾಗಿ ನೇಮಿಸಿದ ಕೆಲ ದಿನಗಳ ನಂತರ, ಅವರ ಮಗಳು ರುಬೈಯಾ ಅವರ ಅಪಹರಣ

1999: ನಿಯಂತ್ರಣ ರೇಖೆಯ ಮೂಲಕ ನುಸುಳಿದ್ದ ಪಾಕಿಸ್ತಾನದ ಪಡೆಗಳು ಮತ್ತು ಉಗ್ರರು. ಕಾರ್ಗಿಲ್ ಯುದ್ಧದಲ್ಲಿ ತನ್ನ ಜಾಗಗಳನ್ನು ಮರಳಿ ವಶಪಡಿಸಿಕೊಂಡ ಭಾರತ.

ಪ್ರಧಾನಿ ನರೇಂದ್ರ ಮೋದಿ ಅವರು ಇದೇ 24ರಂದು ನಡೆದ ಕಾಶ್ಮೀರದ ಸರ್ವ ಪಕ್ಷ ಸಭೆಯ ಸಂದರ್ಭದಲ್ಲಿ
ಪ್ರಧಾನಿ ನರೇಂದ್ರ ಮೋದಿ ಅವರು ಇದೇ 24ರಂದು ನಡೆದ ಕಾಶ್ಮೀರದ ಸರ್ವ ಪಕ್ಷ ಸಭೆಯ ಸಂದರ್ಭದಲ್ಲಿ

2010: ಕಾಶ್ಮೀರಕ್ಕೆ ಮೂವರು ಸಂಧಾನಕಾರರನ್ನು ನೇಮಿಸಿದಮನಮೋಹನ್ ಸಿಂಗ್ ಸರ್ಕಾರ

2014-2018: ಸಿದ್ಧಾಂತಕ್ಕೆ ವಿರುದ್ಧವಾಗಿ, ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆ. ಮುಫ್ತಿ ಮೊಹಮ್ಮದ್ ಸಯೀದ್ ಮುಖ್ಯಮಂತ್ರಿ. ಅವರ ನಿಧನಾನಂತರ ಅವರ ಮಗಳು ಮೆಹಬೂಬಾ ಮುಫ್ತಿ ಉತ್ತರಾಧಿಕಾರಿ. ಉಗ್ರ ಬುರ್ಹಾನ್ ವಾನಿಯ ಹತ್ಯೆ ಬಳಿಕ ಕಣಿವೆಯಲ್ಲಿ ಅಶಾಂತಿ. ಬಿಗಡಾಯಿಸಿದ ಮೈತ್ರಿ. ಮೆಹಬೂಬಾ ರಾಜೀನಾಮೆ. ರಾಷ್ಟ್ರಪತಿ ಆಡಳಿತ ಜಾರಿ

2019, ಆ.5: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯ ನಿಬಂಧನೆಗಳನ್ನು ತೆಗೆದುಹಾಕುವ ನಿರ್ಣಯ ಅಂಗೀಕಾರ. ಜಮ್ಮು ಕಾಶ್ಮೀರ ವಿಭಜನೆ. ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತನೆ. ಕಣಿವೆಯಲ್ಲಿ ನಿಷೇಧಾಜ್ಞೆ. ರಾಜಕೀಯ ಮುಖಂಡರ ಬಂಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT