‘ಹಿಂದುಳಿದವರ ಧ್ವನಿಯಾದವರು ದೇವರಾಜ ಅರಸು’

ಬುಧವಾರ, ಜೂನ್ 26, 2019
25 °C
ಧ್ವನಿ ಕೊಟ್ಟ ಧಣಿ; ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅಭಿಮತ

‘ಹಿಂದುಳಿದವರ ಧ್ವನಿಯಾದವರು ದೇವರಾಜ ಅರಸು’

Published:
Updated:
Prajavani

ಮೈಸೂರು: ‘ಅರಸು ಕುಲದ ಕುಡಿಯಾದರೂ; ನಾಡಿನ ಆಳಾಗಿ ದುಡಿದವರು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು. ದಿಕ್ಕಿಲ್ಲದವರ ಧ್ವನಿಯಾದವರು. ಹಿಂದುಳಿದವರ ಪಾಲಿನ ಧಣಿಯಾಗಿದ್ದವರು’ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅಭಿಪ್ರಾಯಪಟ್ಟರು.

‘ಸಾಮಾಜಿಕ ನ್ಯಾಯಕ್ಕೆ ದೇವರಾಜ ಅರಸು ಮಾದರಿ. ರಾಜಕೀಯ ಮುತ್ಸದ್ಧಿತನಕ್ಕೆ ಲಾಲ್‌ಬಹದ್ದೂರ್‌ ಶಾಸ್ತ್ರಿ ಬಳಿಕ ಅಟಲ್‌ ಬಿಹಾರಿ ವಾಜಪೇಯಿ ಹೆಸರಾದವರು’ ಎಂದು ನಗರದಲ್ಲಿ ಗುರುವಾರ ನಡೆದ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು 37ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಹೇಳಿದರು.

‘ಅರಸು ಒಂಟಿ ಸಲಗವಿದ್ದಂತೆ. ಹಿಡಿದ ಕೆಲಸವನ್ನು ಪೂರೈಸಿದವರು. ನಮಗೂ ನೀರಿನ ಹಕ್ಕಿದೆ ಎಂದು ನೇರ ಹೋರಾಟಕ್ಕಿಳಿದವರು. ಗಂಡು ಮೆಟ್ಟಿನ ನಾಡು ಎಂದೇ ಖ್ಯಾತವಾದ ಮಂಡ್ಯ ಜಿಲ್ಲೆಯ ಜನರ ಎದುರೇ ತೊಡೆ ತಟ್ಟಿ ವರುಣಾ ನಾಲೆಯನ್ನು ಮೈಸೂರು ಜಿಲ್ಲೆಗೂ ತಂದವರು. ರಾಜ್ಯದ ಕಾಂಗ್ರೆಸ್‌ ಪ್ರಭಾವಿಗಳನ್ನೇ ಎದುರು ಹಾಕಿಕೊಂಡು ಭೂ ಸುಧಾರಣಾ ಕಾಯ್ದೆಯನ್ನು ಅನುಷ್ಠಾನಗೊಳಿಸಿದ ಧೀಮಂತ’ ಎಂದು ತಿಳಿಸಿದರು.

‘ನಿರ್ಲಕ್ಷಿತಗೊಂಡಿದ್ದ ಹಿಂದುಳಿದ ವರ್ಗವನ್ನು ಗುರುತಿಸಿ ಸಾಮಾಜಿಕ ನ್ಯಾಯ ಕೊಟ್ಟರು. ಮಧ್ಯಮ ವರ್ಗಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕಾರ್ಯಕ್ರಮ ರೂಪಿಸಿ, ಅನುಷ್ಠಾನಗೊಳಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲಲಿದೆ’ ಎಂದು ಮಾಜಿ ಸಚಿವರು ಹೇಳಿದರು.

‘ಅರಸು ಯಾವುದೇ ಜಾತಿಗೆ ಸೀಮಿತವಾಗಿರಲಿಲ್ಲ. ಎಲ್ಲರೂ ನಮ್ಮವರೇ ಎಂದು ಗೌರವಿಸುವಂಥಹ ಅಪರೂಪದ ವ್ಯಕ್ತಿತ್ವವನ್ನು ದೇವರಾಜರು ಹೊಂದಿದ್ದರು. ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದ ಬಳಿಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಇದೂವರೆಗೂ ಒಮ್ಮೆಯೂ ಭೇಟಿಯಾಗಿಲ್ಲ. ಮೈಸೂರಿನಲ್ಲಿ ಅರಸರ ಪ್ರತಿಮೆ ಸ್ಥಾಪಿಸಲಿಕ್ಕಾಗಿಯೇ ಎಲ್ಲರೊಟ್ಟಿಗೆ ಭೇಟಿಯಾಗುವೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜತೆಯೂ ಈ ಕುರಿತಂತೆ ಚರ್ಚಿಸುವೆ’ ಎಂದು ನೆರೆದಿದ್ದ ಅರಸು ಅಭಿಮಾನಿಗಳಿಗೆ ವಿಜಯಶಂಕರ್ ಭರವಸೆ ನೀಡಿದರು.

‘ದೇವರಾಜ ಅರಸು ಯಾವತ್ತಿಗೂ ಪ್ರಾತಃಸ್ಮರಣೀಯರು. ಕರುಣಾಮಯಿ ಅವರು. ಶೋಷಿತರು, ಅಸಹಾಯಕರ ಬಗ್ಗೆ ಸಹಾನುಭೂತಿ ಹೊಂದಿದ್ದರು. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಅನುಷ್ಠಾನಗೊಳಿಸಿ, ನೊಂದ ಜೀವಗಳಿಗೆ ರಕ್ಷಣೆ ನೀಡಿದವರು’ ಎಂದು ಅರಗು ಮತ್ತು ಬಣ್ಣದ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌ ಹೇಳಿದರು.

‘ತಾತ್ವಿಕ ನೆಲೆಗಟ್ಟಿನಲ್ಲಿ ಬುದ್ಧ, ಬಸವೇಶ್ವರರು ಸಮಾಜ ಸುಧಾರಣೆಗೆ ಮುಂದಾದರೆ, ಡಿ.ದೇವರಾಜ ಅರಸರು ರಾಜಕೀಯ ಅಧಿಕಾರದ ಮೂಲಕ ಸಮಾನತೆ ತಂದವರಾಗಿದ್ದಾರೆ. 1976ರಲ್ಲಿ ಉನ್ನತ ಶಿಕ್ಷಣ, ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ರೂಪಿಸಿದ ಕಾಯ್ದೆಯೊಂದು 2000ನೇ ಇಸ್ವಿಯವರೆಗೂ ಕಿಂಚಿತ್ ಲೋಪವಿಲ್ಲದಂತೆ ನಡೆಯಿತು. ಇದು ಅರಸರ ದೂರದೃಷ್ಟಿ ಚಿಂತನೆಯ ಫಲ’ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಮಾತನಾಡಿ ‘ಕೆಪಿಎಸ್‌ಸಿ ಮೂಲಕ ಸಾಮಾಜಿಕ ನ್ಯಾಯ ಕೊಟ್ಟವರು ದೇವರಾಜ ಅರಸರು. ಇಂದಿರಾಗಾಂಧಿ ರೂಪಿಸಿದ 20 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿಯೂ ಇವರಿಗೆ ಸಲ್ಲಲಿದೆ’ ಎಂದು ಹೇಳಿದರು.

ಅರಸು ಜಾಗೃತಿ ಅಕಾಡೆಮಿಯ ಡಾ.ಡಿ.ತಿಮ್ಮಯ್ಯ, ಸಂಧ್ಯಾ ಸುರಕ್ಷಾ ಟ್ರಸ್ಟ್‌ನ ಬಿ.ಆರ್.ನಟರಾಜಜೋಯ್ಸ್‌, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್‌, ಅನ್ವೇಷಣಾ ಸೇವಾ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಅಮರನಾಥರಾಜೇ ಅರಸ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ.ಎಂ.ಜಿ.ಆರ್‌.ಅರಸ್‌ ಕಾರ್ಯಕ್ರಮ ನಿರೂಪಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !