ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೀಮೇಲ್ ಬರಾಕ್ ಒಬಾಮ; ಶ್ವೇತಭವನದ ಸ್ವರ್ಣ ಕಮಲ

Last Updated 8 ನವೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಫೀಮೇಲ್ ಬರಾಕ್ ಒಬಾಮ...

ಪತ್ರಕರ್ತ ಗ್ವೆನ್ ಐಫಿಲ್ ಅವರು ದಶಕದ ಹಿಂದೆ ಕಮಲಾ ಹ್ಯಾರಿಸ್ ಅವರನ್ನು ಹೀಗೆ ಕರೆದಾಗ ಹಲವರು ಹುಬ್ಬೇರಿಸಿದ್ದರು. ಅಮೆರಿಕದ ಮೊದಲ ಕಪ್ಪುವರ್ಣೀಯ ಅಧ್ಯಕ್ಷ ಒಬಾಮ ಅವರ ದಾರಿಯಲ್ಲಿ ನಡೆಯುವ ಎಲ್ಲ ಗುಣ ಕಮಲಾ ಅವರಿಗೆ ಇದೆ ಎಂದು ಅವರು ಅಂದು ಮಾಡಿದ್ದ ಊಹೆ ನಿಜವಾಗಿದೆ. ಅಮೆರಿಕ ಉಪಾಧ್ಯಕ್ಷರಾಗಿ ಕಮಲಾ ಆಯ್ಕೆಯಾಗಿದ್ದು, ಅಧ್ಯಕ್ಷ ಹುದ್ದೆಯ ಸನಿಹಕ್ಕೆ ಬಂತು ನಿಂತಿದ್ದಾರೆ.

ಕ‍ಪ್ಪು ವರ್ಣೀಯರ ವಿಚಾರ ಚರ್ಚೆಯಲ್ಲಿದ್ದ ಅವಧಿಯಲ್ಲೇ ಕಪ್ಪುವರ್ಣೀಯ ಕಮಲಾ ಅವರನ್ನು ತಮ್ಮ ಸಹವರ್ತಿ ಎಂದು ಜೋ ಬೈಡನ್ ಘೋಷಿಸಿದ್ದರು. ಆಗಲೇ ಅವರ ಗೆಲುವೂ ನಿಶ್ಚಯ ವಾಗಿತ್ತು.ಮೊದಲ ಕಪ್ಪುವರ್ಣೀಯ, ಮೊದಲ ಭಾರತೀಯ ಅಮೆರಿಕನ್ ಹಾಗೂ ಮೊದಲ ಏಷ್ಯನ್ ಎಂಬ ಹಿರಿಮೆಗಳನ್ನು ಜತೆಗಿಟ್ಟುಕೊಂಡು ಕಮಲಾ ಅವರು ಶ್ವೇತಭವನಕ್ಕೆ ತಲುಪಿರುವ ಹಾದಿ ರೋಚಕವೂ ಹೌದು.

ತಮ್ಮ ಟೀಕಾಕಾರರಲ್ಲಿ ಒಬ್ಬರಾಗಿದ್ದ ಕಮಲಾ ಅವರನ್ನೇ ಬೈಡನ್ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿ. ಈ ಮುನ್ನ 2016ರಲ್ಲಿ ಕಮಲಾ ಸೆನೆಟ್‌ಗೆ ಆಯ್ಕೆಯಾಗಲು ಒಬಾಮ ಅಡಿಪಾಯ ಒದಗಿಸಿದ್ದರು. ಅದಾಗಿ ನಾಲ್ಕೇ ವರ್ಷ ಕಳೆಯುವುದರೊಳಗೆ ಕಮಲಾಗೆ ಶ್ವೇತಭವನದ ಟಿಕೆಟ್ ಸಿಕ್ಕಿತು ಎಂದರೆ, ಅವರ ಸಾಮರ್ಥ್ಯ ಯಾವ ಮಟ್ಟದ್ದು ಎಂದು ಯಾರಾದರೂ ಊಹಿಸಬಹುದು.

ತಾಯಿ ಶ್ಯಾಮಲಾ ಗೋಪಾಲನ್ ಅವರು ಚೆನ್ನೈನಿಂದ ಅಮೆರಿಕಕ್ಕೆ ವಲಸೆ ಬಂದ ಕ್ಯಾನ್ಸರ್ ತಜ್ಞೆ. ನಾಗರಿಕ ಹಕ್ಕುಗಳ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡಿದ್ದರು. ತಂದೆ ಜಮೈಕಾದ ಡೊನಾಲ್ಡ್ ಹ್ಯಾರಿಸ್. ಆದರೆ ಕಮಲಾ ಮಾತ್ರ ತಾವು ಅಮೆರಿಕದವರು ಎಂದು ಹೇಳಿಕೊಂಡರು. ತಂಗಿ ಮಾಯಾ ಜೊತೆ ಕಪ್ಪುವರ್ಣೀಯರ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ನಾಯಕತ್ವ ಗುಣ ಜೊತೆಯಾಯಿತು.

ತಾಯಿ ಜೊತೆ ಬೇಸಿಗೆ ರಜೆಗೆ ಚೆನ್ನೈಗೆ ಬರುವುದೆಂದರೆ ಕಮಲಾಗೆ ಎಲ್ಲಿಲ್ಲದ ಪ್ರೀತಿ. ಅವರ ತವರೂರಲ್ಲೀಗ ಹಬ್ಬವೋ ಹಬ್ಬ. ಮಸಾಲೆ ದೋಸೆ ಎಂದರೆ ಅಪರಿಮಿತ ಅಕ್ಕರೆ. ಬೈಡನ್ ಪರ ಪ್ರಚಾರದ ಕೊನೆಯ ಘಟ್ಟದಲ್ಲಿ ನಟಿ ಮಿಂಡಿ ಕೇಲಿಂಗ್ ಜೊತೆ ಹೆಂಚಿನಲ್ಲಿ ದೋಸೆ ಹುಯ್ದು ಸುದ್ದಿ ಮಾಡಿದ್ದರು ಕಮಲಾ. ತಮ್ಮ ಅಜ್ಜ ಭಾರತದ ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಮ್ಮಯೂ ಅವರದ್ದು.

ಗಂಡ ವಿಚ್ಛೇದನ ಕೊಟ್ಟು ಹೊರನಡೆದಾಗ ಏಕಾಂಗಿಯಾಗಿ ಮಕ್ಕಳನ್ನು ಪೊರೆದ ತಾಯಿ ಹೇಳುತ್ತಿದ್ದ ಮಾತು ಕಮಲಾಗೆ ದಿನವೂ ಹೊಸತನ ನೀಡುತ್ತಿತ್ತು. ‘ಎಲ್ಲವನ್ನೂ ಟೀಕಿಸುತ್ತಾ ಕೂರಬೇಡ. ಏನಾದರೂ ಮಾಡು’ ಎಂಬ ಮಾತನ್ನು ಅಕ್ಷರಶಃ ಪಾಲಿಸಿ ಗೆದ್ದವರು ಕಮಲಾ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮುಗಿಸಿದ ಕಮಲಾ, ಅಲಮೀಡ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ವಕೀಲಿಕೆ ಆರಂಭಿಸಿದಾಗ ಪರಿಚಯವಾದ ಅಟಾರ್ನಿ ಡಗ್ಲಾಸ್ ಎಮ್‌ಹೊಫ್ ಅವರು ಸಂಗಾತಿಯಾದರು. ಕ್ಯಾಲಿಫೋರ್ನಿಯಾದಲ್ಲಿ ವಕೀಲೆಯಾಗಿ ಪಡೆದ ಖ್ಯಾತಿಯು ಇವರನ್ನು ಡೆಮಾಕ್ರಟಿಕ್‌ ಪಕ್ಷದ ಅಂಗಳಕ್ಕೆ ತಂದು ನಿಲ್ಲಿಸಿತು. ಕೆಲವೇ ದಿನಗಳಲ್ಲಿ ಪಕ್ಷದ ಘಟಾನುಘಟಿ ನಾಯಕರೆನಿಸಿದ ಬರ್ನಿ ಸ್ಯಾಂಡರ್ಸ್, ವಾರನ್ ಮೊದಲಾದವರನ್ನು ಮೀರಿಸಿ ಎತ್ತರಕ್ಕೆ ಬೆಳೆದರು. ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಯತ್ನ ಮಾಡಿದರಾದರೂ, ಅದಕ್ಕೆ ತಕ್ಕ ಹಣಕಾಸಿನ ಸಂಪನ್ಮೂಲ ಇಲ್ಲ ಎಂಬ ಕಾರಣಕ್ಕೆ ಹಿಂದಡಿ ಇಡಬೇಕಾಯಿತು.

ವಯಸ್ಸಿನ ಕಾರಣಕ್ಕೆ ಬೈಡನ್ ಎರಡನೇ ಅವಧಿಗೆ ಸ್ಪರ್ಧಿಸುವ ಸಾಧ್ಯತೆ ಕಮ್ಮಿ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಸ್ಪರ್ಧೆ ಬಹುತೇಕ ಖಚಿತ ಎಂಬ ಮಾತು ಪ್ರಚಲಿತದಲ್ಲಿದೆ. ಶ್ವೇತಭವನದಲ್ಲಿ ಕಮಲ ಅರಳಿದ ಪರಿಗೆ ಜಗತ್ತೇ ಸೋಜಿಗಪಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT