ಭಾನುವಾರ, ಜೂನ್ 26, 2022
21 °C

ಆಳ–ಅಗಲ | ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ: ಹಲವು ಬಗೆಯ ದುರ್ಬಳಕೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರತಿಭಟನೆ ಮತ್ತು ಗಲಭೆಗಳ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯಾಗುವುದು ನಡೆದೇ ಇದೆ. ಸಾರ್ವಜನಿಕ ಆಸ್ತಿಗಳಿಗೆ ಹೀಗೆ ಹಾನಿ ಆಗುವುದನ್ನು ತಡೆಯುವ ಸಲುವಾಗಿ 1985ರಲ್ಲೇ ‘ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ’ಯನ್ನು ಜಾರಿಗೆ ತರಲಾಗಿತ್ತು. ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ವಿರುದ್ಧ ಈ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿ ತರಲಾಗಿದೆ. ಸರ್ಕಾರವು ಪ್ರತಿಭಟನೆ ಮತ್ತು ಭಿನ್ನಮತವನ್ನು ಹತ್ತಿಕ್ಕಲು ಈ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಇದೆ.

ಈಚಿನ ವರ್ಷಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಆಡಳಿತವಿದ್ದ ಮತ್ತು ಆಡಳಿತವಿರುವ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಅತೀವ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ (ಬಿಜೆಪಿ–ಶಿವಸೇನಾ ಸರ್ಕಾರ), ತಮಿಳುನಾಡಿನಲ್ಲಿ (ಎಐಎಡಿಎಂಕೆ ಸರ್ಕಾರ) ಈ ಕಾಯ್ದೆಯ ಅಡಿ ಸಾವಿರಾರು ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಈ ಕಾಯ್ದೆಯ ಅಡಿ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಆದರೆ, ಇವುಗಳಲ್ಲಿ ವಜಾ ಆದ ಪ್ರಕರಣಗಳ ಪ್ರಮಾಣ ಶೇ 40ಕ್ಕೂ ಹೆಚ್ಚು. ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 7ಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೆ. ಅಗತ್ಯವಿಲ್ಲದೇ ಇರುವ ಕಡೆಯೂ ಈ ಕಾಯ್ದೆಯನ್ನು ಬಳಸಿ ಕೊಳ್ಳಲಾಗುತ್ತಿದೆ ಎಂಬುದನ್ನು ಸರ್ಕಾರದ ಈ ದತ್ತಾಂಶಗಳೇ ಹೇಳುತ್ತವೆ.

ಉತ್ತರ ಪ್ರದೇಶ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ, ಈ ಕಾಯ್ದೆಗೆ ಪೂರಕವಾಗಿ ಮತ್ತೊಂದು ಕಾಯ್ದೆಯನ್ನು ಜಾರಿಗೆ ತಂದಿತ್ತು. ಆ ಮೂಲಕ, ಆಸ್ತಿಗೆ ಆದ ಹಾನಿಯ ಪರಿಹಾರ ಮೊತ್ತವನ್ನು ಗಲಭೆಗಳ ಆರೋಪಿಗಳಿಂದಲೇ ವಸೂಲಿ ಮಾಡಲು ಕಾನೂನು ರಚಿಸಿತ್ತು. ವಸೂಲಿಯನ್ನೂ ಮಾಡಿತ್ತು. ‘ಪ್ರತಿಭಟನೆ ಮತ್ತು ಗಲಭೆ ನಡೆಸುವವರ ಎದೆಯಲ್ಲಿ ಭಯ ಹುಟ್ಟಬೇಕು. ಹೀಗಾಗಿ ರಾಜ್ಯ ಸರ್ಕಾರವು ಗಲಭೆಕೋರರಿಂದಲೇ ಹಾನಿಯ ಮೊತ್ತವನ್ನು ವಸೂಲಿ ಮಾಡಲಿದೆ’ ಎಂದು ಉತ್ತರ ಪ್ರದೇಶ ಬಿಜೆಪಿ ನಾಯಕರು ಘೋಷಣೆ ಮಾಡಿದ್ದರು. ಕರ್ನಾಟಕ ಸರ್ಕಾರ ಸಹ ಇಂತಹದ್ದೇ ಪ್ರಯತ್ನ ಮಾಡಿತ್ತು. ಮಧ್ಯಪ್ರದೇಶ, ಹರಿಯಾಣ ಸರ್ಕಾರಗಳೂ ಇದೇ ಹಾದಿ ತುಳಿದಿದ್ದವು. ಒಟ್ಟಾರೆಯಾಗಿ ತಮ್ಮ ವಿರುದ್ಧದ ಭಿನ್ನಮತವನ್ನು ಹತ್ತಿಕ್ಕಲು ಮತ್ತು ಪ್ರತಿಭಟನೆಗಳು ನಡೆಯುವುದನ್ನು ತಡೆಯಲು ಎಲ್ಲಾ ಸರ್ಕಾರಗಳೂ ಈ ಕಾಯ್ದೆಯನ್ನು ಬಳಸಿಕೊಂಡಿವೆ.

ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರಿಗೆ ಕನಿಷ್ಠ ಆರು ತಿಂಗಳು ಮತ್ತು ಗರಿಷ್ಠ ಐದು ವರ್ಷಗಳವರೆಗೆ ಶಿಕ್ಷೆ ವಿಧಿಸಲು ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ–1985 ಅವಕಾಶ ಮಾಡಿಕೊಟ್ಟಿದೆ. ಬೆಂಕಿ ಮತ್ತು ಸ್ಫೋಟಕಗಳ ಮೂಲಕ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವವರಿಗೆ ಕನಿಷ್ಠ ಒಂದು ವರ್ಷ ಮತ್ತು ಗರಿಷ್ಠ 10 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ. ಎರಡೂ ಸಂದರ್ಭಗಳಲ್ಲಿ ದಂಡ ವಿಧಿಸಲು ಅವಕಾಶವಿದೆ. ಆದರೆ, ಹಾನಿಯ ಮೊತ್ತವನ್ನು ತಪ್ಪಿತಸ್ಥರಿಂದಲೇ ವಸೂಲಿ ಮಾಡಲು ಈ ಕಾಯ್ದೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಸರ್ಕಾರಗಳ ಇಂತಹ ಕ್ರಮಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆದರೆ, ಇಂತಹ ಕ್ರಮಗಳ ಪ್ರಯತ್ನ ಮತ್ತೆ ಮತ್ತೆ ನಡೆಯುತ್ತಿದೆ. ಇದನ್ನೂ ಸಹ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. 

ಶೇ 41ರಷ್ಟು ಪ್ರಕರಣಗಳು ವಜಾ
ಸಾರ್ವಜನಿಕ ಆಸ್ತಿಗಳಿಗೆ ಹಾನಿ ತಡೆ ಕಾಯ್ದೆಯ ಅಡಿಯಲ್ಲಿ ಪ್ರತಿ ವರ್ಷ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. 2018ರಿಂದ 2020ರ ಅಂತ್ಯದವರೆಗೆ ಈ ಕಾಯ್ದೆ ಅಡಿ ದೇಶದಾದ್ಯಂತ ಒಟ್ಟು 17,730 ಪ್ರಕರಣಗಳು ದಾಖಲಾಗಿವೆ. ಆದರೆ ಇವುಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳ ಸಂಖ್ಯೆ 8,059 ಮಾತ್ರ. ಅಂದರೆ ಹೀಗೆ ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹೋದ ಪ್ರಕರಣಗಳ ಪ್ರಮಾಣ ಶೇ 45.5ರಷ್ಟು ಮಾತ್ರ.

ಈ ಅವಧಿಯಲ್ಲಿ ಪೊಲೀಸರು ತಾವು ದಾಖಲಿಸಿಕೊಂಡಿದ್ದ ಪ್ರಕರಣಗಳಲ್ಲಿ, ಸುಳ್ಳು ಪ್ರಕರಣ ಮತ್ತು ಸಾಕ್ಷ್ಯದ ಕೊರತೆ ಎಂದು ಕಾರಣ ನೀಡಿ ಒಟ್ಟು 2,946 ಪ್ರಕರಣಗಳನ್ನು ತಾವೇ ಕೈಬಿಟ್ಟಿದ್ದಾರೆ. ಅಂದರೆ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ 16.6ರಷ್ಟು ಪ್ರಕರಣಗಳು ಸುಳ್ಳು ಮತ್ತು ಅವುಗಳಿಗೆ ಸಾಕ್ಷ್ಯವಿಲ್ಲ ಎಂದು ಪೊಲೀಸರೇ ಒಪ್ಪಿಕೊಂಡಿದ್ದಾರೆ.

ಇನ್ನು ನ್ಯಾಯಾಲಯಕ್ಕೆ ಬಂದ ಪ್ರಕರಣಗಳಲ್ಲಿ 4,372 ಪ್ರಕರಣಗಳನ್ನು ವಜಾ ಮಾಡಲಾಗಿದೆ ಮತ್ತು ಖುಲಾಸೆ ಮಾಡಲಾಗಿದೆ. ಹೀಗೆ ನ್ಯಾಯಾಲಯಕ್ಕೆ ಬಂದ ಒಟ್ಟು ಪ್ರಕರಣಗಳಲ್ಲಿ ವಜಾ ಮತ್ತು ಖುಲಾಸೆ ಆದ ಪ್ರಕರಣಗಳ ಪ್ರಮಾಣ ಶೇ 54.4ರಷ್ಟು.

ಪೊಲೀಸರು ಕೈಬಿಟ್ಟ, ನ್ಯಾಯಾಲಯದಲ್ಲಿ ವಜಾ ಆದ ಮತ್ತು ಖುಲಾಸೆ ಆದ ಪ್ರಕರಣಗಳ ಒಟ್ಟು ಸಂಖ್ಯೆ 7,318. ಅಂದರೆ ಈ ಅವಧಿಯಲ್ಲಿ ಪೊಲೀಸರು ಈ ಕಾಯ್ದೆಯ ಅಡಿ ದಾಖಲಿಸಿದ ಒಟ್ಟು 17,730 ಪ್ರಕರಣಗಳಲ್ಲಿ ಶೇ 41.2ರಷ್ಟು ಪ್ರಕರಣಗಳು ವಿವಿಧ ಕಾರಣಗಳಿಂದ ವಜಾ ಆಗಿವೆ. ಈ ಅವಧಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶಿಕ್ಷೆ ಘೋಷಣೆಯಾದ ಪ್ರಕರಣಗಳ ಸಂಖ್ಯೆ 1,378 ಮಾತ್ರ. ಅಂತಹ ಪ್ರಕರಣಗಳ ಪ್ರಮಾಣ ಕೇವಲ ಶೇ 7.7ರಷ್ಟು.

ದಂಡ ವಸೂಲಿ ಯತ್ನಕ್ಕೆ ಹಿನ್ನಡೆ
ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಮೊದಲ ಬಾರಿಗೆ ‘ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ಪರಿಹಾರ ವಸೂಲಿ ಕಾಯ್ದೆ’ಯನ್ನು ಜಾರಿಗೆ ತಂದಿತು. ಮೊದಲಿಗೆ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಕಾಯ್ದೆಯ ರೂಪ ನೀಡಿತ್ತು. ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಆಗಿರುವ ಹಾನಿಯನ್ನು ಪ್ರತಿಭಟನಕಾರರಿಂದ ತುಂಬಿಕೊಳ್ಳಲು ಸರ್ಕಾರ ಈ ಕಾಯ್ದೆಯ ಮೂಲಕ ಮುಂದಾಯಿತು. 800ಕ್ಕೂ ಹೆಚ್ಚು ಜನರ ವಿರುದ್ಧ ನೋಟಿಸ್ ಜಾರಿಗೊಳಿಸಿತು. ಇವರಿಂದ ಸುಮಾರು ₹2 ಕೋಟಿ ದಂಡ ವಸೂಲಿ ಮಾಡುವ ಉದ್ದೇಶ ಹಾಕಿಕೊಂಡಿತ್ತು. 2019ರ ಡಿಸೆಂಬರ್ ವೇಳೆಗೆ ಕಾನ್ಪುರ ಸೇರಿದಂತೆ ನಾಲ್ಕು ಜಿಲ್ಲಾಡಳಿತಗಳು 130 ಜನರಿಗೆ ನೋಟಿಸ್ ನೀಡಿದವು.

ಲಖನೌ, ಮುಜಾಫ್ಫರ್‌ನಗರ, ಮೀರಠ್, ರಾಂಪುರ, ಸಂಭಾಲ್, ಕಾನ್ಪುರ ಹಾಗೂ ಮೊರಾದಾಬಾದ್‌ನ ಜನರಿಗೆ ನೋಟಿಸ್‌ ರವಾನೆಯಾದವು. ಮೀರಠ್‌ನಲ್ಲಿ 50 ಜನರಿಗೆ ನೋಟಿಸ್ ನೀಡಲಾಗಿತ್ತು. ₹21 ಲಕ್ಷ ದಂಡ ಪಾವತಿಸುವಂತೆ ಇವರಿಗೆ ಸೂಚಿಸಲಾಗಿತ್ತು. ಸಂಭಾಲ್‌ನ ನಖಾಸಾ ಎಂಬಲ್ಲಿ 20 ದಿನಗಳಿಂದ ಪ್ರತಿಭಟನೆ ನಡೆಸಿದವರಿಗೆ ನೋಟಿಸ್ ಬಂದಿತ್ತು. 58 ಜನರಿಗೆ ₹19.2 ಲಕ್ಷ ದಂಡ ಹಾಕಲಾಗಿತ್ತು. ಗೋರಖ್‌ಪುರದ 8 ಜನರ ಮೇಲೆ ₹90 ಸಾವಿರ ಮೌಲ್ಯದ ಆಸ್ತಿ ಹಾನಿ ಮಾಡಿದ ಆರೋಪ ಹೊರಿಸಲಾಗಿತ್ತು. ರಾಂಪುರದಲ್ಲಿ 28, ಬಿಜ್ನೋರ್‌ನ 43 ಜನರಿಗೂ ನೋಟಿಸ್ ನೀಡಲಾಗಿತ್ತು. ಕಾನ್ಪುರದ 15 ಕುಟುಂಬಗಳಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ ಬಹುತೇಕರು ದಿನಗೂಲಿ ಕಾರ್ಮಿಕರು, ಹಾಲು ಮಾರುವವರು ಹಾಗೂ ಟಾಂಗಾ ಓಡಿಸುವವರಿದ್ದರು. ಇವರಿಗೆ ತಲಾ ₹13 ಸಾವಿರ ದಂಡ ವಿಧಿಸಲಾಗಿತ್ತು. 

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಸರ್ಕಾರಿ ಆಸ್ತಿಗೆ ಹಾನಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಲವು ಆರೋಪಿಗಳ ಚಿತ್ರಗಳನ್ನು ಹೊಂದಿರುವ ಹೋರ್ಡಿಂಗ್ ಅನ್ನು ಉತ್ತರ ಪ್ರದೇಶ ಸರ್ಕಾರವು ವಿವಿಧ ಕಡೆ ಹಾಕಿತ್ತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಫಲಕಗಳನ್ನು ತಕ್ಷಣ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್‌ ಸೂಚನೆ ನೀಡಿತ್ತು. 

ಮಧ್ಯಪ್ರದೇಶದಲ್ಲಿ ಇಂತಹದ್ದೇ ಕಾಯ್ದೆ ಜಾರಿಯಲ್ಲಿದೆ. ಇತ್ತೀಚೆಗೆ ನಡೆದ ರಾಮನವಮಿ ಮೆರವಣಿಗೆ ಸಮಯದ ಗಲಭೆಗಳು ಹಾಗೂ ಖರಗೋನ್ ಘಟನೆಗಳ ಆರೋಪಿಗಳನ್ನು ಈ ವ್ಯಾಪ್ತಿಗೆ ತರಲು ಸರ್ಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಾ. ಶಿವಕುಮಾರ್ ಮಿಶ್ರಾ ನೇತೃತ್ವದ ದ್ವಿಸದಸ್ಯ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಿದೆ.

