‘ಅಭ್ಯರ್ಥಿ ಬದಲಾವಣೆ ಸೋಲಿಗೆ ಕಾರಣ’

7
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ದಿನೇಶ್‌ ಗುಂಡೂರಾವ್‌ ವಿಶ್ಲೇಷಣೆ

‘ಅಭ್ಯರ್ಥಿ ಬದಲಾವಣೆ ಸೋಲಿಗೆ ಕಾರಣ’

Published:
Updated:

ಬೆಂಗಳೂರು: ‘ಪ್ರತಿ ಚುನಾವಣೆಗೆ ಅಭ್ಯರ್ಥಿಗಳನ್ನು ಬದಲಾಯಿಸುತ್ತಾ ಬಂದಿರುವುದರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ‘ಜ್ಞಾನ ವಿಕಾಸ’ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಈ ಕ್ಷೇತ್ರದಲ್ಲಿ 2009ರಲ್ಲಿ ಕೃಷ್ಣ ಬೈರೇಗೌಡರು ಗೆಲುವಿನ ಸಮೀಪಕ್ಕೆ ಬಂದಿದ್ದರು. ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದ್ದರೆ ಗೆಲ್ಲುತ್ತಿದ್ದರು’ ಎಂದು ಅಭಿಪ್ರಾಯಪಟ್ಟರು.

‘2014ರ ಚುನಾವಣೆಯಲ್ಲಿ ನಂದನ್ ನೀಲೆಕಣಿಗೆ ಅವಕಾಶ ನೀಡಲಾಯಿತು. ಈಗ ಅವರು ಎಲ್ಲಿದ್ದಾರೆಂದೇ ಗೊತ್ತಿಲ್ಲ. ‌ಮತ್ತೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಆದರೆ, ಈ ಬಾರಿ ಗೆಲ್ಲುವ ಅವಕಾಶ ಇದೆ. ಅದಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

‘ಮುಂದಿನ ಲೋಕಸಭೆ ಚುನಾವಣೆ ಸುಳ್ಳಿನ ಸರ್ಕಾರಕ್ಕೆ ಪೂರ್ಣವಿರಾಮ ಬೀಳಲಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಿ, ಮತದಾರರ ಮನ ಗೆಲ್ಲಬೇಕು’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

‘ಕಾಂಗ್ರೆಸ್ ಪಕ್ಷದ ಶಕ್ತಿ ಯೋಜನೆ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಗಮನಹರಿಸಬೇಕು. ಈ ಯೋಜನೆಯನ್ನು ಸಮರ್ಥವಾಗಿ ನಿರ್ವಹಿಸಿದ 50 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜ್ಯಮಟ್ಟದಲ್ಲಿ ಉತ್ತಮ ಸ್ಥಾನ ಕಲ್ಪಿಸಲಾಗುವುದು. ನಿಗಮ– ಮಂಡಳಿಗಳಲ್ಲಿ ಸ್ಥಾನ ನೀಡಲಾಗುವುದು’ ಎಂದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳನ್ನು ರಾಜ್ಯದಲ್ಲಿ ಒಂದಂಕಿಗೆ ಇಳಿಸುವುದು ನಮ್ಮ ಗುರಿ’ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !