ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಚಳಿಗಾಲದ ಒಲಿಂಪಿಕ್ಸ್‌ಗೆ ವಿವಾದದ ಬಿಸಿ

ಕೋವಿಡ್, ಅಂತರರಾಷ್ಟ್ರೀಯ ಒತ್ತಡಗಳನ್ನು ಮೀರಿ ನಿಲ್ಲುವ ಛಲದಲ್ಲಿ ಚೀನಾ
Last Updated 3 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಚೀನಾದಲ್ಲಿ ಈಗ ಚಳಿಗಾಲ. ಆದರೆ ಒಂದು ಕಡೆ ಕೊರೊನಾ ಹಾವಳಿ ಮತ್ತೊಂದು ಕಡೆ ಅಂತರರಾಷ್ಟ್ರೀಯ ಕ್ರೀಡಾ ಸಂಘಟನೆಗಳ ಅಸಮಾಧಾನದ ಬಿರುಬಿಸಿಯನ್ನೂ ಆ ದೇಶ ಎದುರಿಸುತ್ತಿದೆ. ಅದಕ್ಕೆ ಕಾರಣ ಚಳಿಗಾಲದ ಒಲಿಂಪಿಕ್ಸ್‌.

ಶುಕ್ರವಾರದಿಂದ ಬೀಜಿಂಗ್‌ನ ಮಂಜಿನ ರಾಶಿಯಲ್ಲಿ ಈ ಕೂಟ ಆರಂಭವಾಗಲಿದೆ. 91 ದೇಶಗಳು ಭಾಗವಹಿಸಲಿವೆ. ಆದರೆ ಎರಡು ವರ್ಷಗಳ ಹಿಂದೆ ಜಗತ್ತಿಗೆ ಕಂಟಕವೊಡ್ಡಿದ ಕೊರೊನಾ ವೈರಸ್ ಮೊದಲ ಬಾರಿಗೆ ಪತ್ತೆಯಾಗಿದ್ದು ಚೀನಾದ ವುಹಾನ್‌ನಲ್ಲಿ. ಅದರ ನಂತರ ವಿಶ್ವದ ಬಹಳಷ್ಟು ದೇಶಗಳ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ವ್ಯವಸ್ಥೆಯನ್ನು ಈ ಕೊರೊನಾ ಸೋಂಕು ಬುಡಮೇಲು ಮಾಡಿತ್ತು. ಆಗಿನಿಂದಲೂ ಚೀನಾ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಟೆನಿಸ್ ತಾರೆ ಪೆಂಗ್ ಶುಯಿ ನಾಪತ್ತೆ ಪ್ರಕರಣದಿಂದಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾ ಟೀಕೆಗಳಿಗೆ ಗುರಿಯಾಗಿತ್ತು. ತನ್ನ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ನಿರಾಕರಿಸುವ ಚೀನಾ ಒಲಿಂಪಿಕ್ ಕೂಟವನ್ನು ಕೈಬಿಡಬೇಕೆಂಬ ಆಗ್ರಹ ಕೇಳಿಬಂದಿತ್ತು. ಅದಕ್ಕಾಗಿ ಹಲವು ದೇಶಗಳು ಆಡಳಿತಾತ್ಮಕ ಬಹಿಷ್ಕಾರವನ್ನೂ ಘೋಷಿಸಿದವು.

ಆದರೆ ಇದಾವುದನ್ನೂ ಲೆಕ್ಕಿಸದ ಚೀನಾ ಚಳಿಗಾಲದ ಒಲಿಂ‍ಪಿಕ್ಸ್‌ ಆಯೋಜನೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ತನ್ನ ದೇಶದಲ್ಲಿ ದಿನನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದರೂ ಕೂಟವನ್ನು ಸುರಕ್ಷಿತ ಮತ್ತು ಯಶಸ್ವಿಯಾಗಿ ನಡೆಸುವ ವಿಶ್ವಾಸ ವ್ಯಕ್ತಪಡಿಸಿದೆ.

ಏನಿದು ಚಳಿಗಾಲದ ಒಲಿಂಪಿಕ್ಸ್?

ಬೇಸಿಗೆ ಒಲಿಂಪಿಕ್ಸ್‌ನಿಂದ ಪ್ರೇರಣೆಗೊಂಡು ಆರಂಭವಾದ ಅಂತರರಾಷ್ಟ್ರೀಯ ಕ್ರೀಡಾಕೂಟ ಚಳಿಗಾಲದ ಒಲಿಂಪಿಕ್ಸ್. 1901ರಲ್ಲಿ ನಾರ್ಡಿಕ್ ಗೇಮ್ಸ್‌ಗಳೇ ಚಳಿಗಾಲದ ಒಲಿಂಪಿಕ್ಸ್‌ ಆರಂಭವಾಗಲು ಕಾರಣವಾದವು. ಸ್ವೀಡನ್‌ನ ಕ್ರೀಡೆಯ ಪಿತಾಮಹ ವಿಕ್ಟರ್ ಬಾಲ್ಕ್ ಅವರು ನಾರ್ಡಿಕ್ ಗೇಮ್ಸ್‌ಗಳನ್ನು ಆರಂಭಿಸಲು ಕಾರಣರಾದ ಪ್ರಮುಖ ವ್ಯಕ್ತಿ. ಅವರು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಯ (ಐಒಸಿ) ಸದಸ್ಯ ಮತ್ತು ಆಧುನಿಕ ಒಲಿಂಪಿಕ್ಸ್‌ನ ಪಿತಾಮಹ ಪಿಯರ್ ಡಿ ಕೊಬರ್ತಿ ಅವರ ಸ್ನೇಹಿತ ಕೂಡ ಆಗಿದ್ದರು. 1908ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಫಿಗರ್ ಸ್ಕೇಟಿಂಗ್ ಸೇರ್ಪಡೆಗೆ ಅವರು ಅವಿರತವಾಗಿ ಶ್ರಮಿಸಿದ್ದರು.

ನಾರ್ಡಿಕ್ ಗೇಮ್ಸ್‌ನಲ್ಲಿ ಹಿಮಚ್ಛಾದಿತ ಪ್ರದೇಶಗಳಲ್ಲಿ ಆಡುವ ಕ್ರೀಡೆಗಳನ್ನು ಆರಂಭಿಸಲಾಯಿತು. 1924ರಲ್ಲಿ ಫ್ರಾನ್ಸ್‌ನ ಶಮೊನಿ ಮೌಂಟ್‌ ಬ್ಲ್ಯಾಂಕ್‌ನಲ್ಲಿ ಮೊದಲ ಚಳಿಗಾಲದ ಒಲಿಂಪಿಕ್ಸ್ ನಡೆಯಿತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೂಟ ಆಯೋಜಿಸಲಾಗುತ್ತದೆ. ಎರಡನೇ ಮಹಾಯುದ್ಧದ ಕಾರಣಕ್ಕಾಗಿ 1940 ಮತ್ತು 1944ರಲ್ಲಿ ಕೂಟಗಳು ರದ್ದಾಗಿದ್ದವು. 1992ರವರೆಗೂ ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ಸ್‌ ಕೂಟಗಳು ಒಂದೇ ವರ್ಷದಲ್ಲಿ ನಡೆಯುತ್ತಿದ್ದವು. ಆದರೆ, ಟೆಲಿವಿಜನ್ ಪ್ರವರ್ಧಮಾನಕ್ಕೆ ಬಂದಂತೆ ವಾಣಿಜ್ಯ ಲೆಕ್ಕಾಚಾರಗಳು ಆರಂಭವಾದವು. ಪ್ರಾಯೋಜಕತ್ವದ ಆದಾಯ ಗಳಿಕೆಯ ದಾರಿಗಳು ಹೆಚ್ಚಿದವು. ಇದರಿಂದಾಗಿ ಎರಡೂ ಒಲಿಂಪಿಕ್ಸ್‌ಗಳ ನಡುವೆ ಎರಡು ವರ್ಷಗಳ ಅಂತರ ಇಡಲಾಯಿತು.

ವಿಭಿನ್ನ ಆಟಗಳ ಸೊಬಗು

ಬೇಸಿಗೆ ಒಲಿಂಪಿಕ್ಸ್‌ಗಿಂತಲೂ ವಿಭಿನ್ನವಾದ ಕ್ರೀಡೆಗಳ ಸೊಬಗು ಇಲ್ಲಿ ಬಿಚ್ಚಿಕೊಳ್ಳುತ್ತದೆ. ಹಿಮಬಂಡೆಗಳು, ಕೊರಕಲು ಮತ್ತು ನುಣುಪಾದ ಹಿಮಹಾಸಿನ ಮೇಲೆ ಬಹುತೇಕ ಕ್ರೀಡೆಗಳು ನಡೆಯುತ್ತವೆ.

ಅಲ್ಪೈನ್ ಸ್ಕೀಯಿಂಗ್, ಬಯಥ್ಲಾನ್, ಬಾಬಸ್ಲೀಗ್, ಕ್ರಾಸ್‌ ಕಂಟ್ರಿ ಸ್ಕೀಯಿಂಗ್, ಕರ್ಲಿಂಗ್, ಫಿಗರ್ ಸ್ಕೇಟಿಂಗ್, ಫ್ರೀಸ್ಟೈಲ್ ಸ್ಕೇಟಿಂಗ್, ಐಸ್ ಹಾಕಿ, ಲುಗ್, ನಾರ್ಡಿಕ್ ಕಂಬೈನ್ಡ್‌, ಶಾರ್ಟ್‌ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್, ಸ್ಕೆಲೆಟನ್, ಸ್ಕೈ ಜಂಪಿಂಗ್, ಸ್ನೋಬೋರ್ಡಿಂಗ್, ಸ್ಪೀಡ್ ಸ್ಕೇಟಿಂಗ್ ಕ್ರೀಡೆಗಳು ಇಲ್ಲಿ ನಡೆಯುತ್ತವೆ.

ಬೇರೆ ಒಲಿಂಪಿಕ್ಸ್‌ಗಳ ಪದಕ ಪಟ್ಟಿಯಲ್ಲಿ ಸದಾ ಮೆರೆದಾಡುವ ಅಮೆರಿಕ ಮತ್ತು ಚೀನಾಗೆ ಇಲ್ಲಿ ಅಗ್ರಸ್ಥಾನವಿಲ್ಲ. ಇದುವರೆಗೆ ಒಟ್ಟು 368 ಪದಕಗಳನ್ನು ಗೆದ್ದಿರುವ ನಾರ್ವೆ ಮೊದಲ ಸ್ಥಾನದಲ್ಲಿದೆ. ಅಮೆರಿಕ (305), ಜರ್ಮನಿ (240) ರಷ್ಯಾ (194) ನಂತರದ ಸ್ಥಾನಗಳಲ್ಲಿವೆ. ಚೀನಾ (62) 17ನೇ ಸ್ಥಾನದಲ್ಲಿದೆ.

ಇಲ್ಲೂ ಇದೆ ರಾಜಕೀಯ

ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಅಮೆರಿಕ ಮತ್ತು ರಷ್ಯಾದ ಶೀತಲ ಸಮರ ಮತ್ತು ರಾಜಕೀಯದಾಟಗಳನ್ನು ಜಗತ್ತು ಕಂಡಿದೆ. ಅದೇ ರೀತಿ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಇಂತಹ ರಾಜಕೀಯ ಪ್ರಕರಣಗಳು ನಡೆದಿವೆ. ಈ ಬಾರಿಯೂ ಚೀನಾ ಅಂತಹ ಸನ್ನಿವೇಶಗಳನ್ನು ಎದುರಿಸುತ್ತಿದೆ. 2015ರಲ್ಲಿ ಐಒಸಿ ಬಿಡ್‌ನಲ್ಲಿ ಚೀನಾ ಚಳಿಗಾಲದ ಒಲಿಂಪಿಕ್ಸ್‌ ಆಯೋಜನೆ ಹಕ್ಕುಗಳನ್ನು ಗೆದ್ದುಕೊಂಡಿತ್ತು. 2008ರಲ್ಲಿ ಬೇಸಿಗೆ ಒಲಿಂಪಿಕ್ ಕೂಟವನ್ನು ಯಶಸ್ವಿಯಾಗಿ ನಡೆಸಿದ್ದ ಚೀನಾ ಈಗ ಅದೇ ನಗರದಲ್ಲಿ ಈ ಕೂಟವನ್ನು ನಡೆಸುತ್ತಿದೆ.

ಚೀನಾದಲ್ಲಿ ಈಗಾಗಲೇ ಕೆಲವು ಪ್ರಮುಖ ನಗರಗಳಲ್ಲಿ ಕೋವಿಡ್ ತಾರಕಕ್ಕೇರಿದೆ. ಲಾಕ್‌ಡೌನ್ ವಿಧಿಸಲಾಗಿದೆ. ಕಟ್ಟುನಿಟ್ಟಾದ ಬಯೋಬಬಲ್ ನಿಯಮವನ್ನೂ ಜಾರಿ ಮಾಡಲಾಗಿದೆ. ಇಷ್ಟೆಲ್ಲ ಪ್ರತಿಕೂಲ ಸಂಗತಿಗಳ ನಡುವೆಯೂ ಕೂಟವು ಯಶಸ್ವಿಯಾಗುವುದೇ ಎಂಬ ಕುತೂಹಲ ಮೂಡಿದೆ. ಜಗತ್ತಿನಲ್ಲಿ ಶಾಂತಿ, ಸಹೋದರತ್ವದ ಸಂದೇಶ ನೀಡುವ ಒಲಿಂಪಿಕ್‌ ರಾಜಕೀಯದಾಟದ ರಣಕಣವಾಗುವ ಆತಂಕವೂ ಕ್ರೀಡಾಪ್ರೇಮಿಗಳಲ್ಲಿದೆ.

ಗಾಲ್ವನ್ ಗಾಯಾಳುವಿಗೆ ಒಲಿಂಪಿಕ್ಸ್‌ ಜ್ಯೋತಿ

ಚಳಿಗಾಲದ ಒಲಿಂಪಿಕ್ಸ್‌ನ ಜ್ಯೋತಿ ಕೂಡ ವಿವಾದದ ಕೇಂದ್ರವಾಗಿದೆ. ಬುಧವಾರ ಇಲ್ಲಿ ನಡೆದ ಒಲಿಂಪಿಕ್ ಜ್ಯೋತಿ ರ‍್ಯಾಲಿಯಲ್ಲಿ, ಚೀನಾದ ಜ್ಯೋತಿಯನ್ನು ಚೀನಾ ಸೇನೆಯ ಸೈನಿಕ ಕಿ ಫಬಾ ಹೊತ್ತಿದ್ದರು. ಕಿ ಫಬಾ ಅವರು 2020ರಲ್ಲಿ ಗಾಲ್ವನ್‌ ಕಣಿವೆಯಲ್ಲಿ ಭಾರತೀಯ ಸೈನಿಕರ ಜತೆ ಸಂಘರ್ಷ ನಡೆಸಿದ ಚೀನಾ ಸೇನಾ ತುಕಡಿಯ ಕಮಾಂಡರ್‌ ಆಗಿದ್ದರು. ಆ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದರು.

ಕಿ ಫಬಾ ಅವರು ಜ್ಯೋತಿ ಹೊರುವ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್‌ ಟ್ವೀಟ್ ಮಾಡಿತ್ತು. ‘ಗಾಲ್ವನ್ ಕಣಿವೆಯಲ್ಲಿ ಭಾರತದ ಜತೆ ಸಂಘರ್ಷ ನಡೆಸಿದ್ದ ಪಿಎಲ್‌ಎ ತುಕಡಿಯ ಕಮಾಂಡರ್ ಕಿ ಫಬಾ ಅವರು ಚಳಿಗಾಲದ ಒಲಿಂಪಿಕ್‌ ಜ್ಯೋತಿಯನ್ನು ಹೊರಲಿದ್ದಾರೆ’ ಎಂದು ಗ್ಲೋಬಲ್ ಟೈಮ್ಸ್‌ ಟ್ವೀಟ್ ಮಾಡಿತ್ತು.

ಭಾರತದ ಜತೆ ಸಂಘರ್ಷ ನಡೆಸಿದ ಸೈನಿಕನಿಗೆ ಒಲಿಂಪಿಕ್ ಜ್ಯೋತಿ ಹೊರಲು ಅವಕಾಶ ನೀಡಿದ್ದು ಮತ್ತು ಆ ವಿವರಗಳನ್ನು ಬಹಿರಂಗ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಭಾರತೀಯರು ಚೀನಾದ ಈ ನಡೆಯನ್ನು ಖಂಡಿಸಿದ್ದಾರೆ. ಅಮೆರಿಕದ ಸೆನೆಟ್‌ನ ವಿದೇಶಿ ಸಂಬಂಧಗಳ ಸಮಿತಿಯ ಸದಸ್ಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಭಾರತದ ಸೈನಿಕರ ಮೇಲೆ ದಾಳಿ ನಡೆಸಿದ ಪಿಎಲ್‌ಎ ಸೈನಿಕನಿಗೆ ಒಲಿಂಪಿಕ್ ಜ್ಯೋತಿ ನೀಡಿರುವುದು ನಾಚಿಕೆಗೇಡು’ ಎಂದು ಈ ಸಮಿತಿಯ ಸದಸ್ಯ ಜಿಮ್ ರಿಷ್ ಟ್ವೀಟ್ ಮಾಡಿದ್ದಾರೆ.

ಉದ್ಘಾಟನೆ, ಸಮಾರೋಪಕ್ಕೆ ಭಾರತ ಬಹಿಷ್ಕಾರ: ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವನ್ನು ಭಾರತ ಬಹಿಷ್ಕರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

ಕಿ ಫಬಾ ಅವರಿಗೆ ಒಲಿಂಪಿಕ್ಸ್‌ ಜ್ಯೋತಿ ಹೊರಲು ಅವಕಾಶ ಕೊಟ್ಟಿದ್ದು ಇದಕ್ಕೆ ಕಾರಣ.

ಚೀನಾ ನಡೆಯನ್ನು ಖಂಡಿಸಿರುವ ಭಾರತದ ರಾಯಭಾರ ಕಚೇರಿಯು, ಕ್ರೀಡೆಯನ್ನು ರಾಜಕೀಯಗೊಳಿಸುತ್ತಿರುವುದು ವಿಷಾದನೀಯ ಎಂದು ಹೇಳಿದೆ. ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ.

ಶತಮಾನದ ಇತಿಹಾಸ

lಚಳಿಗಾಲದ ಒಲಿಂಪಿಕ್ಸ್‌ಗೆ ಒಂದು ಶತಮಾನದ ಇತಿಹಾಸವಿದೆ. 1908ರಲ್ಲಿ ಮತ್ತು 1920ರಲ್ಲಿ ಯೂರೋಪ್‌ನಲ್ಲಿ ಚಳಿಗಾಲದ ಕ್ರೀಡಾಕೂಟ, ಬೇಸಿಗೆಯ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಐರೋಪ್ಯ ದೇಶಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದವು. ಆದರೆ ಈ ಕ್ರೀಡಾಕೂಟಕ್ಕೆ ಚಳಿಗಾಲದ ಒಲಿಂಪಿಕ್ಸ್‌ನ ಮಾನ್ಯತೆ ದೊರೆತಿದ್ದು, 1925ರಲ್ಲಿ. 1924ರಲ್ಲಿ ನಡೆದ ಕ್ರೀಡಾಕೂಟವನ್ನು ಒಲಿಂಪಿಕ್ಸ್ ಎಂದು ಮಾನ್ಯತೆ ನೀಡಿ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು 1925ರಲ್ಲಿ ಆದೇಶ ಹೊರಡಿಸಿತ್ತು

lಮೊದಲ ಚಳಿಗಾಲದ ಒಲಿಂಪಿಕ್ಸ್ 1924ರಲ್ಲಿ ಫ್ರಾನ್ಸ್‌ನ ಷಾಮೋನಿಕ್ಸ್‌ನಲ್ಲಿ ನಡೆದಿತ್ತು. 16 ದೇಶಗಳ 250 ಕ್ರೀಡಾಪಟುಗಳು ಭಾಗಿಯಾಗಿದ್ದರು. 16 ವಿವಿಧ ಕ್ರೀಡೆಗಳಿಗೆ ಇದರಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಮಹಿಳೆಯರು ಫಿಗರ್ ಸ್ಕೇಟಿಂಗ್‌ನಲ್ಲಿ ಮಾತ್ರ ಭಾಗಿಯಾಗ ಬಹುದಿತ್ತು

l1936ರವರೆಗೆ ನಿರಂತರವಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಚಳಿಗಾಲದ ಒಲಿಂಪಿಕ್ಸ್‌ ಅನ್ನು ನಡೆಸಿಕೊಂಡು ಬರಲಾಗಿತ್ತು. ಆದರೆ ನಂತರ 12 ವರ್ಷ, ಅಂದರೆ 1948ರವರೆಗೆ ಈ ಕ್ರೀಡಾಕೂಟ ನಡೆಸಿರಲಿಲ್ಲ. ನಂತರ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಚಳಿಗಾಲದ ಒಲಿಂಪಿಕ್ಸ್‌ ಅನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ

l2014ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 88 ದೇಶಗಳ 2,800 ಅಥ್ಲೀಟ್‌ಗಳು ಭಾಗಿಯಾಗಿದ್ದರು. ಇದು ಈವರೆಗಿನ ಗರಿಷ್ಠ ಸಂಖ್ಯೆ. ಈ ಕ್ರೀಡಾಕೂಟಲ್ಲಿ 98 ಕ್ರೀಡೆಗಳಿಗೆ ಅವಕಾಶ ನೀಡಲಾಗಿತ್ತು. ಇಷ್ಟೊಂದು ಕ್ರೀಡೆಗಳಿಗೆ ಅವಕಾಶ ನೀಡಿದ್ದೂ ಇದೇ ಮೊದಲು

ಭಾರತ 15 ಬಾರಿ ಭಾಗಿ

ಭಾರತವು ಈವರೆಗೆ 15 ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಮಾತ್ರ ಭಾಗಿಯಾಗಿದೆ. ಆದರೆ ಈವರೆಗೂ ಯಾವುದೇ ಪದಕ ಗಳಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ಚಳಿಗಾಲದ ಕ್ರೀಡೆಗಳು (ಹಿಮದಲ್ಲಿ ಆಡುವ ಕ್ರೀಡೆಗಳು) ಕಡಿಮೆ. ಇಂತಹ ಕ್ರೀಡೆಗಳನ್ನು ನಡೆಸಲು ಅಗತ್ಯವಿರುವಂತಹ ಪ್ರದೇಶವೂ ದೊಡ್ಡ ವ್ಯಾಪ್ತಿಯಲ್ಲಿ ಲಭ್ಯವಿಲ್ಲ. ಅಗತ್ಯ ತರಬೇತಿಯು ದೊರೆಯುವುದಿಲ್ಲ. ಹೀಗಾಗಿ ಭಾರತೀಯ ಅಥ್ಲೀಟ್‌ಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗುವುದೇ ಕಡಿಮೆ.

ಆಧಾರ: ಗ್ಲೋಬಲ್ ಟೈಮ್ಸ್, ಬ್ರಿಟಾನಿಕಾ.ಕಾಂ, ಬಿಬಿಸಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT