ಶುಕ್ರವಾರ, ಮೇ 29, 2020
27 °C

ಪಂಚಮಂದಿರಗಳ ದಿಲ್‌ವಾರಾ

ಸುಭಾಸ ಯಾದವಾಡ Updated:

ಅಕ್ಷರ ಗಾತ್ರ : | |

Prajavani

ಮೌಂಟ್ ಅಬು ಸ್ಥಳದ ಬಗ್ಗೆ ಅವರಿವರಿಂದ ಕೇಳಿದ್ದೆ. ನಾನೂ ಒಮ್ಮೆ ಅಲ್ಲಿಗೆ ಹೋಗಿ ಬರಬೇಕೆಂಬ ಬಯಕೆ ಬಲವಾಗಿತ್ತು. ‘ಅಲ್ಲೊಂದು ಮೀಡಿಯಾ ಕಾನ್ಫರೆನ್ಸ್‌ ಇದೆ. ಹೋಗಿಬರೋಣ ಸಿದ್ಧರಾಗಿ’ ಎಂದು ಗೆಳೆಯ ತಿಮ್ಮಾಪುರ ಹೇಳಿದಾಗ ಖುಷಿಯಾಯಿತು. ನಮ್ಮೊಂದಿಗೆ ಜಂಬುನಾಥ್ ಕಂಚ್ಯಾಣಿ ಹಾಗೂ ಸಿದ್ಧಲಿಂಗ ಹದಿಮೂರ ಕೂಡ ಹೊರಟರು.

ವಿಜಯಪುರದಿಂದ ಮಿರಜ್‌ವರೆಗೆ ಬಸ್ಸು, ಅಲ್ಲಿಂದ ಅಬು ರೋಡ್‌ವರೆಗೆ ರೈಲಿನಲ್ಲಿ ಪ್ರಯಾಣಿಸಿದೆವು. ಅಬು ರೋಡ್‌ನನಿಂದ ಟ್ಯಾಕ್ಸಿ ಮೂಲಕ 28 ಕಿ.ಮೀ ದೂರದ ಮೌಂಟ್ ಅಬು ತಲುಪಿದೆವು.

ಬಿರು ಬಿಸಿಲಿನ ರಾಜಸ್ಥಾನದ ಏಕಮೇವ ತಂಪು ಬೆಟ್ಟ ಎಂದರೆ ಮೌಂಟ್‌ ಅಬು. ಪ್ರಾಚೀನ ಕಾಲದಿಂದಲೂ ಅದು ರಾಜ ಮಹಾರಾಜರನ್ನು, ಅಧಿಕಾರಿಗಳನ್ನು, ಪ್ರವಾಸಿಗರನ್ನು ಸೆಳೆದಿರುವ ತಾಣ ಇದು. ಅವರೆಲ್ಲ, ಈ ಜಾಗವನ್ನು ಬೇಸಿಗೆಯ ತಂಗುದಾಣವಾಗಿ ಮಾಡಿಕೊಂಡಿದ್ದರು. ಏಕೆಂದರೆ, ಇಲ್ಲಿ ವರ್ಷದ 12 ತಿಂಗಳೂ ಅಹ್ಲಾದಕರ ವಾತಾವರಣ ಇರುತ್ತದೆ. ಸಮುದ್ರ ಮಟ್ಟದಿಂದ ಸರಾಸರಿ 1222 ಮೀಟರ್‌ ಎತ್ತರವಿರುವ ಈ ಬೆಟ್ಟ ಸಾಲುಗಳಲ್ಲಿ ಅತ್ಯಂತ ಎತ್ತರವಿರುವ ಬೆಟ್ಟ ಗುರುಶಿಖರ. ಇದು 1720 ಮೀಟರ್‌ವರೆಗೂ ಚಾಚಿಕೊಂಡಿದೆ.

ನಾಲ್ಕು ದಿನಗಳ ಸಮಾವೇಶ ಮುಗಿಸಿಕೊಂಡು ಸುತ್ತಮುತ್ತಲಿನ ಪ್ರವಾಸಿತಾಣಗಳನ್ನು ನೋಡಲು ಹೊರಟೆವು. ನಾವು ನೋಡಿದ ತಾಣಗಳಲ್ಲಿ ನಮ್ಮನ್ನು ಕಟ್ಟಿ ಹಾಕಿ ನಿಲ್ಲಿಸಿದ್ದು ದಿಲ್‌ವಾರಾ ಮಂದಿರಗಳು. ಅದು ಮೌಂಟ್ ಅಬುದಿಂದ ಎರಡೂವರೆ ಕಿ.ಮೀ ದೂರದಲ್ಲಿದೆ. ಅಲ್ಲಿ ಸುಂದರವಾದ ಐದು ಮಂದಿರಗಳಿವೆ. ಎಲ್ಲ ಮಂದಿರಗಳನ್ನು ಅಮೃತ ಶಿಲೆಗಳಿಂದ ಕಟ್ಟಲಾಗಿದೆ. ಆ ಮಂದಿರಗಳ ಮೇಲಿನ ಕಲಾಕುಸುರಿ, ವಾಸ್ತು ಶಿಲ್ಪದ ವೈಭವಗಳನ್ನು ನೋಡಿಯೇ ಆನಂದಿಸಬೇಕು.

ದಿಲ್‌ವಾರಾ ಮಂದಿರಗಳು

12ನೇ ಶತಮಾನದಿಂದ 13ನೇ ಶತಮಾನದವರೆಗೆ ಈ ಮಂದಿರಗಳ ನಿರ್ಮಾಣದ ಕಾರ್ಯ ನಡೆದಿತ್ತಂತೆ. ಅಲ್ಲಿನ ಗೋಪುರ, ದ್ವಾರ, ಸ್ತಂಭ, ಮೆಟ್ಟಿಲುಗಳು, ಹಜಾರಾ, ಚಾವಣಿ ಹೀಗೆ ಎಲ್ಲಿ ನೋಡಿದರೂ ಶಿಲ್ಪಕಲೆಯ ಚಿಕ್ಕ ವಿವರಗಳು ತುಂಬ ಜಾಗರೂಕತೆಯಿಂದ ಕಟೆದಿದ್ದಾರೆ. ಅದನ್ನು ನೋಡಲು ನಮ್ಮ ಪ್ರವಾಸಿ ವ್ಯವಸ್ಥಾಪಕರು ಕೊಟ್ಟ ಸಮಯ ಕೇವಲ ಎರಡು ಗಂಟೆ ಮಾತ್ರ. ಆದರೆ, ಎರಡು ದಿನ ನೋಡಿದರೂ ಸಾಲದಷ್ಟು ಸುಂದರ ಕಲಾಕೃತಿಗಳು ಅಲ್ಲಿದ್ದವು. ಮತ್ತೊಮ್ಮೆ ದಿಲ್‌ವಾರಾ ಮಂದಿರಗಳನ್ನು; ಒಂದೆರಡು ದಿನ ಇದ್ದು, ಸಂಪೂರ್ಣ ನೋಡಬೇಕು ಎಂದುಕೊಂಡೆವು.

ಆ ಮಂದಿರಗಳ ಸಮುಚ್ಛಯದಲ್ಲಿ ವಿಮಲ್ ವಸಾಹಿ, ಲೂನಾ ವಸಾಹಿ, ಪಿತ್ತಲ್‍ಹಾರ್, ಪಾರ್ಶ್ವನಾಥ ಹಾಗೂ ಮಹಾವೀರಸ್ವಾಮಿ ಮಂದಿರಗಳಿವೆ. ಮೊದಲನೆಯ ಮಂದಿರ ಮೊದಲ ಜೈನ ತೀರ್ಥಂಕರರಾದ ವೃಷಭದೇವರದು. ಅದನ್ನು ಕಟ್ಟಿಸಿದವರು ವಿಮಲ್ ಶಾ ಎಂಬ ಮಂತ್ರಿ. ಹಾಗಾಗಿ ಅದನ್ನು ವಿಮಲ್ ಹೆಸರಿನಿಂದಲೇ ಕರೆಯುತ್ತಾರೆ. ಎರಡನೆಯ ಮಂದಿರ 22ನೇ ತೀರ್ಥಂಕರರಾದ ನೇಮಿನಾಥನದು. ಅದನ್ನು ಕಟ್ಟಿಸಿದವರು ವಾಸ್ತುಪಾಲ ಹಾಗೂ ತೇಜಪಾಲ ಸಹೋದರರು. ಅವರು ತಮ್ಮ ಅಣ್ಣ ಲೂನಾ ವಸಾಹಿ ನೆನಪಿಗಾಗಿ ಕಟ್ಟಿದ್ದರಿಂದ ಅದನ್ನು ಲೂನಾ ವಸಾಹಿ ಮಂದಿರ ಎಂದು ಕರೆಯುತ್ತಾರೆ. ಮೂರನೆಯ ಮಂದಿರ ಮೊದಲ ತೀರ್ಥಂಕರ ವೃಷಭದೇವರದ್ದು. ಅದನ್ನು ಪಿತ್ತಲ್‍ಹಾರ್ ಮಂದಿರ ಎಂದು ಗುರುತಿಸುತ್ತಾರೆ. ಕೊನೆಯದು ಎಂದರೆ; 24ನೇ ತೀರ್ಥಂಕರರಾದ ಮಹಾವೀರಸ್ವಾಮಿಯದು.

ಅಲ್ಲಾವುದ್ದೀನ ಖಿಲ್ಜಿ ದಾಳಿಯಿಂದ ಈ ಮಂದಿರಗಳು ಹಾಳಾಗಿತ್ತು. ನಂತರದಲ್ಲಿ ಅವುಗಳನ್ನು ದುರಸ್ತಿ ಮಾಡಲಾಗಿದೆಯಂತೆ. ಪ್ರಕೃತಿಯ ಮಡಿಲಲ್ಲಿರುವ ಈ ಮಂದಿರಗಳ ಮೇಲೆ ನಿಸರ್ಗದ ಆಕ್ರಮಣ (ಮಳೆ, ಗಾಳಿ) ಕಡಿಮೆ ಎನ್ನಬಹುದು. ರಾಜಸ್ಥಾನದ ಬೇರೆ ಯಾವುದೋ ಪ್ರದೇಶದಲ್ಲಿ ಈ ಕಲಾಮಂದಿರಗಳಿದ್ದಿದ್ದರೆ, ಇನ್ನೆಷ್ಟು ವಿರೂಪಗೊಳ್ಳುತ್ತದ್ದವೋ ಏನೋ? ‘ಪ್ರಕೃತಿ ಹಾಗೂ ಪರಕೀಯರ ಆಕ್ರಮಣದಿಂದ ತಪ್ಪಿಸಿಕೊಳ್ಳಲೆಂದೇ ಈ ಕಲಾಮಂದಿರಗಳನ್ನು ಮೌಂಟ್‌ ಅಬುದಲ್ಲಿ ನಿರ್ಮಿಸಲಾಯಿತು’ ಎಂದು ಅಲ್ಲಿನ ಮಾರ್ಗದರ್ಶಿ ಒಬ್ಬ ಹೇಳಿದರು.

ನಕ್ಕಿಲೇಕ, ಟೋಡ್‌ರಾಕ್‌

ಪ್ರವಾಸದ ಪ್ಯಾಕೇಜ್‌ ಪ್ರಕಾರ ನಾವು ‘ನಕ್ಕಿಲೇಕ’ ಎಂಬ ಸುಂದರ ಸರೋವರವೊಂದನ್ನು ನೋಡಿದೆವು. ಅದನ್ನು ದೇವತೆಗಳು ತಮ್ಮ ಉಗುರಿನಿಂದ ಕೆರೆದು ನಿರ್ಮಿಸಿದ್ದಾರಂತೆ. ಬಲಿಷ್ಟವಾದ ರಾಕ್ಷಸನ ಹಾವಳಿಯಿಂದ ತಪ್ಪಿಸಿಕೊಳ್ಳಲು ಇದನ್ನು ನಿರ್ಮಿಸಲಾಯಿತಂತೆ ಎಂದು ಸ್ಥಳೀಯರು ಹೇಳಿದರು.

ಅಲ್ಲೊಂದು ಕಪ್ಪೆಯಾಕಾರದ ಬೃಹತ್ ಕಲ್ಲಿದೆ. ಅದನ್ನು ‘ಟೋಡ್ ರಾಕ್’ ಎಂದು ಕರೆಯುತ್ತಾರೆ. ಬ್ರಹ್ಮಕುಮಾರಿಯರ ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರ ಅಲ್ಲಿದೆ. ಅಬು ಪರ್ವತದ ಮೇಲೂ ಅದರ ಕೆಳಗೂ ಆ ಕೇಂದ್ರದ ಹಲವು ವ್ಯವಸ್ಥಿತ ಕಟ್ಟಡಗಳ ಸಮುಚ್ಛಯಗಳಿವೆ. ಎಲ್ಲ ಕಡೆಗೂ ಶುದ್ಧ ಕುಡಿಯುವ ನೀರನ ಘಟಕಗಳಿವೆ. ಸ್ವಚ್ಛತೆ ಕಾಪಾಡಿಕೊಂಡ ಶೌಚಾಲಯಗಳಿವೆ. ವಿಶ್ರಮಿಸಲು ಹಾಕಿದ ತೂಗು ಮಂಚಗಳಿವೆ. ನೆರಳು ಹರಡಿದ ಗಿಡ-ಮರಗಳು ಸೊಂಪಾಗಿವೆ.

ಇವೆಲ್ಲವನ್ನೂ ನೋಡುತ್ತಿದ್ದಾಗ ನನಗೆ ಮೌಂಟ್ ಅಬು ಭೂಮಿಯ ಮೇಲಿನ ಸ್ವರ್ಗ ಎನ್ನಿಸಿತು

(ಚಿತ್ರಗಳು:ಸುಭಾಸ ಯಾದವಾಡ )

ಸುತ್ತ ಇನ್ನೇನಿದೆ ?

ಪಂಚ ದಿಲ್‌ವಾರಾ ಮಂದಿರಗಳ ಜತೆಗೆ, ಸಮೀಪದಲ್ಲೇ ಸುಂದರ ಸೂರ್ಯಾಸ್ತ ವೀಕ್ಷಿಸಬಹುದು. ಇದರ ಜತೆಗೆ ಹನಿಮೂನ್ ಪಾಯಿಂಟ್, ಗುರುಶಿಖರ, ಗೋಮುಖ, ಅಚಲೇಶ್ವರ ಮಹಾದೇವ ಗುಡಿ, ವನ್ಯಜೀವಿ ಧಾಮ ಹೀಗೆ ಅನೇಕ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು.

ವಾರ ಪೂರ್ತಿ ಪ್ರವೇಶಈ ದಿಲ್‍ವಾರಾ ಮಂದಿರಗಳು ವಾರದ ಏಳೂ ದಿನ ತೆರೆದಿರುತ್ತವೆ. ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಪ್ರವೇಶ ಅವಕಾಶದ ಸಮಯ. ಪ್ರವಾಸಿಗಳಿಗೆ ಪ್ರವೇಶ ಶುಲ್ಕವಿಲ್ಲ. ಅಲ್ಲೇ ಇರುವ ಎರಡು ಗುಂಪುಗಳು ಮಂದಿರಗಳ ಕುರಿತು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ. ಅವರಿಗೆ ಒಂದಿಷ್ಟು ಹಣ ಕೊಡಬೇಕಾಗುತ್ತದೆ. ಇಂತಿಷ್ಟೇ ಎಂದಿಲ್ಲ.

ಕೊಟ್ಟಷ್ಟು ಅವರು ತೆಗೆದುಕೊಳ್ಳುತ್ತಾರೆ. ಯಾವ ತಕರಾರೂ ಮಾಡುವುದಿಲ್ಲ.

ಹೋಗುವುದು ಹೇಗೆ ?

ಮೌಂಟ್‌ ಅಬುಗೆ ನೇರ ವಿಮಾನಗಳ ಸೌಲಭ್ಯವಿಲ್ಲ. ಉದಯಪುರ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ರಸ್ತೆ ಮಾರ್ಗವಾಗಿ 150 ಕಿ.ಮೀ. ಕ್ರಮಿಸಿ ಮೌಂಟ್ ಅಬು ತಲುಪಬಹುದು.

ದೇಶದ ವಿವಿಧ ಭಾಗಗಳಿಂದ ಅಬು ರೋಡ್‌ವರೆಗೆ ರೈಲಿನ ವ್ಯವಸ್ಥೆ ಇದೆ. ಅಲ್ಲಿಂದ ಮೌಂಟ್‌ ಅಬುಗೆ ಬಸ್ ಅಥವಾ ಖಾಸಗಿ ವಾಹನದ ಮೂಲಕ ತಲುಪಬಹುದು. ಅಹಮದಾಬಾದ್‌ ಹಾಗೂ ಜೋಧ್‌ಪುರವರೆಗೆ ವಿಮಾನದಲ್ಲಿ ಬಂದು ಅಲ್ಲಿಂದಲೂ ರಸ್ತೆ ಮಾರ್ಗವಾಗಿ ಅಬು ತಲುಪಲು ಸಾಧ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.