ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer - ಆಳ ಅಗಲ| ದ್ವಿಚಕ್ರವಾಹನಗಳ ಸವಾರರೇ ಹೆಚ್ಚು ಬಲಿ

ರಸ್ತೆ ಅಪಘಾತಗಳಲ್ಲಿ ಸಾವು
Last Updated 5 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಮೃತಪಡುವವರಲ್ಲಿ ದ್ವಿಚಕ್ರವಾಹನ ಸವಾರರೇ ಹೆಚ್ಚು ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆಗಳು ಬ್ಯೂರೊವಿನ (ಎನ್‌ಸಿಆರ್‌ಬಿ) ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು–2021 ವರದಿ. 2021ರಲ್ಲಿ ಅತಿ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಆದರೆ ಹೀಗೆ ಸಂಭವಿಸಿದ ಒಟ್ಟು ಸಾವುಗಳಲ್ಲಿ ದ್ವಿಚಕ್ರ ವಾಹನ ಸವಾರರ ಪ್ರಮಾಣ ಶೇ 44.5ಕ್ಕಿಂತಲೂ ಹೆಚ್ಚು.ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿದ್ದವರು ಮತ್ತು ಹಿಂಬದಿ ಸವಾರಿ ಮಾಡುತ್ತಿದ್ದವರ ಸಂಖ್ಯೆಯೂ ಇದರಲ್ಲಿ ಸೇರಿದೆ.

2021ರಲ್ಲಿ ದ್ವಿಚಕ್ರವಾಹನದಲ್ಲಿ ಸವಾರಿ ಮಾಡುತ್ತಿದ್ದವರಲ್ಲಿ ಒಟ್ಟು 1.74 ಲಕ್ಷ ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ಇದರಲ್ಲಿ 69,240 ಮಂದಿ ಮೃತಪಟ್ಟಿದ್ದರೆ, 1.05 ಲಕ್ಷ ಮಂದಿ ಗಾಯಗೊಂಡಿದ್ದಾರೆ. ದೇಶದ ರಸ್ತೆಗಳಲ್ಲಿ ಪ್ರಯಾಣ ಮಾಡುವಲ್ಲಿ ದ್ವಿಚಕ್ರ ವಾಹನಗಳೇ ಅತ್ಯಂತ ಅಪಾಯಕಾರಿ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಬೇರೆಲ್ಲಾ ಸ್ವರೂಪದ ವಾಹನಗಳು ಅಪಘಾತಕ್ಕೆ ಒಳಗಾಗಿದ್ದರೂ, ಅವುಗಳ ಚಾಲಕರು ಮತ್ತು ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಹೆಚ್ಚು ಇದೆ. ಆದರೆ, ದ್ವಿಚಕ್ರ ವಾಹನಗಳಲ್ಲಿ ಅಪಘಾತಕ್ಕೆ ಒಳಗಾದವರು ಮೃತಪಡುವ ಸಾಧ್ಯತೆ ಹೆಚ್ಚು. ಹೀಗಾಗಿಯೇ ಇಂತಹ ಪ್ರಯಾಣಿಕರ ಸಾವಿನ ಸಂಖ್ಯೆ ಮತ್ತು ಪ್ರಮಾಣ ಹೆಚ್ಚು ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

lದ್ವಿಚಕ್ರ ವಾಹನಗಳನ್ನು ಬಿಟ್ಟರೆ ಹೆಚ್ಚು ಮಂದಿ ಮೃತಪಟ್ಟಿರುವುದು ಕಾರು/ಎಸ್‌ಯುವಿ ಅಪಘಾತಗಳಲ್ಲಿ. ಒಟ್ಟು ರಸ್ತೆ ಅಪಘಾತದ ಸಾವುಗಳಲ್ಲಿ ಇಂತಹ ಪ್ರಯಾಣಿಕರ ಪ್ರಮಾಣ ಶೇ 18.1ರಷ್ಟಿದೆ. ಈ ಅವಧಿಯಲ್ಲಿ ಕಾರು/ಎಸ್‌ಯುವಿ/ಜೀಪ್‌ ಸ್ವರೂಪದ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ 67,159 ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ಅವರಲ್ಲಿ 43,628 ಮಂದಿ ಗಾಯಗೊಂಡಿದ್ದರೆ, ಉಳಿದವರು ಮೃತಪಟ್ಟಿದ್ದಾರೆ

lದ್ವಿಚಕ್ರ ವಾಹನಗಳು ಮತ್ತು ಕಾರುಗಳ ಬಿಟ್ಟರೆ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನ ಸಂಖ್ಯೆ ಪಾದಚಾರಿಗಳದ್ದು. 2021ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 18 ಸಾವಿರಕ್ಕೂ ಹೆಚ್ಚು ಪಾದಚಾರಿಗಳು ಮೃತಪಟ್ಟಿದ್ದಾರೆ. ಒಟ್ಟು ರಸ್ತೆ ಅಪಘಾತದ ಸಾವುಗಳಲ್ಲಿ ಪಾದಚಾರಿಗಳ ಪ್ರಮಾಣ ಶೇ 9.6ರಷ್ಟು

lಟ್ರಕ್‌ಗಳಲ್ಲಿ ಪ್ರಯಾಣಿಸುತ್ತಿದ್ದು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 14 ಸಾವಿರದಷ್ಟಿದೆ. 25,515 ಮಂದಿ ಟ್ರಕ್‌ಗಳಲ್ಲಿ ಅಪಘಾತಕ್ಕೆ ಸಿಲುಕಿದ್ದರೆ, ಅವರಲ್ಲಿ 10,893 ಮಂದಿ ಗಾಯಾಳುಗಳಾಗಿ ಬಚಾವಾಗಿದ್ದಾರೆ

lಬೈಸಿಕಲ್‌, ರಿಕ್ಷಾ, ಎತ್ತಿನಗಾಡಿ, ಟಾಂಗಾಗಳೂ ಅಪಘಾತಕ್ಕೆ ಒಳಗಾಗಿವೆ. ಈ ಸ್ವರೂಪದ ಅಪಘಾತಗಳಲ್ಲಿ ಒಟ್ಟು 8,086 ಮಂದಿ ಪ್ರಾಣಕಳೆದುಕೊಂಡಿದ್ದಾರೆ

lಎಲ್ಲಕ್ಕಿಂತ ಸುರಕ್ಷಿತ ಪ್ರಯಾಣ ಸಾಧ್ಯವಿರುವುದು ಬಸ್‌ಗಳಲ್ಲಿ ಎನ್ನುತ್ತವೆ ಈ ವರದಿಯ ದತ್ತಾಂಶಗಳು. ಬೇರೆಲ್ಲ ವಾಹನಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರಿಗಿಂತ ಬಸ್‌ಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ (4,622) ಕಡಿಮೆ. 2021ರಲ್ಲಿ ಸಂಭವಿಸಿದ ಒಟ್ಟು ಅಪಘಾತದ ಸಾವುಗಳಲ್ಲಿ, ಇಂತಹ ಸಾವುಗಳ ಪ್ರಮಾಣ ಶೇ 3.9ರಷ್ಟು

ಅತಿವೇಗ, ಅಪಾಯಕಾರಿ ಚಾಲನೆಯೇ ದೊಡ್ಡ ಹಂತಕ

2021ರಲ್ಲಿ ದೇಶದಲ್ಲಿ ಸಂಭವಿಸಿದ ಅಪಘಾತ ಮತ್ತು ಸಾವುಗಳಿಗೆ ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆಯೇ ಅತ್ಯಂತ ದೊಡ್ಡ ಕಾರಣವಾಗಿದೆ. ಈ ಅವಧಿಯಲ್ಲಿ ಸಂಭವಿಸಿದ ಒಟ್ಟು ಅಪಘಾತ ಮತ್ತು ಸಾವುಗಳಲ್ಲಿ ಅತಿವೇಗದಿಂದ ಸಂಭವಿಸಿದ ಅವಘಡಗಳ ಪ್ರಮಾಣ ಶೇ 55.9ರಷ್ಟಿದೆ. ಅಪಾಯಕಾರಿ ಮತ್ತು ನಿರ್ಲಕ್ಷ್ಯದ ಚಾಲನೆಯು ಶೇ 27.5ರಷ್ಟು ಅಪಘಾತ ಮತ್ತು ಸಾವುಗಳಿಗೆ ಕಾರಣವಾಗಿದೆ.

ಈ ಎರಡೂ ಕಾರಣಗಳಿಂದ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 1.29 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅತಿಯಾದ ವೇಗ ಮತ್ತು ಅಪಾಯಕಾರಿ/ನಿರ್ಲಕ್ಷ್ಯದ ಚಾಲನೆಗೆ ಚಾಲಕರೇ ಕಾರಣ. ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದನ್ನು ಇದು ಸೂಚಿಸುತ್ತದೆ. ಚಾಲನೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಮತ್ತು ಅವುಗಳನ್ನು ಉಲ್ಲಂಘಿಸುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಬೇಕು. ಹಾಗೆ ಮಾಡುವ ಮೂಲಕ ಸಂಭಾವ್ಯ ಅಪಘಾತಗಳು ಮತ್ತು ಜೀವಹಾನಿಯನ್ನು ತಪ್ಪಿಸಬಹುದು ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಮದ್ಯಸೇವಿಸಿ ಚಾಲನೆ ಮಾಡುವುದಕ್ಕಿಂತ ಅತಿಯಾದ ವೇಗ ಮತ್ತು ಅಪಾಯಕಾರಿ ಚಾಲನೆಯೇ ದೊಡ್ಡ ಹಂತಕ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ.

* 2021ರಲ್ಲಿ ಸಂಭವಿಸಿದ ಅಪಘಾತದ ಸಾವುಗಳಲ್ಲಿ 15,357 (ಶೇ 10ರಷ್ಟು) ಅಪಘಾತ ಮತ್ತು ಸಾವುಗಳಿಗೆ ನಿಖರ ಕಾರಣ ಪತ್ತೆಯಾಗಿಲ್ಲ. ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ಇನ್ನೂ ಪರಿಣಾಮಕಾರಿಯಾದ ವಿಧಾನ ಹಾಗೂ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ

* ಪ್ರತಿಕೂಲ ಹವಾಮಾನದಲ್ಲಿ ಚಾಲನೆ ಮಾಡುವಾಗ ಅಪಘಾತಗಳು ಸಂಭವಿಸಿವೆ. ಅಂತಹ ಅಪಘಾತಗಳಲ್ಲಿ 5,405 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಕೂಲ ಹವಾಮಾನದಲ್ಲಿ ಚಾಲನೆ ಮಾಡುವುದರ ಅಪಾಯವನ್ನು ಇದು ಸೂಚಿಸುತ್ತದೆ

* 2021ರಲ್ಲಿ ಸಂಭವಿಸಿದ ಒಟ್ಟು ಅಪಘಾತದ ಸಾವುಗಳಲ್ಲಿ, ಮದ್ಯಸೇವಿಸಿ ಚಾಲನೆ ಮಾಡಿದ್ದರಿಂದ ಆದ ಅಪಘಾತದ ಸಾವುಗಳ ಪ್ರಮಾಣ ಶೇ 1.9ರಷ್ಟು ಮಾತ್ರ. ಈ ಸ್ವರೂಪದ ಉಲ್ಲಂಘನೆ ತಡೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಆದರೆ, ಹೆಚ್ಚು ಸಾವಿಗೆ ಕಾರಣವಾಗುವ ಅತಿವೇಗ/ಅಪಾಯಕಾರಿ/ನಿರ್ಲಕ್ಷ್ಯದ ಚಾಲನೆಗೆ ಕಡಿವಾಣ ಹಾಕುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ

ಅಪಘಾತಗಳಲ್ಲಿ ದಿಢೀರ್ ಏರಿಕೆ

2010ರ ದಶಕದ ಬಹುತೇಕ ಎಲ್ಲಾ ವರ್ಷಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ. ಪ್ರತಿವರ್ಷ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಪ್ರಮಾಣದ ಏರಿಳಿತವಾಗಿದೆ. ಆದರೆ, 2021ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. 2012ರಿಂದ 2016ರವರೆಗೆ ಪ್ರತಿ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸತತ ಏರಿಕೆ ಕಂಡುಬಂದಿದೆ.

2016ರಲ್ಲಿ ಆವರೆಗಿನ ಗರಿಷ್ಠ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸಿವೆ. 2017ರ ನಂತರ ಪ್ರತಿ ವರ್ಷ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಉತ್ತಮ ಹೆದ್ದಾರಿ ನಿರ್ಮಾಣ, ಎಬಿಎಸ್‌ ಮತ್ತು ಕಾರ್ನರ್‌ ಸ್ಟೆಬಿಲಿಟಿ ಕಂಟ್ರೋಲ್‌ ಸವಲತ್ತುಗಳು ಕಡ್ಡಾಯವಾದ ನಂತರ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2020ರಲ್ಲಿ ಸಂಭವಿಸಿದ ಅಪಘಾತಗಳಿಗೆ ಹೋಲಿಸಿದರೆ, 2021ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಶೇ 14.5ರಷ್ಟು ಏರಿಕೆಯಾಗಿದೆ.‌

ಆಧಾರ: ಎನ್‌ಸಿಆರ್‌ಬಿ, ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು–2021, 2017, 2016ನೇ ಸಾಲಿನ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT