7

‘ರಾಜಕೀಯ ನಿರಾಶ್ರಿತರ ತಾಣವಾಗಿರುವ ಮೇಲ್ಮನೆ’

Published:
Updated:

ಜ್ಞಾನ ಮತ್ತು ಪ್ರತಿಭೆಗಳ ಸಂಗಮವಾಗಿ, ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕಿದ್ದ ವಿಧಾನಪರಿಷತ್ತು ಈಗ ವಿಧಾನಸಭೆಯ ‘ಬಿ– ಟೀಂ’ ಎಂಬಂತಾಗಿದೆ. ಸಮಾಜಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿದ ಗಣ್ಯರಿಗಿಂತ ‘ಸೂಟ್‌ಕೇಸ್‌ ಪಾರ್ಟಿ’ಗಳೇ ಹೆಚ್ಚು ಪ್ರವೇಶ ಪಡೆಯುತ್ತಿವೆ’ ಎಂಬ ಟೀಕೆ ರಾಜಕೀಯ ಪಕ್ಷಗಳ ಪಡಸಾಲೆಯಲ್ಲೇ ಇದೆ. ಮೇಲ್ಮನೆಯ ಈ ಎಲ್ಲ ವಿದ್ಯಮಾನಗಳ ಬಗ್ಗೆ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ. ಅವರು 35 ವರ್ಷಗಳ ಕಾಲ ಪರಿಷತ್‌ನಲ್ಲಿ ಸದಸ್ಯರಾಗಿದ್ದ ಅವರು, ವಿರೋಧ ಪಕ್ಷದ ನಾಯಕರಾಗಿ, ಎಂಟು ವರ್ಷ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

* ವಿಧಾನಪರಿಷತ್ತು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಿರಾಶ್ರಿತರ ತಾಣ ಆಗುತ್ತಿದೆ. ಇದಕ್ಕೆ ಕಾರಣವೇನು?

ದುರಾದೃಷ್ಟ; ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿಲ್ಲ. ವಿಧಾನಪರಿಷತ್ತು ರಾಜಕೀಯ ನಿರಾಶ್ರಿತರ ತಾಣ ಆಗುತ್ತಿದೆ. ವಿಧಾನಸಭೆ ಅಥವಾ ಲೋಕಸಭೆಗಳಲ್ಲಿ ಸೋತವರಿಗೆ ಇಲ್ಲಿ ಮಣೆ ಹಾಕಲಾಗುತ್ತಿದೆ. ಎಲ್ಲ ಪಕ್ಷಗಳಲ್ಲೂ ಈ ಪ್ರವೃತ್ತಿ ಹೆಚ್ಚಿರುವುದರಿಂದ ವಿಧಾನಪರಿಷತ್ತಿಗಿದ್ದ ಗಾಂಭೀರ್ಯ ಕಡಿಮೆ ಆಗಿದೆ. ಪರಿಷತ್ತಿಗೆ ಎಂಥವರನ್ನು ಆಯ್ಕೆ ಮಾಡಬೇಕು ಎಂಬುದರ ಪಟ್ಟಿಯೇ ಇದೆ. ಆ ಪಟ್ಟಿಯಲ್ಲಿ ಕೊನೆಯಲ್ಲಿರುವ ವರ್ಗ ಎಂದರೆ, ಸಮಾಜ ಸೇವೆ. ಇದರಡಿಯಲ್ಲೇ ಹೆಚ್ಚಿನವರು ಪ್ರವೇಶ ಪಡೆಯುತ್ತಿದ್ದಾರೆ. ಚಾಪೆ, ರಂಗೋಲಿಗಳ ಕೆಳಗೆ ತೂರಿ ಬರುವವರೇ ಹೆಚ್ಚಾಗಿದ್ದಾರೆ. ಇದು ಧರ್ಮವೇ?

* ರಿಯಲ್‌ ಎಸ್ಟೇಟ್‌, ಇತರ ಉದ್ಯಮಗಳ ಹಣವಂತರೂ ಬರುತ್ತಿದ್ದಾರಲ್ಲ?

ಹಣವಂತರು, ಶ್ರೀಮಂತರು ಬರಬಾರದು ಎಂದೇನಲ್ಲ. ಆದರೆ, ಅವರಿಗೆ ಸಮಾಜದ ಯಾವುದಾದರೂ ಒಂದು ಕ್ಷೇತ್ರದ ಆಳವಾದ ಜ್ಞಾನ ಇರಬೇಕು. ಆ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳತ್ತ ಸರ್ಕಾರದ ಗಮನಸೆಳೆಯುವ ಸಾಮರ್ಥ್ಯ ಮತ್ತು ಬೌದ್ಧಿಕತೆ ಇರಬೇಕು. ಆಯ್ಕೆ ಆಗುವ ವ್ಯಕ್ತಿಗಳಲ್ಲಿ ಜ್ಞಾನದ ಶ್ರೀಮಂತಿಕೆ ಇದೆಯೇ ಎಂಬುದಷ್ಟೇ ನನ್ನ ಪ್ರಶ್ನೆ.

* ಮೇಲ್ಮನೆಯಲ್ಲಿ ಕಲಾಪದ ಗುಣಮಟ್ಟ ಕಡಿಮೆ ಆಗುತ್ತಿದೆ ಎಂಬ ಭಾವನೆ ಇದೆಯಲ್ಲ. ಕಾಲಾಂತರದಲ್ಲಿ ಗುಣಮಟ್ಟ ಕಡಿಮೆ ಆಗಿದ್ದು ಹೇಗೆ?

ಇದನ್ನು ಪೂರ್ಣ ಒಪ್ಪುವುದಿಲ್ಲ. ವಿಧಾನಸಭೆಗೆ ಹೋಲಿಸಿದರೆ, ಪರಿಷತ್ತಿನಲ್ಲಿ ಚರ್ಚೆ ನಡೆಸಲು ಬಹುಪಾಲು ಸದಸ್ಯರು ಆಸಕ್ತಿ ಹೊಂದಿದ್ದಾರೆ. ಆದರೆ, ಅವರಿಗೆ ಸಾಕಷ್ಟು ಸಮಯ ಸಿಗುತ್ತಿಲ್ಲ. ಆ ಕಾರಣಕ್ಕೇ ಗಲಾಟೆ ಅಥವಾ ಧರಣಿ ಆಗುತ್ತದೆ. ಬಹಳಷ್ಟು ಸದಸ್ಯರಿಗೆ ಗುಣಮಟ್ಟದ ಚರ್ಚೆ ಮಾಡಬೇಕೆಂಬ ಮನಸ್ಸು ಇರುವುದನ್ನು ಕಂಡಿದ್ದೇನೆ. ಅಧಿವೇಶನವನ್ನು ಹೆಚ್ಚು ದಿನ ನಡೆಸದೇ ಮೊಟಕುಗೊಳಿಸಲಾಗುತ್ತಿದೆ. ಇದರಿಂದ ಸದಸ್ಯರಿಗೆ ಚರ್ಚೆಗೆ ಅವಕಾಶ ಸಿಗುತ್ತಿಲ್ಲ. ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಮಾಧ್ಯಮಗಳ ಗಮನ ಸೆಳೆಯಲು ಗದ್ದಲ ಎಬ್ಬಿಸುವುದೂ ಹೆಚ್ಚಾಗಿದೆ. ಇದರ ಪರಿಣಾಮ ಅತ್ಯುತ್ತಮವಾಗಿ ಚರ್ಚೆ ಮಾಡಿದವರ ಮಾಹಿತಿ ಮಾಧ್ಯಮಗಳಲ್ಲಿ ಬರುತ್ತಿಲ್ಲ.

* ಹಿಂದೆ ಎಷ್ಟು ದಿನಗಳ ಕಾಲ ಅಧಿವೇಶನಗಳು ನಡೆಯುತ್ತಿದ್ದವು. ಅವುಗಳ ಗುಣಮಟ್ಟ ಹೇಗಿರುತ್ತಿತ್ತು?

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ವರ್ಷಕ್ಕೆ 75 ರಿಂದ 80 ದಿನಗಳ ಕಾಲ ಸದನ ನಡೆಯುತ್ತಿತ್ತು. ಆ ಬಳಿಕ ಸಂಖ್ಯೆ ಕಡಿಮೆ ಆಗುತ್ತಾ ಬಂದಿತು. ಅವಧಿ ಕಡಿಮೆ ಆಗಲು ಮಹತ್ವದ ಕಾರಣಗಳೇನೂ ಇಲ್ಲ. ಆಯಾ ಕಾಲದಲ್ಲಿದ್ದ ಸರ್ಕಾರಗಳಿಗೆ ಚರ್ಚೆ ನಡೆಸುವುದು ಬೇಕಿರಲಿಲ್ಲ. ಅಧಿವೇಶನವನ್ನು ಚುಟುಕಾಗಿ ಮುಗಿಸಿದರೆ ಸಾಕು ಎಂಬ ಭಾವನೆ ಇತ್ತು. ಟೀಕೆ– ಟಿಪ್ಪಣಿಗಳನ್ನು ಎದುರಿಸುವ ಮನಸ್ಸಿರಲಿಲ್ಲ. ಮಸೂದೆಗಳನ್ನು ಯಾವುದೇ ಚರ್ಚೆ ನಡೆಸದೇ ಅಂಗೀಕಾರ ಮಾಡಿಕೊಂಡರೆ ಸಾಕು. ಸಮಯ ಇದ್ದರೆ, ಸದಸ್ಯರು ಉತ್ತಮವಾಗಿ ತಯಾರಿ ಮಾಡಿಕೊಂಡು ಬರುತ್ತಾರೆ. ನಾನು ಸಭಾಪತಿ ಆಗಿದ್ದ ಅವಧಿಯಲ್ಲಿ ಕೆಲವೊಮ್ಮೆ ಮಸೂದೆಗಳ ಮೇಲೆ ಚರ್ಚೆ ಮಾಡಲು 45 ರಿಂದ 47 ಸದಸ್ಯರಿಗೆ ಅವಕಾಶ ಕೊಟ್ಟಿದ್ದೇನೆ. ಕಳೆದ ಮಾರ್ಚ್‌ ತಿಂಗಳಲ್ಲಿ ನಡೆದ ಅಧಿವೇಶನವನ್ನು ರಾ‌ಜಕೀಯ ಒತ್ತಡದ ಕಾರಣಕ್ಕೆ ನಾಲ್ಕು ದಿನ ಮೊಟಕುಗೊಳಿಸಬೇಕಾಯಿತು. ಸರ್ಕಾರಕ್ಕೆ ಸದಸ್ಯರಿಂದ ತೆಗಳಿಸಿಕೊಳ್ಳುವುದು ಬೇಕಾಗಿರಲಿಲ್ಲ.

* ನಿಮ್ಮ ವಿರುದ್ಧ ಅವಿಶ್ವಾಸ ಮಂಡಿಸಿ, ಕೆಳಗಿಳಿಸಲು ಸದಸ್ಯರು ಪ್ರಯತ್ನಿಸಿದರು. ಇದರ ಹಿನ್ನೆಲೆ ಏನು, ಸದಸ್ಯರ ಸಿಟ್ಟಿಗೆ ಕಾರಣಗಳೇನು?

ಸಭಾಪತಿಯಾಗಿದ್ದ ನನ್ನ ವಿರುದ್ಧ ಅವಿಶ್ವಾಸ ಮಂಡಿಸಿ, ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಿದ್ದು ಸರಿಯಲ್ಲ. ಸಭಾಪತಿಯವರನ್ನು ಕೆಳಗಿಳಿಸಲು ಎರಡು ಪ್ರಮುಖ ಕಾರಣಗಳಿರಬೇಕು. ಒಂದೊ ದೊಡ್ಡ ತಪ್ಪು ಮಾಡಿರಬೇಕು. ಇಲ್ಲವೇ ಸಭಾಪತಿ ಬೆಂಬಲಿಸುವ ಸದಸ್ಯರ ಸಂಖ್ಯಾಬಲ ಕಡಿಮೆ ಆಗಬೇಕು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಕರೆಸಿ ಈ ವಿಷಯ ಮನವರಿಕೆ ಮಾಡಿದೆ. ಕೆಲವು ಸದಸ್ಯರು ನೀಡಿರುವ ಕಾರಣಗಳನ್ನು ಸಾಬೀತು ಮಾಡಿದರೆ ರಾಜೀನಾಮೆ ಕೊಡಲು ಸಿದ್ಧ ಎಂದು ಅವರಿಗೆ ವಿವರಿಸಿದೆ. ಅವಿಶ್ವಾಸ ಮತಕ್ಕೆ ಹಾಕುವಾಗ ನಾನು ಸಭಾಪತಿ ಪೀಠದಲ್ಲಿ ಕುಳಿತುಕೊಳ್ಳಲಿಲ್ಲ. ಸದಸ್ಯರ ಸಾಲಿನಲ್ಲಿ ಕುಳಿತು ಅದನ್ನು ಎದುರಿಸಿದೆ. ಅವಿಶ್ವಾಸ ಮಂಡಿಸಿದವರು ನನ್ನ ಮೇಲಿನ ಯಾವುದೇ ಆರೋಪಗಳನ್ನು ಸಾಬೀತುಪಡಿಸಲಿಲ್ಲ.

* ಶಿಕ್ಷಣ ಕ್ಷೇತ್ರವನ್ನು ಮೂರೂವರೆ ದಶಕ ಪ್ರತಿನಿಧಿಸಿದ ನಿಮಗೆ ಆ ಕ್ಷೇತ್ರದಲ್ಲಿ ಏನಾದರೂ ಬದಲಾವಣೆ ತರಲು ಸಾಧ್ಯವಾಯಿತೇ?

1989– 90 ರಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಒಂದು ವಿಷಯ ಪ್ರಸ್ತಾಪಿಸಿದ್ದೆ. ಅದೇನೆಂದರೆ, ಇತಿಹಾಸದ ಪುಸ್ತಕಗಳಲ್ಲಿ ಉದ್ದಕ್ಕೂ ಭಾರತದ ಸೋಲಿನ ಕಥೆಯೇ ತುಂಬಿಕೊಂಡಿದೆ. ವಿದೇಶಿಯರು ನಮ್ಮ ಮೇಲೆ ದಾಳಿ ಮಾಡಿದರು, ನಾವು ಸೋತು ಹೋದೆವು ಎಂಬುದನ್ನು ಓದುತ್ತಲೇ ಬೆಳೆಯುತ್ತೇವೆ. ಸೋಲಿನ ಇತಿಹಾಸಕ್ಕಿಂತ ಗೆಲುವಿನ ಇತಿಹಾಸ ಮುಖ್ಯವಾಗುತ್ತದೆ. ಒಮ್ಮೆ ಪ್ಯಾರಿಸ್‌ಗೆ ಹೋಗಿದ್ದಾಗ ಒಂದು ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿನ ಪಠ್ಯದಲ್ಲಿ ಹಿಟ್ಲರ್‌ ಬಗ್ಗೆ ಪಾಠ ಇರಲಿಲ್ಲ. ಫ್ರಾನ್ಸ್‌ ಅನ್ನು ಹಿಟ್ಲರ್‌ ಸೋಲಿಸಿದ್ದ. ಅಲ್ಲಿನ ಶಿಕ್ಷಕಿಯಲ್ಲಿ ಪ್ರಶ್ನಿಸಿದೆ. ಅದಕ್ಕೆ ಆಕೆ ನೀಡಿದ ಉತ್ತರ ಇಷ್ಟೇ, ‘ನಮ್ಮನ್ನು ಸೋಲಿಸಿ ಅಟ್ಟಹಾಸ ಮೆರೆದವರ ಪಾಠ ಮಾಡುವ ಅವಶ್ಯಕತೆ ಏನಿದೆ. ಅಂತಹ ಇತಿಹಾಸದ ಬಗ್ಗೆ ಆಸ್ತಕಿ ಇದ್ದರೆ ದೊಡ್ಡವರಾದ ಮೇಲೆ ಅವರೇ ಓದಿಕೊಳ್ಳುತ್ತಾರೆ’ ಎಂದರು. ನಮ್ಮ ದೇಶದ ಸಾಹಸಿ ರಾಜ–ಮಹಾರಾಜರು, ಪ್ರಾಚೀನ ವಿಜ್ಞಾನಿಗಳ ಸಾಧನೆ ಕುರಿತ ಹೆಚ್ಚಿನ ಪಾಠಗಳನ್ನು ಇಡಬೇಕು. ನಮ್ಮ ದೇಶ ಮತ್ತು ರಾಜ್ಯದಲ್ಲಿ ಇಂತಹದ್ದೊಂದು ಬದಲಾವಣೆ ಮಾಡಬೇಕು ಎಂಬ ಇಚ್ಛೆ ಇತ್ತು. ಸಾಧ್ಯವಾಗಲಿಲ್ಲ.

ನಮ್ಮಲ್ಲಿ ಒಂದು ವಿಶ್ವವಿದ್ಯಾಲಯ ಇನ್ನೊಂದು ವಿಶ್ವವಿದ್ಯಾಲಯವನ್ನು ‘ಫಾರಿನ್‌ ಯುನಿವರ್ಸಿಟಿ’ ಎಂದು ಕರೆಯುವ ಪರಿಪಾಠ ಈಗಲೂ ಇದೆ. ಉದಾಹರಣೆಗೆ ಸಹ್ಯಾದ್ರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕು ಎಂದರೆ, 2 ಸೀಟುಗಳು ಮೀಸಲು ಇರುತ್ತವೆ. ಇದನ್ನು ಬದಲಿಸಿ ಶೇ 50 ರಷ್ಟು ಸೀಟುಗಳನ್ನು ಇಡಬೇಕು ಎಂಬ ಉದ್ದೇಶದಿಂದ ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಮಸೂದೆ ಮಂಡಿಸಿದ್ದೆ. ಆದರೆ, ಅದಕ್ಕೆ ಸದಸ್ಯರು ಅವಕಾಶ ನೀಡಲಿಲ್ಲ.

 

 

 

 

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !