ಗುರುವಾರ , ಅಕ್ಟೋಬರ್ 17, 2019
22 °C

ಬೆಂಗಳೂರಿನಲ್ಲಿ ದಾಂಡಿಯಾ ರಾಸ್‌, ಗರಬಾ ಸಂಭ್ರಮ

Published:
Updated:
Prajavani

ಗುಜರಾತ್‌ನ ಸಾಂಪ್ರದಾಯಿಕ ನೃತ್ಯಗಳಾದ ದಾಂಡಿಯಾ ಅಥವಾ ದಾಂಡಿಯಾ ರಾಸ್‌, ಗರಬಾ ನೃತ್ಯ ಈಗ ಬೆಂಗಳೂರಿನಲ್ಲೂ ಜನಪ್ರಿಯವಾಗಿವೆ. ನಗರದ ಬಹುತೇಕ ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು ನವರಾತ್ರಿ ಹಬ್ಬಕ್ಕೆ ದಾಂಡಿಯಾ ನೃತ್ಯಗಳನ್ನು ಆಯೋಜಿಸುತ್ತವೆ.

ಈಗ ನಗರದಲ್ಲೂ ಅನೇಕ ಸಂಘಟನೆಗಳು ದಾಂಡಿಯಾ, ಗರಬಾ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಅರಮನೆ ಮೈದಾನದಲ್ಲಿ ಅಕ್ಟೋಬರ್‌ 9ರವೆರೆಗೆ ಗರಬಾ ಮತ್ತು ದಾಂಡಿಯಾ ರಾಸ್‌ ಉತ್ಸವ ನಡೆಯಲಿದೆ.

ಮಹಿಳೆಯರು, ಪುರುಷರು  ಗುಜರಾತಿನ ಸಾಂಪ್ರದಾಯಿಕ ಉಡುಗೆ ತೊಟ್ಟು, ನೂರಾರು ಮಂದಿ ವೃತ್ತಾಕಾರದಲ್ಲಿ ಹೆಜ್ಜೆ ಹಾಕುವುದನ್ನು ನೋಡುವುದೇ ಚಂದ. ಗರಬಾ ನೃತ್ಯವನ್ನು ಪೂಜೆಗೆ ಮೊದಲು ಮಾಡಿದರೆ, ದಾಂಡಿಯಾವನ್ನು ಪೂಜೆಯ ನಂತರ ಮಾಡುತ್ತಾರೆ. ದಾಂಡಿಯಾ ನೃತ್ಯದಲ್ಲಿ ಕೋಲುಗಳೇ ಪ್ರಧಾನ. ಎರಡು ಬಗೆ ನೃತ್ಯಗಳಲ್ಲೂ ದುರ್ಗೆ ಹಾಗೂ ಮಹಿಷಾಸುರನ ನಡುವೆ ನಡೆದ ಯುದ್ಧದ ಚಿತ್ರಣವಿರುತ್ತದೆ. ದುಷ್ಟ ಶಕ್ತಿಯ ಮೇಲೆ ವಿಜಯವನ್ನು ಈ ನೃತ್ಯಗಳು ಪ್ರತಿನಿಧಿಸುತ್ತವೆ ಎಂದು ಹೇಳುತ್ತಾರೆ ಅರಮನೆ ಮೈದಾನದ ದಾಂಡಿಯಾ ರಾಸ್‌ ಆಯೋಜಕ ರಾಜೇಶ್‌.

ಈ ಉತ್ಸವದಲ್ಲಿ ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಇದರಲ್ಲಿ ಎಲ್ಲಾ ಸಮುದಾಯದ ಜನರು ಭಾಗವಹಿಸಿ, ಎಲ್ಲರ ಜೊತೆ ಸೇರಿಕೊಂಡು ಹೆಜ್ಜೆ ಹಾಕಬಹುದು. ಗುಜರಾತಿ, ಮಾರ್ವಾಡಿಗಳಲ್ಲಿ ಹೆಚ್ಚಿನವರು ವ್ಯಾಪಾರಿಗಳೇ. ನವರಾತ್ರಿಗೆ ಒಂಬತ್ತು ದಿನ ಉಪವಾಸ, ವ್ರತ ಆಚರಣೆ ಮಾಡುತ್ತಾರೆ. ಸಂಜೆ ವೇಳೆಗೆ ಎಲ್ಲರೂ ಜೊತೆ ಸೇರಿಕೊಂಡು ದಾಂಡಿಯಾಕ್ಕೆ ಹೆಜ್ಜೆ ಹಾಕುತ್ತಾರೆ. ಮೊದಲು ಗುಜರಾತ್‌ನಲ್ಲಿ ಮಾತ್ರ ದಾಂಡಿಯಾ ಮಾಡುತ್ತಿದ್ದರು. ಈಗ ಎಲ್ಲೆಡೆ ದಾಂಡಿಯಾ ನೃತ್ಯ ಜನಪ್ರಿಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಊರು ನೆನಪಾಗುತ್ತದೆ ಎನ್ನುತ್ತಾರೆ ಅವರು.

ಈ ಉತ್ಸವವು ಪ್ರತಿದಿನ ರಾತ್ರಿ 7ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಡೆಯುತ್ತದೆ. ಇದರಲ್ಲಿ ವಯಸ್ಸಿನ ಭೇದವಿಲ್ಲದೇ ಹಿರಿಯರು, ಮಕ್ಕಳು ಗುಂಪು ಕಟ್ಟಿಕೊಂಡು ಹಾಡಿಗೆ ನೃತ್ಯ ಮಾಡುವುದನ್ನು ನೋಡುವುದೇ ಚಂದ. ನೃತ್ಯವಷ್ಟೇ ಅಲ್ಲ, ಇಲ್ಲಿನ ಮಳಿಗೆಗಳಲ್ಲಿ ಗುಜರಾತ್‌, ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ಕೆಲ  ಸಾಂಪ್ರದಾಯಿಕ ತಿಂಡಿಗಳ ರುಚಿ ಸವಿಯಬಹುದು. ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಭಾಗವಹಿಸಬಹುದು. ಸಂಜೆಯಾಗುತ್ತಿದ್ದಂತೆ ಹಾಡು, ನೃತ್ಯದ ವರ್ಣಮಯ ಲೋಕ ಇಲ್ಲಿ ತೆರೆದುಕೊಳ್ಳುತ್ತದೆ. 

ಅಕ್ಟೋಬರ್‌ 9ರಂದು ಗುಜರಾತ್‌ನ ಖ್ಯಾತ ಹಿನ್ನೆಲೆ ಗಾಯಕ ಜಿಗ್ನೇಶ್‌ ಕವಿರಾಜ್‌, ಗಾಯಕಿ ಕಾಜಲ್‌ ಮೆಹರಿಯಾ, ವಿಶಾಲ್‌ ಕವಿರಾಜ್‌ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ದಾಂಡಿಯಾ ವಿಶೇಷ

ಮಹದೇವಪುರದ ವಿ.ಆರ್‌ ಬೆಂಗಳೂರು ಮಾಲ್‌ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ದಾಂಡಿಯಾ ರಾಸ್‌ ನಡೆಯಲಿದೆ. ಇಲ್ಲಿ ನಗರದ ಪ್ರಸಿದ್ಧ ನೃತ್ಯ ತಂಡಗಳು ಗಾರ್ಭಾ ನೃತ್ಯಕ್ಕೆ ಹೆಜ್ಜೆ ಹಾಕಲಿದ್ದಾರೆ. ಗುಜರಾತಿ ಗಾರ್ಭಾ ಹಾಡುಗಾರರು ಭಾಗವಹಿಸಲಿರುವುದು ವಿಶೇಷ. ಬಾಲಿವುಡ್‌ನ ಹಾಡುಗಳಿಗೆ ಎಲ್ಲರೂ ಇಲ್ಲಿ ಹೆಜ್ಜೆ ಹಾಕಬಹುದು. ದಾಂಡಿಯಾದ ಜೊತೆಗೆ ಕರ್ನಾಟಕದ ಜಾನಪದ ನೃತ್ಯ ಕೋಲಾಟ ಹಾಗೂ ವೀರಗಾಸೆಗಳ ಪ್ರದರ್ಶನ ಇಲ್ಲಿ ನಡೆಯಲಿದೆ.

ಇದನ್ನೂ ಓದಿ: ಗುಜರಾತಿ ನೃತ್ಯ, ಪೂಜೆ

Post Comments (+)