ಅವಕಾಶವಾದಿ ರಾಜಕಾರಣಿ ಶ್ರೀನಿವಾಸ ಪ್ರಸಾದ್‌ ವರ್ಚಸ್ಸು ಕುಂದಿದೆ

ಶನಿವಾರ, ಏಪ್ರಿಲ್ 20, 2019
32 °C
ಮಾಧ್ಯಮ ಸಂವಾದದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆರ್‌. ಧ್ರುವನಾರಾಯಣ ಹೇಳಿಕೆ

ಅವಕಾಶವಾದಿ ರಾಜಕಾರಣಿ ಶ್ರೀನಿವಾಸ ಪ್ರಸಾದ್‌ ವರ್ಚಸ್ಸು ಕುಂದಿದೆ

Published:
Updated:
Prajavani

ಚಾಮರಾಜನಗರ: ‘ವಿ.ಶ್ರೀನಿವಾಸ್‌ ಪ್ರಸಾದ್‌ ಅವಕಾಶವಾದಿ ರಾಜಕಾರಣಿ. ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂಬುದು ಕ್ಷೇತ್ರದ ಮತದಾರರಿಗೆ ಗೊತ್ತು. ಈ ಹಿಂದೆ ಅವರಿಗೆ ವರ್ಚಸ್ಸು ಇತ್ತು. ಈಗ ಇಲ್ಲ’ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಹಾಲಿ ಸಂಸದ ಆರ್‌. ಧ್ರುವನಾರಾಯಣ ಅವರು ಬುಧವಾರ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶ್ರೀನಿವಾಸ್‌ ಪ್ರಸಾದ್‌ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದರಿಂದ ಅವರು ನನ್ನ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ’ ಎಂದು ಹೇಳಿದರು.

ಧ್ರುವ ಕುತಂತ್ರಿ ರಾಜಕಾರಣಿ ಎಂದು ಶ್ರೀನಿವಾಸ ಪ್ರಸಾದ್‌ ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ಅವರು ಕಾಂಗ್ರೆಸ್‌ ಪಕ್ಷದಲ್ಲಿ ಇರುವವರೆಗೂ ನನ್ನನ್ನು ಅವರು ಹಾಡಿ ಹೊಗಳುತ್ತಿದ್ದರು. 2013ರ ವಿಧಾನಸಭಾ ಚುನಾವಣೆ ನಂತರ ಸಾರ್ವಜನಿಕ ಸಭೆಯಲ್ಲಿ ‘ಧ್ರುವನಿಂದಾಗಿ ಗೆದ್ದೆ’ ಎಂದು ಹೇಳಿದ್ದರು. ‘ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಧ್ರುವನೇ ಉತ್ತರಾಧಿಕಾರಿ’ ಎಂದು ಮಾಧ್ಯಮಗಳ ಮುಂದೆಯೇ ಹೇಳಿಕೆ ನೀಡಿದ್ದರು’ ಎಂದು ಉತ್ತರಿಸಿದರು.

ಸಿದ್ದರಾಮಯ್ಯ, ಎಚ್‌.ಸಿ.ಮಹದೇವಪ್ಪ ಅವರನ್ನು ಸೋಲಿಸಿ ಆಯಿತು; ನಂಜನಗೂಡಿನ ಉಪಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ ಧ್ರುವನಾರಾಯಣಗೆ ಪಾಠ ಕಲಿಸಲು ಸ್ಪರ್ಧಿಸುತ್ತಿರುವುದಾಗಿ ಪ್ರಸಾದ್‌ ಹೇಳುತ್ತಿರುವ ಬಗ್ಗೆ ಕೇಳಿದ್ದಕ್ಕೆ, ‘ಚಾಮುಂಡೇಶ್ವರಿ ಮತ್ತು ತಿ.ನರಸೀಪುರದಲ್ಲಿ ಗೆದ್ದಿದ್ದು ಜೆಡಿಎಸ್‌ ಅಭ್ಯರ್ಥಿಗಳು. ಇವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿತ್ತಲ್ಲಾ? ಎರಡೂ ಕಡೆಗಳಲ್ಲಿ ಅವರು ಠೇವಣಿ ಕಳೆದುಕೊಂಡಿದ್ದಾರೆ. ಬೇರೆ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದು ಅವರ ಸಾಧನೆಯೇ? ‘ಪಕ್ಷಾಂತರಿ ಆಗಿರಬಹುದು, ತತ್ವಾಂತರಿ ಅಲ್ಲ’ ಎಂದು ಅವರು ಹೇಳಿದ್ದನ್ನು ಕೇಳಿದ್ದೇನೆ. ಒಂದು ವೇಳೆ ಈ ಎರಡು ಕ್ಷೇತ್ರದಲ್ಲಿ ಅವರು ಒಳ ಒಪ್ಪಂದ ಮಾಡಿಕೊಂಡಿದ್ದೇ ನಿಜವಾಗಿದ್ದರೆ, ಬುದ್ಧ, ಬಸವ‌, ಅಂಬೇಡ್ಕರ್‌ ಅವರ ಅನುಯಾಯಿಗಳು ಮಾಡುವ ಕೆಲಸವೇ ಇದು? ರಾಜಕಾರಣ ಯಾವತ್ತೂ ನೇರವಾಗಿ ಇರಬೇಕು’ ಎಂದು ಪ್ರತಿಕ್ರಿಯಿಸಿದರು.

‘ನಂಜನಗೂಡು ಉಪಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸಮೀಕ್ಷೆ ಮಾಡಿಸಿದ್ದರು. ಕಳಲೆ ಕೇಶವಮೂರ್ತಿ ನಿಂತರೆ ಜಯ ಸಿಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜೆಡಿಎಸ್‌ನಲ್ಲಿದ್ದ ಕೇಶವಮೂರ್ತಿ ಅವರನ್ನು ಪಕ್ಷಕ್ಕೆ ಕರೆ ತಂದೆ. ಪ್ರಸಾದ್‌ ಅವರು ಪಕ್ಷದಲ್ಲಿ ಇರುವರೆಗೂ ಅವರನ್ನು ಬೆಂಬಲಿಸಿದ್ದೆ. ಪಕ್ಷದ ಕಾರ್ಯಕರ್ತನಾಗಿ ನನ್ನ ಪಕ್ಷಕ್ಕೆ ನಿಷ್ಠನಾಗಿರಬೇಕಾಗಿದ್ದು ನನ್ನ ಕರ್ತವ್ಯ’ ಎಂದು ಹೇಳಿದರು.

ಮುನಿಸಿಲ್ಲ: ‘ಎಚ್‌.ಸಿ.ಮಹದೇವಪ್ಪ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯವಿಲ್ಲ. ಅವರಿಗೆ ಮೈಸೂರು ಉಸ್ತುವಾರಿ ಹೊಣೆ ವಹಿಸಲಾಗಿದೆ. ಹಾಗಾಗಿ ಅಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ತಿ.ನರಸೀಪುರದಲ್ಲಿ ನನ್ನ ಪರವಾಗಿ ಅವರು ಪ್ರಚಾರ ಮಾಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಿ.ಪುಟ್ಟರಂಗಶೆಟ್ಟಿ ಅವರಿಗೆ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ. ಅವರು ಕೂಡ ಪ್ರಚಾರ ನಡೆಸುತ್ತಿದ್ದಾರೆ’ ಎಂದರು.

ಮುನ್ನಡೆ ಖಚಿತ: ‘ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಎಂಟು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್‌ ಗೆದ್ದಿದ್ದರೂ ಕಾಂಗ್ರೆಸ್‌ ಅಭ್ಯರ್ಥಿಗಳು ಒಟ್ಟಾಗಿ 1.70 ಲಕ್ಷ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಮತಗಳಿಕೆಯಲ್ಲಿ ನಮಗೆ ಯಾವುದೇ ನಷ್ಟವಾಗಿಲ್ಲ. ಈ ಚುನಾವಣೆಯಲ್ಲೂ ಅದು ಪುನರಾವರ್ತನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಲಿತ ಮತಗಳು ವಿಭಜನೆಯಾಗಲಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಧ್ರುವನಾರಾಯಣ, ‘ಕ್ಷೇತ್ರದ ದಲಿತರು ಪ್ರಬುದ್ಧರಾಗಿದ್ದಾರೆ. ಓದಿದವರು. ಯಾರು ಕೆಲಸ ಮಾಡಿದ್ದಾರೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು’ ಎಂದು ಹೇಳಿದರು. ಬಿಎಸ್‌ಪಿ ಸ್ಪರ್ಧೆಯಿಂದ ಪಕ್ಷಕ್ಕೆ ನಷ್ಟವೇನೂ ಇಲ್ಲ ಎಂದೂ ಹೇಳಿದರು.

ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ವಿವರಿಸಿದ ಅವರು, ‘ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಕೇಂದ್ರೀಯ ವಿದ್ಯಾಲಯ, ಎರಡು ಏಕಲವ್ಯ ಶಾಲೆಗಳು, ಪ್ರತಿ ತಾಲ್ಲೂಕಿನಲ್ಲಿ ಆದರ್ಶ ಶಾಲೆಗಳ ಸ್ಥಾಪನೆಗೆ ಶ್ರಮಿಸಿದ್ದೇನೆ. ರಾಜ್ಯ ಸರ್ಕಾರದಿಂದ ಕೃಷಿ ಕಾಲೇಜು ಹಾಗೂ ಕಾನೂನು ಕಾಲೇಜು ಮಂಜೂರು ಮಾಡಲು ಪ್ರಯತ್ನಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೂ ಕ್ರಮ ಕೈಗೊಂಡಿದ್ದೇನೆ. ಮೂರು ಕಡೆ ಹೆರಿಗೆ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಕ್ರಮ ವಹಿಸಿದ್ದೇನೆ. ಕಣ್ಣಿಗೆ ಕಾಣಿಸುವಂತಹ ಹಲವು ಕೆಲಸಗಳನ್ನು ಮಾಡಿದ್ದೇನೆ’ ಎಂದರು.

ಗ್ರಾಮೀಣ ಪ್ರದೇಶಗಳಿಗೆ ಏನೂ ಮಾಡಿಲ್ಲ ಎಂಬ ಆರೋಪದ ಬಗ್ಗೆ ಪ್ರಶ್ನೆ ಕೇಳಿದಾಗ, ‘ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಶಾಶ್ವತ ಕುಡಿಯುವ ನೀರಿನ ಯೋಜನೆ. ಇವೆಲ್ಲವೂ ಗ್ರಾಮಗಳನ್ನು ಕೇಂದ್ರೀಕರಿಸಿದ ಯೋಜನೆಗಳು. ಅವುಗಳ ಅನುಷ್ಠಾನಕ್ಕೂ ಕ್ರಮ ಕೈಗೊಂಡಿದ್ದೇನೆ’ ಎಂದು ಉತ್ತರಿಸಿದರು.

ಕೈಗಾರಿಕೆಗಳಿಗೆ ಒತ್ತು ನೀಡುವ ಗುರಿ
ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಧ್ರುವನಾರಾಯಣ, ‘ಕೃಷಿ ಪ್ರಧಾನವಾದ ಈ ಜಿಲ್ಲೆಯಲ್ಲಿ ಕೃಷಿಗೆ ಹೆಚ್ಚು ಉತ್ತೇಜನ ನೀಡುವ ಗುರಿ ಇದೆ. ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುತ್ತೇನೆ. ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದು, ಆ ಬಗ್ಗೆಯೂ ಹೆಚ್ಚು ಒತ್ತು ಕೊಡಬೇಕು. ಮೂಲ ಸೌಕರ್ಯಗಳ ಅಭಿವೃದ್ಧಿಗೂ ಗಮನ ಹರಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಮತ್ತೆ ಸ್ಪರ್ಧಿಸುತ್ತಿದ್ದೇನೆ. ಮತದಾರರು ಬೆಂಬಲಿಸುವ ವಿಶ್ವಾಸವಿದೆ’ ಎಂದರು.

ಮೋದಿ ಸರ್ಕಾರದಲ್ಲೇ ಹೆಚ್ಚು ಭಯೋತ್ಪಾದಕ ದಾಳಿ
ನರೇಂದ್ರ ಮೋದಿ ಅವರ ನೇತೃತ್ವದ ಐದು ವರ್ಷಗಳ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿವೆ ಎಂದು ಅವರು ಆರೋಪಿಸಿದರು.

‘ಈ ಸಮಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರು ಒಳನುಸುಳಿದ್ದಾರೆ. ಸೇನಾ ನೆಲೆಗಳ ಮೇಲೆಯೇ ದಾಳಿ ನಡೆಸಿದ್ದಾರೆ. ದೇಶದ ಭದ್ರತೆಯ ಬಗ್ಗೆ ಮಾತನಾಡುವವರು ಒಬ್ಬ ಭಯೋತ್ಪಾದಕನನ್ನೂ ದೇಶದ ಒಳಕ್ಕೆ ಬಿಡಬಾರದು. ಅಂತಹದ್ದರಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಾರೆ ಅಂದರೆ, ಗುಪ್ತಚರ ಇಲಾಖೆಯ ವೈಫಲ್ಯವಲ್ಲವೇ’ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

‘ದೇಶಭಕ್ತಿ, ದೇಶರಕ್ಷಣೆ ಮುಂತಾದ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಬಿಜೆಪಿಯವರು ಯುವಜನರನ್ನು ಸೆಳೆಯುತ್ತಿದ್ದಾರೆ. ದೇಶಭಕ್ತಿ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಮೊದಲಿನಿಂದಲೂ ಮತಕೇಳುತ್ತಲೇ ಬಂದಿದೆ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !