ಸೂರ್ಯೋದಯಕ್ಕೂ ಮುನ್ನವೇ 50 ಲಕ್ಷ ಮಂದಿಯಿಂದ ಪುಣ್ಯಸ್ನಾನ

7
ಕುಂಭಮೇಳ: ಮಾರ್ಚ್‌ 4ಕ್ಕೆ ಮೇಳಕ್ಕೆ ತೆರೆ

ಸೂರ್ಯೋದಯಕ್ಕೂ ಮುನ್ನವೇ 50 ಲಕ್ಷ ಮಂದಿಯಿಂದ ಪುಣ್ಯಸ್ನಾನ

Published:
Updated:
Prajavani

ಪ್ರಯಾಗ್‌ರಾಜ್‌: ವಸಂತ ಪಂಚಮಿಯ ಅಂಗವಾಗಿ ಮೂರನೇ ಪುಣ್ಯಸ್ನಾನದಂದು ಭಾನುವಾರ ಒಂದೇ ದಿನ ಸುಮಾರು 2 ಕೋಟಿಗೂ ಅಧಿಕ ಮಂದಿ ಗಂಗೆಯಲ್ಲಿ ಮಿಂದೆದ್ದರು.

ವಿಪರೀತ ಜನದಟ್ಟಣೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ತಡರಾತ್ರಿಯೇ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾದರು. 

’ಬೆಳಿಗ್ಗೆ 1ಗಂಟೆಗೆ ಇಲ್ಲಿಗೆ ಬಂದು ಪುಣ್ಯಸ್ನಾನ ಮುಗಿಸಿದ್ದೇನೆ. ಇದರಿಂದ ನಗರ ಸುತ್ತಾಡಿ, ಸರಿಯಾದ ಸಮಯಕ್ಕೆ ಊರಿಗೆ ಹಿಂತಿರುಗಬಹುದು‘ ಎಂದು ಫತೇಪುರ್‌ ಜಿಲ್ಲೆಯ ದೀಪಕ್‌ ಕುಮಾರ್‌ ತಿಳಿಸಿದರು.

’ಸುರ್ಯೋದಯಕ್ಕೂ ಮುನ್ನವೇ, ಸುಮಾರು 50 ಲಕ್ಷಕ್ಕೂ ಅಧಿಕ ಮಂದಿ ಪುಣ್ಯಸ್ನಾನ ನೆರವೇರಿಸಿದ್ದಾರೆ. ಸುರ್ಯೋದಯದ ಬಳಿಕ ಈ ಸಂಖ್ಯೆ ಏರಿಕೆಯಾಗಿದೆ.  ಇದುವರೆಗೂ 14.94 ಕೋಟಿ ಮಂದಿ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ‘ ಎಂದು ಕುಂಭಮೇಳದ ಅಧಿಕಾರಿ ವಿಜಯ್‌ ಕಿರಣ್‌ ಆನಂದ್‌ ತಿಳಿಸಿದ್ದಾರೆ.

ಜನವರಿ 15ರ ಮಕರ ಸಂಕ್ರಾಂತಿಯಂದು ಕುಂಭಮೇಳ ಆರಂಭಗೊಂಡಿದ್ದು, ಮಹಾಶಿವರಾತ್ರಿಯ ಮಾರ್ಚ್‌ 4ರಂದು ಸಮಾಪ್ತಿಯಾಗಲಿದೆ.

ಡಿಜಿಟಲೀಕರಣದತ್ತ ‘ರಾಮನಾಮ’ ಬ್ಯಾಂಕ್

ಪುಸ್ತಕದಲ್ಲಿ ಶ್ರೀರಾಮನಾಮದ ಹೆಸರು ಬರೆದು, ಠೇವಣಿ ಮಾಡುವ ‘ರಾಮನಾಮ ಬ್ಯಾಂಕ್‌’ ಇದೀಗ ಡಿಜಿಟಲೀಕರಣದತ್ತ ಹೊರಳಿದೆ.  ಈ ಬ್ಯಾಂಕ್‌ನಲ್ಲಿ ಹಣದ ವಹಿವಾಟು, ಚೆಕ್‌, ಎಟಿಎಂನ ವಹಿವಾಟು ನಡೆಯುವುದಿಲ್ಲ. ಭಗವಾನ್‌ ‘ಶ್ರೀರಾಮ’ನೇ ಈ ಬ್ಯಾಂಕ್‌ನ ಕರೆನ್ಸಿ.

30 ಪುಟಗಳ ಪುಸ್ತಕದಲ್ಲಿ ದಿನಕ್ಕೆ 108 ಬಾರಿ ಶ್ರೀರಾಮನ ಹೆಸರು ಬರೆಯಬೇಕು, ಬಳಿಕ ಆ ಪುಸ್ತಕವನ್ನು ತಂದು ಈ ಬ್ಯಾಂಕ್‌ನಲ್ಲಿ ಇಟ್ಟು ವೈಯಕ್ತಿಕ ಖಾತೆ ಅಡಿಯಲ್ಲಿ ಜಮೆ ಮಾಡಬಹುದು. 

‘ರಾಮನಾಮ ಸೇವಾ ಸಂಸ್ಥಾನ’ ಹೆಸರಿನ ಸಾಮಾಜಿಕ ಸಂಘಟನೆ ಈ ಬ್ಯಾಂಕ್‌ ನಿರ್ವಹಣೆ ಮಾಡುತ್ತಿದ್ದು, 1 ಲಕ್ಷ ಮಂದಿ ಇದರ ಸದಸ್ಯರಾಗಿದ್ದಾರೆ. ಹಿಂದಿನ 9 ಕುಂಭಮೇಳಗಳಲ್ಲಿ ಸಂಗಮದ ಸ್ಥಳಗಳಲ್ಲಿ ಕಚೇರಿ ತೆರೆದು, ಜನರಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

‘ಶ್ರೀರಾಮನ ಹೆಸರನ್ನು ಕೆಂಪು ಶಾಯಿಯಲ್ಲಿ ಬರೆದು ಸಲ್ಲಿಸಬಹುದು, ಅಂತಹವರಿಗೆ ಇತರೆ ಬ್ಯಾಂಕ್‌ಗಳ ರೀತಿ ಇರುವಂತೆ ಪಾಸ್‌ಬುಕ್‌ ವಿತರಿಸಲಾಗುತ್ತದೆ’ ಎಂದು ಸಂಸ್ಥೆ ಅಧ್ಯಕ್ಷರಾಗಿರುವ ಗುಂಜನ್‌ ವರ್ಸ್ನೆ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಈ ವ್ಯವಸ್ಥೆಗೆ ಡಿಜಟಲ್‌ ರೂಪ ನೀಡಲಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ‘ದಿ ರಾಮ್‌ನಾಮ್‌ ಆ್ಯಪ್‌’ ಡೌನ್‌ಲೋಡ್‌ ಮಾಡಿಕೊಂಡು ಹೆಸರು, ವಿಳಾಸ ನೋಂದಣಿ ಮಾಡಿಕೊಂಡು ಇದರ ಸೇವೆ ಪ‍ಡೆಯಬಹುದು. ಇದಕ್ಕೆ ಯಾವುದೇ ಶುಲ್ಕವಿಲ್ಲ. 

‘ಮನಸ್ಸಿನಲ್ಲಿರುವ ನಕಾರಾತ್ಮಕ ಭಾವನೆಗಳನ್ನು ನಿಗ್ರಹಿಸಿ, ಸಮಸ್ಯೆಗಳನ್ನು ಬಗೆಹರಿಸಲು ಇದರಿಂದ ಸಹಕಾರಿಯಾಗಲಿದೆ’ ಎಂದು ಗುಂಜನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !