ಶನಿವಾರ, ಡಿಸೆಂಬರ್ 7, 2019
22 °C
ವಿಶ್ವ ಅಂಗವಿಕಲರ ದಿನಾಚರಣೆ

ಮೀಸಲು ಅನುದಾನ ಪರಿಣಾಮಕಾರಿ ಬಳಕೆ ಸವಾಲು: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ‘ಸರ್ಕಾರವು ಎಲ್ಲ ಇಲಾಖೆಗಳ ಅಡಿಯಲ್ಲಿ ಅಂಗವಿಕಲರಿಗೆ ಮೀಸಲಾಗಿರುವ ಅನುದಾನವನ್ನು ಶೇ 3ರಿಂದ ಶೇ 5ಕ್ಕೆ ಹೆಚ್ಚಿಸಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಸವಾಲು ಜಿಲ್ಲಾಡಳಿತದ ಮುಂದಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೋಮವಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜೆ.ಎಚ್‌. ಪಟೇಲ್‌ ಸಣಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 21 ಸಾವಿರದಷ್ಟು ಅಂಗವಿಕಲರಿದ್ದಾರೆ. ಇಲಾಖೆಗಳು ಮೀಸಲಿಟ್ಟಿರುವ ಶೇ 5ರಷ್ಟು ಅನುದಾನ ಮತ್ತು ಉದ್ಯೋಗದಲ್ಲಿ ನೀಡಲಾಗಿರುವ ಶೇ 3ರಷ್ಟು ಮೀಸಲಾತಿಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದರೆ, ಅಂಗವಿಕಲರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ’ ಎಂದರು.

ನಗರದಲ್ಲೂ ಪುನರ್ವಸತಿ ಕಾರ್ಯಕರ್ತರು: ‘ಇಲಾಖೆಗಳು ನೀಡುತ್ತಿರುವ ಸೌಲಭ್ಯಗಳನ್ನು ಅಂಗವಿಕಲರಿಗೆ ತಲುಪಿಸಲು ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಮಟ್ಟದಲ್ಲಿ ಪುನರ್ವಸತಿ ಕಾರ್ಯಕರ್ತರು ಇರುವಂತೆ, ನಗರ ಪ್ರದೇಶದಲ್ಲೂ ಕಾರ್ಯಕರ್ತರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

ನಿರ್ವಹಣೆ ವೆಚ್ಚ ಏರಿಕೆ: ‘ಶೇ 40ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಪ್ರತಿ ತಿಂಗಳು ನೀಡಲಾಗುತ್ತಿದ್ದ ನಿರ್ವಹಣಾ ವೆಚ್ಚವನ್ನು ₹500ರಿಂದ ₹600ಕ್ಕೆ ಹೆಚ್ಚಿಸಲಾಗಿದೆ. ಶೇ 75ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ನೀಡುತ್ತಿರುವ ವೆಚ್ಚವನ್ನು ₹1,200ರಿಂದ ₹1,400ಕ್ಕೆ ಹೆಚ್ಚಿಸಲಾಗಿದೆ’ ಎಂದು ಅವರು ಹೇಳಿದರು.

‘ಅಂಗವಿಕಲರಿಗೆ ಸಾಲಸೌಲಭ್ಯ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತಿವೆ. ಈ ಬಗ್ಗೆಯೂ ಜಿಲ್ಲಾಡಳಿತ ಕ್ರಮ ವಹಿಸಲಿದೆ’ ಎಂದರು.

ನೋಂದಣಿ ಮಾಡಿಕೊಳ್ಳಿ: ‘ಮುಂಬರುವ ಲೋಕಸಭಾ ಚುನಾವಣೆಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ ಅಂಗವಿಕಲರೂ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌ ಅವರು ಮಾತನಾಡಿ, ‘ಎರಡು ವರ್ಷಗಳಿಂದ ಜಿಲ್ಲಾಡಳಿತ ಅಂಗವಿಕಲರ ಬಗ್ಗೆ ವಿಶೇಷ ಗಮನ ನೀಡುತ್ತಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇನ್ನೊಮ್ಮೆ ಸಭೆ ಕರೆದು ಅಂಗವಿಕಲರ ಸಮಸ್ಯೆಗಳು ಹಾಗೂ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಅಸಾಧ್ಯವಾದ ಸಾಧನೆ ಮಾಡಬಲ್ಲ ಚೈತನ್ಯ ಅಂಗವಿಕಲರಲ್ಲಿದೆ. ಎವರೆಸ್ಟ್‌ ಕೂಡ ಏರಿದವರಿದ್ದಾರೆ. ಯಾವತ್ತೂ ಅವರು ನಿರಾಸೆ ಪಡಬಾರದು, ಆತ್ಮವಿಶ್ವಾಸ ಕಳೆದುಕೊಳ್ಳಬಾರದು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಾತನಾಡಿದರು. 

ಸನ್ಮಾನ: ಉತ್ತಮವಾಗಿ ಕಾರ್ಯನಿರ್ವಹಿಸಿದ ಆರು ಮಂದಿ ಪುನರ್ವಸತಿ ಕಾರ್ಯಕರ್ತರನ್ನು ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡೆ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ಗಣ್ಯರು ವಿತರಿಸಿದರು. ದೀಪಾ ಅಂಧರ ಶಾಲೆಯ ಮಕ್ಕಳು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಕೆ. ಬೊಮ್ಮಯ್ಯ, ಕೆರೆಹಳ್ಳಿ ನವೀನ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾಗಸುಂದರಮ್ಮ, ಆಶಾ, ಕುಮಾರನಾಯಕ, ಅಂಗವಿಕಲರ ಕಲ್ಯಾಣಾಧಿಕಾರಿ ದೊಡ್ಡಪ್ಪ ಮೂಲಿಮನಿ ಇದ್ದರು.

‘ಪ್ರತ್ಯೇಕ ಕಟ್ಟಡ ಬೇಕು’

ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಮಾತನಾಡಿ, ‘ನಮ್ಮ ಕಾರ್ಯಕ್ರಮಕ್ಕೆ ಶಾಸಕರು, ಸಂಸದರು ಯಾರೂ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೊನ್ನೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಜಿಲ್ಲಾಧಿಕಾರಿ ಅವರು ಅವಕಾಶ ಮಾಡಿಕೊಟ್ಟಿದ್ದರು. ಆಯಾ ಜಿಲ್ಲೆಗಳಲ್ಲಿರುವ ಅಂಗವಿಕಲರಿಗೆ ಮೀಸಲಾಗಿರುವ ಬ್ಯಾಕ್‌ ಲಾಗ್‌ ಹುದ್ದೆ ತುಂಬುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಅವರು ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ’ ಎಂದರು. 

‘ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ನಮ್ಮ ಸಂಘಕ್ಕೆ ಪ್ರತ್ಯೇಕ ಕಟ್ಟಡ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

‘ಸಾಲದ ಮೊತ್ತ ಹೆಚ್ಚಿಸಬೇಕು’

ಜಿಲ್ಲಾ ಪಂಚಾಯಿತಿ‌ ಉಪಾಧ್ಯಕ್ಷ ಜೆ.ಯೋಗೇಶ್‌ ಮಾತನಾಡಿ, ‘ಸರ್ಕಾರ ಅಂಗವಿಕಲರಿಗಾಗಿ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಅದು ಸಾಕಾಗುತ್ತಿಲ್ಲ. ಎಲ್ಲ ಅಂಗವಿಕಲರಿಗೆ ಶಿಕ್ಷಣ ಉದ್ಯೋಗ ಸಿಗುವಂತಾಗಬೇಕು’ ಎಂದು ಹೇಳಿದರು.

ಇಲಾಖೆಯು ಅವರಿಗೆ ವ್ಯಾಪಾರ ಮಾಡಲು ₹15 ಸಾವಿರ ನೀಡುತ್ತಿದೆ. ಇದು ಎಲ್ಲಿಗೂ ಸಾಲುವುದಿಲ್ಲ. ಈ ಮೊತ್ತವನ್ನು ಹೆಚ್ಚಿಸಬೇಕು. ಮನೆ ನಿರ್ಮಾಣಕ್ಕಾಗಿ ₹1.5 ಲಕ್ಷ ನೀಡಲಾಗುತ್ತಿದೆ. ಕನಿಷ್ಠ ₹2.5 ಲಕ್ಷದಿಂದ ₹3 ಲಕ್ಷ ಸಾಲ ಸಿಗಬೇಕು’ ಎಂದರು.

‘ಅಂಗವಿಕಲರಿಗೆ ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಹಾಗಾಗಿ ಇಲಾಖೆಯೇ ಅವರಿಗೆ ಕನಿಷ್ಠ ₹1 ಲಕ್ಷದವರೆಗೆ ಸಾಲ ನೀಡಲು ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ನಿಗಮವನ್ನೇ ಸ್ಥಾಪಿಸಬೇಕು’ ಎಂದು ಅವರು ಆಗ್ರಹಿಸಿದರು. 

ಪ್ರತಿಕ್ರಿಯಿಸಿ (+)