ಬುಧವಾರ, ಡಿಸೆಂಬರ್ 11, 2019
22 °C

ಕೊಳಕು ಕಳಚಿದ ಕಿರಣ್‌ ಕುಂಚ

Published:
Updated:
Prajavani

ಎರಡು ವರ್ಷದ ಹಿಂದಿನ ಮಾತು. ಹುಬ್ಬಳ್ಳಿಯ ಪ್ರಮುಖ ರಸ್ತೆಗಳ ಕಾಂಪೌಂಡ್‌ಗಳು ಸಿನಿಮಾ ಪೋಸ್ಟರ್, ರಾಜಕೀಯ ಪಕ್ಷಗಳ ಪ್ರಚಾರ ಬರಹ, ಭಿತ್ತಿ ಪತ್ರಗಳಿಂದ ವಿರೂಪಗೊಂಡಿದ್ದವು. ಗುಟ್ಕಾ ಕಲೆ, ಮೂತ್ರ ವಾಸನೆಯಿಂದ ಅಸಹ್ಯಗೊಂಡಿದ್ದವು. ಗೋಡೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ‌ಜನ ಮೂಗು ಹಿಡಿದುಕೊಂಡೇ ಹೆಜ್ಜೆ ಹಾಕುತ್ತಿದ್ದರು.

ಈಗ ಆ ವಿರೂಪಗೊಂಡಿದ್ದ ಗೋಡೆಗಳು ಬಣ್ಣದ ಚಿತ್ತಾರಗಳನ್ನು ಹೊದ್ದುಕೊಂಡಿವೆ.  ಮೂಗು ಹಿಡಿದು ಸಾಗುತ್ತಿದ್ದವರು, ಈಗ ಒಮ್ಮೆ ಗೋಡೆಯತ್ತ ಕಣ್ಣರಳಿಸಿ ನೋಡುತ್ತಾ ಸಾಗುತ್ತಾರೆ. ದುರ್ವಾಸನೆ ಬೀರುತ್ತಿದ್ದ ಹಳೇ ಪಿ.ಬಿ. ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಗದಗ ರಸ್ತೆ, ಪಿಂಟೊ ರಸ್ತೆ, ಇಂದಿರಾ ಗಾಜಿನ ಮನೆ, ಈಜುಕೋಳದ ಪಾದಚಾರಿ ಮಾರ್ಗಗಳಲ್ಲಿ ಕಣ್ಣರಳಿಸಿಕೊಂಡು ನೋಡುವಂತಹ ಚಿತ್ರ ಸೊಬಗು ಮೈದಳೆದಿದೆ.

ಹೀಗೆ ದಿಢೀರನೆ ಸ್ವಚ್ಛತೆಗೊಂಡಿದ್ದು, ಸರ್ಕಾರದ ಯೋಜನೆಯಿಂದಲ್ಲ. ಆರ್ಕಿಟೆಕ್ಟ್ ಎಂಜಿನಿಯರ್ ಕಿರಣ್ ಉಪ್ಪಾರ ಅವರ ‘ಕಲರ್ ಮೈ ಸಿಟಿ’ ಯೋಜನೆಯಿಂದ. ಇವರ ಯೋಚನೆ ಕೇವಲ ಹುಬ್ಬಳ್ಳಿಯ ರಸ್ತೆ ಬದಿಯ ಗೋಡೆಗಳನ್ನಷ್ಟೇ ಅಲ್ಲದೇ, ಕೆಲ ಹಳೆಯ ಶಾಲಾ ಕಾಲೇಜುಗಳಿಗೂ ಬಣ್ಣದ ಮೆರುಗು ತಂದಿದೆ.

‘ಕಲರ್ ಮೈ ಸಿಟಿ’ ಆಂದೋಲನ

ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟೆಕ್ಟ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಕಿರಣ್, ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ಹೋದರು. ಓದಿನ ಜತೆಗೆ, ಅಲ್ಲಿನ ನಾಗರಿಕರಿಗೆ ಇರುವ ಸ್ವಚ್ಛತೆ ಪ್ರಜ್ಞೆ ಅವರನ್ನು ಆಕರ್ಷಿಸಿತು. ‘ನಮ್ಮೂರು ಕೂಡ ಹೀಗಿದ್ದರೆ ಎಷ್ಟು ಚೆನ್ನ’ ಎಂಬ ಭಾವನೆ ಮೂಡಿತು. ಆಗಲೇ ಅವರ ಮನಸ್ಸಿನಲ್ಲಿ ‘ಕಲರ್ ಮೈ ಸಿಟಿ’ ಎಂಬ ಕನಸು ಚಿಗುರೊಡೆಯಿತು. ‘ಹುಬ್ಬಳ್ಳಿ ನಗರ ಅಂದಗೊಳಿಸಲು ಏನು ಮಾಡಬಹುದು’ ಎಂಬ ಆಲೋಚನೆಗಳಿಗೆ ರೆಕ್ಕೆಪುಕ್ಕ ಬಂದಿದ್ದು ಕೂಡ ಅಲ್ಲೇ. ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಅವರ ಕನಸಿನ ಸಾಕಾರಕ್ಕೆ ಸಾಥ್ ನೀಡಿದರು.

ಸಮಾನ ಮನಸ್ಕರ ಗೆಳೆಯರ ತಂಡ ಕಟ್ಟಿದರು. ವೃತ್ತಿಯ ನಡುವೆ ಬಿಡುವು ಮಾಡಿಕೊಂಡು, ‘ಕಲರ್ ಮೈ ಸಿಟಿ’ ಯೋಜನೆ ಕಾರ್ಯರೂಪಕ್ಕಿಳಿಸಲು ಸಂಕಲ್ಪ ಮಾಡಿದರು. ಪ್ರಾಥಮಿಕ ಹಂತವಾಗಿ ಕೆಲ ರಸ್ತೆಗಳ ಕಾಪೌಂಡ್‌ಗಳನ್ನು ಆಯ್ದುಕೊಂಡರು. ಕಲಾವಿದ ಗೆಳೆಯರೊಂದಿಗೆ ಸೇರಿಕೊಂಡು ಗೋಡೆಗಳನ್ನು ಸ್ವಚ್ಛಗೊಳಿಸಿದರು. ಹಗಲು –ರಾತ್ರಿ ಎನ್ನದೇ ಗೋಡೆಗಳಿಗೆ ಬಣ್ಣ ಬಳಿದು ಚಿತ್ರ ಬಿಡಿಸಿದರು.

ಶಾಲೆಗೂ ಮೆರುಗು ತಂದರು

ಕೊಳಕು ಗೋಡೆಗಳಿಗೆ ಬಣ್ಣದ ಮೆರುಗು ನೀಡುವ ಕಿರಣ್ ಪ್ರಯತ್ನಕ್ಕೆ ಸ್ಥಳೀಯ ಮಹಾನಗರ ಪಾಲಿಕೆ, ಜನಪ್ರತಿನಿಧಿಗಳು ಸೇರಿದಂತೆ ನಾಗರಿಕ ಸಂಘ–ಸಂಸ್ಥೆಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ಸಿಕ್ಕಿತು. ಈ ಉತ್ಸಾಹ ರಸ್ತೆಯ ಗೋಡೆಗಳಿಂದ ಕ್ರಮೇಣ ಶಾಲೆಗಳ ಕಟ್ಟಡಗಳಿಗೂ ಬಣ್ಣ ಹಚ್ಚಲು ಪ್ರೋತ್ಸಾಹಿಸಿತು. ಬಡವರ ಮಕ್ಕಳು ಓದುವ ಶಾಲೆಗಳನ್ನು ಕೇಂದ್ರವಾಗಿಟ್ಟುಕೊಂಡು, ಇಡೀ ಶಾಲೆಗೆ ಬಣ್ಣ ಬಳಿದು, ಮಕ್ಕಳಲ್ಲಿ ಸ್ಫೂರ್ತಿ ತುಂಬುವಂತಹ ಚಿತ್ರಗಳನ್ನು ಬಿಡಿಸಿ, ಶಾಲೆಯ ಚಹರೆಯನ್ನೇ ಬದಲಿಸಿದರು ಕಿರಣ್ ಮತ್ತು ತಂಡ.

ಪ್ರಯೋಗಾತ್ಮಕವಾಗಿ ನಗರದ ಹರಿಜನ ಶಾಲೆಯನ್ನು ಅಂದಗೊಳಿಸಿದರು. ಈ ಕೆಲಸದಿಂದ ಮಕ್ಕಳಷ್ಟೇ ಅಲ್ಲದೆ, ಅವರ ಪಾಲಕರ ಮೇಲೂ ಪ್ರಭಾವ ಬೀರಿದೆ. ಕ್ರಮೇಣ ಆ ಶಾಲೆಯ ದಾಖಲಾತಿ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆಯಂತೆ. ಹಾಗೆಂದು ಅಲ್ಲಿನ ಮುಖ್ಯ ಶಿಕ್ಷಕರು ಕಿರಣ್ ತಂಡಕ್ಕೆ ತಿಳಿಸಿದ್ದಾರೆ. ಇಂಥ ಸ್ಫೂರ್ತಿದಾಯಕ ಪ್ರತಿಕ್ರಿಯೆಯಿಂದಾಗಿ ಇನ್ನೂ ಎರಡು ಶಾಲೆಗಳಿಗೆ ಹೊಸ ರೂಪ ಕೊಟ್ಟಿದೆ ಈ ತಂಡ. ಇದು, ಅಲ್ಲಿನ ಶೈಕ್ಷಣಿಕ ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ‘ಶಾಲೆಗಳಿಗೆ ಪೇಂಟಿಂಗ್ ಮಾಡಿದ ಮೇಲೆ, ಅನೇಕರು ನಮ್ಮ ಶಾಲೆಗೂ ಬಂದು ಪೇಂಟಿಂಗ್ ಮಾಡಿ ಎಂದು ಕರೆಯುತ್ತಿದ್ದಾರೆ. ಹಾಗಾಗಿ, ಸಾರ್ವಜನಿಕ ಸ್ಥಳಗಳ ಜತೆಗೆ, ಶಾಲೆಗಳಿಗೂ ಬಣ್ಣದ ರೂಪ ಕೊಡುವ ಪ್ರಯತ್ನ ಮುಂದುವರಿಸಿದ್ದೇವೆ’ ಎನ್ನುತ್ತಾರೆ ಕಿರಣ್.

‘ಎಲ್ಲಾ ರೀತಿಯ ಬದಲಾವಣೆಗಳೂ ಸರ್ಕಾರದಿಂದಲೇ ಆಗಬೇಕೆಂಬ ಮನಸ್ಥಿತಿ ನಮ್ಮದು. ಆದರೆ, ಸರ್ಕಾರದ ಜತೆಗೆ ನಾಗರಿಕರ ಮುಂದಾಳತ್ವದಲ್ಲಿ ಗುರುತರ ಬದಲಾವಣೆ ಸಾಧ್ಯ ಎಂಬುದನ್ನು ವಿದೇಶದಲ್ಲಿದ್ದ ನಾನು ಗಮನಿಸಿದ್ದೇನೆ’ ಎಂದು ಉಲ್ಲೇಖಿಸುವ ಕಿರಣ್, ‘ಸ್ವಚ್ಛತೆಯ ವಿಷಯದಲ್ಲಿ ವಿದೇಶದ ಜನ, ಸ್ವಯಂಪ್ರೇರಣೆಯಿಂದ ತೊಡಗಿಸಿಕೊಳ್ಳುತ್ತಾರೆ. ಬಳಿಕ, ಸ್ಥಳೀಯ ಆಡಳಿತ ಅವರೊಂದಿಗೆ ಕೈ ಜೋಡಿಸುತ್ತದೆ. ಹಾಗಾಗಿ, ಅಲ್ಲಿ ನೈರ್ಮಲ್ಯ ಎಂಬುದು ಸಮಸ್ಯೆ ಅಥವಾ ಚರ್ಚಾ ವಸ್ತು ಅಲ್ಲವೇ ಅಲ್ಲ’ ಎಂದು ವಿಶ್ಲೇಷಿಸುತ್ತಾರೆ.

‘ರಸ್ತೆ, ಕಾಂಪೌಂಡ್, ಶಾಲೆ, ಕಚೇರಿ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಸಾರ್ವಜನಿಕ ಸ್ಥಳಗಳು ಕೂಡ ನಮ್ಮ ಮನೆಯ ಅಂಗಳದಂತೆ ಕಂಗೊಳಿಸುತ್ತವೆ. ಈ ಕೆಲಸಕ್ಕೆ ತಗಲುವ ವೆಚ್ಚವನ್ನು ನಾವೇ ಭರಿಸುತ್ತೇವೆ. ಸತತ ಎರಡು ವರ್ಷದ ಶ್ರಮದ ಫಲವಾಗಿ ಹುಬ್ಬಳ್ಳಿಯ ಕೆಲ ಪ್ರಮುಖ ರಸ್ತೆಗಳು ಅಂದಗೊಂಡಿವೆ. ಈ ಪ್ರಯತ್ನದ ಹಿಂದಿರುವ ಉದ್ದೇಶ ನಮ್ಮೂರು ಚೆಂದ ಕಾಣಬೇಕು ಎಂಬುದಷ್ಟೆ’ ಎನ್ನುತ್ತಾರೆ ಅವರು. ಕಿರಣ್ ಉಪ್ಪಾರ ಅವರ
ಸಂಪರ್ಕಕ್ಕೆ: 9880146014

ಪ್ರಶಸ್ತಿ ಸ್ಥಾಪನೆ ಕನಸು

ಗೆಳೆಯರ ಬಳಗ ಕಟ್ಟಿಕೊಂಡು ವಿಭಿನ್ನವಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿರುವ ಕಿರಣ್, ಅವಳಿನಗರದಲ್ಲಿ ಸಾರ್ವಜನಿಕ ಸ್ವಚ್ಛತೆಗೆ ಶ್ರಮಿಸುವವರಿಗಾಗಿ ಪ್ರಶಸ್ತಿಯೊಂದನ್ನು ಸ್ಥಾಪಿಸುವ ಕನಸು ಹೊಂದಿದ್ದಾರೆ. ಇದರ ಜತೆಗೆ, ನಗರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರಿಗೆ ಆಗಾಗ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ, ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.
‘ಪ್ರತಿ ವರ್ಷ ಆಯ್ದ ವ್ಯಕ್ತಿಗೆ ಪ್ರಶಸ್ತಿ ನೀಡುವ ಮೂಲಕ, ನಗರವನ್ನು ಅಂದಗೊಳಿಸಲು ಮತ್ತಷ್ಟು ಜನರಿಗೆ ಸ್ಫೂರ್ತಿ ತುಂಬುವ ಮತ್ತು ಅವರ ಕೆಲಸಕ್ಕೆ ಸದಾ ಜತೆಗಿರುವ ಆಶಯ ಹೊಂದಿದ್ದೇನೆ’ ಎಂದು ಅವರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)