ನವದೆಹಲಿ: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರರು ಅಮೆರಿಕದಲ್ಲಿ ಸೋಮವಾರ ಆರಂಭಗೊಂಡ ಬಿಡಬ್ಲ್ಯುಎಫ್ ವಿಶ್ವ ಜೂನಿಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ 5–0 ಯಿಂದ ಕುಕ್ ಐಲ್ಯಾಂಡ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದರು.
ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾತ್ವಿಕ್ ರೆಡ್ಡಿ ಕಾನಪುರಂ ಮತ್ತು ವೈಷ್ಣವಿ ಖಡ್ಕೇಕರ್ ಜೋಡಿಯು 21-6, 21-8 ರಿಂದ ಕೈಯಿನ್ ಮಟಾಯೊ ಮತ್ತು ತೆರೆಪಿ ಅಕಾವಿ ಅವರನ್ನು ಮಣಿಸಿ ಭಾರತಕ್ಕೆ ಗೆಲುವಿನ ಆರಂಭ ಒದಗಿಸಿತು.
ಆಯುಷ್ ಶೆಟ್ಟಿ ಮತ್ತು ತಾರಾ ಶಾ ಅವರು ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ಉತ್ತಮ ಆಟದೊಂದಿಗೆ ಭಾರತದ ಮುನ್ನಡೆಯನ್ನು ವಿಸ್ತರಿಸಿದರು. ಬಾಲಕರ ಸಿಂಗಲ್ಸ್‌ನಲ್ಲಿ ಆಯುಷ್ 21-6, 21-3 ರಿಂದ ಡೇನಿಯಲ್ ಅಕಾವಿ ವಿರುದ್ಧ ಗೆಲುವು ಸಾಧಿಸಿದರೆ, ಬಾಲಕಿಯರ ಸಿಂಗಲ್ಸ್‌ನಲ್ಲಿ ತಾರಾ 21-3, 21-6 ರಿಂದ ಟೆ ಪಾ ಒ ಟೆ ರಂಗಿ ತುಪಾ ಅವರನ್ನು ಮಣಿಸಿದರು.
ಬಾಲಕರ ಡಬಲ್ಸ್‌ನಲ್ಲಿ ನಿಕೋಲಸ್ ಮತ್ತು ತುಷಾರ್ ಜೋಡಿ 21-9, 21-5 ರಿಂದ ಇಮ್ಯಾನುಯೆಲ್ ಮಟಾಯೊ ಮತ್ತು ಕೈಯಿನ್ ಮಟಾಯೊ ಅವರನ್ನು ಸೋಲಿಸಿದರೆ, ಬಾಲಕಿಯರ ಡಬಲ್ಸ್‌ನಲ್ಲಿ ರಾಧಿಕಾ ಶರ್ಮಾ ಮತ್ತು ತನ್ವಿ ಶರ್ಮಾ ಜೋಡಿಯು ಸಾಂಘಿಕ ಆಟ ಪ್ರದರ್ಶಿಸಿ 21-4, 21-7 ರಿಂದ ಟೆರಿಯಾಪಿ ಅಕಾವಿ ಮತ್ತು ವೈಟಿಯಾ ಕ್ರೊಕೊಂಬೆ ಅಮಾ ಅವರನ್ನು ಹಿಮ್ಮೆಟ್ಟಿಸಿತು.
ಭಾರತ ತಂಡವು ಮುಂದಿನ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಎದುರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.