ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮಲೇರಿಯಾ ಲಸಿಕೆಗೆ ಅನುಮೋದನೆ

Last Updated 17 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಜಗತ್ತಿನ ಬಡರಾಷ್ಟ್ರಗಳನ್ನು ಹಲವು ದಶಕಗಳಿಂದ ಕಾಡುತ್ತಿರುವ ಮಲೇರಿಯಾ ಮಹಾಮಾರಿ ವಿರುದ್ಧ ಬಳಸಬಹುದಾದ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಇದೇ ಮೊದಲ ಬಾರಿಗೆ ಅನುಮೋದನೆ ನೀಡಿದೆ. ಗ್ಲಾಕ್ಸೋಸ್ಮಿತ್‌ಕ್ಲಿನ್‌ ಕಂಪನಿ ಅಭಿವೃದ್ಧಿಪಡಿಸಿ, ತಯಾರಿಸಲಿರುವ ಮಾಸ್ಕ್ವಿರಿಕ್ಸ್ ಲಸಿಕೆಯನ್ನು ಮಲೇರಿಯಾ ತಡೆಗಟ್ಟಲು ತುರ್ತು ಸಂದರ್ಭದಲ್ಲಿ ಬಳಸಲು ಆರೋಗ್ಯ ಸಂಸ್ಥೆ ಅಕ್ಟೋಬರ್ ಮೊದಲ ವಾರದಲ್ಲಿ ಅನುಮೋದನೆ ನೀಡಿದೆ.

30 ವರ್ಷಗಳಿಂದ ಹಲವು ಲಸಿಕೆಗಳು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ಪೂರೈಸಿದ್ದರೂ, ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದಿರಲಿಲ್ಲ. ಅನುಮೋದನೆ ಪಡೆಯಲು ಲಸಿಕೆಗಳು ಮಲೇರಿಯಾ ವಿರುದ್ಧ ಕನಿಷ್ಠ ಶೇ 75ರಷ್ಟು ಪರಿಣಾಮ ಬೀರಬೇಕು ಎಂಬ ಷರತ್ತನ್ನು ಆರೋಗ್ಯ ಸಂಸ್ಥೆ ವಿಧಿಸಿತ್ತು. ಮಾಸ್ಕ್ವಿರಿಕ್ಸ್ ಲಸಿಕೆಯು ಮಲೇರಿಯಾ ವಿರುದ್ಧ ಶೇ 75ಕ್ಕಿಂತ ಹೆಚ್ಚು ಪರಿಣಾಮ ಹೊಂದಿದೆ ಎಂಬುದು ಈಚೆಗಷ್ಟೇ ಪೂರ್ಣಗೊಂಡ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಸಾಬೀತಾಗಿದೆ.

ಆಫ್ರಿಕಾದ ಹಲವು ದೇಶಗಳ 5ರಿಂದ 17 ತಿಂಗಳ ವಯೋಮಾನದ 450 ಮಕ್ಕಳನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿತ್ತು.2021ರ ಜುಲೈನಲ್ಲಿ ವೈದ್ಯಕೀಯ ಪ್ರಯೋಗದ ವರದಿ ಬಹಿರಂಗವಾಗಿತ್ತು.ಈಗ, ಈ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ದೊರೆತಿದೆ.

ಈ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪ್ರಯೋಗ ಇನ್ನಷ್ಟೇ ಆರಂಭವಾಗಬೇಕಿದೆ. ಮಲೇರಿಯಾ ತೀವ್ರವಾಗಿರುವ ಆಫ್ರಿಕಾದ ನಾಲ್ಕುದೇಶಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ದೇಶಗಳ 4,800 ಮಕ್ಕಳನ್ನು ಮೂರನೇ ಹಂತದವೈದ್ಯಕೀಯ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳುವುದಾಗಿ ಕಂಪನಿ ಹೇಳಿದೆ. ಈ ಪ್ರಯೋಗವು,3-5 ವರ್ಷಗಳಷ್ಟು ದೀರ್ಘವಾಗುವ ಸಂಭವವಿದೆ.

ಮೊದಲ ಹಂತದಲ್ಲಿ ತಯಾರಾಗಲಿರುವ ಮಾಸ್ಕ್ವಿರಿಕ್ಸ್ ಲಸಿಕೆಗಳನ್ನು ಆಫ್ರಿಕಾದ ದೇಶಗಳಾದ ಮಾಲವಿ, ಕೆನ್ಯಾ ಮತ್ತು ಘಾನಾದಲ್ಲಿಬಳಸಲು ಯೋಜನೆ ಹಾಕಿಕೊಳ್ಳಲಾಗಿದೆ. ಆಫ್ರಿಕಾದ ದೇಶಗಳಲ್ಲಿ ಪ್ರತಿ ವರ್ಷ 30 ಕೋಟಿಗೂ ಹೆಚ್ಚು ಜನ ಮಲೇರಿಯಾ ರೋಗಕ್ಕೆ ತುತ್ತಾಗುತ್ತಾರೆ. ಇದು ವಿಶ್ವದ ಬೇರೆಲ್ಲಾ ದೇಶಗಳಲ್ಲಿ ತಲೆದೋರುವ ಮಲೇರಿಯಾ ಪ್ರಕರಣಗಳಿಂತ ಶೇ 90ರಷ್ಟು ಹೆಚ್ಚು. ಹೀಗಾಗಿ ಆರಂಭದ ಹಂತದಲ್ಲಿ ಈ ಮೂರು ದೇಶಗಳಲ್ಲಿ ಲಸಿಕೆ ನೀಡಿ, ಅದರ ಪರಿಣಾಮವನ್ನು ವಾಸ್ತವ ಜಗತ್ತಿನಲ್ಲಿ ಪರಿಶೀಲಿಸಲಾಗುತ್ತದೆ. ನಂತರವಷ್ಟೇ ಈ ಲಸಿಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಭಾರತಕ್ಕೆ ಸಿಗಲು ಎರಡು ವರ್ಷವಾದರೂ ಬೇಕು

ಮಾರ್ಕ್ವಿರಿಕ್ಸ್ ಲಸಿಕೆಯು ಮನುಷ್ಯನ ದೇಹದಲ್ಲಿ ಮಲೇರಿಯಾ ವೈರಾಣುವನ್ನು ಸೃಷ್ಟಿಸಿ, ಅದರ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಈ ಮೂಲಕ ಮಲೇರಿಯಾ ತಗುಲಿದರೂ, ಅದರ ವೈರಾಣುವಿನ ವಿರುದ್ಧ ಮನುಷ್ಯನ ದೇಹದಲ್ಲಿ ಅಭಿವೃದ್ಧಿಯಾಗಿರುವ ಪ್ರತಿರೋಧಕ ಶಕ್ತಿಯು ಹೋರಾಡುವಂತೆ ಪ್ರಚೋದಿಸುತ್ತದೆ.

ಈ ಲಸಿಕೆಯು ಪೂರ್ಣ ಪ್ರಮಾಣದಲ್ಲಿ ಪ್ರತಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಬೇಕೆಂದರೆ, ಪ್ರತಿಮಗುವೂ ಕನಿಷ್ಠ ನಾಲ್ಕು ಡೋಸ್‌ಗಳನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಮಲೇರಿಯಾವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. 2030ರ ವೇಳೆಗೆ ಜಗತ್ತಿನಿಂದ ಮಲೇರಿಯಾವನ್ನು ನಿರ್ಮೂಲನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಈ ಲಸಿಕೆಯು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಿದರೆ, ಮಲೇರಿಯಾವನ್ನು ನಿರ್ಮೂಲನೆ ಮಾಡುವಲ್ಲಿ ಮಹತ್ವದ ಪ್ರಗತಿ ಸಾಧಿಸಿದಂತಾಗುತ್ತದೆ.

ಈಗ ಈ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಮಾತ್ರ ಬಳಸಲು ಅನುಮತಿ ನೀಡಲಾಗಿದೆ. ಪ್ರಾಯೋಗಿಕವಾಗಿ ಆಫ್ರಿಕಾದ ಮಾಲವಿ, ಕೆನ್ಯಾ ಮತ್ತು ಘಾನಾ ದೇಶಗಳಲ್ಲಿ ಮಾತ್ರವೇ ಈ ಲಸಿಕೆಯನ್ನು ಬಳಸಲಾಗುತ್ತದೆ. ಎರಡು ವರ್ಷಗಳವರೆಗೆ ಲಸಿಕೆಯ ಪರಿಣಾಮವನ್ನು ಅಧ್ಯಯನ ಮಾಡಲಾಗುತ್ತದೆ. ಆನಂತರವಷ್ಟೇ ಬೇರೆ ದೇಶಗಳಲ್ಲಿ ಈ ಲಸಿಕೆಯನ್ನು ಬಳಸಲು ಅನುಮೋದನೆ ನೀಡುವ ಸಾಧ್ಯ ಇದೆ. ಹೀಗಾಗಿ ಭಾರತವೂ ಸೇರಿದಂತೆ ಮಲೇರಿಯಾದಿಂದ ಬಳಲುತ್ತಿರುವ ವಿಶ್ವದ ಎಲ್ಲಾ ದೇಶಗಳಿಗೆ ಲಸಿಕೆ ದೊರೆಯುವ ಸಾಧ್ಯತೆ ಇರುವುದು ಎರಡು ವರ್ಷಗಳ ನಂತರವಷ್ಟೇ.

ಜಗತ್ತನ್ನು ಕಾಡುತ್ತಿದೆ ಮಾರಕ ರೋಗ

ಸೋಂಕುಪೀಡಿತಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಮನುಷ್ಯರಿಗೆ ಹರಡುವ ಮಲೇರಿಯಾ ಜಗತ್ತನ್ನು ಕಾಡುತ್ತಿದೆ. 2019ರಲ್ಲಿ 22.9 ಕೋಟಿ ಮಲೇರಿಯಾ ಸೋಂಕಿತರು ಪತ್ತೆಯಾಗಿದ್ದು, 4.09 ಲಕ್ಷ ಸಾವುಗಳಿಗೆ ಇದು ಕಾರಣವಾಗಿತ್ತು. ಆಫ್ರಿಕಾ ವಲಯವು ಜಾಗತಿಕ ಮಲೇರಿಯಾ ಹೊರೆಯಲ್ಲಿ ಅತ್ಯಧಿಕ ಪಾಲು ಹೊಂದಿದೆ. 2019ರಲ್ಲಿ ಈ ಪ್ರದೇಶದಲ್ಲಿ ಶೇ 94ರಷ್ಟು ಪ್ರಕರಣ ವರದಿಯಾಗಿದ್ದವು. ಭಾರತವು ಶೇ 2ರಷ್ಟು ಸೋಂಕಿನ ಪಾಲನ್ನು ಹೊಂದಿದೆ. ಆಗ್ನೇಯ ಏಷ್ಯಾ ವಲಯದಲ್ಲಿ ಭಾರತವು ಶೇ 85ರಷ್ಟು ಮಲೇರಿಯಾ ಪ್ರಕರಣಗಳಿಗೆ ನೆಲೆಯಾಗಿದೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಲೇರಿಯಾಕ್ಕೆ ಹೆಚ್ಚಾಗಿ ಬಾಧಿತರಾಗುತ್ತಿದ್ದಾರೆ. 2019ರಲ್ಲಿ ವಿಶ್ವದಾದ್ಯಂತದ ಈ ವಯೋಮಾನದ ಶೇ 67ರಷ್ಟು (2.74 ಲಕ್ಷ) ಮಕ್ಕಳು ಮೃತಪಟ್ಟಿದ್ದಾರೆ. ಆದರೆ, ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2000–2019ರ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 2 ಕೋಟಿಯಿಂದ 60 ಲಕ್ಷಕ್ಕೆ ಇಳಿಕೆಯಾಗಿದೆ. ಪ್ರಕರಣಗಳ ಪ್ರಮಾಣ ಶೇ 71.8ರಷ್ಟು ಕಡಿಮೆಯಾಗಿವೆ. ಹಾಗೆಯೇ ಮಲೇರಿಯಾದಿಂದ ಆಗುವ ಸಾವಿನ ಪ್ರಮಾಣವೂ ಶೇ 73.9ರಷ್ಟು ಕಡಿಮೆಯಾಗಿದೆ ಎಂದು ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು.

ಮಲೇರಿಯಾವನ್ನು ಅತ್ಯಂತ ಮಾರಣಾಂತಿಕ ರೋಗ ಎಂದು ಕರೆಯಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಳು ಆಗಿದ್ದರೂ, ಈಗಲೂ ಪ್ರತಿ ವರ್ಷ ನಾಲ್ಕು ಲಕ್ಷದಷ್ಟು ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. 20 ವರ್ಷಗಳ ಹಿಂದೆ ಸಾವಿನ ಪ್ರಮಾಣ ದುಪ್ಪಟ್ಟು ಇತ್ತು. ಆಫ್ರಿಕಾದ ನೈಜೀರಿಯಾ, ಕಾಂಗೋ, ಟಾಂಜಾನಿಯಾ, ಮೊಜಾಂಬಿಕ್, ನೈಜರ್ ಮತ್ತು ಬುರ್ಕಿನಾ ಫಾಸೊ ದೇಶಗಳಲ್ಲಿ ವಾರ್ಷಿಕ ಸಾವಿನ ಪ್ರಮಾಣದಲ್ಲಿ ಅರ್ಧದಷ್ಟು ಸಾವುಗಳಿಗೆ ಮಲೇರಿಯಾ ಕಾರಣವಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಮಲೇರಿಯಾದ ಪರಿಣಾಮವನ್ನು ತಗ್ಗಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಕೀಟನಾಶಕ ಸಿಂಪಡಿಸುವುದು, ಸೊಳ್ಳೆಗಳು ಉತ್ಪತ್ತಿಯಾಗುವ ಪ್ರದೇಶಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಲಸಿಕೆ ಅಭಿವೃದ್ಧಿಗೆ ಸುದೀರ್ಘ ಸಮಯ

30 ವರ್ಷಗಳ ಸಂಶೋಧನೆಯ ಫಲವಾಗಿ ‘ಮಾಸ್ಕ್ವಿರಿಕ್ಸ್’ ಲಸಿಕೆ ತಯಾರಾಗಿದೆ. ಕೋವಿಡ್‌ಗೆ ವರ್ಷದೊಳಗೆ ಲಸಿಕೆ ಕಂಡುಹಿಡಿಯಲಾಯಿತು. ಹೀಗಿರುವಾಗ, ಮಲೇರಿಯಾಗೆ ಇಷ್ಟು ವರ್ಷ ತಗುಲಿದ್ದು ಏಕೆ ಎಂಬ ಕುತೂಹಲ ಮೂಡುತ್ತದೆ. ಅಭಿವೃದ್ಧಿಯಲ್ಲಿನ ತಾಂತ್ರಿಕ ತೊಡಕುಗಳು ವಿಳಂಬಕ್ಕೆ ಮುಖ್ಯ ಕಾರಣ.

ಮಲೇರಿಯಾಗೆ ಕಾರಣವಾಗುವ ಪರಾವಲಂಬಿಗಳ ಜೀವನಚಕ್ರದ ಸಂಕೀರ್ಣತೆ ಹಾಗೂ ಪರಾವಲಂಬಿಯ ಆ್ಯಂಟಿಜನ್ ವ್ಯತ್ಯಾಸಗಳಿಂದಾಗಿ ಪರಿಣಾಮಕಾರಿ ಲಸಿಕೆ ಅಭಿವೃದ್ಧಿ ತೊಡಕಾಗಿ ಪರಿಣಮಿಸಿತ್ತು. ಈ ಪರಾವಲಂಬಿಗಳು ಪ್ರತಿರಕ್ಷಣಾ ವ್ಯವಸ್ಥೆಯಿಂದ ಗುರುತಿಸುವುದನ್ನು ತಪ್ಪಿಸಿಕೊಳ್ಳಲು ಮಾನವ ಜೀವಕೋಶಗಳ ಒಳಗೆ ಅಡಗಿಕೊಳ್ಳುವ ಸಾಮರ್ಥ್ಯ ಸಂಪಾದಿಸಿವೆ ಎಂದು ಆಸ್ಟ್ರೇಲಿಯಾ ಮತ್ತು ಚೀನಾದ ಸಂಶೋಧಕರ ಗುಂಪು ಕಳೆದ ವರ್ಷ ವಿಶ್ಲೇಷಿಸಿತ್ತು.

ಪ್ರತಿರಕ್ಷಣಾ ವ್ಯವಸ್ಥೆಯ ಬಗೆಗಿನ ಸರಿಯಾದ ತಿಳಿವಳಿಕೆಯ ಕೊರತೆ ಮತ್ತೊಂದು ಕಾರಣ. ಜೊತೆಗೆ ನೂರಕ್ಕೂ ಹೆಚ್ಚು ವಿಧದ ಪರಾವಲಂಬಿಗಳ ವಿರುದ್ಧ ಕೆಲಸ ಮಾಡಬಲ್ಲ ಲಸಿಕೆ ಅಭಿವೃದ್ಧಿಪಡಿಸುವುದು ಸವಾಲಾಗಿತ್ತು. ಈಗ ಅಭಿವೃದ್ಧಿಪಡಿಸಿರುವ ಲಸಿಕೆಯು ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ತಳಿಯನ್ನು ಮಾತ್ರ ಗುರಿಯಾಗಿಸಿಕೊಂಡು ತಯಾರಾಗಿದೆ. ಈ ತಳಿ ಆಫ್ರಿಕಾದಲ್ಲಿ ಅತ್ಯಂತ ಮಾರಕ ಮತ್ತು ಸಾಮಾನ್ಯವಾಗಿದೆ. ಪಿ. ಫಾಲ್ಸಿಪಾರಂ, ಪ್ಲಾಸ್ಮೋಡಿಯಂ ವೈವಾಕ್ಸ್‌ನಂತಹ ಇತರ ಪ್ರಭೇದಗಳು ಭಾರತದಲ್ಲಿ ವ್ಯಾಪಕವಾಗಿವೆ. ಆದರೆ, ಪರಾವಲಂಬಿಯ ಇತರ ಪ್ರಭೇದಗಳ ವಿರುದ್ಧ ಲಸಿಕೆ ಕೆಲಸ ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಮಲೇರಿಯಾವು ಈಗ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾತ್ರವೇ ತೀವ್ರವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಲಸಿಕೆಗಳಿಗೆ ಯಾವುದೇ ಮಾರುಕಟ್ಟೆ ಇಲ್ಲ. ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಇರುವ ಕಾರಣ, ಈ ಲಸಿಕೆಗೆ ವ್ಯಾಪಕವಾದ ಮಾರುಕಟ್ಟೆಯೂ ಇಲ್ಲ. ಮಾರುಕಟ್ಟೆ ಇಲ್ಲದ ಕಾರಣ ಪ್ರಮುಖ ಕಂಪನಿಗಳು ಮಲೇರಿಯಾ ವಿರುದ್ಧ ಲಸಿಕೆ ಅಭಿವೃದ್ಧಿಗೆ ಆಸಕ್ತಿಯನ್ನೇ ತೋರಿಸುತ್ತಿರಲಿಲ್ಲ. ಜತೆಗೆ ಈ ಲಸಿಕೆಯ ಅಗತ್ಯವಿದ್ದ ದೇಶಗಳ ಬಳಿ ಲಸಿಕೆ ಅಭಿವೃದ್ಧಿಗೆ ನೀಡಬಹುದಾದಷ್ಟು ಹಣಕಾಸಿನ ಸಾಮರ್ಥ್ಯ ಇರಲಿಲ್ಲ.ಈ ಕಾರಣದಿಂದಲೂ ಈ ಲಸಿಕೆ ಅಭಿವೃದ್ಧಿಗೆ ಬಹಳ ದೀರ್ಘವಾದ ಸಮಯ ಬೇಕಾಯಿತು.

ಮತ್ತೊಂದು ಲಸಿಕೆ: ಆರ್‌21/ಮ್ಯಾಟ್ರಿಕ್ಸ್ ಎಂದು ಕರೆಯಲಾಗುವ ಲಸಿಕೆಯು ಈ ವರ್ಷದ ಮೇನಲ್ಲಿ 2ನೇ ಹಂತದ ಪ್ರಯೋಗದಲ್ಲಿ ಶೇ 77ರಷ್ಟು ಪರಿಣಾಮಕಾರಿ ಎನಿಸಿದೆ. ಇದು ಮಾಸ್ಕ್ವಿರಿಕ್ಸ್‌ನಮಾರ್ಪಡಿಸಿದ ಆವೃತ್ತಿಯಾಗಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಮೂರನೇ ಹಂತದ ಪ್ರಯೋಗ ಬಾಕಿ ಇದೆ.

ಮಲೇರಿಯಾ ಮುಕ್ತ ದೇಶಗಳು

11 ದೇಶಗಳು ಮಲೇರಿಯಾ ಮುಕ್ತ ಎಂದು ಘೋಷಿಸಿಕೊಂಡಿವೆ.ಈ ದೇಶಗಳಲ್ಲಿ ಸತತವಾಗಿ ಮೂರು ವರ್ಷಗಳವರೆಗೆ ಶೂನ್ಯ ಪ್ರಕರಣಗಳು ದಾಖಲಾಗಿವೆ.

2007ರಲ್ಲಿ ಯುಎಇ, 2010ರಲ್ಲಿ ಮೊರಾಕ್ಕೊ, ತುರ್ಕ್‌ಮೆನಿಸ್ತಾನ, 2011ರಲ್ಲಿ ಅರ್ಮೇನಿಯಾ, 2016ರಲ್ಲಿ ಶ್ರೀಲಂಕಾ, ಕಿರ್ಗಿಸ್ತಾನ, 2018ರಲ್ಲಿ ಪೆರುಗ್ವೆ, 2017ರಲ್ಲಿ ಉಜ್ಬೇಕಿಸ್ತಾನ, 2019ರಲ್ಲಿ ಅಲ್ಜೀರಿಯಾ, ಅರ್ಜೆಂಟೀನಾ, 2021ರಲ್ಲಿ ಎಲ್ ಸಾಲ್ವಡೋರ್ ದೇಶಗಳು ಮಲೇರಿಯಾ ತೊಡೆದುಹಾಕಿವೆ.

‌2019ರಲ್ಲಿ 27 ದೇಶಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಆಧಾರ: ವಿಶ್ವ ಆರೋಗ್ಯ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT