ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಚೀನಾಕ್ಕೆ ಕ್ವಾಡ್‌ ಕಡಿವಾಣ? ಪ್ರಮುಖ ದೇಶಗಳ ಮುಖ್ಯಸ್ಥರ ಸಭೆ ಇಂದು

Last Updated 11 ಮಾರ್ಚ್ 2021, 20:39 IST
ಅಕ್ಷರ ಗಾತ್ರ

ಕ್ವಾಡ್ ದೇಶಗಳ ಮುಖ್ಯಸ್ಥರ ಸಭೆಇದೇ ಮೊದಲ ಬಾರಿಗೆ ನಡೆಯುತ್ತಿದೆ. ಕೋವಿಡ್-19ರ ಕಾರಣದಿಂದ ಈ ಸಭೆಯನ್ನು ವರ್ಚ್ಯುವಲ್ ರೂಪದಲ್ಲಿ ನಡೆಸಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ,ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಯೊಶೀಹಿಡೆ ಸೂಗಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕ್ವಾಡ್ ಒಕ್ಕೂಟ ಅಸ್ತಿತ್ವಕ್ಕೆ ಬಂದು ಸರಿಸುಮಾರು ಒಂದೂವರೆ ದಶಕ ಕಳೆದಿದೆ. ಈವರೆಗೆ ಒಕ್ಕೂಟದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು ಮತ್ತು ಅಧಿಕಾರಿಗಳು ಮಾತ್ರ ಸಭೆ ನಡೆಸುತ್ತಿದ್ದರು. ಆದರೆ, ಇದೇ ಮೊದಲಿಗೆ ಒಕ್ಕೂಟದ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಸಭೆ ನಡೆಸುತ್ತಿದ್ದಾರೆ. ಸಮರಾಭ್ಯಾಸಕ್ಕೆ ಸೀಮಿತವಾಗಿದ್ದ ಈ ಒಕ್ಕೂಟವನ್ನು ಬೇರೆ ಹಂತಕ್ಕೆ ಕೊಂಡೊಯ್ಯುವ ಅಮೆರಿಕದ ಇಂಗಿತವು ಈ ಬೆಳವಣಿಗೆಯ ಹಿಂದೆ ಇದೆ ಎನ್ನಲಾಗಿದೆ.

‘ಹಿಂದೂ ಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿದೆ. ಈ ಪ್ರದೇಶದಲ್ಲಿ ಆರ್ಥಿಕ, ವಾಣಿಜ್ಯ, ರಾಜತಾಂತ್ರಿಕ, ಸೇನೆ ಮತ್ತು ತಾಂತ್ರಿಕವಾಗಿ ಪ್ರಬಲಸವಾಲು ಒಡ್ಡಬಲ್ಲ ಶಕ್ತಿ ಇರುವುದು ಚೀನಾಕ್ಕೆ ಮಾತ್ರ. ಜಾಗತಿಕವಾಗಿ ಒಪ್ಪಿತವಾದ ವ್ಯವಸ್ಥೆಗೆ ಚೀನಾ ಸವಾಲು ಒಡ್ಡುತ್ತಿದೆ’ ಎಂದು ಜೋ ಬೈಡನ್ ಅವರು ತಮ್ಮ ರಾಜತಾಂತ್ರಿಕ ಅಧಿಕಾರಿಗಳ ಜತೆಗೆ ಈಚೆಗೆ ನಡೆಸಿದ ಸಭೆಯಲ್ಲಿ ಹೇಳಿದ್ದರು. ಈ ಆತಂಕ, ಅದು ತಂದೊಡ್ಡುವ ಪರಿಣಾಮಗಳು ಮತ್ತು ಅದನ್ನು ತಡೆಯುವ ಕ್ರಮಗಳ ಬಗ್ಗೆ ಕ್ವಾಡ್ ಸದಸ್ಯ ರಾಷ್ಟ್ರಗಳ ಜತೆಗೆ ಚರ್ಚಿಸಬೇಕಿದೆ. ಅಲ್ಲದೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಹೀಗಾಗಿಯೇ ಸದಸ್ಯ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ ಜತೆ ಸಭೆ ನಡೆಸಲಾಗುತ್ತಿದೆ. ಇಂತಹ ಸಭೆಯಿಂದ ಸರ್ಕಾರದ ಮುಖ್ಯಸ್ಥರ ನಡುವಣ ಸಂಬಂಧ ಗಟ್ಟಿಯಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯವು ಹೇಳಿದೆ.

ಕ್ವಾಡ್ ಒಕ್ಕೂಟದ ಉದ್ದೇಶಗಳನ್ನು ವಿಸ್ತರಿಸುವ ಪ್ರಸ್ತಾವವನ್ನು ಅಮೆರಿಕವು ಮಿತ್ರರಾಷ್ಟ್ರಗಳ ಎದುರು ಇಡುವ ಸಾಧ್ಯತೆ ದಟ್ಟವಾಗಿದೆ. ಚೀನಾದ ಪ್ರಾಬಲ್ಯವನ್ನು ಮುರಿಯುವ ಉದ್ದೇಶ ಈ ಸಭೆಯ ಹಿಂದೆ ಇದ್ದರೂ, ಅಮೆರಿಕವು ಇದನ್ನು ನಿರಾಕರಿಸುತ್ತಲೇ ಬಂದಿದೆ. ‘ಈ ಒಕ್ಕೂಟದ ಎದುರು ಇರುವ ಸವಾಲು ಒಂದೇ ಆಗಿರಬೇಕಿಲ್ಲ. ಈ ಒಕ್ಕೂಟದ ಎದುರು ಇರುವ ಸ್ಪರ್ಧಿ ಒಂದೇ ರಾಷ್ಟ್ರವಾಗಿರಬೇಕಿಲ್ಲ. ಚೀನಾ ಒಡ್ಡುತ್ತಿರುವ ಸವಾಲಿಗಿಂತಲೂ ದೊಡ್ಡ ಸವಾಲು, ಕ್ವಾಡ್ ಒಕ್ಕೂಟದ ಎದುರು ಇದೆ’ ಎಂದು ಅಮೆರಿಕವು ಪ್ರತಿಪಾದಿಸಿದೆ.

‘ಮುಕ್ತ ಮತ್ತು ಸ್ವತಂತ್ರ ಸಮುದ್ರಮಾರ್ಗವನ್ನು ನಿರ್ವಹಿಸುವುದು ನಮ್ಮೆಲ್ಲರ ಪ್ರಧಾನ ಉದ್ದೇಶ. ನಮ್ಮೆಲ್ಲರ ಮಧ್ಯೆ ಸಮಾನ ಹಿತಾಸಕ್ತಿಗಳಿವೆ. ಆ ಹಿತಾಸಕ್ತಿಗಳನ್ನು ರಕ್ಷಿಸುವುದೂ ಈ ಒಕ್ಕೂಟದ ಉದ್ದೇಶವಾಗಬೇಕು. ಸಮುದ್ರಮಾರ್ಗ ರಕ್ಷಣೆಯನ್ನೂ ಮೀರಿದ ಹಿತಾಸಕ್ತಿಗಳ ಬಗ್ಗೆ ಚರ್ಚೆಯಾಗಬೇಕು. ಸಭೆಯ ಕಾರ್ಯಸೂಚಿಯಲ್ಲೂ ಇದು ಪ್ರತಿಬಿಂಬಿತವಾಗುತ್ತದೆ.ಹಿಂದೂ ಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಈಗ ತಲೆದೋರಿರುವ ಸವಾಲುಗಳನ್ನು ಎದುರಿಸಲು ಕ್ವಾಡ್ ದೇಶಗಳು ಅಗತ್ಯ ಸಹಕಾರ ವ್ಯವಸ್ಥೆಯನ್ನು ರೂಪಿಸಿಕೊಳ್ಳಬಲ್ಲವು ಎಂಬುದರ ಪ್ರಾತ್ಯಕ್ಷಿಕೆಯನ್ನು ಈ ಸಭೆ ನೀಡಲಿದೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯವು ಹೇಳಿದೆ.

ಈ ಸಭೆಯಲ್ಲಿ ಮಲಬಾರ್ ಸಮರಾಭ್ಯಾಸ, ರಕ್ಷಣಾ ಸಹಕಾರ, ಕೋವಿಡ್-19 ಲಸಿಕೆ ಸಹಕಾರ ಮತ್ತು ಹವಾಮಾನ ವೈಪರೀತ್ಯದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ರಕ್ಷಣಾ ಸಹಕಾರ ಮತ್ತು ಮಲಬಾರ್ ಸಮರಾಭ್ಯಾಸವು ಚೀನಾವನ್ನು ಗುರಿಯಾಗಿಸಿಕೊಂಡೇ ನಡೆಯಲಿದೆ. ಕೋವಿಡ್-19 ತಡೆ ಲಸಿಕೆಯನ್ನು ವಿವಿಧ ದೇಶಗಳಿಗೆ ಪೂರೈಸುವ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯೂ ಇದೆ. ಇದರ ಜತೆಯಲ್ಲೇ ಹವಾಮಾನ ವೈಪರೀತ್ಯದ ಆತಂಕದ ಬಗ್ಗೆಯೂ ಚರ್ಚೆ ನಡೆಯಲಿದೆ.

ಇಂಡೊ-ಫೆಸಿಪಿಕ್ ಪ್ರದೇಶದಲ್ಲಿ ಹೆಚ್ಚು ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ಚೀನಾ ಮೊದಲು ನಿಲ್ಲುತ್ತದೆ. ಈ ವಿಚಾರದಲ್ಲೂ ಚೀನಾದ ವಿರುದ್ಧ ಒಂದು ಸಂಕಥನವನ್ನು ರೂಪಿಸುವ ಉದ್ದೇಶ ಅಮೆರಿಕದ ಕಾರ್ಯಸೂಚಿಯಲ್ಲಿ ಇರುವ ಸಾಧ್ಯತೆ ಇದೆ. ಚೀನಾ ಒಂದೇ ನಮ್ಮ ಗುರಿ ಆಗಬೇಕಿಲ್ಲ ಎಂದು ಅಮೆರಿಕದ ಅಧಿಕಾರ ಕೇಂದ್ರವು ಹೇಳುತ್ತಿದ್ದರೂ, ಸಭೆಯ ಕಾರ್ಯಸೂಚಿಗಳು ಚೀನಾ ಕೇಂದ್ರಿತವೇ ಆಗಿವೆ. ಅಮೆರಿಕವು, ಚೀನಾದ ಎದುರು ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಕ್ವಾಡ್‌ ಒಕ್ಕೂಟವನ್ನು ಬಳಸಿಕೊಳ್ಳುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸಮರಾಭ್ಯಾಸಕ್ಕೆ ಸೀಮಿತವಾಗಿದ್ದ ಮೈತ್ರಿ
ಹಿಂದೂ ಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಮುಕ್ತ ಸಮುದ್ರಯಾನವನ್ನು ರಕ್ಷಿಸುವ ಉದ್ದೇಶದಿಂದ ಭಾರತ-ಅಮೆರಿಕ-ಆಸ್ಟ್ರೇಲಿಯಾ ಮತ್ತು ಜಪಾನ್ ರಚಿಸಿಕೊಂಡಿರುವ ಕೂಟವೇ ಕ್ವಾಡ್ ಮೈತ್ರಿಕೂಟ.ನಾಲ್ಕು ರಾಷ್ಟ್ರಗಳ ಈ ಕೂಟವನ್ನು ಕ್ವಾಡ್ರಿಲ್ಯಾಟರಲ್‌ ಸೆಕ್ಯುರಿಟಿ ಡಯಲಾಗ್‌ ಅಥವಾಕ್ವಾಡ್‌ ಎಂದು ಕರೆಯಲಾಗುತ್ತಿದೆ.

ಏಷ್ಯಾ-ಆಫ್ರಿಕಾ-ಅಮೆರಿಕ ಖಂಡಗಳ ನಡುವೆ ನಡೆಯುವ ವಾಣಿಜ್ಯ ವಹಿವಾಟುಗಳು ಕಾರ್ಯರೂಪಕ್ಕೆ ಬರುವುದು ಈ ಸಮುದ್ರಮಾರ್ಗದ ಮೂಲಕವೇ. ಇದನ್ನು ಮುಕ್ತ ಮತ್ತು ಸ್ವತಂತ್ರವಾಗಿ ಇರಿಸುವುದರಲ್ಲಿ ಜಾಗತಿಕ ವಾಣಿಜ್ಯ ಹಿತಾಸಕ್ತಿ ಅಡಗಿದೆ.ಈ ಸಮುದ್ರಮಾರ್ಗದ ಮೇಲೆ ಚೀನಾವು ತನ್ನ ಹಿಡಿತವನ್ನು ಬಿಗಿಗೊಳಿಸಲು ಯತ್ನಿಸುತ್ತಿದೆ. ಈ ಯತ್ನವನ್ನು ತಡೆಹಿಡಿಯುವುದೇ ಕ್ವಾಡ್ ಒಕ್ಕೂಟದ ಪ್ರಧಾನ ಉದ್ದೇಶವಾಗಿತ್ತು. ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶವನ್ನು ಹಾದುಹೋಗುವ ಸಮುದ್ರ ಮಾರ್ಗದ ಆಯಕಟ್ಟಿನ ಜಾಗದಲ್ಲಿಕ್ವಾಡ್‌ ಕೂಟದ ಮಲಬಾರ್ ಸಮರಾಭ್ಯಾಸ ನಡೆಸುವುದಕ್ಕೆ ಈ ಮೈತ್ರಿ ಸೀಮಿತವಾಗಿತ್ತು. ಈ ಮೈತ್ರಿಯ ಉದ್ದೇಶವನ್ನು ವಿಸ್ತರಿಸುವ ಸೂಚನೆಯನ್ನು ಅಮೆರಿಕವು ಈಗ ನೀಡಿದೆ.

ಭಾರತಕ್ಕೆ ಕ್ವಾಡ್‌ನಿಂದ ಲಾಭಗಳೇನು?

* ಕೊರೊನಾ ವೈರಸ್ ತಡೆ ಲಸಿಕೆಯನ್ನು ಭಾರತವು ಚೀನಾಗಿಂತ ಮೊದಲೇ ತಯಾರಿಸಿ ಈಗಾಗಲೇ ನೂರು ದೇಶಗಳಿಗೆ ಸರಬರಾಜು ಮಾಡಿ, ಜಾಗತಿಕ ನಾಯಕ ಎನಿಸಿಕೊಂಡಿದೆ. ಕ್ವಾಡ್ ದೇಶಗಳ ಸಹಕಾರದಿಂದ ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದ ದೇಶಗಳು ಹಾಗೂ ಜಗತ್ತಿನ ಇತರ ದೇಶಗಳಿಗೆ ಭಾರತದ ಲಸಿಕೆಗಳು ರವಾನೆಯಾಗಲು ಈ ಸಭೆ ಪ್ರತ್ಯಕ್ಷವಾಗಿ ನೆರವಾಗಲಿದೆ. ಚೀನಾದ ಲಸಿಕೆ ರಾಜತಾಂತ್ರಿಕತೆಯನ್ನು ಎದುರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮ ಲಸಿಕೆ ಸಹಾಯವನ್ನು ಹೆಚ್ಚಿಸಲು ಕ್ವಾಡ್ ನಾಯಕರು ಒಪ್ಪಂದ ಮಾಡಿಕೊಳ್ಳುವುದು ಸಭೆಯ ಮುಖ್ಯ ಕಾರ್ಯಸೂಚಿಗಳಲ್ಲಿ ಒಂದಾಗಿದೆ

* ಅಮೆರಿಕ, ಜಪಾನ್, ಆಸ್ಟ್ರೇಲಿಯಾದಂತಹ ಬಲಿಷ್ಠ ದೇಶಗಳ ಜೊತೆಗಿನ ಸ್ನೇಹದಿಂದ ನೆರೆಯ ದೇಶಗಳಾದ ಚೀನಾ ಹಾಗೂ ಪಾಕಿಸ್ತಾನದ ಉಪಟಳವನ್ನು ಭಾರತ ಸುಲಭವಾಗಿ ಎದುರಿಸಬಹುದು. ಈ ದಿಸೆಯಲ್ಲಿ ಕ್ವಾಡ್ ದೇಶಗಳು ನಡೆಸಿರುವ ‘ಮಲಬಾರ್‌ ಸಮರಾಭ್ಯಾಸ’ವು ಭಾರತಕ್ಕೆ ಬಲ ತಂದುಕೊಟ್ಟಿದೆ

* ಕೋವಿಡ್‌ ಸಾಂಕ್ರಾಮಿಕಕ್ಕೆ ಸಂಬಂಧಿಸಿ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ಜೊತೆ ಕಳೆದ ತಿಂಗಳು ಕ್ವಾಡ್ ಸಂವಹನ ನಡೆಸಿತ್ತು. ಚೀನಾವನ್ನು ಬೆದರಿಕೆ ಎಂದು ಪರಿಗಣಿಸುವ ಹಿಂದೂ ಮಹಾಸಾಗರ–ಪೆಸಿಫಿಕ್‌ ‍ವಲಯದ ದೇಶಗಳ ಜೊತೆಗೆ ಜಗತ್ತಿನ ಇತರ ಭಾಗದ ದೇಶಗಳೂ ಭಾರತದ ಪರ ನಿಲ್ಲುವ ಮುನ್ಸೂಚನೆ ನೀಡಿವೆ.

* ರಕ್ಷಣಾ ಮತ್ತು ವ್ಯಾಪಾರ ಸಹಭಾಗಿತ್ವದ ವಿಷಯದಲ್ಲಿ ಭಾರತವು ಕ್ವಾಡ್ ಸದಸ್ಯ ದೇಶಗಳೊಂದಿಗೆ ದ್ವಿಪಕ್ಷೀಯ, ತ್ರಿಪಕ್ಷೀಯ ಒಪ್ಪಂದಗಳನ್ನು ಯಶಸ್ವಿಯಾಗಿ ಮಾಡಿಕೊಳ್ಳಲು ಸಹಕಾರಿಯಾಗಿದೆ.

ತಿರುಗೇಟಿಗೆ ಬೈಡನ್‌ ಉತ್ಸುಕ
ಕ್ವಾಡ್‌ ಕೂಟವನ್ನು ಬಲಪಡಿಸುವ ಬೈಡನ್‌ ಅವರ ಉಮೇದು ಎದ್ದು ಕಾಣುತ್ತಿದೆ. ತಮ್ಮ ಕಾರ್ಯಕ್ರಮಗಳ ಪಟ್ಟಿಯಲ್ಲಿ ಕ್ವಾಡ್‌ಗೆ ಆದ್ಯತೆ ನೀಡಿರುವ ಬೈಡನ್ ನಿರ್ಧಾರವು, ಈ ವಲಯದ ದೇಶಗಳ ಜೊತೆ ಅಮೆರಿಕ ಹೊಂದಿರುವ ಬಾಂಧವ್ಯದ ಮಹತ್ವವನ್ನು ತಿಳಿಸುತ್ತದೆ.ಬೈಡನ್ ಅವರು ಸಭೆಗೂ ಮುನ್ನ ಕ್ವಾಡ್ ಸದಸ್ಯರ ಜೊತೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಆದರೆ ಅವರನ್ನು ಒಟ್ಟಿಗೆ ಸೇರಿಸಿ ಸಭೆ ನಡೆಸಿ ಕ್ವಾಡ್‌ಗೆ ಮತ್ತಷ್ಟು ಉತ್ತೇಜನ ನೀಡುವುದು ಅವರ ಉದ್ದೇಶ.

ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆಫೆಬ್ರುವರಿಯಲ್ಲಿ ಮಾತನಾಡಿದ್ದರು. ಕ್ವಾಡ್ ಮೂಲಕ ಪ್ರಾದೇಶಿಕ ಸ್ಥಿರತೆಗೆ ಉತ್ತೇಜನ ನೀಡುವ ವಾಗ್ದಾನ ಮಾಡಿದ್ದರು.

ಕಳೆದ ತಿಂಗಳು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನ್ ಬ್ಲಿಂಕೆನ್ ಅವರು ಕ್ವಾಡ್ ವಿದೇಶಾಂಗ ಮಂತ್ರಿಗಳ ಜೊತೆ ವರ್ಚ್ಯುವಲ್ ಸಭೆ ನಡೆಸಿದ್ದರು. ‘ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಮತ್ತು ಬಲವಂತದ ಪ್ರಯತ್ನಗಳನ್ನು ಬಲವಾಗಿ ವಿರೋಧಿಸುತ್ತೇವೆ’ ಎಂಬ ಹೇಳಿಕೆ ನೀಡುವ ಮೂಲಕ ಚೀನಾಕ್ಕೆ ಎಚ್ಚರಿಕೆ ರವಾನಿಸಲಾಗಿತ್ತು.

ಬೈಡನ್ ಅವರು ಯುರೋಪ್‌ನ ತಮ್ಮ ಅತ್ಯಂತ ಆಪ್ತ ಮಿತ್ರದೇಶಗಳ ಜೊತೆ ಸಭೆಗೂ ಮುನ್ನ ಕ್ವಾಡ್ ಸಭೆಯಲ್ಲಿ ಭಾಗಿಯಾಗುತ್ತಿರುವುದು ಅವರ ಉತ್ಸಾಹವನ್ನು ತೋರುತ್ತದೆ. ಹಾಗೆ ನೋಡಿದರೆ ಬೈಡನ್ ಸರ್ಕಾರದ ಮೊದಲ ವಿದೇಶಾಂಗ ನೀತಿ ಟಿಪ್ಪಣಿಯಲ್ಲಿ ಕ್ವಾಡ್‌ ಪ್ರಸ್ತಾವ ಇರಲಿಲ್ಲ. ಭಾರತ ಸೇರಿದಂತೆ ಆಸಿಯಾನ್ ದೇಶಗಳ ಜತೆಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು ಎಂದಷ್ಟೇ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಉಲ್ಲೇಖಿಸಿದ್ದರು.

ಅಮೆರಿಕ ಪುನಃ ಪ್ರವರ್ಧಮಾನಕ್ಕೆ ಬಂದಿದೆ (ಅಮೆರಿಕ ಈಸ್ ಬ್ಯಾಕ್) ಎಂದು ಜಗತ್ತಿನ ಮುಂದೆ ತೋರಿಸುವುದು ಬೈಡನ್ ಆಡಳಿತಕ್ಕೆ ಸದ್ಯಕ್ಕಿರುವ ಸವಾಲು. ಸೌದಿ ಜತೆ ಮೈತ್ರಿ, ಸಿರಿಯಾದ ಬಾಂಬ್ ದಾಳಿ ಮತ್ತು ಇರಾನ್ ವಿಷಯಗಳಲ್ಲಿ ಅಮೆರಿಕ ತೀವ್ರ ಟೀಕೆಗೆ ಗುರಿಯಾಗಿದೆ. ಹೀಗಾಗಿ ಕ್ವಾಡ್ ಸಭೆಯನ್ನು ಅವರ ವಿದೇಶಾಂಗ ನಿಲುವು ಪ್ರದರ್ಶನಕ್ಕೆ ವೇದಿಕೆಯಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.

ಚೀನಾದೊಂದಿಗಿನ ಅಮೆರಿಕ ಸಂಬಂಧವನ್ನು ‘21ನೇ ಶತಮಾನದ ಅತಿದೊಡ್ಡ ಭೌಗೋಳಿಕ ರಾಜಕೀಯ ಪರೀಕ್ಷೆ’ ಎಂದುಬ್ಲಿಂಕೆನ್ ಅವರು ಕರೆದಿರುವುದು, ಚೀನಾವನ್ನು ಅಮೆರಿಕ ನೋಡುತ್ತಿರುವ ರೀತಿಯನ್ನು ತಿಳಿಸುತ್ತದೆ.

ಬೈಡನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗೆ ಕ್ವಾಡ್ ಸಚಿವರ ಮಟ್ಟದ ಸಭೆ ನಡೆದಿತ್ತು. ಚೀನಾದ ಪ್ರಭಾವವನ್ನು ಹಣಿಯಲು ಎಲ್ಲ ದಾರಿಗಳನ್ನು ಬೈಡನ್ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಸೂಚನೆಯಂತಿತ್ತು.

ಟ್ರಂಪ್ ಅವರ ಚೀನಾ ವಿರೋಧಿ ನೀತಿಯನ್ನು ಬೈಡನ್ ಆಡಳಿತವು ಕೊಂಚ ಮೆದುಗೊಳಿಸಬಹುದೇ ಎಂಬ ಪ್ರಶ್ನೆ ಬೈಡನ್ ಅಧಿಕಾರ ವಹಿಸಿಕೊಂಡಾಗ ಇತ್ತು. ಟ್ರಂಪ್–ಪಾಂಪಿಯೊ ರೀತಿ ಚೀನಾ ವಿರುದ್ಧ ಬೈಡನ್–ಬ್ಲಿಂಕೆನ್ ವಾಗ್ದಾಳಿ ನಡೆಸದಿರಬಹುದು. ಆದರೆ ನಿಲವು ಹಾಗೇ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ಕ್ವಾಡ್ ಸಂಘಟನೆ ಮುಂದುವರಿಯಲಿದ್ದು, ಅದು ಭವಿಷ್ಯದಲ್ಲಿ ಸೇನಾ ಮೈತ್ರಿಕೂಟ ಆಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಚೀನಾ ಭಾಗದಲ್ಲಿ ಚೀನಾದ ಉಪಟಳವನ್ನು ಗಮನಿಸಿರುವ ಬ್ರಿಟನ್ ಹಾಗೂ ಕೆನಡಾ ಸಹ ಕ್ವಾಡ್ ಮೈತ್ರಿಕೂಟದ ಭಾಗವಾಗಲು ಒಲವು ತೋರಿವೆ.

‘ಪ್ರತಿಯೊಬ್ಬ ಅಮೆರಿಕನ್ ಪ್ರಜೆಯ ಉದ್ಯೋಗ, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಹಿತಾಸಕ್ತಿಗಳಿಗಾಗಿ ಹೋರಾಡುತ್ತೇವೆ. ನಮ್ಮ ವ್ಯಾಪಾರ ನೀತಿಗಳಲ್ಲಿ ರಾಜಿ ಇಲ್ಲ’ ಎಂಬ ಬ್ಲಿಂಕನ್ ಮಾತಿನಲ್ಲಿ ಚೀನಾ ಜೊತೆ ವ್ಯಾಪಾರ ಸಮರಕ್ಕೆ ಅಮೆರಿಕ ಸಿದ್ಧ ಎಂಬ ಉತ್ತರವಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಚೀನಾ ಪ್ರತಿಕ್ರಿಯೆ
ಕ್ವಾಡ್ ಸಭೆಗೆ ಚೀನಾ ಪ್ರತಿಕ್ರಿಯಿಸಿದೆ. ‘ನಾಲ್ಕೂ ದೇಶಗಳು ‘ಪ್ರತಿರೋಧ’ ತೋರುವ ಬದಲಾಗಿ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅನುಕೂಲಕರವಾದ ಕೆಲಸಗಳನ್ನು ಮಾಡಲಿ’ ಎಂದು ಹೇಳಿದೆ.

‘ಯಾವುದೇ ಪ್ರಾದೇಶಿಕ ಸಹಕಾರ ನಿರ್ಮಾಣವು ಶಾಂತಿಯುತ ಮತ್ತು ಅಭಿವೃದ್ಧಿ ಪರವಾಗಿರಬೇಕು. ಸಹಕಾರದ ತತ್ವವನ್ನು ಅನುಸರಿಸಬೇಕು’ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೊ ಲಿಜಿಯನ್ ತಿಳಿಸಿದ್ದಾರೆ.

ಲಸಿಕೆ ಹಂಚಿಕೆ ಬಗ್ಗೆ ಕ್ವಾಡ್ ನಾಯಕರು ಒಪ್ಪಂದ ಮಾಡಿಕೊಳ್ಳುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತರರಾಷ್ಟ್ರೀಯ ಲಸಿಕೆ ಸಹಕಾರವನ್ನು ಉತ್ತೇಜಿಸುವಲ್ಲಿ ಚೀನಾ ಮುಂಚೂಣಿಯಲ್ಲಿದೆ. ಆದರೆ ಲಸಿಕೆ ರಾಷ್ಟ್ರೀಯತೆ ಮತ್ತು ಲಸಿಕೆ ರಾಜತಾಂತ್ರಿಕತೆಯನ್ನು ವಿರೋಧಿಸುತ್ತದೆ’ ಎಂದಿದ್ದಾರೆ.

ಆಧಾರ: ದಿ ವಾಷಿಂಗ್ಟನ್ ಪೋಸ್ಟ್, ದಿ ನ್ಯೂಯಾರ್ಕರ್, ದಿ ಗಾರ್ಡಿಯನ್, ಬಿಬಿಸಿ, ಪಿಟಿಐ, ರಾಯಿಟರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT