ಧ್ರುವನಾರಾಯಣ ನಾಮಪತ್ರ ಸಲ್ಲಿಕೆ, ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ರೋಡ್‌ ಷೋ

ಮಂಗಳವಾರ, ಏಪ್ರಿಲ್ 23, 2019
31 °C
ದೇವಾಲಯಗಳಲ್ಲಿ ವಿಶೇಷ ಪೂಜೆ

ಧ್ರುವನಾರಾಯಣ ನಾಮಪತ್ರ ಸಲ್ಲಿಕೆ, ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ರೋಡ್‌ ಷೋ

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಸಂಸದ ಆರ್‌.ಧ್ರುನಾರಾಯಣ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ 11.30ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಆರ್‌.ನರೇಂದ್ರ, ಡಾ.ಯತೀಂದ್ರ ಮತ್ತು ಅನಿಲ್‌ ಕುಮಾರ್‌ ಅವರೊಂದಿಗೆ ಬಂದ ಧ್ರುವನಾರಾಯಣ ಅವರು, ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ದೇವಾಲಯಗಳಲ್ಲಿ ಪೂಜೆ: ನಾಮಪತ್ರ ಸಲ್ಲಿಕೆಗೂ ಮುನ್ನ ಧ್ರುವನಾರಾಯಣ ಅವರು ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ತಮ್ಮ ಮನೆ ದೇವರು ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

ಆ ಬಳಿಕ, ಚಾಮರಾಜನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನ, ಕೊಳದ ಗಣಪತಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ನಗರದಲ್ಲಿರುವ ತಾರನಾಥ ಬೌದ್ಧ ವಿಹಾರಕ್ಕೆ ಭೇಟಿ ನೀಡಿ, ಬುದ್ಧ ನಮನ ಸಲ್ಲಿಸಿದರು.

ರೋಡ್‌ ಷೋ: ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಜಿಲ್ಲಾಡಳಿತ ಭವನದ ಗೇಟಿನವರೆಗೆ ಧ್ರುವನಾರಾಯಣ ಅವರು ರೋಡ್‌ ಷೋ ನಡೆಸಿದದರು. ತೆರೆದ ವಾಹನದಲ್ಲಿ ಪಕ್ಷದ ಮುಖಂಡರು, ಶಾಸಕರೊಂದಿಗೆ ನಿಂತಿದ್ದ ಧ್ರುವನಾರಾಯಣ ಅವರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ನಮಸ್ಕರಿಸುತ್ತಾ, ಕೈಬೀಸುತ್ತಾ ಮುಂದೆ ಸಾಗಿದರು.

ಚಾಮರಾಜನಗರ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೇರಳ ಚೆಂಡೆ, ಬ್ಯಾಂಡ್‌ ಸೆಟ್‌, ಸ್ಯಾಕ್ಸೊಫೋನ್‌ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಭಾಗಿ: ನಾಮಪತ್ರ ಸಲ್ಲಿಸುವ ವೇಳೆ, ಕಾಂಗ್ರೆಸ್‌ನ ಮೈತ್ರಿ ಪಕ್ಷವಾದ ಜೆಡಿಎಸ್‌ನ ಯಾವುದೇ ಸಚಿವರು ಉಪಸ್ಥಿತರಿಲ್ಲದಿದ್ದರೂ ರೋಡ್‌ ಷೋನಲ್ಲಿ ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಕಾಮರಾಜ್‌ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಕಾಂಗ್ರೆಸ್‌ ಪಕ್ಷದ ಧ್ವಜದ ಜೊತೆಗೆ ಜೆಡಿಎಸ್‌ ಬಾವುಟಗಳೂ ಕಂಡು ಬಂದವು.

ಭಾರಿ ಅಂತರದ ಗೆಲುವು: ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಧ್ರುವನಾರಾಯಣ ಅವರು, ‘ಕಳೆದ ಚುನಾವಣೆಯಲ್ಲಿ 1.41 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೆ. ಈ ಬಾರಿ ಅದಕ್ಕಿಂತಲೂ ಹೆಚ್ಚು ಅಂತರದಿಂದ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಮೈತ್ರಿ ಸರ್ಕಾರದ ಜೆಡಿಎಸ್‌ ಸಚಿವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬರದಿರುವ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮಂಡ್ಯದಲ್ಲಿ ನಿಖಿಲ್‌ ಅವರು ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗುತ್ತಿರುವುದರಿಂದ ಬರುವುದಕ್ಕೆ ಆಗುತ್ತಿಲ್ಲ ಎಂದು ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌ ಮತ್ತು ಸಿ.ಎಸ್‌.ಪುಟ್ಟರಾಜು ಅವರು ಹೇಳಿದ್ದಾರೆ. ಅವರು ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾರೆ. ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಮುಖಂಡರು ಜೊತೆಗೆ ಬಂದಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಎ.ಆರ್.ಕೃಷ್ಣಮೂರ್ತಿ, ಎಸ್‌. ಬಾಲರಾಜ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.

‘ಪ್ರಚಾರಕ್ಕೆ ಜೆಡಿಎಸ್‌ ಮುಖಂಡರು’

‘ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌ ಸೇರಿದಂತೆ ಹಲವು ಜೆಡಿಎಸ್‌ ಮುಖಂಡರು ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನೂ ಪ್ರಚಾರಕ್ಕೆ ಬರುವಂತೆ ಕೇಳಿಕೊಂಡಿದ್ದೇವೆ. ಅವರೂ ಬರುವ ಸಾಧ್ಯತೆ ಇದೆ’ ಎಂದು ಆರ್‌.ಧ್ರುವನಾರಾಯಣ ಹೇಳಿದರು.

‘ಹಿರಿತನಕ್ಕೆ ಶೋಭೆ ಅಲ್ಲ’

‘ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಅವರು ಕೆ‌ಟ್ಟ ಪದಗಳಿಂದ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ಅವರು ಕಾಂಗ್ರೆಸ್‌ನಲ್ಲಿದ್ದಾಗ ನನ್ನನ್ನು ಹೊಗಳುತ್ತಿದ್ದರು. ಈಗ ನನ್ನನ್ನು ಕುತಂತ್ರಿ ಎಂದು ಹೇಳುತ್ತಿದ್ದಾರೆ. ನಾನು ಬೆಳೆದುಬಂದಿರುವ ಬಗೆ ಮತ್ತು ಮಾಡಿರುವ ಅಭಿವೃದ್ಧಿ ಕೆಲಸಗಳು ಏನು ಎನ್ನುವುದು ಜನರಿಗೆ ಗೊತ್ತು. ಅವರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ’ ಎಂದು ಧ್ರುವನಾರಾಯಣ ಹೇಳಿದರು.

2009ರಲ್ಲಿ ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿದ್ದು ತಾವೇ ಎಂದು ಶ್ರೀನಿವಾಸ ಪ್ರಸಾದ್‌ ಹೇಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ. ಬೇಕಾದರೆ ಶ್ರೀನಿವಾಸ ಪ್ರಸಾದ್‌ ಅವರನ್ನೇ ಕೇಳಿ’ ಎಂದು ಹೇಳಿದರು.

ಬಿಸಿಲಿನಲ್ಲಿ ಬಸವಳಿದ ಕಾರ್ಯಕರ್ತರು

ಸಾವಿರಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರ‌ನ್ನು ನೆತ್ತಿ ಸುಡುವ ಬಿಸಿಲು ಬಸವಳಿಯುವಂತೆ ಮಾಡಿತು.

10.30ರ ಸುಮಾರಿಗೆ ಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಯಿತು. ಕಾರ್ಯಕರ್ತರು ಬಿಸಿಲಿನಲ್ಲೇ ಜಿಲ್ಲಾಡಳಿತ ಭವನದತ್ತ ಹೆಜ್ಜೆ ಹಾಕಿದರು. ಪ್ರಮುಖ ಮುಖಂಡರು ತೆರೆದ ವಾಹನದಲ್ಲಿದ್ದರೆ, ಉಳಿದ ಕೆಲವು ಮುಖಂಡರು ವಾಹನ ಇಲ್ಲವೇ ನಡೆದುಕೊಂಡೇ ಮೆರವಣಿಗೆಯಲ್ಲಿ ಭಾಗವಹಿಸಿದರು. 

ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟಿನಲ್ಲೇ ಪೊಲೀಸರು ಕಾರ್ಯಕರ್ತರು ಹಾಗೂ ಮುಖಂಡರನ್ನು ತಡೆದರು. ಒಳಗಡೆ ಅಭ್ಯರ್ಥಿ ಧ್ರುವನಾರಾಯಣ, ಉಸ್ತುವಾರಿ ಸಚಿವರು ಹಾಗೂ ಮೂವರು ಶಾಸಕರಿಗೆ ಮಾತ್ರ ಜಿಲ್ಲಾಧಿಕಾರಿ ಕಚೇರಿಗೆ ಹೋಗಲು ಅವಕಾಶ ನೀಡಲಾಯಿತು. ಹಾಗಾಗಿ ಮುಖಂಡರು ಹಾಗೂ ಕಾರ್ಯಕರ್ತರು  ಸುಮಾರು ಒಂದು ಗಂಟೆ ಕಾಲ ರಸ್ತೆಯಲ್ಲೇ ನಿಲ್ಲಬೇಕಾಯಿತು. ಹಿರಿಯರು ನೆರಳಿಗಾಗಿ ಹುಡುಕಾಡಿದರು. ಕೆಲವರು  ಸಮೀಪದ ಅಂಗಡಿಗಳ ಎದುರಿನ ಚಾವಣಿ ನೆರಳಿನಲ್ಲಿ ನಿಂತುಕೊಂಡರು. ಸ್ವಲ್ಪ ಸಮಯದ ನಂತರ ಕೆಲವು ಮುಖಂಡರು ಪೊಲೀಸರ ಅನುಮತಿ ಪಡೆದು ಜಿಲ್ಲಾಡಳಿತ ಭವನದತ್ತ ಸಾಗಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !