ನಿತ್ಯದ ಮಾಹಿತಿ ಅಂದೇ ಬಹಿರಂಗಪಡಿಸಿ: ಒತ್ತಾಯ

ಮಂಗಳವಾರ, ಏಪ್ರಿಲ್ 23, 2019
27 °C
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಗಳ ಒತ್ತಾಯ

ನಿತ್ಯದ ಮಾಹಿತಿ ಅಂದೇ ಬಹಿರಂಗಪಡಿಸಿ: ಒತ್ತಾಯ

Published:
Updated:

ಬೆಂಗಳೂರು: ಚುನಾವಣಾ ಅಕ್ರಮಗಳ ಕುರಿತು ವೀಕ್ಷಕರು ಕಲೆಹಾಕುವ ಮಾಹಿತಿಯನ್ನು ಹಾಗೂ ಅಭ್ಯರ್ಥಿಗಳು ಒದಗಿಸುವ ವೆಚ್ಚದ ವಿವರಗಳನ್ನು ಆಯಾ ದಿನವೇ ಬಹಿರಂಗಪಡಿಸಬಾರದೇಕೇ?

ಬೆಂಗಳೂರು ನಗರ ಜಿಲ್ಲೆಯ ಮಾದರಿ ನೀತಿ ಸಂಹಿತೆ ಜಾರಿ ವಿಶೇಷಾಧಿಕಾರಿ ಮುನೀಶ್‌ ಮೌದ್ಗಿಲ್‌ ಅವರು ಅಭ್ಯರ್ಥಿಗಳ ಜೊತೆ ಸೋಮವಾರ ನಡೆಸಿದ ಸಭೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮೋಹನ ಕುಮಾರ್‌ ಕೇಳಿದ ಪ್ರಶ್ನೆ ಇದು. 

‘ವೀಕ್ಷಕರು ಕಲೆ ಹಾಕುವ ಮಾಹಿತಿಯನ್ನು ವರ್ಷಗಳ ಬಳಿಕ ಬಹಿರಂಗಪಡಿಸಿ ಪ್ರಯೋಜನವೇನು? ಮತದಾನಕ್ಕೆ ಮುನ್ನವೇ ಅದನ್ನು ಬಹಿರಂಗಪಡಿಸುವ ವ್ಯವಸ್ಥೆ ಜಾರಿ ಆಗಬೇಕು. ನಿಯಮ ಉಲ್ಲಂಘಿಸುವವರನ್ನು ತಕ್ಷಣವೇ ಅನರ್ಹಗೊಳಿಸುವಂತಾಗಬೇಕು’ ಎಂದು ಅವರು ಸಲಹೆ ನೀಡಿದರು.

‘ಪ್ರಚಾರಕ್ಕೆ ನಿತ್ಯ ಎಷ್ಟು ವೆಚ್ಚ ಮಾಡಿದ್ದೇವೆ ಎಂಬ ವಿವರಗಳನ್ನು ಅಭ್ಯರ್ಥಿಗಳು ನಿತ್ಯವೂ ಬಹಿರಂಗಪಡಿಸಬೇಕು. ಅವರು ಚುನಾವಣೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಸಾರ್ವಜನಿಕರು ನಿಗಾ ಇಡುವುದು ಸುಲಭವಾಗುತ್ತದೆ. ಇದು ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುತ್ತದೆ. ಅಧಿಕಾರಿಗಳು ಅಕ್ರಮ ಪತ್ತೆ ಹಚ್ಚಲು ಪೂರಕವಾದ ಮಾಹಿತಿಯನ್ನು ಜನರು ಒದಗಿಸುವುದಕ್ಕೂ ಇದರಿಂದ ಅನುಕೂಲವಾಗುತ್ತದೆ’ ಎಂದರು.

ಈ ಬಗ್ಗೆ ಚುನಾವಣಾ ಆಯೋಗದ ಗಮನ ಸೆಳೆಯುವುದಾಗಿ ಮುನೀಶ್‌ ಭರವಸೆ ನೀಡಿದರು. 

‘ಪ್ರಮುಖ ರಾಜಕೀಯ ಪಕ್ಷಗಳು ಏರ್ಪಡಿಸುವ ಬೈಕ್‌ ರ‍್ಯಾಲಿಗಳಿಗೆ ಅನುಮತಿ ಪಡೆಯದೆಯೇ ವಾಹನ ಬಳಕೆ ಮಾಡಲಾಗುತ್ತಿದೆ. ಕಣ್ಣೆದುರೇ ಅಕ್ರಮ ನಡೆಯುತ್ತಿದ್ದರೂ ಚುನಾವಣಾ ಅಧಿಕಾರಿಗಳು ಹಾಗೂ ವೀಕ್ಷಕರು ಮೂಕಪ್ರೇಕ್ಷಕರಾಗಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿ ಸಯ್ಯದ್‌ ಆಸಿಫ್‌ ಬುಖಾರಿ ಆರೋಪಿಸಿದರು. ಇದಕ್ಕೆ ಇತರ ಪಕ್ಷೇತರ ಅಭ್ಯರ್ಥಿಗಳೂ ದನಿಗೂಡಿಸಿದರು.

‘ಬೈಕ್‌ ರ‍್ಯಾಲಿಗಳಿಗೆ ವಾಹನ ಬಳಕೆಗೆ ಮೊದಲೇ ಅನುಮತಿ ಪಡೆದಿರುತ್ತಾರೆ. ಆದರೆ ಅನುಮತಿ ಪಡೆದದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ‍ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಸರ್ವಜ್ಞ ನಗರದಲ್ಲಿ ಇತ್ತೀಚೆಗೆ ನಡೆದ ಬೈಕ್‌ರ‍್ಯಾಲಿಯಲ್ಲಿ ಅನುಮತಿ ಪಡೆಯದೆ ಬಳಸಿದ 20 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದೇವೆ. ಚುನಾವಣೆ ಮುಗಿಯುವವರೆಗೆ ಅವುಗಳನ್ನು ಹಿಂತಿರುಗಿಸುವುದಿಲ್ಲ’ ಎಂದು ಕ್ಷೇತ್ರದ ಚುನಾವಣಾಧಿಕಾರಿ ಲೋಕೇಶ್‌ ತಿಳಿಸಿದರು.

ವಾಹನ ತಪಾಸಣೆಗೆ ಅಸಡ್ಡೆ: ಮುನೀಶ್‌ ಅಸಮಾಧಾನ

ನಗರದಲ್ಲಿ ಅಧಿಕಾರಿಗಳ ತಂಡಗಳು ವಾಹನಗಳನ್ನು ಸಮರ್ಪಕವಾಗಿ ತಪಾಸಣೆ ನಡೆಸದ ಬಗ್ಗೆ ಮುನೀಶ್‌ ಮೌದ್ಗಿಲ್‌ ಅಸಮಾಧಾನ ವ್ಯಕ್ತಪಡಿಸಿದರು.

‘ವಾಹನ ತಪಾಸಣಾ ಕಾರ್ಯವನ್ನು ಅಧಿಕಾರಿಗಳು ಶ್ರದ್ಧೆಯಿಂದ ನಿರ್ವಹಿಸುತ್ತಿಲ್ಲ. ಅನೇಕ ಕಡೆ ಖುದ್ದಾಗಿ ಇದನ್ನು ಗಮನಿಸಿದ್ದೇನೆ. ಬೆಳಿಗ್ಗೆ ಹೊತ್ತು ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಿದರೆ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುವ ಅಪಾಯವಿದೆ, ಒಪ್ಪೋಣ. ಆದರೆ, ಸಂಜೆ ಬಳಿಕವೂ ಅನೇಕ ಕಡೆ ತಪಾಸಣಾ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ’ ಎಂದರು.

ಬೈಕ್‌ ರ‍್ಯಾಲಿ: ಹೆಲ್ಮೆಟ್‌ ಬಳಕೆ ಅಗತ್ಯವಿಲ್ಲವೇ?

‘ಚುನಾವಣಾ ಪ್ರಚಾರದ ಸಲುವಾಗಿ ನಡೆಸುವ ಬೈಕ್‌ ರ‍್ಯಾಲಿಗಳಲ್ಲಿ ಭಾಗವಹಿಸುವ ಸವಾರರಿಗೆ ಹೆಲ್ಮೆಟ್‌ ಧರಿಸುವುದರಿಂದ ವಿನಾಯಿತಿ ಇದೆಯೇ’ ಎಂದು ಪಕ್ಷೇತರ ಅಭ್ಯರ್ಥಿಗಳು ಪ್ರಶ್ನಿಸಿದರು.

‘ಕಣ್ಣೆದುರೇ ನಿಯಮ ಉಲ್ಲಂಘನೆ ನಡೆದರೂ ಪೊಲೀಸರು ಏಕೆ ಅವರಿಂದ ದಂಡ ವಸೂಲಿ ಮಾಡುತ್ತಿಲ್ಲ. ಸಾಮಾನ್ಯ ಜನರಿಗೊಂದು ನ್ಯಾಯ, ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಒಂದು ನ್ಯಾಯ ಸರಿಯೇ’ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !