ಮಂಗಳವಾರ, ಅಕ್ಟೋಬರ್ 15, 2019
26 °C

ರೈತರಿಗೆ ಮಾಹಿತಿ ಹೂರಣ ‘ಕೃಷಿ ವಸ್ತು ಪ್ರದರ್ಶನ’

Published:
Updated:
Prajavani

ಚಾಮರಾಜನಗರ: ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಿಂದ ದಸರಾ ಕಾರ್ಯಕ್ರಮದ ಅಂಗವಾಗಿ ರೈತರಿಗೆ ಉಪಯುಕ್ತ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ‘ಕೃಷಿ ವಸ್ತು ಪ್ರದರ್ಶನ’ಕ್ಕೆ ಶಾಸಕ ಸಿ.ಎಸ್. ನಿರಂಜನಕುಮಾರ್‌ ಮಂಗಳವಾರ ಚಾಲನೆ ನೀಡಿದರು.

ಪಾರಂಪರಿಕ ಕೃಷಿ ಉಪಕರಣಗಳು, ಸುಸ್ಥಿರ ಕೃಷಿ ಹೀಗೆ ಅನೇಕ ಮಾದರಿಗಳು ದಸರಾ ಮಹೋತ್ಸವದಲ್ಲಿ ಕೃಷಿ ಪರಂಪರೆ ಎತ್ತಿ ಹಿಡಿದವು.

ಅದರಲ್ಲೂ ಕೃಷಿ ಇಲಾಖೆ ಪ್ರಗತಿಪರ ರೈತರು ಬೆಳೆದ ಬೆಳೆಗಳನ್ನು ಪ್ರದರ್ಶಿಸಿ ಆಕರ್ಷಿಸಿತು. ಜಲನಯನ ಯೋಜನೆಯಲ್ಲಿ ಚೆಕ್ ಡ್ಯಾಂ, ನಾಲಾ ಬಂದಿ, ಕೃಷಿ ಹೊಂಡ, ತೋಟಗಾರಿಕೆ ಕ್ಷೇತ್ರ, ಕೆರೆ, ಮಾದರಿ ಗ್ರಾಮ, ಸೇತುವೆ, ಮಳೆ ನೀರು ಸಂಗ್ರಹ, ಮಿಶ್ರ ಹಾಗೂ ಅಂತರ ಬೆಳೆ ಪ್ರಾತ್ಯಕ್ಷಿಕೆಗಳನ್ನು ಜನರು ಹಾಗೂ ರೈತರು ವೀಕ್ಷಿಸಿದರು.

ಶೂನ್ಯ ಬಂಡವಾಳದಲ್ಲಿ ಜೀವಾಮೃತ, ಬೀಜಾಮೃತ, ಕೀಟನಾಶಕಕ್ಕೆ ಅಗ್ನಿ ಅಸ್ತ್ರ, ರೋಗ ಮುಕ್ತ ಬೆಳೆಗೆ ನೀಮಾಸ್ತ್ರ, ಬ್ರಹ್ಮಾಸ್ತ್ರ, ಬೆಳೆ ಪ್ರಚೋದನೆಗೆ ತಯಾರಿಸಿದ ಪಂಚಗನ್ಯಾಮೃತದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಇಲಾಖೆಯ ಸಿಬ್ಬಂದಿಗಳು ಇದ್ದರು.

ಈ ಪ್ರದರ್ಶನದಲ್ಲಿ ರೇಷ್ಮೆ ಇಲಾಖೆಯಿಂದ ರೆಂಬೆ ಪದ್ಧತಿಯ ರೇಷ್ಮೆ ಹುಳು ಸಾಕಾಣಿಕಾ ಮೇಜು, ಮಾದರಿ ರೇಷ್ಮೆ ಹುಳು ಸಾಕಾಣಿಕೆ ಸೇರಿದಂತೆ ವಿವಿಧ ಬಗೆಯ ಮಾದರಿ ತಯಾರಿಸಿ ರೈತರಿಗೆ ಮಾಹಿತಿ ನೀಡುತ್ತಿದ್ದರು.

ಎರೆ ಹುಳು ರಕ್ಷಣೆ, ಕೀಟನಾಶಕ, ಜೈವಿಕ ಗೊಬ್ಬರ, ಲಘು ಪೋಷಕಾಂಶ, ತೋಟಗಾರಿಕೆ ಇಲಾಖೆಯಿಂದ ಹಣ್ಣು ತರಕಾರಿ ಬೆಳೆಗಳು ಮಾಹಿತಿ, ಪಶು ಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಹಂದಿ, ಕೋಳಿ, ಹೈನುಗಾರಿಕೆ ಸಾಕಾಣಿಕೆ ಮಾಹಿತಿಗಳು ಇದ್ದವು.

ಕೃಷಿಯಂತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸಾಮಾಜಿಕ ಅರಣ್ಯ ವಿಭಾಗದಡಿ ಆಯೋಜಿಸಿದ್ದ ನರ್ಸರಿ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿದರು. 

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರರ ಸಂಘ ತಯಾರಿಸಿದ ಸೀರೆ ಹಾಗೂ ಇನ್ನಿತರ ಪರಿಕರಗಳನ್ನು ಇರಿಸಲಾಗಿತ್ತು. ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ‘ಅಪರ್ಣ ಹನಿ’ ಜೇನುತುಪ್ಪದ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿತ್ತು.

ನಗರಸಭೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ‘ಸ್ವಚ್ಛತೆಯಡೆ ಸಂಪೂರ್ಣ ಹೆಜ್ಜೆ’ ಹೆಸರಿನಡಿ ಮಳಿಗೆ ತೆರೆದು ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವಿರುವ ಚಿತ್ರಗಳನ್ನು ಪ್ರದರ್ಶಿಸಿತು.

ಇಲಾಖೆಗಳು: ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗ, ಜಲಾನಯನ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯದ ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ 12 ಮಳಿಗೆಗಳಿದ್ದವು.

Post Comments (+)