ಬೆಂಗಳೂರಿನ ಡಿ.ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ನೇತೃತ್ವದ ಕ್ಲೇಮ್ ಕಮಿಷನ್ ಅನ್ನು ರಾಜ್ಯ ಸರ್ಕಾರ ರಚಿಸಿದೆ. ಈ ಸಮಿತಿ ಇನ್ನಷ್ಟೇ ವರದಿ ನೀಡಬೇಕಿದೆ. ಉತ್ತರ ಪ್ರದೇಶದ ರೀತಿ ಕರ್ನಾಟಕ ಸರ್ಕಾರವು ಪ್ರತ್ಯೇಕ ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಆದರೆ, ಸುಪ್ರೀಂಕೋರ್ಟ್‌ನ 2009ರ ತೀರ್ಪಿನ ಆಧಾರದಲ್ಲಿ ಕ್ಲೇಮ್‌ ಕಮಿಷನ್ ರಚಿಸಿದೆ.

‘ಸುಪ್ರೀಂ’ ಚಾಟಿ
ದಂಡ ಪಾವತಿಸುವಂತೆ ಸೂಚಿಸಿ ಆರೋಪಿಗಳಿಗೆ ನೋಟಿಸ್ ನೀಡಿರುವ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಪರ್ವೇಜ್ ಆರಿಫ್ ಟಿನು ಎಂಬುವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ‘ನೋಟಿಸ್ ನೀಡಲಾದ ವ್ಯಕ್ತಿಯೊಬ್ಬರು ಆರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಮೃತಪಟ್ಟಾಗ ಅವರಿಗೆ 94 ವರ್ಷ ವಯಸ್ಸಾಗಿತ್ತು. ನೋಟಿಸ್ ಪಡೆದ ಸಾಕಷ್ಟು ಜನರ ವಯೋಮಾನ 90 ವರ್ಷದ ಆಸುಪಾಸಿನಲ್ಲಿದೆ’ ಎಂಬ ವಿಚಾರಗಳನ್ನು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದರು.

2009ರ ಸುಪ್ರೀಂ ಕೋರ್ಟ್ ತೀರ್ಪು, 2018ರ ಆದೇಶಗಳನ್ನು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳು ಉಲ್ಲಂಘಿಸಿವೆ ಎಂದೂ ಅವರು ಆರೋಪಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ನೋಟಿಸ್‌ಗಳನ್ನು ಹಿಂಪಡೆದು, ಈಗಾಗಲೇ ವಸೂಲಿ ಮಾಡಿರುವ ದಂಡವನ್ನು ಮರುಪಾವತಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್ ನಿರ್ದೇಶನದಂತೆ ಸರ್ಕಾರವು 274 ನೋಟಿಸ್‌ಗಳನ್ನು ಹಿಂದಕ್ಕೆ ಪಡೆಯುವುದಾಗಿ ಮಾಹಿತಿ ನೀಡಿತು. ಇದರ ಅನ್ವಯ ಕಾನ್ಪುರ ಜಿಲ್ಲಾಡಳಿತವು ಮರುಪಾವತಿ ಪ್ರಕ್ರಿಯೆ ಆರಂಭಿಸಿದ್ದು, ಮಾರ್ಚ್‌ನಲ್ಲಿ 6 ಜನರಿಗೆ ಹಣವನ್ನು ಹಿಂದಿರುಗಿಸಿದೆ.

ಆಧಾರ: ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ–1985, ಎನ್‌ಸಿಆರ್‌ಬಿ ಭಾರತದಲ್ಲಿ ಅಪರಾಧ ವರದಿ–2018,2019,2020, ಪಿಟಿಐ, ರಾಯಿಟರ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು